ಎಸ್‌ಐಆರ್ ಚರ್ಚೆ ವಿಚಾರದಲ್ಲಿ ಅಮಿತ್ ಶಾ ಹೇಳಿಕೆ ಪ್ರಶ್ನಿಸಿದ ರಾಹುಲ್ ಗಾಂಧಿ; ಮೋದಿ ಜತೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗಳನ್ನು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.
ಶುಕ್ರವಾರ (ನ.6) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಎಸ್‌ಐಆರ್ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವ ಸಾಧ್ಯತೆಯ ಬಗ್ಗೆ ಅಮಿತ್ ಶಾ ಈ ಹಿಂದೆ ಮತ್ತು ಇತ್ತೀಚೆಗೆ ನೀಡಿರುವ ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಪ್ರಸ್ತಾಪಿಸಿದ್ದಾರೆ.
“ಅಮಿತ್ ಶಾ ಅವರೇ, ಮೋದಿ ಜೀ ಅವರನ್ನು ಗೊಂದಲಕ್ಕೀಡು ಮಾಡಬೇಡಿ. ನನ್ನೊಂದಿಗೆ ಮುಕ್ತ ಚರ್ಚೆ ನಡೆಸಲು ಅವರನ್ನು ಒಪ್ಪಿಸಿ. ಯಾವುದೇ ವೇದಿಕೆಯಾಗಲಿ, ಯಾವುದೇ ಸಮಯವಾಗಲಿ ನಾನು ಸಿದ್ಧನಿದ್ದೇನೆ. ಹೆದರಬೇಡಿ” ಎಂಬರ್ಥದ ಸಂದೇಶವನ್ನು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ನೀಡಿದ್ದಾರೆ.
ರಾಹುಲ್ ಗಾಂಧಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಮಿತ್ ಶಾ ಅವರ ಎರಡು ಸಂದರ್ಭಗಳ ಹೇಳಿಕೆಗಳನ್ನು ಹೋಲಿಸಲಾಗಿದೆ. 2025ರ ಡಿಸೆಂಬರ್ 10ರಂದು ಲೋಕಸಭೆಯಲ್ಲಿ ಮತಗಳ್ಳತನದ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಎಸ್‌ಐಆರ್ ವಿಚಾರ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದರಿಂದ ಸಂಸತ್ತಿನಲ್ಲಿ ಈ ಕುರಿತು ಪ್ರತ್ಯೇಕ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಅಮಿತ್ ಶಾ ವ್ಯಕ್ತಪಡಿಸಿದ್ದರು.
ಆದರೆ, 2026ರ ನವೆಂಬರ್ 5ರಂದು ಹರಿಯಾಣದ ಕರ್ನಾಲ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಎಸ್‌ಐಆರ್ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಚರ್ಚೆಗೆ ಸಿದ್ಧವಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವಂತೆಯೂ ರಾಹುಲ್ ಗಾಂಧಿಗೆ ಸೂಚಿಸಿದ್ದರು.
ಈ ಎರಡು ಹೇಳಿಕೆಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಇದೀಗ ಅಮಿತ್ ಶಾ ಅವರಿಂದಲೇ ಪ್ರಧಾನಿ ಮೋದಿಯವರೊಂದಿಗೆ ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ, ಮತಗಳ್ಳತನದ ಆರೋಪಗಳು ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ಸಂಘರ್ಷ ಮುಂದುವರಿದಿದ್ದು, ಇದೀಗ ಸಂಸತ್ತಿನ ವಿಶೇಷ ಅಧಿವೇಶನದ ಪ್ರಸ್ತಾಪದೊಂದಿಗೆ ಚರ್ಚೆ ಮತ್ತೊಂದು ಹಂತ ತಲುಪಿದೆ.
Peepal Media Desk
Peepal Media · ರಾಜಕೀಯ ವಿಭಾಗ