ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದು ಈ ದಿನಮಾನಗಳಲ್ಲಿ ಬೇಕಾದ ಉಪಯುಕ್ತ ಲೇಖನ ಇದಾಗಿದೆ. ಮಾನಸಿಕ ಆರೋಗ್ಯದ ಅರಿವು ಯಾಕೆ ಮುಖ್ಯ? ಮಾನಸಿಕ ಅನಾರೋಗ್ಯಕ್ಕೆ ಕಾರಣಗಳು, ಮಾನಸಿಕ ಅನಾರೋಗ್ಯ -ಗುರುತಿಸುವಿಕೆ ಮತ್ತು ನಿರ್ವಹಣೆ ಎಂಬಿತ್ಯಾದಿ ಅಂಶಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ತಪ್ಪದೇ ಓದಿ
ಇದು 2023ನೇ ಇಸವಿ, ಅಕ್ಟೋಬರ್ 10ರಂದು ಆಚರಿಸಿದ “ವಿಶ್ವ ಮಾನಸಿಕ ದಿನ” ದ ಧ್ಯೇಯ ವಾಕ್ಯವಾಗಿದೆ .ಇಂದು ನಾವು ಮಾನಸಿಕ ಆರೋಗ್ಯ ದ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
ಮಾನಸಿಕ ಆರೋಗ್ಯದ ಬಗ್ಗೆ ಹಿಂದೆಂದಿಗಿಂತಲೂ ಮಹತ್ತರವಾದ ಚರ್ಚೆಗಳು ಜಾಗತಿಕ ಮಟ್ಟದಿಂದ ಹಿಡಿದು ಸ್ಥಳೀಯ ಮಟ್ಟದವರೆಗೂ ನಡೆಯುತ್ತಿದ್ದು, ಕೋವಿಡ್ ನಂತರದ ಕಾಲಘಟ್ಟದಲ್ಲಿ, ಜನತೆ ಎದುರಿಸುತ್ತಿರುವ ವಿವಿಧ ಬಗೆಯ ಮಾನಸಿಕ ಸ್ಥಿತಿಗಳ ಬಗ್ಗೆ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ, ಹೊಸ ರೀತಿಯ ವೈಜ್ಞಾನಿಕ ಸಂಶೋಧನೆಗಳು, ಆಲೋಚನಾ ಕ್ರಮಗಳು, ಸಿದ್ಧಾಂತಗಳು ಮತ್ತು ಚಿಕಿತ್ಸಕ ವಿಧಾನಗಳನ್ನು ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಲು ಸಿದ್ಧತೆಗಳು ನಡೆಯುತ್ತಿವೆ. ಮಾನಸಿಕ ಆರೋಗ್ಯ ಕಾರ್ಯಕರ್ತರು ವಿವಿಧ ಹಂತಗಳಲ್ಲಿ ಈ ಪ್ರಕ್ರಿಯೆಗಳಲ್ಲಿ ಪಾತ್ರ ನಿರ್ವಹಿಸುತ್ತಾ ಬಂದಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯವೂ ಹೌದು.
ವ್ಯಕ್ತಿಯ ವರ್ತನೆಯಲ್ಲೋ ಭಾವನೆಯಲ್ಲೋ ಬದಲಾವಣೆಯನ್ನು ಗಮನಿಸಿದಾಗ ಏನೋ ಸಣ್ಣ ವ್ಯತ್ಯಾಸವಾಗಿದೆ, ಇದು ಮಾನಸಿಕ ಅಸ್ವಸ್ಥತೆಗೆ ಹತ್ತಿರವಾದ ಮುನ್ಸೂಚನೆ ಅಥವಾ ಖಾಯಿಲೆ – ಎಂದು ಗುರುತಿಸುವ ಮೊದಲ ಹೆಜ್ಜೆಗೆ ಬಹುತೇಕ ಸಮಾಜದಲ್ಲಿ ನಿರಾಕರಣೆ ಇದೆ. ಇದನ್ನು ಸಾಮಾಜಿಕ ಕಳಂಕ ಎಂದೂ ಇಲ್ಲವಾದರೆ, ಈ ಸ್ಥಿತಿಗೆ ಮೂಢನಂಬಿಕೆಯ ಲೇಪ ಮಾಡಿ ನೋಡುವುದು ನಮ್ಮ ದೈನಂದಿನ ಆಚರಣೆಯಲ್ಲಿದೆ. ಈ ರೀತಿಯ ನಡವಳಿಕೆ ಕಾರಣಕ್ಕೆ ಕೆಲವು ಸಾವು ಮತ್ತು ಆತ್ಮಹತ್ಯೆಯೂ ಘಟಿಸಿದೆ.
ಹೀಗಾಗಿ ಪ್ರಜ್ನ್ಯಾವಂತ ಸಮಾಜದಲ್ಲಿರುವಂತಹವರು ಮಾನಸಿಕ ಆರೋಗ್ಯದ ಕುರಿತು ಯೋಚಿಸಬೇಕಾದ ತುರ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಆ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ತಮ್ಮ ಸಾಮಾಜಿಕ ನೆಲೆಯ ವಾಸ್ತವತೆಯ ಅರಿವಿನ ಜೊತೆಗೆ ಪ್ರಸ್ತುತದ ಸವಾಲುಗಳನ್ನು ಸ್ವೀಕರಿಸುವ ಮತ್ತು ಅದನ್ನು ಎದುರಿಸುವ ಅಪ್ ಡೇಟೆಡ್ ಜ್ನ್ಯಾನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಈ ಹೊತ್ತ್ತ್ತಿನ ನಿರೀಕ್ಷೆ. ಕೇವಲ ಬೌದ್ದಿಕ ಅಲ್ಲವೇ ಮಾನವಿಕ/ ವೈಜ್ನ್ಯಾನಿಕ ಮಾಹಿತಿಯನ್ನು ಸಂಗ್ರಹಿಸುವುದು ಮಾತ್ರವಲ್ಲದೇ ಅದರ ವಿವಿಧ ಶಾಖೆಗಳಾದ ಸಮಾಜೋ-ಸಾಂಸ್ಕೄತಿಕ ಚೌಕಟ್ಟಿನಲ್ಲೂ ವ್ಯಕ್ತಿಯ ಮನ: ಸ್ಥಿತಿಯನ್ನು ವಿಶ್ಲೇಷಿಸುವುದು ನಂತರ ಅವರಿಗೆ ಅಗತ್ಯ ಪೂರಕ ಚಿಕಿತ್ಸೆಗೆ ಸೂಚಿಸುವುದು ನಿಜವಾದ ವೃತ್ತಿ ನೈತಿಕತೆ. ಇದರಿಂದ ವ್ಯಕ್ತಿಗೂ ಮತ್ತು ಆ ವೃತ್ತಿಗೂ ನ್ಯಾಯ ದೊರಕಿಸಿದಂತಾಗುತ್ತದೆ.
ವೈದ್ಯಕೀಯ ವಿಜ್ನ್ಯಾನದ ಅವಿಷ್ಕಾರದೊಂದಿಗೆ ಮನೋವಿಜ್ನ್ಯಾನ -ದ ಶಾಖೆಯಾಗಿ ಮಾನಸಿಕ ಆರೋಗ್ಯ ಎನ್ನುವುದು ಚಾಲ್ತಿಗೆ ಬಂದಿದ್ದು ಹಾಗೂ ಅದರ ಚಿಕಿತ್ಸೆಯ ಸ್ವರೂಪವಾಗಿ “ ಕೌನ್ಸಿಲಿಂಗ್ ವಿಧಾನ “ ಮಾತು ಮದ್ದಾಗಿರುವಂತಹ ಚಿಕಿತ್ಸೆಯ ಅವಶ್ಯಕತೆ ಪ್ರಮುಖವಾಗಿ ಸಕ್ರಿಯವಾಗಿರುವ ಎಲ್ಲಾ ವಲಯಗಳಲ್ಲೂ ಇರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಮಾಜದಲ್ಲಿರುವ ಯಾವುದೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾನಸಿಕವಾಗಿ, ತುಮುಲ, ಗೊಂದಲ, ಆತಂಕ, ಖಿನ್ನತೆ, ಒತ್ತಡ , ಕೀಳರಿಮೆ, ನಿರುತ್ಸಾಹ, ದ್ವೇಶ, ಅಸೂಯೆ, ಆತ್ಮಹತ್ಯೆಯಂತಹ ಆಲೋಚನೆ ಕ್ರಿಯೆಗೆ ಒಳಗಾಗಿರುವಂತಹ ಸಂದರ್ಭ ಬಂದೇ ಬರುತ್ತದೆ. ಅದನ್ನು ವ್ಯವಸ್ಥಿತವಾಗಿ ಗುರುತಿಸಿ ಅಗತ್ಯವಿರುವ ಚಿಕಿತ್ಸೆಗೆ ಒಳಗಾದರೆ ಇಂತಹ ಮನೋಬೇನೆಯಿಂದ ಹೊರಬರಬಹುದು.
