ಪತ್ರಕರ್ತರಾದ ಎನ್ ರವಿಕುಮಾರ್ ಟೆಲೆಕ್ಸ್ ಅವರ ಕವಿತೆ, ತಪ್ಪದೇ ಓದಿ
ಪಾರ್ಲಿಮೆಂಟ್ ನ ಉದ್ಯಾನ
ರಕ್ತ ಘಮಲು ಸೂಸುತ್ತಿದೆ
ಬಹುಶಃ ಮನುಷ್ಯರನ್ನು ಕೊಂದು ಗೊಬ್ಬರ ಹಾಕಿರಬೇಕು.
ಗದ್ದುಗೆ ಮೇಲಿನ
ಕಳ್ಳರ ಪ್ರವಚನಕ್ಕೆ
ಕಿವುಡು ಶ್ರೋತೃಗಳು ತಲೆದೂಗುತ್ತಿದ್ದಾರೆ
ಪ್ರಜೆಗಳ ಬೇಟೆಗೆ ಸೀಳುನಾಯಿಗಳು
ಬೀದಿಯಲ್ಲಿ ಎಳೆ ಹೂಗಳ ತುಳಿದು
ಕೆಂಡ ಹಾಯುವ ಪರಿಷೆ
ದೇವರು ಅವತರಿಸಿದ್ದಾನೆ
ಭಕ್ತರಿಗೆ ಸ್ವರ್ಗ ಕಾಲ
ಮೇವಿಲ್ಲದೆ ಗೋಮಾತೆ ಸತ್ತು ಮೂರೋಪ್ಪತ್ತಾಗಿದೆ
ರಾಜ ನರ್ತಕಿಯರಾಗಲು
ಪತ್ರಕರ್ತರ ನೂಕು ನುಗ್ಗಲು
ಗಂಧರ್ವ ಕನ್ಯೆಯರಿಗೆ ಕೆಲಸವಿಲ್ಲ
ನ್ಯಾಯಾಧೀಶನಿಗೆ ಮಬ್ಬು ಕುರುಡು
ದೊರೆಗೆ ಮೊದಲೇ ಮೆದುಳು ಐಬು
ಪರಿವಾರಕ್ಕೆ ಗುಣವಾಗದ ರಣರೋಗ
ಪ್ರೇಮವೆಂದರೆ ದತ್ತೂರಿಯ ಇಸ
ಧ್ವೇಷವೆಂದರೆ ಪಂಚಾಮೃತ
ಕೇಡಿನ ರಕುತ ವಾಂತಿ
ಏನೇ ಆಗಲಿ; ನೀನು ಬದುಕಿರುವುದಕ್ಕೆ
ತುಂಡು ದಾಖಲೆ ಇಟ್ಟುಕೋ
ನೀನು ಇದ್ದೀಯಾ ಎಂದರೆ ಇದ್ದೀಯ
ಇಲ್ಲವೆಂದರೆ ಇಲ್ಲ
ದೇಶವೆಂದರೆ ಜನರಲ್ಲ;
ಓಟು… ಓಟು…ಓಟು…,
