Tuesday, April 30, 2024

ಸತ್ಯ | ನ್ಯಾಯ |ಧರ್ಮ

ವನಶ್ರೀ ಮಂಜಪ್ಪನ ವಿರುದ್ಧ ಎಫ್‌ ಐ ಆರ್‌ ನಲ್ಲಿ ಏನೇನಿದೆ?

ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ.

ತನ್ನ ವಸತಿ ನಿಲಯಕ್ಕೆ ಸೇರಿದ ಕೂಡಲೇ ಏನೂ ತಿಳಿಯದ ಈ ಪರಿಶಿಷ್ಟ ಅಲೆಮಾರಿ ಸಮುದಾಯದ ವಿದ್ಯಾರ್ಥಿನಿಗೆ ಯೋಗಾಭ್ಯಾಸದ ಹೆಸರಿನಲ್ಲಿ ವಿಪರೀತ ದೇಹ ದಂಡಿಸಿದ್ದ ಮಂಜಪ್ಪ ನಂತರದಲ್ಲಿ ಅತಿರೇಕದ ಕೃತ್ಯಗಳನ್ನು ನಡೆಸಿ ಬಾಲಕಿಯ ದುರ್ಮರಣಕ್ಕೆ ಕಾರಣವಾಗಿರುವ ಕುರಿತು ಎಲ್ಲವನ್ನೂ ಖುದ್ದಾಗಿ ನೋಡಿರುವ ಬಾಲಕಿಯರು ದೂರಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು 12.06.2023ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ನೇತೃತ್ವದ ತಂಡ ವಸತಿ ನಿಲಯಕ್ಕೆ ಭೇಟಿ ನೀಡಿ ಸಂತ್ರಸ್ತ ಬಾಲಕಿಯರ ಮಾತುಗಳನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿದೆ. ಜೊತೆಯಲ್ಲಿ ಪಂಚನಾಮೆ ಪ್ರಕ್ರಿಯೆ ಸಹ ನಡೆಸಲಾಗಿದೆ.

ಪೀಪಲ್‌ ಮೀಡಿಯಾಕ್ಕೆ ಲಭ್ಯವಾಗಿರುವ ಎಫ್‌ ಐ ಆರ್‌ (ಪ್ರಥಮ ವರ್ತಮಾನ ವರದಿ) ಪ್ರತಿಯಲ್ಲಿ ಉಲ್ಲೇಖವಾಗಿರುವಂತೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 10-06-2023ರಂದು ದೂರು ದಾಖಲಾಗಿದೆ.

FIRನಲ್ಲಿ ಏನಿದೆ?
ವನಶ್ರೀ ಮಂಜಪ್ಪ ನಡೆಸುವ ವಸತಿ ಶಾಲೆಗೆ ಸೇರಿದ್ದ ವಿದ್ಯಾರ್ಥಿನಿಯ ತಾಯಿಯು ನೀಡಿರುವ ದೂರಿನಲ್ಲಿ ಆಘಾತಕಾರಿ ಅಂಶಗಳಿವೆ. ದಿನಾಂಕ 04-06-23ರಂದು ಮೃತ ವಿದ್ಯಾರ್ಥಿನಿಯೂ ಸೇರಿದಂತೆ ಐದು ಮಂದಿ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ದಾಖಲಾಗಿದ್ದರು. ʼ07-06-23ರಂದು ಮದ್ಯಾಹ್ನ ಎರಡು ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಇದನ್ನು ಮಂಜಪ್ಪ ಅವರ ಗಮನಕ್ಕೆ ತಂದಾಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ತಮಗೆ ತಿಳಿದ ಮಾತ್ರೆ ಹಾಗೂ ಕಷಾಯ ಕುಡಿಸಿದ್ದಾರೆ. ನಂತರ ಆಕೆ ಕಾಲು ನೋವು ಹಾಗೂ ತೊಡೆ ನೋವು ಎಂದು ತಮ್ಮ ಜೊತೆಯಲ್ಲಿದ್ದವರಿಗೆ ತಿಳಿಸಿದ್ದಳು. ಇದನ್ನು ಅವರು ಮಂಜಪ್ಪ ಅವರಿಗೆ ತಿಳಿಸಿದಾಗ ಮಂಜಪ್ಪ ಅವರು ಬಾಧಿತ ಬಾಲಕಿಯನ್ನು ಪ್ರತ್ಯೇಕವಾಗಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಮೊಣಕಾಲು, ತೊಡೆ ಹಾಗೂ ಇತರ ಕಡೆ ಮುಲಾಮು ಹಚ್ಚಿ ಹೊರ ಬಂದು ಉಳಿದವರಿಗೆ ಅವಳು ಹುಷಾರಾಗುತ್ತಾಳೆ, ನೀವು ಹೋಗಿ ಎಂದು ಹೇಳಿರುತ್ತಾರೆ. ಯಾವುದೇ ಆಸ್ಪತ್ರೆಗೆ ದಾಖಲಿಸಿರುವುದಿಲ್ಲ. ಮಾತ್ರವಲ್ಲದೇ ಮಕ್ಕಳಿಗೆ ಆ ವಿದ್ಯಾರ್ಥಿನಿಗೆ ಹುಷಾರಿಲ್ಲದ ವಿಷಯ ಯಾರಿಗೂ ಹೇಳಕೂಡದು ಎಂದು ಗದರಿಸಿದ್ದಾನೆ.