ನಮ್ಮ ಸಾಮಾಜಿಕ ಪರಿಸರ, ಧಾರ್ಮಿಕ ಚೌಕಟ್ಟುಗಳು ಸಾಂಸ್ಕೃತಿಕ ನೀತಿ ನಿಯಮಗಳು, ಲಿಂಗಾಧಾರಿತ ಪಾತ್ರ ಜವಾಬ್ದಾರಿಗಳು, ವಿವಾಹ /ಕೌಟುಂಬಿಕ ನಿರೀಕ್ಷೆಗಳು, , ಶಿಕ್ಷಣದಲ್ಲಿ ಸ್ಪರ್ದಾ ಒತ್ತಡ, ಉದ್ಯೋಗದಲ್ಲಿನ ಅಭದ್ರತೆ, ವಯೋಮಾನದ ಅಂತರ ಮತ್ತು ವೈಚಾರಿಕ ಸಂಘರ್ಷ ಸ್ನೆಹ-ಪ್ರೇಮ, ಸಂಬಂಧಗಳಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ನಡುವಿನ ಗಡಿಗಳ ಕುರಿತು ಅರಿವಿನ ಕೊರತೆಯ ಕಾರಣಕ್ಕೆ ಮಧ್ಯಪಾನ, ಧೂಮಪಾನ, ಡ್ರಗ್ ಸೇವನೆಯಂತಹ ಮಾರಕ ವ್ಯಸನಗಳಿಗೆ ಒಳಗಾಗುತ್ತಿರುವುದು ಇಂದು ಸಾಮಾನ್ಯ ದೃಶ್ಯವಾಗಿರುವುದು ದುರಂತವೇ ಸರಿ. ಕೊನೆಗೊಂದು ದಿನ ಮಾನಸಿಕ ಅವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೇ ಆತ್ಮಹತ್ಯೆ ಪ್ರಯತ್ನಗಳ ಮೂಲಕ ಜೀವನವನ್ನು ಮುಕ್ತಾಯ ಮಾಡಿಕೊಳ್ಳುವುದು ಸಮಾಜಕ್ಕೆ ನಷ್ಟವೂ ಹೌದು.
ಆರೋಗ್ಯ ಎಂದರೆ , ವ್ಯಕ್ತಿಯ, “ ದೈಹಿಕ, ಭಾವನಾತ್ಮಕ, ಮಾನಸಿಕ, ಲೈಂಗಿಕ ಆರೋಗ್ಯ” ದ ಬಗ್ಗೆ ಕಾಳಜಿ ವಹಿಸುವುದು, ಜೀವನದ ಸಹಜ ಒತ್ತಡದೊಂದಿಗೆ ಅದನ್ನು ಗುರುತಿಸುವ ಇಲ್ಲವೇ ಅದನ್ನು ನಿಭಾಯಿಸುವ ಕೌಶಲ್ಯವನ್ನು ರೂಢಿಸಿಕೊಳ್ಳುವ ಉತ್ಪಾದಕರಾಗಿ ಸಮಾಜಕ್ಕೆ ಕೊಡುಗೆ ನೀಡಬಲ್ಲಂತಹ ಆರೋಗ್ಯಕರ ಸ್ಥಿತಿಯಾಗಿದೆ ಎಂದು ೧೯ ನೇ ಶತಮಾನದ ಮಧ್ಯಾವಧಿಯಲ್ಲಿ ವಿಲಿಯಮ್ ಸ್ವಿಟ್ಜರ್ “ ಮಾನಸಿಕ ಆರೋಗ್ಯ” ದ ಬಗ್ಗೆ ಮೊದಲು ವ್ಯಾಖ್ಯಾನ ಮಾಡಿದವರಾಗಿದ್ದಾರೆ. ಮುಂದೆ ಇದು ಜಾಗತಿಕ ಮಟ್ಟದ “ ವಿಶ್ವ ಮಾನಸಿಕ ಆರೋಗ್ಯ ಚಳುವಳಿ ” ಗೆ ಕಾರಣವಾಯಿತು. (1808-1887) ಈ ಕ್ಷೇತ್ರಕ್ಕೆ ಡೋರ್ಥಿಯಾ ಡಿಕ್ಸ್ ಮತ್ತು ಐಸಾಕ್ ರೇ ಅವರ ಕಾಣಿಕೆ ಅತಿ ಹೆಚ್ಚು.
ಮಾನಸಿಕ ಆರೋಗ್ಯ ದ ಚಿಕಿತ್ಸೆಗೆ ಸಂಬಂಧಿಸಿದಂತೆ ಇತಿಹಾಸ ಕೆದಕಿದರೆ, ಪ್ರಾಚೀನ ಗ್ರೀಕ್ ರಿಂದ ಆರಂಭಗೊಂಡಿದೆ ಎಂಬುದು ಕಂಡು ಬರುತ್ತದೆ. ಮಾನಸಿಕ ಅಸ್ವಸ್ತತೆಗೆ ವೈದ್ಯಕೀಯ ಪರಿಭಾಷೆಯ ಸೂಕ್ಶ್ಮತೆಯೊಂದಿಗೆ ಮಾನಸಿಕ ಅನಾರೋಗ್ಯ ಸ್ಥಿತಿ ಬಗ್ಗೆ ಚರ್ಚೆ ಮಾಡಿದವರಲ್ಲಿ ಮತ್ತು ಅದನ್ನು ಪ್ರೋತ್ಸಾಹಿಸಿದವರಲ್ಲಿ ಮೊದಲಿಗರು. ಆದರೆ ಎಲ್ಲೂ ಈ ಅನಾರೋಗ್ಯ ಚಿಕಿತ್ಸೆ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.
15 ನೇ ಶ್ತತಮಾನದಲ್ಲಿ ಪ್ರಪಂಚದ ಮೊದಲ ನಿಜವಾದ ಮನೋವೈದ್ಯಕೀಯ ಆಸ್ಪತ್ರೆ ಸ್ಪೇನ್ ದೇಶದಲ್ಲಿ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಸಾಕ್ಷಿ ದೊರೆತಿದ್ದು, 1410 ರಲ್ಲಿ ಕ್ರೈಸ್ತ ಬಿಕ್ಕು ಫಾದರ್ ಜೋನ್ ಗಿಲ್ಬರ್ಟ್ಜ್ ಜೋಫ್ರೆ ಮೊದಲ ಮನೋವೈದ್ಯಕೀಯ ಆಸ್ಪತ್ರೆ ತೆರೆದವ ಎಂಬ ಉಲ್ಲೇಖವಿದೆ. 20 ನೇ ಶ್ತಮಾನದ ಆರಂಭದಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಹೊರ ರೋಗಿಗಳಿಗೆಂದೇ ಮಾನಸಿಕ ಆರೋಗ್ಯ ಕ್ಲೀನಿಕ್ ಪ್ರಮುಖ ವೈದ್ಯಕೀಯ ಮನೋ ವಿಜ್ನ್ಯಾನದ ಅವಿಷ್ಕಾರಕ್ಕೆ ಮೈಲಿಗಲ್ಲು ಎಂದರೆ ತಪ್ಪಾಗಲಾರದು.
ಮಾನಸಿಕ ಆರೋಗ್ಯ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆ ನರಸಂಬಂಧಿ ರೋಗಿಗಳೊಂದಿಗೆ ಹಾಗೂ ನರರೋಗತಜ್ನರಾಗಿ ಕೆಲಸ ಮಾಡುತ್ತಿದ್ದ ಸಿಗ್ಮಂಡ್ ಫ್ರಾಯ್ಡ್ ರಿಂದ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಎರಡನೇ ಮಹಾಯುದ್ದ ನಂತರ 1950 ರಲ್ಲಿ ಅಮೆರಿಕಾದಲ್ಲಿ “ಕೌನ್ಸಿಲಿಂಗ್ ” ಪ್ರಾಮುಖ್ಯತೆ ಕಂಡುಕೊಂಡರೂ 1960 ರಲ್ಲಿ ಕೌನ್ಸಿಲಿಂಗ್ ಭಾಷೆ ಬಳಕೆ ಹೆಚ್ಚಾಯಿತು. ಆಡ್ಲರ್, ಓಟ್ಟೋ ರಾಂಕ್, ಕಾರ್ಲ್ ಅಬ್ರಹಾಂ, ಸ್ನೊಡೋರ್ಫ್ರೆನ್ಸಿ, ಕಾರ್ಲ್ ಯೂಂಗ್ ಸೈಕೋ ಅನಾಲಿಸಿಸ್, ಮತ್ತು ಅನಾಲಿಸಿಸ್ ಅಂಡ್ ಡೈನಮಿಕ್ ಥೆರಪಿಗಳನ್ನು ಸಿಗ್ಮಂಡ್ ಫ್ರಾಯ್ಡ್ ಜೊತೆಗೆ ಸೇರಿ ಈ ಕ್ಷೇತ್ರ ವಿಸ್ತರಣೆಗೆ ಸಹಕರಿಸಿದರು.
ಭಾರತದಲ್ಲಿ ಕೌನ್ಸಿಲಿಂಗ್ …ಅನ್ನು ಮನೋವಿಜ್ನ್ಯಾನದ ಮೂಲಕವೇ ಗುರುತಿಸಲಾಗಿದೆ. ಕರ್ನಾಟಕದ ಮೈಸೂರು ಯೂನಿವರ್ಸಿಟಿ ಶಿಸ್ತಿನ ಅಧ್ಯಯನವನ್ನು ಮೊದಲು ಪ್ರಾರಂಭಿಸಿದ ಶೈಕ್ಷಣಿಕ ವ್ಯವಸ್ಥೆಯಾಗಿದೆ.
ಮಾನಸಿಕ ಆರೋಗ್ಯದ ಅರಿವು ಯಾಕೆ ಮುಖ್ಯ ?
