Home ಅಂಕಣ ನವೀನ್‌ ಸೂರಿಂಜೆಯವರ ಟಿಪ್ಪೂ ಕೃತಿ ಯಾಕೆ ಮುಖ್ಯವಾಗುತ್ತದೆ?

ನವೀನ್‌ ಸೂರಿಂಜೆಯವರ ಟಿಪ್ಪೂ ಕೃತಿ ಯಾಕೆ ಮುಖ್ಯವಾಗುತ್ತದೆ?

0

“ಗಾಂಧಿ ಬಗ್ಗೆ, ನೆಹರೂ ಬಗ್ಗೆ; ನಾವು ಕಂಡು ಅನುಭವಿಸಿದ ನೋಟ್‌ಬ್ಯಾನ್‌  ಬಗ್ಗೆ ಇವರು ಇಷ್ಟು ನಿರ್ಲಜ್ಜರಾಗಿ ಸುಳ್ಳುಗಳನ್ನು ಸೃಷ್ಟಿಸಬಲ್ಲರಾದರೆ, ಇನ್ನೂರೈವತ್ತು ವರ್ಷಗಳ ಹಿಂದಿನ ಟಿಪ್ಪೂ ಬಗ್ಗೆ ಇವರು ಹಬ್ಬಿಸುತ್ತಿರುವ ಸುಳ್ಳುಗಳು ಅದಿನ್ನೆಷ್ಟು ಲಜ್ಜೆಮೀರಿರಬೇಡ!.” ಪತ್ರಕರ್ತ ಗಿರೀಶ್ ತಾಳಿಕಟ್ಟೆ ಅವರ ಬರಹದಲ್ಲಿ

ಟಿಪ್ಪೂ ಸುಲ್ತಾನನ ಬಗ್ಗೆ ನಾವೇಕೆ ತಿಳಿದುಕೊಳ್ಳಬೇಕು? ಇಷ್ಟು ದಿನ ನನ್ನನ್ನು ಕಾಡುತ್ತಿದ್ದ ಈ ಪ್ರಶ್ನೆಗೆ ಧುರಂಧರ್ ಸಿನಿಮಾ ಉತ್ತರ ಒದಗಿಸಿಕೊಟ್ಟಿದೆ. ನೋಟ್‌ ಬ್ಯಾನ್‌ ಸಂಕಟ ನಾವು ಅನುಭವಿಸಿದ್ದು; ಪುಲ್ವಾಮಾ-ಪೆಹಲ್ಗಾಮ್‌ನಲ್ಲಿ ಏನಾಯ್ತು? ಅದಕ್ಕೆ ಹೊಣೆ ಹೊರಬೇಕಿದ್ದವರು ಯಾರು? ಎಂಬುದೂ ನಮ್ಮ ಕಣ್ಮುಂದಿದೆ. ನಾವೇ ಕಂಡ ಸತ್ಯಗಳನ್ನು ನಮ್ಮ ಕಣ್ಣಿಗೆ ರೋಚಕ ಸುಳ್ಳುಗಳಾಗಿ ಕಟ್ಟಿನಿಲ್ಲಿಸುವ ಯತ್ನವನ್ನು ಧುರಂದರ್ ಸಿನಿಮಾ ಮೂಲಕ ಮಾಡಲಾಗುತ್ತಿದೆ. ಇದು ಕೇವಲ ಒಂದು ಸಿನಿಮಾವಲ್ಲ, ಇಡೀ ಇಂಡಿಯಾದ ಚರಿತ್ರೆ ರೂಪುಗೊಂಡಿರುವ ವೈಖರಿಯನ್ನು ತೆರೆದಿಡುವ ಮಾಡೆಲ್‌. ಇಂಡಿಯಾದ ಸ್ವಾತಂತ್ಯ್ರ ಮತ್ತು ಸೋದರತ್ವಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಗಾಂಧಿಯನ್ನು ದ್ರೋಹಿಯಾಗಿಯೂ, ಕೊಂದವನನ್ನು ದೇಶಪ್ರೇಮಿಯಂತೆಯೂ, ಕೊಲೆಯ ಆರೋಪದಲ್ಲಿ ಕಟಕಟೆ ಏರಿದ್ದ ಆಂಗ್ಲರ ‘ವಿಧೇಯ’ ವ್ಯಕ್ತಿಯನ್ನು ವೀರನೆಂದೂ ಚಿತ್ರಿಸುತ್ತಿರುವ ಭೀಕರ ತಂತ್ರಗಾರಿಕೆಯ ಅಪ್‌ಡೇಟೆಡ್‌ ರೂಪವೇ ಈ ಧುರಂಧರ್ ಸಿನಿಮಾ!

