ಹೊಸದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಯೂನುಸ್ ಸರ್ಕಾರ ವಿಫಲವಾಗಿದೆ ಎಂದು ಆ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದರು.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮೊದಲ ಬಾರಿಗೆ ವರ್ಚುವಲ್ ಆಗಿ ಮಾತನಾಡುತ್ತಿದ್ದರು.
1975ರಲ್ಲಿ ತನ್ನ ತಂದೆ ಶೇಖ್ ಮುಜಿಬುರ್ ರಹಮಾನ್ ಅವರನ್ನು ಕೊಂದಂತೆಯೇ ತನ್ನನ್ನು ಮತ್ತು ತನ್ನ ಸಹೋದರಿ ಶೇಖ್ ರೆಹಾನಾ ಅವರನ್ನು ಕೊಲ್ಲಲು ಪಿತೂರಿಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. “ಯೂನುಸ್ ಅವರ ಅಧಿಕಾರ ದಾಹ ಮತ್ತು ಬಾಂಗ್ಲಾದೇಶದಲ್ಲಿ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ತಾತ್ಕಾಲಿಕ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿಯಾಗಿ ಕೊನೆಯ ದಿನದಂದು ಅವರು ತಮ್ಮ ಅಧಿಕೃತ ನಿವಾಸದಲ್ಲಿದ್ದಾಗ ಅವರನ್ನು ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಸುತ್ತುವರೆದಿದ್ದರೆ. ತಾನು ಆದೇಶಿಸಿದ್ದರೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸುತ್ತಿದ್ದರು. ಹಾಗೊಂದು ವೇಳೆ ಗುಂಡಿನ ದಾಳಿ ನಡೆದಿದ್ದರೆ ಅನೇಕ ಜನರು ಸಾಯುತ್ತಿದ್ದರು ಎಂದು ಅವರು ಹೇಳಿದರು. ಯಾವುದೇ ಪ್ರಾಣಹಾನಿಯನ್ನು ತಪ್ಪಿಸಲು 25ರಿಂದ 30 ನಿಮಿಷಗಳಲ್ಲಿ ಢಾಕಾದಿಂದ ಹೊರಟು ಭಾರತಕ್ಕೆ ಮರಳಿದ್ದೇನೆ ಎಂದು ಹಸೀನಾ ಹೇಳಿದರು.