Home ಕರ್ನಾಟಕ ಚುನಾವಣೆ - 2023 ರಘುಪತಿ ಭಟ್ ಟಿಕೆಟ್ ವಂಚಿತರಾಗುವರೇ?

ರಘುಪತಿ ಭಟ್ ಟಿಕೆಟ್ ವಂಚಿತರಾಗುವರೇ?

0

ಉಡುಪಿ: ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಕಟಿಸಿದ ಬಳಿಕ ಬಿಜೆಪಿ ಮಾತ್ರವಲ್ಲ ಇಡೀ ಜಿಲ್ಲೆಯ ಚುನಾವಣಾ ಚಿತ್ರಣವೇ ಬದಲಾಗಿದೆ. ಹಾಲಾಡಿ ಬದಲಿಗೆ ಅವರ ಶಿಷ್ಯ, ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿಗೆ ಟಿಕೆಟ್ ನೀಡಿದರೆ, ಬಂಟರ ಅಧಿಪತ್ಯವಿರುವ ಕುಂದಾಪುರದಲ್ಲಿ “ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿಗೆ ‘ಬಂಪರ್’ ಹೊಡೆದ ಹಾಗೆಯೇ” ಎಂದು ಕಾಂಗ್ರೆಸ್ ವಲಯದಲ್ಲಿ ಉದ್ಘಾರಗಳು ಕೇಳಿ ಬಂದಿವೆ. ಕುಂದಾಪುರದಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಉಡುಪಿಯಲ್ಲಿ ರಘುಪತಿ ಭಟ್ ಟಿಕೆಟ್ ವಂಚಿತರಾಗುವುದು ಗ್ಯಾರಂಟಿ. ಹಾಗಾಗಿ ಹಾಲಾಡಿಯ ನಿನ್ನೆಯ ನಡೆ ರಘುಪತಿ ಭಟ್ಟರ ಮಟ್ಟಿಗೆ ಭಾರೀ ಆಘಾತವೇ ಸರಿ. 

ಭಟ್ಟರ ಕೈತಪ್ಪುವ ಟಿಕೇಟು ಜಾರಿ ಯಾರ ಮಡಿಲಿಗೆ ಬೀಳಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

ಬಿಜೆಪಿ ಉಡುಪಿಯಲ್ಲಿ ಮೊಗವೀರರಿಗೆ ಮಣೆ ಹಾಕಲಿದೆ ಎಂಬ ನಿರೀಕ್ಷೆಯಲ್ಲಿರುವ ಹೊಸದಾಗಿ ಬಿಜೆಪಿ ಸೇರಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ/ಅರ್‌ಎಸ್‌ಎಸ್‌ ಹೈಕಮಾಂಡ್ ಮೂಲಕ ತಮ್ಮ ಲಾಬಿ ತೀವ್ರಗೊಳಿಸಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ. ಮೊನ್ನೆ ಉಡುಪಿಯಲ್ಲಿ ನಡೆದ ಟಿಕೆಟ್ ಹಂಚಿಕೆ ಕುರಿತ ಬಿಜೆಪಿಯ ‘ಕೋಸ್ಡ್ ಡೋರ್’ ಸಭೆಯಲ್ಲಿ ಬ್ರಹ್ಮಾವರದ ಬಿಜೆಪಿ ನಾಯಕ ರಾಜೇಶ್ ಶೆಟ್ಟಿ ಬಿರ್ತಿ ಪ್ರಮೋದ್ ಟಿಕೆಟ್‌ಗೆ ಪ್ರಯತ್ನಿಸುತ್ತಿರುವುದರ ವಿರುದ್ಧ ಬಹಿರಂಗವಾಗಿಯೇ ಕೆಂಡ ಕಾರಿದ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಒಂದು ವೇಳೆ ಪ್ರಮೋದ್ ತನ್ನ ‘ಪ್ರಭಾವ’ ಬಳಸಿ ಮೇಲಿನಿಂದ ಟಿಕೆಟ್ ಮಾಡಿಸಿಕೊಂಡು ಬಂದರೆ ಮೂಲ ಬಿಜೆಪಿಯವರ ವಿರೋಧ ಹಾಗೂ ಕಾಂಗ್ರೆಸ್ ತೊರೆದ ಬಗ್ಗೆ ಕಾಂಗ್ರೆಸಿಗರ ಆಕ್ರೋಶ ಅವರ ವಿರುದ್ಧ ಕೆಲಸ ಮಾಡಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಈ ಮಧ್ಯೆ, ಉಡುಪಿಯಿಂದ ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ಗೆ ‘ಘರ್ ವಾಪ್ಸಿ’ ಮಾಡಿ ಅಲ್ಲಿಯಾದರೂ ಸ್ಪರ್ಧಿಸಬೇಕೆಂಬ ನಿಟ್ಟಿನಲ್ಲಿ ಪ್ರಮೋದ್ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ಸಂಪರ್ಕಿಸಿರುವ ಸುದ್ದಿ ಎರಡು ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಇನ್ನು, ಉಡುಪಿಯ ಸೀಟಿಗೆ ಟವೆಲ್ ಹಾಕಿರುವ ಯಶಪಾಲ್ ಸುವರ್ಣ, ಶಾಸಕ ಲಾಲಾಜಿ ಮೆಂಡನ್ ಅವರ ಸೌಮ್ಯತೆಯ ದುರುಪಯೋಗ ಪಡೆದು ಮೊಗವೀರರ ಕೋಟಾದಡಿ ಕಾಪು ಕ್ಷೇತ್ರದಲ್ಲಿ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ಆ ಮೂಲಕ ಕಾಪು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗುರ್ಮೆ‌ ಸುರೇಶ್‌ ಶೆಟ್ಟಿ ಹಾಗೂ‌ ಅವರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕುಂದಾಪುರದಲ್ಲಿ ಬಂಟರಿಗೆ ತಪ್ಪಿದ ಟಿಕೆಟ್ ಉಡುಪಿಯಲ್ಲಿ ಬಂಟರಿಗೆ ಸಿಗುವುದಾದರೆ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರನ್ನು ಕೂಡಿಕೊಂಡು ದಿನಕರ್ ಶೆಟ್ಟಿ ಹೆರ್ಗ ಮುಂಚೂಣಿಯಲ್ಲಿದ್ದಾರೆ.

ಉಡುಪಿಯ ಟಿಕೆಟ್ ರಘುಪತಿ ಭಟ್ಟರ ಕೈ ತಪ್ಪಿದರೆ ಅವರ ಬೆಂಬಲ ಯಾರಿಗೆ? ತಮ್ಮ ಶಿಷ್ಯನ ಹೆಸರನ್ನು ಸೂಚಿಸುತ್ತಾರೆಯೇ ಅಥವಾ ಅಲ್ಲಿಯೂ ಒಂದು ವ್ಯವಹಾರ ನಡೆದೇ ಬಿಡುತ್ತದೆಯೇ ಎಂಬ ಕುತೂಹಲ ಮಾತ್ರ ಸಧ್ಯಕ್ಕೆ ಉಳಿದುಬಿಡುತ್ತದೆ.

ವರದಿ: ದಿನೇಶ್‌ ಕಿಣಿ, ಉಡುಪಿ

You cannot copy content of this page

Exit mobile version