Home ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ : ಡಿ.ಕೆ. ಸುರೇಶ್

ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ : ಡಿ.ಕೆ. ಸುರೇಶ್

0

“ನನ್ನ ಕ್ಷೇತ್ರದ ಜನರ ತೀರ್ಮಾನವನ್ನು ಸ್ವಾಗತಿಸುತ್ತಾ, ಡಾ.ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಲೋಕಸಭೆ ಚುನಾವಣೆ ಫಲಿತಾಂಶ ಕುರಿತಾಗಿ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ;

“ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಲು ಜನ ಮೂರು ಬಾರಿ ಅವಕಾಶ ನೀಡಿದ್ದರು. ನಾಲ್ಕನೇ ಬಾರಿಯ ಅಗ್ನಿಪರೀಕ್ಷೆಯಲ್ಲಿ ವಿರಾಮ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ನನಗೆ ಮತ ಹಾಕಿರುವ, ಪಕ್ಷಕ್ಕಾಗಿ ಕೆಲಸ ಮಾಡಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದು ಹೇಳಿದ್ದಾರೆ.

“ನನಗೆ ಅವಕಾಶ ಕೊಟ್ಟ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಇತರೆ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ಕನ್ನಡಿಗರ ಧ್ವನಿಯಾಗಿ, ಕ್ಷೇತ್ರದ ಅಭಿವೃದ್ಧಿಗೆ ನಾನು ಕೆಲಸ ಮಾಡಿದ್ದೇನೆ. ಜನ ಹೊಸಬರಿಗೆ ಅವಕಾಶ ನೀಡಿದ್ದು, ಅವರು ಉತ್ತಮವಾಗಿ ಕೆಲಸ ಮಾಡಲಿ. ರಾಜ್ಯಕ್ಕೆ, ಕ್ಷೇತ್ರಕ್ಕೆ ಒಳ್ಳೆಯದಾಗಲಿ” ಎಂದು ಡಿಕೆ ಸುರೇಶ್ ಹೇಳಿದ್ದಾರೆ.

“ನಾನು ಕ್ಷೇತ್ರದ ಜನರ ಜತೆ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ನಾನು ನಿಮ್ಮ ಜತೆ ಇದ್ದು ಬೆಳೆದವನು. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ನಾನು ಗೆಲ್ಲುವ ಬಗ್ಗೆ ಶೇ.100 ರಷ್ಟು ನಂಬಿಕೆ ಇತ್ತು. ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ಸಿಗುವ ವಿಶ್ವಾಸವಿತ್ತು. ಆದರೆ ನನಗೆ ವಿಶ್ರಾಂತಿ ನೀಡಿದ್ದಾರೆ. ಈಗ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ” ಎಂದು ತಮಗಾದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮೈತ್ರಿ ಯಶಸ್ವಿಯಾಯಿತೇ ಎಂದು ಕೇಳಿದಾಗ, “ರಾಜಕಾರಣದಲ್ಲಿ ತಂತ್ರ, ಕುತಂತ್ರಗಳು ಕೆಲಸ ಮಾಡುತ್ತವೆ. ಈಗಲೂ ಅದು ಕೆಲಸ ಮಾಡಿದ್ದು, ಅದನ್ನು ನಾವು ಸ್ವಾಗತ ಮಾಡಬೇಕು. ಇದರಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಜನರ ತೀರ್ಮಾನವೇ ಅಂತಿಮ. ಮುಂದಿನ ದಿನಗಳಲ್ಲೂ ಹೋರಾಟ ಮುಂದುವರಿಸುತ್ತೇನೆ. ನನಗೆ ರಾಜಕಾರಣ, ರಾಜಕೀಯ ಜೀವನ ಅನಿವಾರ್ಯವಲ್ಲ. ನಾನು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದ್ದೇನೆ” ಎಂದರು.

ಇಂಡಿಯಾ ಒಕ್ಕೂಟ ಉತ್ತಮ ಪ್ರದರ್ಶನ ನೀಡಿರುವ ಬಗ್ಗೆ ಕೇಳಿದಾಗ, “ಉತ್ತರ ಭಾರತದಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಉತ್ತಮ ಸ್ಥಾನಗಳನ್ನು ಗಳಿಸಿದೆ. ಮೋದಿ ಅವರ ಸಾಧನೆಗೆ ಜನ ಉತ್ತರ ನೀಡುತ್ತಿದ್ದಾರೆ. ಬಿಜೆಪಿಯವರು 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರು. ಮಾಧ್ಯಮಗಳ ಸರ್ವೇಗಳು ಸುಳ್ಳಾಗಿವೆ” ಎಂದರು.

You cannot copy content of this page

Exit mobile version