ಈ ಕಲಿಕೆ ಪ್ರತಿ ವ್ಯಕ್ತಿಯ ಅಂತರಂಗದ ವೈಯುಕ್ತಿಕ ಪಯಣವಾಗಿದೆ.ನಾವು ಹೇಗೆ ಯೋಚಿಸುತ್ತೇವೆ, ಭಾವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಇದು ಪರಿಣಾಮ ಬೀರುತ್ತದೆ. ಅಲ್ಲದೇ ನಮ್ಮ ಜೀವನದಲ್ಲಿ ಎದುರಾಗುವ ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ, ಇತರರೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದ್ದೇವೆ ಮತ್ತು ಆರೋಗ್ಯಕರ ಆಯ್ಕೆಗಳನ್ನು ಮಾಡುವುದು ಹೇಗೆ ಎಂಬುದನ್ನು ನಿರ್ಧರಿಸಲು ಸಹಕರಿಸುತ್ತದೆ. . ಬಾಲ್ಯದಿಂದಲೇ ಸಮಸ್ಯೆಯನ್ನು ಎದುರಿಸಲೇಬೇಕಾದ ಇಂತಹ ಪರಿಸ್ಥಿತಿಯಲ್ಲಿ, ಮಾನಸಿಕ ಆರೋಗ್ಯವು ಅತ್ಯವಶ್ಯಕವಾಗಿ ಸಾಧಿಸಲೇಬೇಕಾದ ಅನಿವಾರ್ಯತೆಯಾಗಿದೆ ಎನ್ನುವ ವಾಸ್ತವಕ್ಕೆ ನಾವೆಲ್ಲರೂ ಇಂದು ಮುಖಾಮುಖಿಯಾಗಿದ್ದೇವೆ.
ಹದಿ ಹರೆಯ ಹಾಗೂ ಯುವಜನ ಇಂದು ದೇಶದ ಬಹು ದೊಡ್ಡ ಜನಸಂಖ್ಯಾ ಸಮೂಹವಾಗಿರುವುದರಿಂದ ಅವರ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಸುಸ್ಥಿರತೆ/ನೆಮ್ಮದಿ ಬಗ್ಗೆ ಚಿಂತನೆ ಮಾಡಲೇಬೇಕಿದೆ. ದೇಶದ ಸಮಗ್ರ ಅಭಿವೃದ್ದಿಗೆ ಯುಜನರ ಮಾನಸಿಕ ಆರೋಗ್ಯ ಅತಿಮುಕ್ಯ ಎಂಬುದನ್ನು ಅರಿತು ಅದನ್ನು ಮಾನದಂಡವಾಗಿ ಹ್ಯಾಪಿನೆಸ್ ಇಂಡೆಕ್ಸ್ ನಲ್ಲಿ ಪ್ರಮುಖವಾಗಿ ಪರಿಗಣಿಸಿರುವುದು ಒಳ್ಳೆಯ ಅಂಶ.
ಮಾನಸಿಕ ಆರೋಗ್ಯ ಅಸ್ವಸ್ಥತೆಯಿಂದ ನರಳುತ್ತಿರುವ ಹದಿಹರೆಯ/ ಯುವಜನ ರು ಸಾಮಾನ್ಯವಾಗಿ ಶಾಲೆ/ಕಾಲೇಜು ಅಥವಾ ವೃತ್ತಿ ಜೀವನದಲ್ಲಿ ಅತೃಪ್ತಿಯನ್ನು ಹೊಂದದೆ ಈ ಘಟ್ಟವನ್ನು ದಾಟುವುದು ಅಸಾಧ್ಯವೇನೋ ಎಂಬ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ . ಇದರಿಂದ . ಶಾಲೆ/ಕಾಲೇಜುಗಳಿಗೆ ಗೈರುಹಾಜರಾಗುತ್ತಾರೆ ಇಲ್ಲವಾದರೆ ಅವರನ್ನು ಅಮಾನತುಗೊಳಿಸಿ ಶಾಲೆ/ಕಾಲೇಜಿನಿಂದ ಹೊರಹಾಕಬಹುದು.ಕೆಲಸದ ಸ್ಥಳದಲ್ಲಿ ಅಸಮರ್ಥತೆ ಪ್ರದರ್ಶನ, ಸಮ ವಯಸ್ಕರ ಪ್ರಭಾವಗಳು ಅಥವಾ ಅವರ ಒತ್ತಡಗಳು, ವೃತ್ತಿಯ ಮೇಲ್ಮುಖ ಚಲನೆಯಗಿರುವ ಏಕಾಗ್ರತೆ , ಮಾಹಿತಿ ಯೋಚನೆ ಕೊರತೆ, ಚಂಚಲ ಮನಸ್ಥಿತಿ , ದ್ವಂದ್ವ ನಿರ್ಣಯ, ಪದೇ ಪದೇ ಕೆಲಸ ಬಿಡುವುದು, ಯಾವ ಕೆಲಸಕ್ಕೂ ಹೋಗದೇ ಎಲ್ಲದರ ಬಗ್ಗೆ ಟೀಕೆ ವಿಮರ್ಶೆ ಮಾಡುತ್ತಿರುವುದು, ಇಚ್ಚಿಸುವ ಕ್ಷೇತ್ರದಲ್ಲಿ ಉಳಿದುಕೊಳ್ಳಲು್ ಇರಬೇಕಾದ ವೃತ್ತಿ ಕೌಶಲ್ಯದ ಕೊರತೆ ಅಥವಾ ಸ್ಪರ್ದಾ ಮನೋಭಾವದ ಕೊರತೆಯೆಲ್ಲವೂ ಮಾನಸಿಕ ಆನಾರೋಗ್ಯದ ಲಕ್ಷಣಗಳಾಗಿ ಗ್ರಹಿಸಬೇಕಿದೆ.
ಅಲ್ಲದೇ ಆಪ್ತ ವಲಯಗಳಲ್ಲಿ ಅಥವಾ ಹತ್ತಿರದ ಸಂಬಂಧಗಳಲ್ಲಿ, ಪರಸ್ಪರ ಗುಮಾನಿ, ಸಂಶಯ, ಲೈಂಗಿಕ ಹಿಂಸೆ, ಆಕ್ರಮಣಕಾರಿ ವರ್ತನೆ, ಸುಳ್ಳು ಸುದ್ದಿಗಳನ್ನು(ಗಾಸಿಪ್)ಹರಡುವುದು, ಹೇಳಿಕೆ ಮಾತಿಗೆ ಕಿವಿಗೊಡುವಂತಹದ್ದು, ಸ್ವೀಕೃತ ಮನೋಭಾವದ ಕೊರತೆ, ಯಾವಾಗಲೂ ತಪ್ಪನ್ನು ಪರರ ಮೇಲೆ ಆರೋಪಿಸುವುದು, ಹತ್ತಿರದ್ದೋ ಅಥವಾ ದೂರದ್ದೋ ಯಾವಾಗಲೋ ನಡೆದ ಘಟನೆಗಳ ಆಧಾರದ ಮೇಲೆ ಸದರಿ , ಸಂಬಂಧಗಳ ನಡುವೆ ವೈರತ್ವ ಉಂಟು ಮಾಡುವುದು, ಅಸಮಧಾನ ಮತ್ತು ಅತೃಪ್ತಿ ಸ್ವಭಾವ , ಚಡಪಡಿಕೆ, ಕಳವಳ, ಋಣಾತ್ಮಕವಾದ ಸ್ಪರ್ಧಾ ಮನೋಭಾವ, ತಾನೇ ಗೆಲ್ಲಬೇಕು ಎಂಬ ಅವೈಜ್ಞಾನಿಕ ತಿಳುವಳಿಕೆಯಿಂದ ಮೂಡಿರುವ ಅಹಂ, ವ್ಯಕ್ತಿಗಳಲ್ಲಿ ಖಿನ್ನತೆ, ಆತಂಕ, ಒತ್ತಡ , ಗಳಂತಹ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.
ಇನ್ನು ಯೌವನಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಮುಂದೆ ಇತರ “ ದೈಹಿಕ ಆರೋಗ್ಯ” ಮತ್ತು ನಡವಳಿಕೆಯ ಅಪಾಯಗಳೊಂದಿಗೆ ಕೈಜೋಡಿಸುತ್ತವೆ, ಉದಾಹರಣೆಗೆ ಯಾವ ಸಂಗತಿಗಳು ತನ್ನಿಚ್ಚೆಯಂತೆ ನಡೆಯಲು, ನಡೆಸಲು ಸಾಧ್ಯವಾಗುವುದಿಲ್ಲವೋ ಆಗ ವೈಯುಕ್ತಿಕ ದಿನವಾಹಿ ಸಂಬಂಧಗಳು ನರಳುತ್ತವೆ. ಪರಿಣಾಮವಾಗಿ ಅಂತಹವರು..ಮಾದಕವಸ್ತು ಬಳಕೆ ವ್ಯಸನಕ್ಕೆ ತಮ್ಮನ್ನು ದೂಡಿಕೊಳ್ಳೂತ್ತಾರೆ. ತಾವು ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲವೆಂಬ ಕೊರಗು ಅವರನ್ನುಕೆಲವೊಮ್ಮೆ ಹಿಂಸೆ ಪ್ರವೃತ್ತಿಗೂ ದೂಡುತ್ತದೆ ,ಇದರಿಂದ ಸ್ವತ: ವ್ಯಕ್ತಿಗೂ ಮತ್ತು ಇತರರಿಗೂ ಇದರಿಂದ ಅಪಾಯ ಹೆಚ್ಚಾಗುತ್ತದೆ.. ಈ ಮಾದಕ ಸೇವನೆ ಹಿಂಸಾಚಾರಕ್ಕೆ ಪ್ರೇರಣೆಯೂ ನೀಡುವುದು , ಉನ್ಮಾದದ ಮನಸ್ಥಿತಿ ಯಲ್ಲಿರುವವರು ತನ್ನ ಲೈಂಗಿಕ ಇಚ್ಚೆ ಮತ್ತು ವರ್ತನೆ ಮೇಲೆ ನಿಯಂತ್ರಣವಿರಿಸಿಕೊಳ್ಳಾಲಾರದೆ, ಒಪ್ಪಿಗೆಯಿಲ್ಲದ ವ್ಯಕ್ತಿಯೊಂದಿಗೆ ಬಲವಂತ ರೂಪದಲ್ಲಿ ಪ್ರಯೋಗಿಸುವುದು ಅಥವಾ ಅತ್ಯಾಚಾರ ಮಾಡುವುದು, ಅದು ಸಮಾಜಕ್ಕೆ ಗೊತ್ತಾಗಿಬಿಡಬಹುದು ಎಂಬ ಆತಂಕದಿಂದ/ಭಯದಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿ ಸಾಕ್ಷಿ ಪುರಾವೆಯನ್ನು ಬಿಡದೇ ಇರುವಂಟಹ ಪ್ರಕ್ರರಣಗಳಲ್ಲಿ ಭಾಗಿಯಾಗಬೇಕಾಗುತ್ತದೆ.