ಮರುದಿನ ಅಂದರೆ ʼ08-06-23ರಂದು ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿರುವಾಗ ಮಂಜಪ್ಪ ಬಲವಂತವಾಗಿ ತುಂಬಾ ನೀರು ಕುಡಿಸಿ ಆಕೆ ಸುಸ್ತಾಗಿ ಮಲಗಿದ್ದಳು. ನಂತರ ಆಕೆಯನ್ನು ಮಕ್ಕಳು ಮಾತಾಡಿಸಲು ಹೋದಾಗ ಅವಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಮಕ್ಕಳನ್ನು ಹೊರಕ್ಕೆ ಕಳಿಸಿ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡಿದಾಗ ಆಕೆ ನಾಲಿಗೆ ಕಚ್ಚಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದಂತಾಗಿದ್ದಳು. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಗಲೂ ಸಹ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿರುವುದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಮಕ್ಕಳು ಅಪರಿಚಿತರ ಸಾಯದಿಂದ ಪೋಷಕರಿಗೆ ವಿಷಯ ತಿಳಿಸಿರುತ್ತಾರೆ.

ನಂತರ ಪೋಷಕರು ತಮ್ಮ ಮಗಳ ಜೊತೆಗಿದ್ದ ನಾಲ್ಕು ಜನ ಮಕ್ಕಳನ್ನು ವಿಚಾರಿಸಿದಾಗ ಮಂಜಪ್ಪನ ಅಶ್ಲೀಲ ವರ್ತನೆ ಬಗ್ಗೆ, ಅವನು ಖಾಸಗಿ ಭಾಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಅವಾಚ್ಯವಾಗಿ ಮಾತಾಡಿರುವ ಬಗ್ಗೆ ಮಾಹಿತಿ ನೀಡಿ ತಮಗಾದ ಅವಮಾನ ಹಿಂಸೆಯನ್ನು ಹೇಳಿಕೊಂಡು ಕಣ್ಣೀರು ಹಾಕಿರುತ್ತಾರೆ. ಇದೇ ರೀತಿಯ ಲೈಂಗಿಕ ದೌರ್ಜನ್ಯ ತಮ್ಮ ಮಗಳಿಗೂ ಆಗಿರಬಹುದುʼ ಎಂದು ಪೋಷಕರು ದೂರಿನಲ್ಲಿ ತಿಳಿಸಿರುತ್ತಾರೆ. ಮಂಜಪ್ಪನ ಈ ರೀತಿಯ ಲೈಂಗಿಕ ದೌರ್ಜನ್ಯದಿಂದ ತಮ್ಮ ಮಗಳು ಹೆದರಿಕೊಂಡು, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸಿ ಭಯ ಹಾಗೂ ಬೇಸರದಲ್ಲಿ ಮನಸ್ಸಿಗೆ ಹಚ್ಚಿಕೊಂಡು ಇದರಿಂದ ಜ್ವರ ಸುಸ್ತು ವಾಂತಿ ಪ್ರಾರಂಭವಾಗಿ ಎರಡು ದಿನ ನರಳಾಡಿದ್ದಾಳೆʼ ಎಂದು ದೂರಿದ್ದಾರೆ. ʼಮಂಜಪ್ಪನ ಭಯದಿಂದ ಹಾಗೂ ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಸಮಯ ವ್ಯರ್ಥಮಾಡಿ, ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸದೇ, ಪೋಷಕರಿಗೂ ವಿಷಯ ತಿಳಿಸದೇ ಹೋಗಿದ್ದರಿಂದ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿದ್ದರಂತಿ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಎಲ್ಲಾ ವಿಚಾರಗಳು ಪಿರ್ಯಾದುದಾರರಿಗೆ ಮಂಜಪ್ಪನವರ ಮೇಲೆ ಬಲವಾದ ಅನುಮಾನಕ್ಕೆ ಕಾರಣವಾಗಿರುತ್ತವೆ ಹಾಗೂ ತಮ್ಮ ಮಗಳಿಗೆ ಅವಾಚ್ಯವಾಗಿ ನಿಂದಿಸಿರುವುದು, ಭಯ ಹುಟ್ಟಿಸಿರುವುದು, ತಾನು ಹೇಳಿದಂತೆ ಕೇಳದಿದ್ದರೆ ನಿಮ್ಮನ್ನು ನೋಡಿಕೊಳ್ಳುತ್ತೇನೆ, ಈ ವಿಚಾರವಾಗಿ ಯಾರಿಗೂ ಹೇಳಬಾರದು ಎಂದು ಎಚ್ಚರಿಕೆ ನೀಡಿದ್ದನ್ನು ಮಕ್ಕಳು ಮನೆಗೆ ಬಂದು ಹೇಳಿರುವ ಹಿನ್ನೆಲೆಯಲ್ಲಿ ಮಂಜಪ್ಪ ಅವರ ಮೇಲೆ ಎಸ್‌ ಸಿ ಎಸ್‌ ಟಿ ದೌರ್ಜನ್ಯ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು FIR ನಲ್ಲಿ ದಾಖಲಾಗಿರುತ್ತದೆ.

Related Articles

ಇತ್ತೀಚಿನ ಸುದ್ದಿಗಳು