ಉತ್ತರಾಖಂಡದಲ್ಲಿ ಬಿಜೆಪಿಗೆ 65ಕ್ಕೂ ಹೆಚ್ಚು ಸ್ಥಾನಗಳ ಗುರಿ ನೀಡಿದ ಅಮಿತ್ ಷಾ; ಮೂರನೇ ಬಾರಿಗೆ ಅಧಿಕಾರಕ್ಕೆ ಟಾರ್ಗೆಟ್
ಲಿಂಕ್ ನಕಲಿಸಲಾಗಿದೆ ✓
2027ರಲ್ಲಿ ನಡೆಯಲಿರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ ಈಗಿನಿಂದಲೇ ಚುನಾವಣಾ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 65ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪಕ್ಷದ ಕಾರ್ಯಕರ್ತರ ಮುಂದಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸತತ ಮೂರನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವಂತೆ ಕರೆ ನೀಡಿದ್ದಾರೆ.
ಉತ್ತರಾಖಂಡ ರಾಜ್ಯದ 26ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಡೆಹ್ರಾಡೂನ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರನ್ನು ತಲುಪಬೇಕು ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿದ್ದರೆ, 2022ರ ಚುನಾವಣೆಯಲ್ಲಿ 47 ಸ್ಥಾನಗಳಿಗೆ ಸೀಮಿತವಾಗಿತ್ತು. ಈ ಬಾರಿ ಹಿಂದಿನ ಎರಡೂ ಚುನಾವಣೆಗಳ ಸಾಧನೆಯನ್ನು ಮೀರಿಸಿ 65ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಅಮಿತ್ ಶಾ ಘೋಷಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಹುಲ್ ಗಾಂಧಿ ನೇತೃತ್ವದ ‘ವೋಟ್ ಬಚಾವೋ ಯಾತ್ರೆ’ಯನ್ನು ‘ನುಸುಳುಕೋರರನ್ನು ರಕ್ಷಿಸುವ ಯಾತ್ರೆ’ ಎಂದು ಟೀಕಿಸಿದ್ದಾರೆ. ಅಕ್ರಮವಾಗಿ ದೇಶ ಪ್ರವೇಶಿಸಿರುವವರನ್ನು ಮತದಾರರ ಪಟ್ಟಿಯಿಂದಲೂ, ದೇಶದಿಂದಲೂ ಹೊರಹಾಕಬೇಕು ಎಂದು ಪ್ರತಿಪಾದಿಸಿದ್ದಾರೆ.
ಹಲ್ದ್ವಾನಿಯಲ್ಲಿ 29 ಎಕರೆ ಭೂಮಿಯಲ್ಲಿನ ಅತಿಕ್ರಮಣ ತೆರವುಗೊಳಿಸುವ ಕ್ರಮವನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ ಎಂದು ಆರೋಪಿಸಿದ ಅಮಿತ್ ಶಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಯಂತಹ ವಿಚಾರಗಳಿಗೆ ಆದ್ಯತೆ ನೀಡುತ್ತದೆ. ಆದರೆ ಬಿಜೆಪಿ ಸರ್ಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳು ಮತ್ತು ಮದರಸಾಗಳ ತೆರವಿಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಉತ್ತರಾಖಂಡವನ್ನು ಸುರಕ್ಷಿತ ಮತ್ತು ಸಮೃದ್ಧ ರಾಜ್ಯವನ್ನಾಗಿ ರೂಪಿಸುವುದರ ಜೊತೆಗೆ ದೇಶದ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯದ ಗಡಿ ಪ್ರದೇಶಗಳ ಅಭಿವೃದ್ಧಿ, ವಲಸೆ ತಡೆ ಹಾಗೂ ಕೈಗಾರಿಕಾ ಬೆಳವಣಿಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೇ.380ರಷ್ಟು ಬೆಳವಣಿಗೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ವೈಬ್ರೆಂಟ್ ವಿಲೇಜ್ ಯೋಜನೆಯಡಿ 51 ಗಡಿ ಗ್ರಾಮಗಳಲ್ಲಿ ₹270 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದೂ ತಿಳಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಚುನಾವಣೆಯಲ್ಲಿ ಸೋಲನುಭವಿಸಿದಾಗಲೆಲ್ಲ ಕೆಲವರು ಇವಿಎಂ ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, 100ಕ್ಕೂ ಹೆಚ್ಚು ಪರೀಕ್ಷಾ ಅಕ್ರಮ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಹಾಗೂ 35 ಸಾವಿರಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸುವ ಗುರಿ ಘೋಷಿಸಿರುವ ಅಮಿತ್ ಶಾ ಅವರ ಹೇಳಿಕೆ ಉತ್ತರಾಖಂಡದ ರಾಜಕೀಯ ಕಣದಲ್ಲಿ ಈಗಿನಿಂದಲೇ ಚುನಾವಣಾ ಚಟುವಟಿಕೆಗಳಿಗೆ ವೇಗ ನೀಡುವ ನಿರೀಕ್ಷೆಯಿದೆ.
Peepal Media Desk
Peepal Media · ರಾಜಕೀಯ ವಿಭಾಗ