ಹೊಸದಿಲ್ಲಿ, ಮೇ 16: ವಿಶ್ವಾದ್ಯಂತ ಹೆಚ್ಚುತ್ತಿರುವ ಉಪ್ಪಿನ ಬಳಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಕಳವಳ ವ್ಯಕ್ತಪಡಿಸಿದೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ದಿನಕ್ಕೆ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದರಿಂದ ಪ್ರತಿ ವರ್ಷ ವಿಶ್ವಾದ್ಯಂತ 25 ಲಕ್ಷ ಜೀವಗಳನ್ನು ಉಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಾಗತಿಕವಾಗಿ ಇಂದು ವಯಸ್ಕರಲ್ಲಿ ಸರಾಸರಿ ಉಪ್ಪು ಸೇವನೆಯು 10.78 ಗ್ರಾಂಗಳಷ್ಟಿದೆ ಎಂದು WHO ಹೇಳುತ್ತದೆ, ಶಿಫಾರಸು ಮಾಡಲಾದ 5 ಗ್ರಾಮ್‌ಗೆ ಹೋಲಿಸಿದರೆ ನಾವು ದುಪ್ಪಟ್ಟು ಉಪ್ಪು ತಿನ್ನುತ್ತಿದ್ದೇವೆ.
ಅಧಿಕ ಉಪ್ಪಿನಂಶದ ಆಹಾರವನ್ನು ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್, ಸ್ಥೂಲಕಾಯತೆ, ಆಸ್ಟಿಯೊಪೊರೋಸಿಸ್, ಮೆನಿಯರ್ ಮತ್ತು ಮೂತ್ರನಾಳದ ಕಾಯಿಲೆಗಳು ಬರಬಹುದು ಎನ್ನಲಾಗಿದೆ.
ಅತಿಯಾದ ಉಪ್ಪು ಸೇವನೆಯಿಂದ ಪ್ರತಿ ವರ್ಷ 18.9 ಲಕ್ಷ ಸಾವುಗಳು ಸಂಭವಿಸುತ್ತಿವೆ ಎಂದು ಅದು ಹೇಳಿದೆ. ತಾಜಾ, ಹೆಚ್ಚು ಸಂಸ್ಕರಿಸದ ಆಹಾರವನ್ನು ಸೇವಿಸುವ ಮೂಲಕ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬಹುದು ಎಂದು WHO ಹೇಳುತ್ತದೆ. ಉಪ್ಪಿನ ಬದಲು ಮಸಾಲೆ ಮತ್ತು ಕಾಡು ಗಿಡಮೂಲಿಕೆಗಳನ್ನು ಬಳಸಲು ಸಲಹೆ ನೀಡಿದೆ.