ನಮಗೆ ಓದಿ ತಿಳಿದ ಗಾಂಧಿ ಬಗ್ಗೆ, ನೆಹರೂ ಬಗ್ಗೆ; ನಾವು ಕಂಡು ಅನುಭವಿಸಿದ ನೋಟ್‌ಬ್ಯಾನ್‌  ಬಗ್ಗೆ ಇವರು ಇಷ್ಟು ನಿರ್ಲಜ್ಜರಾಗಿ ಸುಳ್ಳುಗಳನ್ನು ಸೃಷ್ಟಿಸಬಲ್ಲರಾದರೆ, ಇನ್ನೂರೈವತ್ತು ವರ್ಷಗಳ ಹಿಂದಿನ ಟಿಪ್ಪೂ ಬಗ್ಗೆ ಇವರು ಹಬ್ಬಿಸುತ್ತಿರುವ ಸುಳ್ಳುಗಳು ಅದಿನ್ನೆಷ್ಟು ಲಜ್ಜೆಮೀರಿರಬೇಡ!. ಅವು ಲಜ್ಜೆಗೆಟ್ಟ ಸುಳ್ಳುಗಳು ಎಂಬುದು ನಮಗೆ ಅರ್ಥವಾಗಬೇಕೆಂದರೆ, ಸತ್ಯ ಏನೆಂಬುದನ್ನು ನಾವು ಅರಿಯಬೇಕು. ಹೀಗೆ ಟಿಪ್ಪೂವಿನ ಬಗ್ಗೆ ತಿಳಿದುಕೊಳ್ಳುವ ಸತ್ಯಗಳು ಕೇವಲ, ಟಿಪ್ಪೂ ಕಾಲದ ಸತ್ಯಗಳು ಮಾತ್ರ ಆಗಿರುವುದಿಲ್ಲ; ಸಾವಿರಾರು ವರ್ಷಗಳಿಂದ ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ತಿರುಚುತ್ತಾ ಬಂದ ಮನುವಾದಿಗಳ ಸುಳ್ಳಿನ ಕಥನಗಳ ಕಟ್ಟುವಿಕೆಯ ವೈಖರಿಯೂ ನಮಗೆ ಅರ್ಥವಾಗುತ್ತದೆ. ಅದು ಅರ್ಥವಾದರೆ, ನಮಗೆ ಟಿಪ್ಪೂ ಮಾತ್ರ ಸ್ಪಷ್ಟವಾಗುವುದಿಲ್ಲ; ನಮ್ಮವರೇ ಆದ ಮಹಿಷ ಅರ್ಥವಾಗುತ್ತಾನೆ, ಬಲಿ ದೊರಕುತ್ತಾನೆ, ಬಸವಣ್ಣ ಸ್ಪಷ್ಟವಾಗುತ್ತಾರೆ, ಬುದ್ಧ ಎದ್ದು ನಿಲ್ಲುತ್ತಾನೆ. ಯಾಕೆಂದರೆ ಇದು ಒಂದು ಸ್ಪಷ್ಟ modus of operandi ಮೂಲಕ ತಮ್ಮ ವಿರೋಧಿಗಳನ್ನು ಖಳರಾಗಿ ಚಿತ್ರಿಸುತ್ತಾ ಬಂದ ಅವರ ಸಂಚು. ಅದು ಇವತ್ತಿಗೂ ಮುಂದುವರೆದಿದೆ. ಸಿದ್ದರಾಮಯ್ಯನವರನ್ನ ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವುದು ಕೂಡಾ ಅದರಲ್ಲಿ ಒಂದು. ಅಂದರೆ ಇತಿಹಾಸವನ್ನು ತಿರುಚುವ ಅವರ ಕುತಂತ್ರ ನಿರಂತರವಾದುದು, ಒಂದು ಸ್ಪಷ್ಟ modus of operandi ಹೊಂದಿರುವಂತದ್ದು ಎಂಬುದನ್ನು ನಮಗೆ ಇದು ಅರ್ಥ ಮಾಡಿಸುತ್ತದೆ. ಆ ಮನುವಾದಿಗಳ modus of operandi ಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ದಕ್ಷಿಣ ಭಾರತೀಯರ ಮಟ್ಟಿಗೆ, ಅದರಲ್ಲೂ ಕನ್ನಡಿಗರ ಮಟ್ಟಿಗೆ ಟಿಪ್ಪೂ ಸುಲ್ತಾನ್‌ ಒಬ್ಬ classical example!