ಕೆಲವೊಮ್ಮೆ ವಯೋಮಾನದ ಆಕರ್ಷಣೆ ಪ್ರೀತಿ, ಪ್ರೇಮದಂತಹ ಸಂಬಂಧಗಳಲ್ಲಿ ಒಳಗಾಗಿರುತ್ತಾರೆ. ಸಂಬಂಧ ಗಾಡವಾಗಿ ಅದು ಲೈಂಗಿಕತೆಗೆ ಪ್ರೇರೇಪಿಸುತ್ತದೆ. ಪರಿಣಾಮವಾಗಿ ತಯಾರಿಕೆಯಿಲ್ಲದ ಲೈಂಗಿಕ ತೃಪ್ತಿ, ಅನಪೇಕ್ಷಿತ ಗರ್ಭಧಾರಣೆ , ಕೆಲವು ಸಮಯದ ಬಳಿಕ ಇದೇ ಸಂಬಂಧಗಳಲ್ಲಿ ಬಿರುಕು ಉಂಟಾದಾಗ ತಪ್ಪಿತಸ್ಥ ಭಾವನೆಯಿಂದಾಗಿ ಅವಮಾನ, ಖಿನ್ನತೆ , ಒತ್ತಡ, ಭಯ, ಗಾಬರಿ, ಆತಂಕ, ಕೀಳರಿಮೆ, ಎಲ್ಲವೂ ಆವರಿಸಿಬಿಡುತ್ತದೆ. ಇದರಿಂದ ವ್ಯಕ್ತಿಯ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ನಿರಾಸಕ್ತಿ, ಬೇಸರ…ಸೇಡು ತೀರಿಸಿಕೊಳ್ಳಬೇಕೆಂಬ ಬಯಕೆ, ನಿದ್ರೆ, ಆಹಾರ ತ್ಯಜಿಸುವಿಕೆ. ಇವುಗಳಿಂದ ದೈಹಿಕ ಮತ್ತು ಮಾನಸ್ಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.( ಉದಾ: ತಲೆನೋವು, ಜ್ವರ, ಕೆಮ್ಮು,ತಲೆ ಸುತ್ತು, ವಾಂತಿ, ಬಿಪಿ, ಡಯಬಿಟಿಸ್, ಥೈರಾಯಿಡ್, ಪಿಸಿಓಡಿ-ಸಮಸ್ಯೆ, ಋತುಚಕ್ರದಲ್ಲಿ ಏರುಪೇರು ಇಂತಹ ದೇಹ ಖಾಯಿಲೆಗಳು, ಉಲ್ಬಣವಾಗಬಹುದು.)
ಕೆಲವೊಂದು ಪ್ರಕರಣಗಳಲ್ಲಿ ಲೈಂಗಿಕ ಮುಂಜಾಗ್ರತೆ ಕ್ರಮದ ಕೊರತೆ ಕಾರಣಕ್ಕಾಗಿ HIV, STD ಗಳು ಖಾಯಿಲೆಗಳಿಗೂ ಬಲಿಯಾಗಬೇಕಾಗುತ್ತದೆ. ಅಂತಿಮವಾಗಿ ಅವರು, ಅಸಹಾಯಕರಾಗಿ, ಸಮಾಜದ ಕ್ರೂರ ವ್ಯವಸ್ಥೆಯ ಆಮಿಷಕ್ಕೆ ಬಲಿಯಾಗಿ substance abuse ವ್ಯಸನಕ್ಕೆ ತುತ್ತಾಗುವ ಹಂತವನ್ನು ತಲುಪುತ್ತಿದ್ದಾರೆ, ಕೊನೆಗೆ ಆತ್ಮಹತ್ಯೆ-ಗೆ ಮೊರೆ ಹೋಗುವಂತಹ ದಾರುಣ ಸ್ಥಿತಿ ಕೂಡ ಉಂಟಾಗುತ್ತದೆ.
ಹದಿಹರೆಯದ ಅಥವಾ ಯುವತ್ವದ ಸಮಯದಲ್ಲಿ ಇನ್ನೂ ಕೆಲವು ಒತ್ತಡಕ್ಕೆ ಕಾರಣವಾಗುವ ಅಂಶಗಳು ಇವೆ. ಅವೆಂದರೆ, , ಗೆಳೆಯರೊಂದಿಗೆ ಹೊಂದಿಕೊಳ್ಳಲು ಇರುವ ಒತ್ತಡ, Boundary management ನ ಅರಿವಿನ ಕೊರತೆ, ತನಗೇನು ಬೇಕು, ಏನು ಬೇಡ ಎಂಬ ಸ್ಪಷ್ಟತೆ ಇಲ್ಲದಿರುವಿಕೆ ಸ್ನೇಹ, ಪ್ರೀತಿ ಸೆಳೆತ, ಆಹಾರ, ಉಡುಪು, ಸೌಂದರ್ಯ ಪ್ರಜ್ನೆ, ಸಮಾನ ವಯಸ್ಕರ ಪ್ರಭಾವ ಪರಿಣಾಮದಿಂದ ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿರ್ತಾರೆ. ಕೌಟುಂಬಿಕ ಬಿಕ್ಕಟ್ಟು ಹಾಗೂ ಸಾಮಾಜಿಕ ವಾಸ್ತವತೆ ಈ ಎರಡರ ಮಧ್ಯೆ ಬಿಡುಗಡೆಯನ್ನು ಬಯಸಲಿಚ್ಚಿಸುವವರು ಸಧ್ಯದ ಆಮಿಷಗಳು ಭ್ರಾಮಕ ಲೋಕದ ಅವಾಸ್ತವಿಕ ಬದುಕಿನ ನಿರೀಕ್ಷೆಗಳನ್ನುಪೂರೈಸಿಕೊಳ್ಳಲು ಇರುವ ದಾರಿಗಳಿಗೆ ತೆರೆದುಕೊಳ್ಳಲು ಅರೆ ಬರೆ ಮಾಹಿತಿ ಅಥವಾ ತಪ್ಪು ದಾರಿಗೆ ಮಾರ್ಗದರ್ಶನ ನೀಡುವವರ ದೄಷ್ಟಿಗೆ ಇವರು ಬೇಗನೆ ಆಕರ್ಷಣೆಗೆ ಒಳಗಾಗಬಹುದು. ಕೊನೆಗೊಮ್ಮೆ ನಿರಾಸೆಯ ಗೂಡಿಗೆ ತಳ್ಳಲ್ಪಡುವರು, ಕೆಲವು ಯುವಜನ ಇದಕ್ಕೆ ಪರ್ಯಾಯವಾಗಿ ಸೂಕ್ತ ಮಾರ್ಗದರ್ಶನದ ಮೊರೆ ಹೋಗಿ, ತಮಗೆ ಅಗತ್ಯವಿರುವ ಅಂಶಗಳನ್ನು ಕೈಗೂಡಿಸಿಕೊಂಡಿರುವ ಘಟನೆಗಳೂ ಅಲ್ಲಲ್ಲಿ ಇದ್ದರೂ, ಪ್ರಧಾನವಾಗಿ ಸಾಮಾಜಿಕ ದುಶ್ಚಟಕ್ಕೆ ಬಲಿಯಾಗಬೇಕಾದ ಸಂದರ್ಭ ಎದುರಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಯುವಜನ ತಮ್ಮ ದಿನದ ಹೆಚ್ಚಿನ ಸಮಯವನ್ನು ಇಂಟರ್ನೆಟ್‌ನಲ್ಲಿ ಕಳೆಯುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ( ಮಾಹಿತಿ ತಂತ್ರಜ್ನ್ಯಾನ ಮೇಲೆ ಇರುವ ಒಡೆತನ, ಪಡೆಯುವ ಹಕ್ಕು ಯಾವ ಸಮುದಾಯ, ಜಾತಿ, ವರ್ಗ ಧರ್ಮ, ಮತ್ತು ಲಿಂಗದವರಿಗೆ ಲಭ್ಯವಾಗಿದೆ ಎನ್ನುವುದು ಗಮನಿಸಬೇಕು) ಕೆಲವು ಪ್ರಕ್ರರಣಗಳಲ್ಲಿ ಯುವಜನರು ಸೈಬರ್ ಅಪರಾಧಗಳು, ಸೈಬರ್‌ಬುಲ್ಲಿಂಗ್ ಮತ್ತು ಹಿಂಸಾತ್ಮಕ ವಿಡಿಯೋ ಗೇಮ್‌ಗಳು ಮೀಮ್ ಗಳು, ಸೇರಿದಂತೆ ಮಾಹಿತಿ ಸ್ಫೋಟಕ್ಕೆ ಒಡ್ಡಿಕೊಳ್ಳುತ್ತಾರೆ. ಅಥವಾ ಅಂತಹಾ ಗುಂಪಿಗೆ ಸೇರ್ಪಡೆಯಾಗಿಬಿಡುತ್ತಾರೆ ಎಂಬುದು ಗಮನಿಸಿದಾಗ ಬೇಸರವಾಗುತ್ತದೆ.
