ಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಕ್ತ ಸಂವಾದ ನಡೆಸಿ, ಮಹಿಳೆಯರ ಅನಿಸಿಕೆ ಹಾಗೂ ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ಪಡೆದರು.
ಇತ್ತೀಚೆಗೆ ಮೂರು ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡಿರುವ ಬೆನ್ನಲ್ಲೇ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಫಲಾನುಭವಿ ಮಹಿಳೆಯರು ಯೋಜನೆಯಿಂದ ತಮಗಾದ ಅನುಕೂಲಗಳನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ಮಹಿಳೆಯೊಬ್ಬರು, ಗೃಹಲಕ್ಷ್ಮೀ ಯೋಜನೆಯ ಹಣದಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದು, ತಮ್ಮ ಮಗ ದ್ವಿತೀಯ ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಪಡೆದಿದ್ದಾನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಹಾರೈಸಿದರು.
ಮತ್ತೊಬ್ಬ ಫಲಾನುಭವಿಯು ಗೃಹಲಕ್ಷ್ಮೀ ಹಣದಿಂದ ಚಕ್ಕುಲಿ, ನಿಪ್ಪಟ್ಟು ಹಾಗೂ ಕೋಡುಬಳೆ ತಯಾರಿಸಿ ವ್ಯಾಪಾರ ಆರಂಭಿಸಿರುವುದಾಗಿ ತಿಳಿಸಿದರು. ತಮ್ಮ ಉತ್ಪನ್ನಗಳನ್ನು ಜಿಲ್ಲೆ, ರಾಜ್ಯ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಮಾಡುತ್ತಿರುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನನಗೂ ಕೋಡುಬಳೆ ತಂದಿದ್ದೀರಾ?’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಳಿಕ ಮಾತನಾಡಿದ ಸಿಎಂ, ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಈಗಾಗಲೇ 36 ತಿಂಗಳ ಹಣ ನೀಡಿದ್ದೇವೆ. ಮುಂದೆಯೂ ಈ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಯೋಜನೆಯನ್ನು ನೋಡಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲೂ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಬೆಳಗಾವಿ ಅಧಿವೇಶನ ಆರಂಭವಾಗುವ ವೇಳೆಗೆ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ಮಾಡುತ್ತೇನೆ. ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಅದೇ ಅವರಿಗೆ ನೀಡುವ ನಿಜವಾದ ಆಸ್ತಿ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 86 ಸಾವಿರ ಕೋಟಿ ರೂಪಾಯಿ ಹಣ ಫಲಾನುಭವಿಗಳಿಗೆ ತಲುಪಿದೆ. ಫಲಾನುಭವಿಗಳ ಮಾಹಿತಿ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಕೆಲವು ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕೆಲವರು ಮಕ್ಕಳ ಶಿಕ್ಷಣಕ್ಕೆ, ಕೆಲವರು ಸಣ್ಣ ವ್ಯಾಪಾರಕ್ಕೆ, ಇನ್ನು ಕೆಲವರು ಕುಟುಂಬ ನಿರ್ವಹಣೆಗೆ ಹಣ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಹಿಳೆಯರಿಗೆ ಎಚ್ಚರಿಕೆಯ ಸಲಹೆ ನೀಡಿದ ಸಿಎಂ, ಗೃಹಲಕ್ಷ್ಮೀ ಹಣವನ್ನು ಹೆಚ್ಚಿನ ಬಡ್ಡಿಯ ಆಸೆಗೆ ಮೀಟರ್ ಬಡ್ಡಿ ಹಾಗೂ ಚಿಟ್ಫಂಡ್ಗಳಲ್ಲಿ ಹೂಡಿಕೆ ಮಾಡಿ ಕಳೆದುಕೊಳ್ಳಬೇಡಿ. ಅಧಿಕ ಲಾಭದ ಆಮಿಷಕ್ಕೆ ಒಳಗಾಗಿ ಮೋಸ ಹೋಗಬಾರದು. ಹಣವನ್ನು ಎಚ್ಚರಿಕೆಯಿಂದ ಬಳಸಿ ಎಂದು ಕಿವಿಮಾತು ಹೇಳಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