ಒಂದು ಉದಾಹರಣೆ ನೋಡೋಣ. 1928ರಲ್ಲಿ ಒಮ್ಮೆ ಸ್ವಾತಂತ್ಯ್ರ ಹೋರಾಟಗಾರರೂ, ಇತಿಹಾಸಕ್ತರೂ, ಸಂಸದೀಯ ಪಟುವೂ ಆದ ಬಿ ಎನ್‌ ಪಾಂಡೆಯವರನ್ನು ತಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ಆಹ್ವಾನಿಸಲು ವಿದ್ಯಾರ್ಥಿಗಳ ತಂಡ ಭೇಟಿ ಮಾಡುತ್ತೆ. ಆ ಪೈಕಿ ಒಬ್ಬ ವಿದ್ಯಾರ್ಥಿ ಕೈಯಲ್ಲಿ ಒಂದು ಪಠ್ಯಪುಸ್ತಕ ಹಿಡಿದಿರುತ್ತಾನೆ. ಮಾತಿನ ನಡುವೆ ಕುತೂಹಲಗೊಂಡು ಅದನ್ನು ತೆಗೆದುಕೊಳ್ಳುವ ಪಾಂಡೆಯವರು ಕಣ್ಣಾಡಿಸುತ್ತಾರೆ. ಟಿಪ್ಪೂ ಕುರಿತ ಒಂದು ಪಾಠವಿರುತ್ತದೆ. ಅದರಲ್ಲಿ ಒಂದೆಡೆ “ಇಸ್ಲಾಂಗೆ ಮತಾಂತರವಾಗಲು ಟಿಪ್ಪೂ ಒತ್ತಡ ಹೇರಿದ್ದರಿಂದ, ಒಪ್ಪದ 3000 ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡಿದ್ದರು” ಎಂದು ಉಲ್ಲೇಖಿಸಲಾಗಿತ್ತು. ಇಂತದ್ದೇ ಸುಳ್ಳು ಇತಿಹಾಸಗಳಿಂದ ಟಿಪ್ಪೂವನ್ನು ದ್ರೋಹಿ ರೀತಿಯಲ್ಲಿ  ಆ ಪಾಠದಲ್ಲಿ ಚಿತ್ರಿಸಲಾಗಿತ್ತು. ಅದು ಸುಳ್ಳೆಂಬುದು ಪಾಂಡೆಯವರಿಗೆ ಗೊತ್ತಿತ್ತು. ಆ ಪಾಠವನ್ನು ಬರೆದಿದ್ದು ಕಲ್ಕತ್ತಾ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥ ಮಹಾಮಹೋಪಧ್ಯಾಯ ಡಾ. ಹರಪ್ರಸಾದ್‌ ಶಾಸ್ತ್ರಿ ಎಂಬಾತ.

ಆಘಾತಗೊಳ್ಳುವ ಪಾಂಡೆಯವರು ಆತನಿಗೆ ಇದಕ್ಕೆ ಚಾರಿತ್ರಿಕ ಆಕರ ಒದಗಿಸುವಂತೆ ಪತ್ರ ಬರೆಯುತ್ತಾರೆ. ಹಲವು ಸಲ ಪತ್ರ ಬರೆದರೂ ಆತ ಉತ್ತರಿಸುವುದಿಲ್ಲ. ಕೊನೆಗೊಮ್ಮೆ ಮೈಸೂರು ಗೆಜೆಟ್‌ನಲ್ಲಿ ನೋಡಿದ್ದೆ ಎಂದು ಅಸ್ಪಷ್ಟವಾಗಿ ಹೇಳುತ್ತಾನೆ. ಆಗ ಪಾಂಡೆಯವರು ಮೈಸೂರು ವಿವಿಯ ಪ್ರೊ.ಶ್ರೀಕಂಠಯ್ಯನವರನ್ನು ಸಂಪರ್ಕಿಸುತ್ತಾರೆ. ಮೈಸೂರು ಇತಿಹಾಸ ಅಧ್ಯಯನಕಾರರಾದ ಶ್ರೀಕಂಠಯ್ಯ ಮೈಸೂರು ಗಜೆಟ್‌ಗಳನ್ನೆಲ್ಲ ಸಂಶೋಧಿಸಿ ನೋಡಿದಾಗ ಎಲ್ಲಿಯೂ ಅಂತಹ ಪ್ರಸ್ತಾಪ ಇರುವುದಿಲ್ಲ. ಆಗ ಪಾಂಡೆಯವರು ಸೂಕ್ತ ಸಾಕ್ಷಿಸಮೇತ ಕಲ್ಕತ್ತಾ ವಿವಿಯ ವಿಸಿಯಾಗಿದ್ದ ಆಶುತೋಷ್‌ ಮುಖರ್ಜಿಯವರಿಗೆ ಪತ್ರ ಬರೆದು ಸುಳ್ಳುಪಾಠದ ಹುನ್ನಾರ ಬಯಲು ಮಾಡುತ್ತಾರೆ. ಕೂಡಲೇ ಆ ಪಠ್ಯವನ್ನು ಸಿಲಬಸ್‌ನಿಂದ ತೆಗೆದುಹಾಕಲಾಗುತ್ತೆ. 1977 ಜುಲೈ 29ರಂದು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಪಾಂಡೆಯವರು ಈ ಘಟನೆ ವಿವರಿಸಿದ್ದರು. ಅದು ಕಡತಗಳಲ್ಲಿ ದಾಖಲಾಗಿದೆ.