ಈ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣವು ಪ್ರಸ್ತುತದಲ್ಲಿ ವ್ಯ್ಕವಸ್ಥೆಯ ಅತಿ ಮುಖ್ಯಭಾಗವೆಂದು ಭಾವಿಸಿ ಅನುಸರಿಸುವ ಯುವಜನರು ಈ ಬಗ್ಗೆ ವಿಮರ್ಶೆ ಇಲ್ಲದೇ ಹೊಸ ರೀತಿಯ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವರ್ತನೆಯ ಚಟಗಳು ಮತ್ತು ಸೈಬರ್ ಬೆದರಿಸುವಿಕೆ ಈ ಆಧುನಿಕ ಡಿಜಿಟಲ್ ಯುಗ-ದ ಎರಡು ಪ್ರಮುಖ ಹಾನಿಕಾರಕ ಪರಿಣಾಮಗಳಾಗಿದ್ದು ಯುವ ಮನಸ್ಸಿ-ಗೆ ಹಾನಿ ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುವ ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳ ಬಳಕೆ ಮತ್ತು ಮಾನಸಿಕ ಆರೋಗ್ಯ ಎಂಬುದರ ಮೇಲೂ ಹೆಚ್ಚು ಕೆಲಸ ಮಾಡುವ ಅನಿವಾರ್ಯ ಇದೆ ಎಂಬುದು ಸಾಮಾಜ ಚಿಂತಕರ ಆರೋಗ್ಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಮಾನಸಿಕ ಅನಾರೋಗ್ಯಕ್ಕೆ ಕಾರಣಗಳು
ಹಿಂದಿಂದಿಗಿಂತಲೂ ಮಾನಸಿಕ ಅರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಬೇಕು ಎಂಬುದು ಈ ಮೇಲಿನ ಅಂಶಗಳಿಂದ ಅರಿವಿಗೆ ಬರುತ್ತದೆ.
ಸಾಮಾನ್ಯವಾಗಿ, ಮಾನಸಿಕ ಅನಾರೋಗ್ಯ ಕ್ಕೆ ಕಾರಣ, ವ್ಯಕ್ತಿಯ ಬದುಕಿನಲ್ಲಿ ಆಗಿರುವಂತಹ ಘಾಸಿಗೊಳಿಸಿದ ಅನುಭವಗಳು, ಅಂದರೆ, ಅವರ ಬಾಲ್ಯದ ಅನುಭವಗಳಾದ, ವ್ಯಕ್ತಿ ನಿಂದನೆ, ಅವಮಾನ , ಸರಣಿ ಸೋಲು, ಮರೆಯಲಾರದ ಆಘಾತ, ದೂಷಣೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ,ಒಂಟಿತನ, ಪೋಷಕತ್ವದ ಕೊರತೆ ಇವೆಲ್ಲವೂ ಬಹುಮುಖ್ಯ ಅಡಿಪಾಯ.
ಅಲ್ಲದೆ ಸಾಮಾಜಿಕ ವಾಸ್ತವಗಳಾದ ಹಸಿವು , ಬಡತನ, ವಲಸೆ, ಜಾತಿ ಅಸೃಷ್ಯತೆ, ಪ್ರತ್ಯೇಕತೆ , ಲಿಂಗ ತಾರತಮ್ಯ, ಕೌಟುಂಬಿಕ ವಾತಾವರಣ ಮತ್ತು ಪೋಶಕತ್ವದ ಕೊರತೆ, ಶಲ್ಟರ್ ಲೆಸ್ ಹೋಮ್ ಗಳಲ್ಲಿ ಬೆಳೆದ, (ಒಂಟಿ ಪೋಷಕತ್ವ, ಕುಟುಂಬ ಕಲಹ ಮತ್ತು , ವಿಚ್ಚೇಧನ, ಆಪ್ತರ/ ಪೋಷಕರ ಮರಣ ದಂತಹ.ಸಂದರ್ಭವೂ ಸೇರಿದಂತೆ) ಸಮವಯಸ್ಕರ ಪ್ರಭಾವ/ಒತ್ತಡ ಇವುಗಳಿಂದ ಹೆಚ್ಚಾಗಿ ಮಾನಸಿಕ ಅನಾರೋಗ್ಯಗಳಿಗೆ ತುತ್ತಾಗುವುದು ಅಧ್ಯಯನಗಳಿಂದ ಹೊರ ಬಂದ ಅಂಶಗಳಾಗಿವೆ.
ಇನ್ನು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ಬದಲಾದ ಪರಿಸ್ಥಿತಿಗಳಿಂದ ಅಂದರೆ ಅತಿವೃಷ್ಟಿ ಅನಾವೃಷ್ಟಿ , ದೇಶ- ಗಡಿಗಳ ನಡುವಿನ ಯುದ್ದ, ವಿರಬಹುದು, ,ಬೌಗೋಳಿಕ ಅಸಮಾನತೆ ಕುರಿತ ತಾರತಮ್ಯ ನೀತಿ ಅನುಸರಣೆ ,ಅಭಿವೃದ್ದಿ ಯೋಜನೆಗಳಿಂದ ವಂಚಿತರಾದವರು, ಬದುಕಿನ ನಿರ್ವಹಣೆಗಾಗಿ ವಲಸೆ ಬಂದಂತಹವರು ಅಥವಾ ನಗರ ಪ್ರದೇಶದ ನಿರ್ವಸಿತರು, ಮಾನಸಿಕ ಅನಾರೋಗ್ಯಕ್ಕೆ ಶೀಘ್ರ ಗುರಿಯಾಗುವ ಸಾಧ್ಯತೆ ಹೆಚ್ಚು ಎಂಬುದು ಮನೋ- ತ್ದಜ್ನ್ಯರ ಅಭಿಪ್ರಾಯ. ಹೀಗಾಗಿ ಈ ಹಿನ್ನಲೆಯ ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಸೂಕ್ಶ್ಮವಾಗಿ ಗಮನಿಸುವಾಗ, ಪ್ರಾರಂಬಿಕ ಹಂತದಲ್ಲಿ ಇದು ಮಾನಸಿಕ ಅನಾರೋಗ್ಯ ದ ಲಕ್ಷಣಗಳು ಎಂದು ಗುರುತಿಸಲು ಸಾಧ್ಯವಾಗಬೇಕು. ಇಲ್ಲವೆಂದಾದರೆ, ಭವಿಷ್ಯದಲ್ಲಿ ತೀವ್ರರೀತಿಯ ಮಾನಸಿಕ ಬೇನೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಬಹುದು.
ಮಾನಸಿಕ ಅನಾರೋಗ್ಯ -ಗುರುತಿಸುವಿಕೆ ಮತ್ತು ನಿರ್ವಹಣೆ ಸಾಧ್ಯತೆಗಳು
ಹಾಗಾದರೆ, ಈ ಮಾನಸಿಕ ಅನಾರೋಗ್ಯವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಲು ಮತ್ತು ನಿರ್ವಹಿಸಲು ಈ ಕೆಳಗಿನ ಕೆಲವು ಅಂಶಗಳನ್ನು ಅನುಷ್ಟಾನ ಗೊಳಿಸಬಹುದು.
೧. ಕುಟುಂಬ, ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸುವುದು,
೨. ನಿರಂತರ ಮತ್ತು ಕೌಶಲ್ಯಯುತವಾದ ತರಬೇತಿ ನೀಡುವ ಮೂಲಕ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ಮೂಢನಂಬಿಕೆ ಮತ್ತು ಅದಕ್ಕೆ ಅಂಟಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು
೩.ದೈಹಿಕ ಅನಾರೋಗ್ಯಕ್ಕೆ ಔಷದಿ ತೆಗೆದುಕೊಳ್ಳಲು ತಯಾರಿದ್ದೇವೆಯೋ ಹಾಗೇ ಮಾನಸಿಕವಾಗಿ ಅನಾರೋಗ್ಯ ಬಂದಾಗಲೂ ಸೂಕ್ತ ತರಬೇತಿ ಪಡೆದ ವ್ಯಕ್ತಿಗಳಿಂದ ಸಹಾಯ ತೆಗೆದುಕೊಳ್ಳುವುದು ಇದು ಎಲ್ಲರ ಜೀವನದಲ್ಲೂ ನಡೆಯಬಹುದಾದ ಸಹಜ ಕ್ರಿಯೆ, ಇದನ್ನು ಧೈರ್ಯವಾಗಿ ಎದುರಿಸಬಹುದು ಎಂದು ಖಾತ್ರಿ ಪಡಿಸುವುದು.