ಇದು ಮನುವಾದಿಗಳು ಸುಳ್ಳುಗಳನ್ನು ಸತ್ಯವಾಗಿಸುವ ವೈಖರಿ. ಆ ಸುಳ್ಳುಗಳನ್ನು ನಾವು ಎದುರಿಸಿ ಜನರ ಮನಸ್ಸಿನಿಂದ ದೂರ ಸರಿಸಬೇಕೆಂದರೆ ನಮಗೆ ಸತ್ಯ ತಿಳಿದಿರಬೇಕಾಗುತ್ತದೆ. ಮೊದಲೇ ಹೇಳಿದಂತೆ ಇದು ಟಿಪ್ಪೂವಿಗೆ ಮಾತ್ರ ಸೀಮಿತವಾದುದಲ್ಲ. ಅವರಿಗೆ ವಿರುದ್ಧವಿದ್ದ ನಮ್ಮ ಚಾರಿತ್ರಿಕ ವ್ಯಕ್ತಿಗಳನ್ನು ಅವರು ತಮ್ಮ ಸುಳ್ಳಿನ ಕಂತೆ ಅಥವಾ ಗೊಡ್ಡು ಪುರಾಣಗಳ ಮೂಲಕ ಹೀಗೆ ಖಳರಾಗಿಸುತ್ತಲೇ ಬಂದಿದ್ದಾರೆ. ಉದಾಹರಣೆಗೆ, ಈಗಿನ ಸಿದ್ದರಾಮಯ್ಯನವರನ್ನೇ ತೆಗೆದುಕೊಳ್ಳಿ. ಸಿದ್ದರಾಮಯ್ಯನವರಿಗೆ ಅವರದ್ದೇ ಆದ ಮಿತಿಗಳು ಹಲವು ಇರಬಹುದು, ಆ ಕಾರಣಕ್ಕೆ ಅವರನ್ನು ಸಕಾರಣವಾಗಿ ಟೀಕಿಸುತ್ತಿರುವವರ ಸಂಖ್ಯೆಯೂ ಹೆಚ್ಚಿರಬಹುದು. ಅದು ಒಂದು ಬಗೆಯ ವಿಮರ್ಶೆ. ಆದರೆ ಅವರಿಗೆ ‘ಹಿಂದೂ ವಿರೋಧಿ’ ಎಂಬ ಹಣೆಪಟ್ಟಿ ಅಂಟಿಸುವ ಮನುವಾದಿಗಳ ಹುನ್ನಾರವನ್ನು ನಾವು ಒಪ್ಪಲಾದೀತೆ? ಮನುವಾದಿಗಳು ಅದನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದರು, ಅವರ ಕಾಲದಲ್ಲಿ 56 ಹಿಂದೂಗಳ (ಬದುಕಿದ್ದವರ ಹೆಸರನ್ನೂ ಸೇರಿಸಿ) ಹತ್ಯೆಯಾಯಿತು, ಅವರು ಸಾಬರಿಗೆ ಶಾದಿ ಭಾಗ್ಯ ಕೊಟ್ಟರು, ವಿಧಾನಸೌಧದಲ್ಲಿ ಪಾಕಿಸ್ತಾನ ಘೋಷಣೆ ಕೂಗಲು ಅನುಮತಿ ಮಾಡಿಕೊಟ್ಟರು, ಹಿಂದೂ ದೇವಸ್ಥಾನಗಳ ಹಣವನ್ನು ಮುಸ್ಲಿಮರಿಗೆ ಕೊಟ್ಟರು, ಹಿಜಾಬ್‌ಗೆ ಪ್ರೋತ್ಸಾಹ ಕೊಟ್ಟರು, ಹಲಾಲ್ ಬಜೆಟ್‌ ಕೊಟ್ಟರು…. ಹೀಗೆ ನಾವು ಕಂಡ ಸತ್ಯಗಳಲ್ಲೇ ಸುಳ್ಳಿನ ನೆರೇಟಿವಿಟಿಯನ್ನು ಪೋಣಿಸಲು ಯತ್ನಿಸುತ್ತಿದ್ದಾರೆ. ನಾವೇನೊ ಈಗ ಸತ್ಯವನ್ನು ಕಂಡಿದ್ದೇವೆ, ಆ ಸತ್ಯದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ ಅವರ ಸುಳ್ಳುಗಳನ್ನು ಖರೀದಿಸುತ್ತಿಲ್ಲ. ಆದರೆ ನೂರೈವತ್ತು ಇನ್ನೂರು ವರ್ಷಗಳ ನಂತರ ಯೋಚಿಸಿ ನೋಡಿ. ಆಗಿನ ಪೀಳಿಗೆಯವರ್‍ಯಾರು ಸಿದ್ದರಾಮಯ್ಯನನ್ನು ನೋಡಿರುವುದಿಲ್ಲ. ಈ ಘಟನೆಗಳ ಹಿನ್ನೆಲೆ ತಿಳಿದಿರುವುದಿಲ್ಲ. ಆಗ ಇರಬಹುದಾದ ಪ್ರಜ್ಞಾವಂತರು ಕೂಡಾ, ಸುಳ್ಳೆಂದು ಸಂಪೂರ್ಣವಾಗಿ ತಳ್ಳಿಹಾಕಲಾಗದ ಈ ಅರೆಬರೆ ಮಾಹಿತಿಗಳನ್ನು ನಂಬಿ ಸಿದ್ದರಾಮಯ್ಯ ‘ಒಳ್ಳೆಯ  ಆಡಳಿತಗಾರನೇನೊ ನಿಜ, ಆದರೆ ಆತ ಓಟಿಗೋಸ್ಕರ ಹಿಂದೂ ವಿರೋಧಿಯಾಗಿದ್ದ, ಮುಸ್ಲಿಮರಿಗೆ ವಿಪರೀತ ಆದ್ಯತೆ ಕೊಡುತ್ತಿದ್ದ’ ಎಂಬ ಗೊಂದಲದ ನಿರ್ಧಾರಕ್ಕೆ ಬಂದು ನಿಲ್ಲುತ್ತಾರೆ (ಈಗ ನಮ್ಮ ಜಾತ್ಯತೀತ ಪ್ರಗತಿಪರರಲ್ಲೆ ಹಲವರು ಟಿಪ್ಪೂವನ್ನು ಅಪರ್ಥೈಸಿಕೊಂಡಂತೆ). ಇನ್ನು ಸ್ವಂತ ಯೋಚನೆಯಿಲ್ಲದ ಆ ಪೀಳಿಗೆಯ ಸಮೂಹದ ಪಾಲಿಗೆ  ಸಿದ್ದರಾಮಯ್ಯ, ಮಹಿಷಾಸುರನಂತೆ ರಾಕ್ಷಸ ರೂಪ ಧರಿಸಿ ನಿಂತರೂ ಅಚ್ಚರಿಯಿಲ್ಲ. ಶಾಂತಿಧೂತ ಗಾಂಧಿಯನ್ನೇ ಬಡಿಗೆ ಹಿಡಿದು ಬಡಿಯುವ ಗೂಂಡಾ ಆಗಿ ಚಿತ್ರಿಸಿದವರಿಗೆ, ಇದು ಕಷ್ಟವೇ?