೪. ದೈಹಿಕ ಖಾಯಿಲೆಗೆ ಮದ್ದು/ಔಷಧಿ ಇರುವಂತೆಯೇ ಮನಸಿನ ಖಾಯಿಲೆಗೂ ಚಿಕಿತ್ಸೆ ಇದೆ, ಈ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ನಿಲುವು ತೀರ್ಮಾನದಿಂದ ಹೊರಬರುವಂತೆ- ಶೈಕ್ಷಣಿಕ/ಆರೋಗ್ಯದ ಅರಿವು ಸಮುದಾಯಗಳ ಒಳಗೇ ಮೂಡಿಸುವುದು,
೫. ಮಾನಸಿಕ ಅನಾರೋಗ್ಯದಲ್ಲಿ ಅವರು ಯಾತನಾಮಯ ಆತಂಕವನ್ನು ಅನುಭವಿಸುತ್ತಿದ್ದಾರೆ ಅಥವಾ ಅವರ ಮೇಲೆ ಕೌಟುಂಬಿಕ ಪರಿಸರದ ಪರಿಣಾಮ ಪ್ರತಿಕೂಲವಾಗಿದೆ ಎಂಬುದನ್ನು ಗಮನಿಸಿ .ವ್ಯಕ್ತಿ ಯಾವ ಹಂತದ ಮಾನಸಿಕ ಅನಾರೋಗ್ಯದಲ್ಲಿದ್ದಾರೆ ಎಂದು ಗುರುತಿಸಿ ಖಾತ್ರಿಯಾದ, ಕೂಡಲೆ ಆಪ್ತ ಸಮಾಲೋಚನಾ ಕೇಂದ್ರದ ನೆರವು ಪಡೆಯುವಂತೆ ಪ್ರೇರಣೆ ನೀಡಿ . ಸಂಪರ್ಕ ಕಲ್ಪಿಸಿಕೊಡುವುದು.
೬. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಪ್ತ ಸಮಾಲೋಚನ ಕೇಂದ್ರಗಳು ತೆರೆಯುವಂತೆ ಸರ್ಕಾರದ ಗಮನ ಸೆಳೆಯುವುದು, ಆಪ್ತ ಸಮಾಲೊಚನ ಕೇಂದ್ರಗಳಿರುವ ಕಡೆ ಹೆಚ್ಚು ಸೂಕ್ಶ್ಮತೆಯುಳ್ಳ ಮತ್ತು ಸಕ್ರಿಯತೆಯಿಂದ ಕೆಲಸ ಮಾಡುವ ಆಪ್ತ ಸಮಾಲೋಚಕ/ಕಿಯರು ಇರುವಂತೆ ಒತ್ತಡ ತರುವುದು
ಪ್ರಮುಖವಾಗಿ ಗುರುತಿಸಲೇ ಬೇಕಿರುವ ಯುವಜನರ ಮಾನಸಿಕ ಆರೋಗ್ಯ
ಯುವ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆ, ಮಾದಕವಸ್ತು ಬಳಕೆ ಮತ್ತು ಹಿಂಸಾಚಾರವು ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸಮಾಜವು ಎದುರಿಸುತ್ತಿರುವ ಕೆಲವು ಪ್ರಮುಖ ಸವಾಲುಗಳಾಗಿವೆ ಎಂದು ವಿಶ್ವ ಸಂಸ್ಥೆಯ ಘಟಕವು ಆತಂಕ ವ್ಯಕ್ತಪಡಿಸಿದೆ.
2023 ರ ಇತ್ತೀಚಿನ ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ ಪ್ರಕಾರ, ಜಾಗತಿಕವಾಗಿ ಅತ್ಯಂತ ಕಡಿಮೆ ಸಂತೋಷದಾಯಕ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದ್ದು 146 ದೇಶಗಳಲ್ಲಿ ಭಾರತವು 126 ನೇ ಸ್ಥಾನದಲ್ಲಿದೆ. ಪ್ರಸ್ತುತ ಮಾಹಿತಿ ಪ್ರಕಾರ ರಾಷ್ಟ್ರೀಯ ನರವೈಜ್ಞಾನಿಕ ಮತ್ತು ಕೇಂದ್ರ ನರಮಂಡಲದ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳ ಒಟ್ಟಾರೆ ಮಾರಾಟವು 28% ರಷ್ಟು ಹೆಚ್ಚಾಗಿದೆ. ಹಾಗೆ 15 ರಿಂದ 24 ವರ್ಷ ವಯಸ್ಸಿನ ಸುಮಾರು 14% ರಷ್ಟು ಜನರು ಖಿನ್ನತೆ, ಒತ್ತಡ, ಆತಂಕ ಅಥವಾ ನಿರಾಸಕ್ತಿ ಅನುಭವಿಸುತ್ತಿದ್ದಾರೆಂಬ ವರದಿಯು ಮಾನಸಿಕ ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತಿಸಲು ಕಾರಣವಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ8 ರಪ್ರಕಾರ 18-29 ವರ್ಷ ವಯಸ್ಸಿನವರಲ್ಲಿ ಮಾನಸಿಕ ಅಸ್ವಸ್ಥತೆಗಳು 7.39 ಶೇಕಡಾ (ತಂಬಾಕು ಸೇವನೆಯ ಅಸ್ವಸ್ಥತೆಯನ್ನು ಹೊರತುಪಡಿಸಿ) ಮತ್ತು ಜೀವಿತಾವಧಿಯಲ್ಲಿ 9.54 ಶೇಕಡಾ ಎಂದು ಅಂದಾಜಿಸಿದೆ. ಹಾಗೇ ಭಾರತದ ಯುವ ಮಾನಸಿಕ ಆರೋಗ್ಯದ ಅಂಕಿಅಂಶಗಳ, ಹದಿಹರೆಯದ ಯುವಜನರ ಜನಸಂಖ್ಯೆಯು 253 ಮಿಲಿಯನ್‌ಗಿಂತಲೂ ಹೆಚ್ಚಿದೆ.
ಇನ್ನು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿರುವವರು ಮಹಿಳೆಯರು ಮತ್ತು ಯುವಜನರು ಎಂಬುದು ಆತಂಕಕಾರಿ ವಿಚಾರ. ಹೀಗಾಗಿ ಯುವಜನರ ಮಾನಸಿಕ ಆರೋಗ್ಯದ ಕುರಿತು ಕೆಲಸ ಮಾಡಲು ಇರುವ ಸಾಧ್ಯತೆಯನ್ನು ಗಮನಿಸೋಣ. ಈಗಾಗಲೇ ಚರ್ಚಿಸಿದಂತೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿವಿಧ ಸಾಂಸ್ಥಿಕ ಘಟಕಗಳಾದ ಉದ್ಯೋಗ ಕ್ಷೇತ್ರಗಳಲ್ಲಿ ಹದಿಹರೆಯದವರು/ವಿದ್ಯಾರ್ಥಿ, ಯುವಜನರೂ ಇರುವುದರಿಂದ “ ಯುವ ಅನನ್ಯತೆ ”ಯ ಸೂಕ್ಷ ಪ್ರಜ್ನೆಯನ್ನು ಅದರ ಹಿಂದಿನ ತಾತ್ವಿಕತೆಯನ್ನು ಘನತೆಯಿಂದ ಯುವಜನರಿಗೂ, ಪಠ್ಯ ಬೋಧನಾ ವೃತ್ತಿಯಲ್ಲಿರುವವರಿಗೂ ಹಾಗೂ ಆಢಳಿತ ವ್ಯವಸ್ಥೆಯ ಸಿಬ್ಬಂದಿಗಳಿಗೂ ಪರಿಚಯಿಸುವುದು ತರಬೇತಿ ನೀಡುವುದು ಮೊದಲ ಆದ್ಯತೆಯಾದಲ್ಲಿ ಯುವಜನರ ಮಾನಸಿಕ ಸಂಕಟಗಳಿಗೆ ತಡೆ ಹಾಕಬಹುದು.
ಸರ್ಕಾರ , ಸಮಾಜ, ಯುವಜನರನ್ನು ನೋಡುವ ಕ್ರಮ-ವನ್ನು ಬದಲಿಸಿಕೊಳ್ಳಲು ಸಾಕಷ್ಟು ಅರಿವು ಮೂಡಿಸುವಂತಹ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಯುವಜನರನ್ನು ಅವರ ಸಾಮಾಜಿಕ ,ಸಾಂಸ್ಕೃತಿಕ, ಲೈಂಗಿಕತೆ ಚೌಕಟ್ಟಿನ ಹಿನ್ನಲೆಯಲ್ಲಿ ಸಮಸ್ಯೆಯನ್ನು ಆಳವಾಗಿ ಗ್ರಹಿಸಬೇಕಿದ್ದು ಯುವಜನ ಕುರಿತ ಪಠ್ಯ ರಚನಾ ಪ್ರಕ್ರಿಯೆಯಲ್ಲಿ ಇಂತಹ ಸೂಕ್ಶ್ಮ ಮನಸಿನ ವ್ಯಕ್ತಿಗಳು ಇರುವಂತೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಕಾರ್ಯಯೋಜನೆ ರೂಪಿಸಬೇಕು.
ಪ್ರತಿ ಯುವಕ /ಯುವತಿಯರ ನಂಬಿಕೆ, ಮೌಲ್ಯ ವರ್ತನೆಗಳು ಸಂದರ್ಭಕ್ಕನುಗುಣವಾಗಿ ಭಿನ್ನವಾಗಿರುತ್ತದೆ,. ಹೀಗಾಗಿ ಅವರ ಸಮಗ್ರ- ಆರೋಗ್ಯದ (ಮಾನಸಿಕ, ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಆರೋಗ್ಯ) ಬಗ್ಗೆ ಪ್ರೌಢ ಶಿಕ್ಷಣದ ಹಂತದಲ್ಲೇ ಅರಿವು ಮತ್ತು ವೈಜ್ನ್ಯಾನಿಕ ಮಾಹಿತಿ ನೀಡುವುದು ಮೊದಲ ಕರ್ತವ್ಯವಾಗಬೇಕು. ಮನೆಯೇ ಮಕ್ಕಳ ಮೊದಲ ಕಲಿಕಾ ಶಾಲೆಗಳಾಗಿರುವುದರಿಂದ ಕುಟುಂಬದಲ್ಲಿ ಮಾನಸಿಕ ಅವಸ್ಥೆಯ ಕುರಿತು ಮುಕ್ತವಾಗಿ ಮಾತನಾಡಲು ಅವಕಾಶ ಸೃಷ್ಟಿ ಮಾಡಿಕೊಳ್ಳಬೇಕು. ಯುವಕ-ಯುವತಿಯ ತಕ್ಷಣದ ಸಮಸ್ಯೆ,, ಬಿಕ್ಕಟ್ಟು , ಮತ್ತು ಸವಾಲುಗಳು ಯಾವುವು ಎಂಬುದನ್ನು ಗುರುತಿಸುವಂತಹ ಪ್ರಯತ್ನ ಪೋಷಕರಿಂದಲೆ ಆರಂಭವಾಗಬೇಕು.
ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳ ಕುರಿತಾಗಿನ ಗ್ರಹಿಕೆಯೂ ಪೂರ್ವಾಗ್ರಹ ಪೀಡಿತವೇ ಆಗಿರುವುದರಿಂದ ಪೋಷಕರಿಗೂ/ಶಾಲಾ ಶಿಕ್ಷಕ/ಕಿಯರಿಗೂ ಈ ಕುರಿತು ತರಬೇತಿ ನೀಡಿ ಅವರನ್ನು ತಯಾರಿಗೊಳಿಸಬೇಕು. ಮೊದಲ ಹಂತದ ಸಮಸ್ಯೆ ಗುರುತಿಸಿದ ನಂತರ ಆ ಸಮಸ್ಯೆಯನ್ನು ಎದುರಿಸುವ, ಅದರಿಂದ ಬಿಡಿಸಿಕೊಳ್ಳುವ ಪ್ರಕ್ರಿಯೆಯ ಬಗೆಗೂ ಬೇಸಿಕ್ – ಮಾಹಿತಿ ಪೋಷಕರಿಗೂ ಶಾಲೆಯ ಟೀಚರ್ಸ್ ಗಳಿಗೆ ಇರಬೇಕು.
ಯುವಜನ ಅಂದರೆ ಬರೀ ಸಮಸ್ಯೆಗಳ ಗುಚ್ಚವಲ್ಲ, ಅವರೊಳಗೆ ಸಾಧ್ಯತೆಯ ಬೆಳಕೂ ಇದೆ ಎಂಬ ಆತ್ಮ ವಿಶ್ವಾಸವನ್ನೂ ಖಾತರಿಪಡೀಸಬೇಕಿದೆ. ಅಲ್ಲದೇ ನಮ್ಮ ದೇಶದ ಅಭಿವೃದ್ದಿ ಯುವಜನರ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಮಾನಸಿಕ ಆರೋಗ್ಯ ವನ್ನು ಕಾಪಾಡಿಕೊಳ್ಳುವುದರ ಮೇಲೆ ನಿಂತಿದೆ ಎಂಬುದನ್ನು ಸರ್ಕಾರಗಳು ಪರಿಗಣಿಸಲೇಬೇಕು.
ಸಾಂಸ್ಥಿಕ ಘಟಕಗಳಾದ ಕುಟುಂಬ ಸಮಾಜ, ಶಿಕ್ಷಣ , ಉದ್ಯೋಗ, ಧರ್ಮ, ನ್ಯಾಯಾಂಗ, ಮಾಧ್ಯಮ, ,ಮದುವೆ, ಸಂಪರ್ಕ, ಸಾರಿಗೆ ಇತ್ಯಾದಿ ವ್ಯವಸ್ಥೆಗಳಲ್ಲಿ ಮಾನಸಿಕ ದೃಢತೆ ಎಂಬ ಅಂಶವು ಬಹುಮುಖ್ಯ ಪಾತ್ರ ವಹಿಸುತ್ತದೆ.
ಈ ಪ್ರಕ್ರಿಯೆ ಹೊರಗಿನಿಂದ ಮಾತ್ರ ಅಲ್ಲದೇ ವ್ಯಕ್ತಿಯ ಆಂತರಿಕ ಜಗತ್ತಿನೊಳಗೆ ಪ್ರಾರಂಭವಾಗುತ್ತದೆ. ವ್ಯಕ್ತಿಯ ಹುಟ್ಟು ಮೂಲಕ ಅವರ ಬೆಳವಣಿಗೆಯ ಬೇರೆ ಬೇರೆ ಹಂತದಲ್ಲಿ ಪ್ರಭಾವಿಸಲ್ಪಡುವ ಸಾಮಾಜಿಕ , ಲೈಂಗಿಕ ವಿಚಾರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತಿರುತ್ತದೆ. ಸಾಮಾಜೀಕರಣ ಪ್ರಕ್ರಿಯೆ ಅನುಭವವು ಆ ವ್ಯಕ್ತಿಯ ವರ್ತನೆ, ಮೌಲ್ಯ ಮತ್ತು ನಂಬಿಕೆಗಳ ಮೇಲೆ ನಿಯಂತ್ರಣ ಹೊಂದಿರುತ್ತದೆ. ಹೀಗಾಗಿಯೇ ಸ್ವ ಅರಿವು- ಎಲ್ಲರಿಗೂ ಅಗತ್ಯವಿರುವ ಬಹುಮುಖ್ಯವಾದ ಜೀವನ ಕೌಶಲ್ಯ.
ಸ್ವಂತ ನಿರ್ಧಾರ, ಆಯ್ಕೆ, ಸ್ವಾತಂತ್ರ್ಯ, ಸ್ಪಷ್ಟ ನಿಲುವು ಪ್ರತಿಪಾದನೆ, ಮುಕ್ತ ಮಾತುಕತೆ, ವಿಮರ್ಷಾ ದೃಷ್ಟಿಕೋನ, , ವಾಸ್ತವ ಬದುಕಿನ ನಿರೀಕ್ಷೆ ಸ್ವೀಕಾರ ಮನೋಭಾವ, ದ್ವೇಶ ರಹಿತತೆ, ಒಳ್ಳೆಯದನ್ನು ಪ್ರಶಂಸಿಸುವ, ಉತ್ತೇಜಿಸುವ, ಆಲಿಸುವ- ಕೌಶಲ್ಯವು ಅನೇಕ ಹಂತಗಳಲ್ಲಿ ಅಭ್ಯಾಸಗಳ ಮೂಲಕ ಗಟ್ಟಿಗೊಳಿಸುತ್ತ ಹೋಗುತ್ತದೆ. ಈ ಅನುಭವ ದ ಅಭ್ಯಾಸಗಳನ್ನು ಓರೆಹಚ್ಚಿ ನೋಡುವ ಕಲಿಕಾ ಕ್ರಮವು ಎಲ್ಲ ವ್ಯವಸ್ಥೆಗಳಲ್ಲಿ ಖಡ್ಡಾಯವಾಗಿ ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿ ಸಮಯೋಚಿತವಾದ ,ಸುಸ್ಥಿರವಾದ, ಮಾನಸಿಕ ಸ್ಥಿತಿಯನ್ನು ತರಬೇತಿ ಮೂಲಕ ಕಾಪಾಡಿಕೊಳ್ಳಬಹುದಾಗಿದೆ ಎಂಬುದು ನನ್ನ ತಿಳುವಳಿಕೆ .
ಈ ಸಂದರ್ಭದಲ್ಲಿ ಸೂಕ್ತ ಮತ್ತು ಸೂಕ್ಶ್ಮತೆ ಹೊಂದಿದ, ತರಬೇತುಗೊಂಡ ಮಾನಸಿಕ ಆರೋಗ್ಯ ಕಾರ್ಯಕರ್ತರು (ಕೌನ್ಸಿಲರ್) ತಮ್ಮ ಕಾರ್ಯ ಕ್ಷಮತೆಯನ್ನು ಮತ್ತು ಕ್ಷೇತ್ರದ ಅಗತ್ಯತೆಯನ್ನು ಎತ್ತಿ ಹಿಡಿಯುವ ಕಾಲ ಒದಗಿ ಬಂದಿದೆ.