ನೂರಿನ್ನೂರು ವರ್ಷಗಳ ನಂತರ ಸುಳ್ಳಿನ ಚರಿತ್ರೆಗಳಿಗೆ ಮುಂದಿನ ಪೀಳಿಗೆ ಬಲಿಯಾಗಬಾರದೆಂದರೆ, ನಾವೀಗ ನಮ್ಮ ಚರಿತ್ರೆಯನ್ನು ಅದರ ಹಿನ್ನೆಲೆ ಸಮೇತ ಅರ್ಥ ಮಾಡಿಕೊಂಡು, ನಮ್ಮ ವರ್ತಮಾನವನ್ನು ಅವರ ಹುನ್ನಾರಗಳಿಂದ ರಕ್ಷಿಸಿ ದಾಖಲಿಸಬೇಕಿದೆ. ಅದಕ್ಕಾಗಿ ನಾವು, ಮನುವಾದಿಗಳ ಇತಿಹಾಸದ ತಿರುಚುವಿಕೆಯನ್ನು ನಮಗೆ ಅರ್ಥ ಮಾಡಿಸಬಲ್ಲ ಒಬ್ಬ classical, historical example ಆದ ಟಿಪ್ಪೂವನ್ನು ವಸ್ತುನಿಷ್ಠವಾಗಿ ಅರಿಯಬೇಕಿದೆ.

ಪತ್ರಕರ್ತ ಮಿತ್ರ ನವೀನ್‌ ಸೂರಿಂಜೆಯವರು ಅಂತದ್ದೊಂದು ಕೃತಿಯನ್ನು ನಮ್ಮ ಕೈಗಿಡುತ್ತಿರುವುದು ನಿಜಕ್ಕೂ ಸ್ವಾಗತ ಮಾಡುವಂತದ್ದು ಮತ್ತು ಸಕಾಲಿಕವಾದಂತದ್ದು. ‘ಕರಾವಳಿ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌’ ಕೃತಿಯನ್ನು ಓದಲು ನಾನು ಕಾತರರನಾಗಿದ್ದೇನೆ. ಯಾಕೆಂದರೆ ಒಂದುಕಾಲಕ್ಕೆ ಬುದ್ದಿವಂತರ ನೆಲ ಎನಿಸಿಕೊಂಡಿದ್ದ ಕರಾವಳಿ ಇಂದು `ಕೋಮುವಾದದ ಪ್ರಯೋಗಶಾಲೆ’ ಎಂಬ ಅಪಖ್ಯಾತಿಗೆ ಈಡಾಗಿದೆ. ಹಿಂದೂ ಮುಸ್ಲಿಮರ ಸೌಹಾರ್ದತೆಯನ್ನು ಕೇವಲ ಓಟಿಗಾಗಿ ಕದಡಲಾಗುತ್ತಿದೆ. ಅಲ್ಲಿ ಟಿಪ್ಪೂ ಅನಾವರಣವಾಗಬೇಕಾದುದು ಕಾಲದ ತುರ್ತು. ಸೂರಿಂಜೆಯವರ ಕೃತಿ ಆ ಕಾರಣಕ್ಕಾಗಿ ವಿಶೇಷವೆನಿಸುತ್ತದೆ.

You cannot copy content of this page

Exit mobile version