ಸದರಿ ಹೋಬಳಿ ಮಟ್ಟದಲ್ಲೂ ಆಪ್ತ ಸಲಹಾ/ಸಮಾಲೋಚನ/ಮಾಹಿತಿ ಕೇಂದ್ರಗಳನ್ನು ತೆರೆಯುವಂತಹ ಪ್ರಯತ್ನ ಸರ್ಕಾರ ಮಾಡಬೇಕು. ಸಾಮಾಜಿಕ ವಸ್ತುಸ್ಥಿತಿಯನ್ನು ಸಮುದಾಯದ ಮನಸ್ಥಿತಿಯನ್ನು ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ಚಿಕಿತ್ಸೆ ಕೊಡುವಂತಹ ಪ್ರಾಥಮಿಕ ಆರೋಗ್ಯ ಕೇಂದ್ರ, ಮಾನಸಿಕ ಯೋಗಕ್ಷೇಮ ಕೇಂದ್ರ, ಮತ್ತು ಆಪ್ತ ಸಮಾಲೋಚನಾ ಕೇಂದ್ರಗಳು ತೆರೆಯುವಂತಾಗಬೇಕು.
ಪ್ರತ್ಯೇಕವಾಗಿ ಯುವಜನರಿಗೆಂದೇ ಮೀಸಲಿರಿಸುವ ಆಪ್ತ ಸಲಹಾ/ಸಮಾಲೋಚನ ಕೇಂದ್ರದ ಮೂಲಕ ಆ ಪ್ರದೇಶದ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಉನ್ನತ ಶಿಕ್ಷಣ, ವ್ಯಕ್ತಿತ್ವ ನಿರ್ವಹಣೆ ಇತ್ಯಾದಿ ಸಮಸ್ಯೆಯನ್ನೂ ನಿವಾರಿಸಬಹುದು. ಆನ್ ಲೈನ್ ಸಮಾಲೋಚನೆಯ ವ್ಯವಸ್ಥೆ ಮೂಲಕವೂ ಈ ಪ್ರಯತ್ನ ವಿಸ್ತರಿಸಿದರೆ ಒಳ್ಳೆಯದು. ಪ್ರಾಥಮಿಕ ಹಂತದಲ್ಲೇ ಈ ವ್ಯವಸ್ಥೆ ಮಾಡಿದರೆ ಬಹುತೇಕ ಪ್ರಾರಂಭಿಕ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಬಗೆ ಹರಿಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸಮುದಾಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳೂ ಯೋಚಿಸಬಹುದು. ಮಾಧ್ಯಮದ ಸಹಾಕರದೊಂದಿಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ಸಹಯೋಗದಲ್ಲಿ ಅರಿವಿನ ಜಾಗೃತಿಯನ್ನೂ ಮೂಡಿಸಬಹುದು.
ಮಾನಸಿಕ ಆರೋಗ್ಯದ ವೃತ್ತಿ ಕ್ಷೇತ್ರದ ಸಾಧ್ಯತೆಗಳು ಮತ್ತು ಪರ್ಯಾಯ
ಮಾನಸಿಕ ಆರೋಗ್ಯದ ಬಗೆಗಿನ ಅಪಕಲ್ಪನೆ, ಮಿಥ್ಯೆಗಳನ್ನು ಸಮಗ್ರ ಆರೋಗ್ಯದ ಚೌಕಟ್ಟಿನಲ್ಲಿ ಗ್ರಹಿಸುವಂತಹ ವ್ಯವಸ್ಥೆಯ ಅನುಷ್ಟಾನವಾಗಬೇಕು. ಸಮುದಾಯಗಳ ನಡುವೆ – ಬೀದಿನಾಟಕಗಳು, ಭಿತ್ತಿ ಫಲಕಗಳು, ಕಿರು ಚಿತ್ರಗಳು ಮತ್ತು ಮನೆ ಮನೆ ಭೇಟಿಯಂತಹ ಚಟುವಟಿಕೆ ಆಯೋಜನೆ ಮಾಡಬೇಕು. ಪ್ರತಿ ಮನೆಯ ಸದಸ್ಯರುಗಳ ಮನಸಿನಲ್ಲಿ ಮಾನಸಿಕ ಆರೋಗ್ಯದ ಪ್ರಾಥಮಿಕ ಮಾಹಿತಿ ಕೊರತೆ ಇರುವುದರಿಂದ ಇದಕ್ಕೆ ಸಂಬಂಧಪಟ್ಟ ಕಿರು ಹೊತ್ತಿಗೆ, ಕೈಪಿಡಿ (ಭಾಷಾವಾರು) ಅಥವಾ ಸರಳವಾದ ಕರಪತ್ರಗಳನ್ನು ಪ್ರಿಂಟ್ ಮಾಡಬೇಕು. ಇದನ್ನು ಗ್ರಾಮದಿಂದ ಹಿಡಿದು ನಗರ ವ್ಯಾಪ್ತಿಯಲ್ಲಿ ವಿತರಿಸಿ, ವಿವರಿಸಿದರೆ ಆ ಕುಟುಂಬದ ಸದಸ್ಯರ ನಡವಳಿಕೆ ಮತ್ತು ವರ್ತನೆ ಕಾಳಜಿ ಎಲ್ಲವೂ ಬದಲಾಗುವ ಸಾಧ್ಯತೆ ಇದೆ.
– ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಚಾಶಕ್ತಿ ಮತ್ತು ಬಯಕೆ ಹೆಚ್ಚಾಗುವಂತಹ ಕಲಿಕಾ ವಾತಾವರಣ ಆರೋಗ್ಯ ಸೇವೆ, ಸಮಾಜಕಾರ್ಯ, ಸಮಾಜ ವಿಜ್ನ್ಯಾನ ಗಳಂತಹ ಡಿಗ್ರಿ ಕೋರ್ಸ್ ಗಳಲ್ಲಿ ಪ್ರಚಾರ ಕಾರ್ಯ ಹೆಚ್ಚಾಗಬೇಕು.
-ಈ ಕ್ಷೇತ್ರದಲ್ಲಿ ಕಲಿಕೆ ಮತ್ತು ಅಭ್ಯಾಸ ಮುಂದುವರೆಸುವವರಿಗೆ ಅವರ ಕೆಲಸ/ಉದ್ಯೋಗದ ಭದ್ರತೆ , ಹಾಗೂ ಸಮಾಜದಲ್ಲಿ ನೆಮ್ಮದಿ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಗುರುತರ ಪಾತ್ರ ದಿಂದ ಸಿಗುವ ಸಂತೃಪ್ತಿ ಬಗ್ಗೆ ಹೆಚ್ಚು ಚರ್ಚೆ ಆಗಬೇಕು.
-ಆಸಕ್ತ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತರಬೇತುಗೊಂಡ ಅಭ್ಯರ್ಥಿಗಳಿಗೆ “ ಸ್ವಯ ಸಮಾಲೋಚನಾಕೇಂದ್ರ, ಮಾಹಿತಿ ಕೇಂದ್ರ ತೆರೆಯಲು ’ ಕಿರು ಆರ್ಥಿಕ ಬೆಂಬಲದ ವ್ಯವಸ್ಥೆ, (ಫೆಲೋಶಿಪ್) ಮಾಡುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಬೇಕು.
- ನಮ್ಮ ಸಮಾಜದ ಪ್ರತಿ ವ್ಯಕ್ತಿಗೂ ಮಾನಸಿಕ ಆರೋಗ್ಯದ ಹಕ್ಕು- ಇದೆ – ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡ ಮಾಹಿತಿ ಜನರಿಗೆ ಮುಟ್ಟಬೇಕು. ಈ ಪ್ರಕ್ರಿಯೆಯು ಮನೆಯಿಂದ ಮನಸಿಗೆ ಮುಟ್ಟುವ ತಣ್ಣಗಿನ ತೊರೆಯಂತೆ ಎಲ್ಲರಿಗೂ ತಲುಪಲು ಸಮಾಜ ಎಚ್ಚೆತ್ತುಕೊಳ್ಳಬೇಕು. ಹಾಗೆ ಈ ಕ್ಷೆತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂಬ ಬದ್ದತೆ ಕಾಳಜಿ ಇದ್ದವರು ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಸೇರ್ಪಡೆಯಾದಲ್ಲಿ ಸ್ವಾಸ್ಥ್ಯ ಬದುಕಿನ ಭವಿಷ್ಯದ ಭರವಸೆಯ ಕನಸು ನನಸಾಗಲು ಮುಕ್ತ ಚಿಂತನೆ, ಬರಹಗಳು, ಚರ್ಚೆಗಳು ಹೆಚ್ಚಾಗಬೇಕು.
ಲೇಖನ ಬರಹ :
ಎಸ್. ಕಿರಣಕುಮಾರಿ, ಮಾನಸಿಕ ಆರೋಗ್ಯ ಕ್ಷೇತ್ರ ಕಾರ್ಯಕರ್ತರು, ಬೆಂಗಳೂರು
ಉಲ್ಲೇಖ : ಇಂಟರ್ ನೆಟ್ ನಲ್ಲಿ ಲಭ್ಯವಿರುವ ನ್ಯಾಶನಲ್ ಮೆಂಟಲ್ ಹೆಲ್ತ್ ಪ್ರೋಗ್ರಾಮ್ ದತ್ತಾಂಶಗಳು ಮತ್ತು ವೈ ಟ್ ಸ್ವಾನ್, ನಿಮ್ಹಾನ್ಸ್, ಪರಿವರ್ತನದಲ್ಲಿ ಪ್ರಕಟವಾದ ಕೆಲವು ಲೇಖನಗಳು ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ – ಅಪ್ತ ಸಮಾಲೋಚನೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆಲವು ತಜ್ನ್ಯರ, ಪ್ರಾಕ್ಟೀಶನರ್ಸ್.ಜೊತೆಗಿನ ಚರ್ಚೆ ಲೇಖನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ.