ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದ
ಲಿಂಕ್ ನಕಲಿಸಲಾಗಿದೆ ✓
ಈ ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ, ಭಾಷಾಶಾಸ್ತ್ರಜ್ಞ ಡಾ. ಕೆ.ವಿ. ನಾರಾಯಣ ಅವರ ಉಪನ್ಯಾಸದ ಪೂರ್ಣ ಪಠ್ಯ ಇಲ್ಲಿದೆ.. ಪಠ್ಯ ರೂಪಕ್ಕೆ: ನಿಖಿಲ್ ಕೋಲ್ಪೆಯವರ ಬರಹದಲ್ಲಿ
ನಾವು ಇವತ್ತು ಚರ್ಚೆ ಮಾಡತಕ್ಕಂತಾ ಕುವೆಂಪು ಅವ್ರ ವೈಚಾರಿಕ ಬರಹಗಳಲ್ಲಿ ಅತ್ಯಂತ ಹಳೆಯ ಬರಹ ಎಂದರೆ, 1944ರಲ್ಲಿ ಅವ್ರು ಶ್ರೀರಂಗಪಟ್ಟಣದಲ್ಲಿ ಮಾಡಿದ ಒಂದು ಉಪನ್ಯಾಸ. ಇದು ಆತ್ಮಶ್ರೀಗಾಗಿ, ನಿರಂಕುಶಮತಿಗಳಾಗಿ ಎಂದು ಅವ್ರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಒಂದು ಉಪನ್ಯಾಸ. ಆ ನಂತ್ರ ಸುಮಾರು 50 ವರ್ಷಗಳ ಕಾಲ-94ರಲ್ಲಿ ಅವ್ರು ತೀರ್ಕೊಂಡ್ರು- ಈ 50 ವರ್ಷಗಳಲ್ಲಿ ಸುಮಾರು 40 ವರ್ಷಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಅವ್ರು ತಮ್ಮ ಈ ಚಿಂತನೆಗಳಿಗೆ ಮುಖಾಮುಖಿಯಾಗಿದ್ದಾರೆ. ಅದು ಅವ್ರ ಸಂದರ್ಶನಗಳಲ್ಲಿ, ಅವ್ರ ಇತರ ಉಪನ್ಯಾಸಗಳಲ್ಲಿ ಕಾಣಿಸಿಕೊಳ್ತದೆ. ಅದರಿಂದಾಗಿ ಕುವೆಂಪು ಅವ್ರ ವೈಚಾರಿಕ ಜಗತ್ತು ಯಾವ ರೀತಿಯಲ್ಲಿ ರೂಪುಗೊಳ್ತಾ ಇತ್ತು ಅನ್ನೋದನ್ನ ಕನ್ನಡನಾಡಿನ ಹಿನ್ನೆಲೆಯಲ್ಲಿ, ಕನ್ನಡನಾಡಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ಸಾಮಾಜಿಕ ಹಿನ್ನೆಲೆನಲ್ಲಿ ಅರ್ಥ ಮಾಡಿಕೊಳ್ಳೋದಕ್ಕೆ ನಾನು ಪ್ರಯತ್ನಪಡ್ತೀನಿ. ಮುಖ್ಯವಾಗಿ ಅವ್ರ ವೈಚಾರಿಕ ಆಕೃತಿಗಳಲ್ಲಿ ನಾಲ್ಕರ ಬಗ್ಗೆ ಮಾತ್ರ ನಾನು ಚರ್ಚೆ ಮಾಡ್ತೀನಿ.
ಒಂದು- ಅವ್ರು ಮೇಲಿಂದ ಮೇಲೆ, ಮೇಲಿಂದ ಮೇಲೆ ಹೇಳಿಕೊಂಡು ಬಂದಿರತಕ್ಕಂತ ವೈಚಾರಿಕತೆ ಮತ್ತು ವಿಜ್ಞಾನ ಬುದ್ಧಿ ಎನ್ನುವಂತ ಎರಡು ಕಾನ್ಸೆಪ್ಟುಗಳು. ಎರಡನೇದು- ಪ್ರಾಚೀನವನ್ನ- ಭೂತಕಾಲವನ್ನ ನಾವು ಹೇಗೆ ಅರ್ಥ ಮಾಡಿಕೊಳ್ಬೇಕು ಎಂಬುದರ ಬಗೆಗೆ ಅವ್ರು ತಳೆದಂತ ನಿಲುವುಗಳು. ಮೂರನೇದು- ಪುರೋಹಿತಶಾಹಿಯ ಬಗ್ಗೆ ಅವ್ರು ಮಾಡಿರತಕ್ಕಂತ ವ್ಯಾಖ್ಯಾನಗಳು ಮತ್ತು ತೆಗೆದುಕೊಂಡಿರತಕ್ಕಂತ ನಿಲುವುಗಳು. ನಾಲ್ಕನೇದು- ಸಮಾನತೆಯ ಕುರಿತು ಅವ್ರು ಮಾಡಿರತಕ್ಕಂತ ವ್ಯಾಖ್ಯೆ-ವ್ಯಾಖ್ಯಾನ. ಈ ನಾಲಕ್ಕೂ ವಿಷಯಗಳ ಬಗ್ಗೆ ನಾನಿವತ್ತು ಚರ್ಚೆ ಮಾಡ್ತೀನಿ. ಮತ್ತು ಸಾಹಿತ್ಯಿಕವಾದ ಅವ್ರ ಏನೊಂದು ವೈಚಾರಿಕ ನೆಲೆಗಳಿವೆ, ಅವುಗಳನ್ನ ನಾನಿವತ್ತು ಮುಟ್ಟಲು ಹೋಗೋದಿಲ್ಲ.
ವೈಚಾರಿಕತೆ ಮತ್ತು ವಿಜ್ಞಾನ ಬುದ್ಧಿ ಎನ್ನುವ ಅವ್ರ ಈ ಎರಡು ಕಾನ್ಸೆಪ್ಟನ್ನ 1963ರಲ್ಲಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎನ್ನುವ ಪುಸ್ತಕ- ಅದ್ರಲ್ಲಿ ನಾಲಕ್ಕು ಉಪನ್ಯಾಸಗಳಿವೆ- ಈ ಪುಸ್ತಕದ ಮೂರನೇ ಮುದ್ರಣಕ್ಕೆ ಒಂದು ಪ್ರಸ್ತಾವನೆಯನ್ನು ಅವ್ರು ಬರೀತಾರೆ. ಈ ಪ್ರಸ್ತಾವನೆಯಲ್ಲಿ ಮೊದಲನೇ ಬಾರಿಗೆ ಈ ಮಾತುಗಳನ್ನ ಬಳಸ್ತಾರೆ ಅವ್ರು. ಆ ಮೇಲೆ ನೆಹರೂ ತೀರ್ಕೊಂಡಾಗ 1964ರಲ್ಲಿ ಬರೆದ ಒಂದು ಶ್ರದ್ಧಾಂಜಲಿ ಲೇಖನದಲ್ಲಿ ಮತ್ತೆ ಅವ್ರು ಈ ಕಾನ್ಸೆಪ್ಟ್ಗಳನ್ನ ಬಳಸ್ತಾರೆ. ಅವುಗಳನ್ನ ಉದ್ದಕ್ಕೂ ಮೇಲಿಂದ ಮೇಲೆ ಮೇಲಿಂದ ಮೇಲೆ ಬಳಸ್ತಾರೆ. ನನ್ನನ್ನು ನಿಜಕ್ಕೂ ಕಾಡಿಸತಕ್ಕಂತ ವಿಚಾರ ಏನಂದ್ರೆ, ಇವೆರಡೂನು ಹೇಗೆ ಬೇರೆಬೇರೆ? ಅವುಗಳ ನಡುವೆ ಇರತಕ್ಕಂತ ವ್ಯತ್ಯಾಸ ಏನು? ಈ ವ್ಯತ್ಯಾಸ ಏನು ಎನ್ನುವುದನ್ನ ಕುವೆಂಪೂನೇ ಎಲ್ಲೂ ವಿವರಿಸೋಕೆ ಹೋಗಿಲ್ಲ. ಅದ್ರ ಬದ್ಲು, ವಿಜ್ಞಾನ ಬುದ್ಧಿ ಇದ್ದೂ ವೈಚಾರಿಕತೆ ಇಲ್ಲದಿದ್ರೆ ಏನಾಗುತ್ತೆ, ಅಥವಾ ವೈಚಾರಿಕತೆ ಇದ್ದೂ ವಿಜ್ಞಾನ ಬುದ್ಧಿ ಇಲ್ಲದಿದ್ರೆ ಏನಾಗುತ್ತೆ ಅನ್ನೋದನ್ನ ವ್ಯಕ್ತಿಗಳ ನೆಲೆಯಲ್ಲಿ ಅವ್ರು ವ್ಯಾಖ್ಯಾನ ಮಾಡ್ತಾರೆ. ಅಂದ್ರೆ ಕೆಲವ್ರು ವೈಚಾರಿಕರಾಗಿರ್ತಾರೆ, ಆದ್ರೆ ಅವ್ರಿಗೆ ವಿಜ್ಞಾನ ಬುದ್ಧಿ ಇರೋದಿಲ್ಲ. ರಿವರ್ಸಾಗಿ, ಕೆಲವರು ವಿಜ್ಞಾನ ಬುದ್ಧಿಯವರಾಗಿರ್ತಾರೆ, ಸಾಯನ್ಸ್ ಟೀಚರಾಗಿರ್ತಾರೆ; ಆದ್ರೆ ಅವ್ರಿಗೆ ವೈಚಾರಿಕ ನೆಲೆಗಳಿರೋದಿಲ್ಲ. ಅದನ್ನ ಅವ್ರು ಪ್ರಾಕ್ಟೀಸ್ ಮಾಡ್ತಾ ಇರೋದಿಲ್ಲ. ಅದರ ಅಪಾಯಗಳನ್ನ ಕುರಿತು ಅವ್ರು (ಕುವೆಂಪು) ಮಾತಾಡ್ತಿರ್ತಾರೆ. ಆದ್ರೆ, ಇದ್ರ ಲಕ್ಷಣಗಳೇನು ಎನ್ನುವುದರ ಕುರಿತು ಅವ್ರು ಮಾತಾಡೋಕೆ ಹೋಗಿಲ್ಲ.
ಹಾಗಾಗಿ ನಾನು ಈ ವಿಷಯದ ಬಗ್ಗೆ, ನನಗೇನದ್ರೂ ಅದ್ರಿಂದ ಪರಿಹಾರ ಸಿಗ್ಬೌದಾ ಎಂಬ ನೆಲೆಯಲ್ಲಿ ಚರ್ಚೆ ಮಾಡ್ಲಿಕ್ಕೆ ಪ್ರಯತ್ನಪಡ್ತೀನಿ. ಮೇಲಿಂದ ಮೇಲೆ ಈ ಮಾತುಗಳು ಅವರು ನೀಡಿರತಕ್ಕಂತ ಸಂದರ್ಶನಗಳಲ್ಲಿ ಮತ್ತೆ ಮತ್ತೆ ಮತ್ತೆ ಬರ್ತವೆ. ವಿಜ್ಞಾನ ಎನ್ನುವುದರ ಕುರಿತು ಅವ್ರು ಯಾವ ನೆಲೆಯಲ್ಲಿ ವ್ಯಾಖ್ಯಾನ ಮಾಡ್ತಾರೆ ಮತ್ತು ಅವ್ರ ತಿಳುವಳಿಕೆ ಏನಿತ್ತು ಅನ್ನುವುದನ್ನ ಮಂಡಿಸ್ತಾ ಹೋಗ್ತಾರೆ, ಅದೂ ಕೂಡಾ ಸ್ವಲ್ಪ- ನಾವು ಇವತ್ತು ಸೈಂಟಿಫಿಕ್ ಅಟಿಟ್ಯೂಡ್ ಅಂತ ಏನನ್ನ ವ್ಯಾಖ್ಯಾನ ಮಾಡ್ತೀವಿ, ಅದ್ಕಿಂತ ಕೂಡಾ ಸ್ವಲ್ಪ ಭಿನ್ನವಾದದ್ದು. ಏಕಂದ್ರೆ, ಸಾಯನ್ಸು ಅನುಭವವನ್ನ ಪ್ರಮಾಣವನ್ನಾಗಿ ಮಾಡೋದಿಲ್ಲ; ಭಾವನೆಯನ್ನ ಪ್ರಮಾಣವನ್ನಾಗಿ ಮಾಡೋದಿಲ್ಲ. ಸಾಯನ್ಸಿಗೆ ಬೇಕಿರೋದು ಬೇರೆ ತರದ ಪ್ರಮಾಣ. ಅದೊಂದು ಕ್ಯುಮ್ಯುಲೇಟಿವ್ ನಾಲೆಜ್ ಆಗಿರೋದ್ರಿಂದಾಗಿ, ಮತ್ತದು ನಿರಂತರ ಬೆಳೆಯಬೇಕಾಗಿರೊದ್ರಿಂದಾಗಿ, ಆ ಬೆಳವಣಿಗೆಯ ಗತಿಯಲ್ಲಿ ನೀವು ಏನನ್ನಾದ್ರೂ ಒಂದೋ ಒಪ್ಬೇಕು, ಇಲ್ವೇ ಒಪ್ದೇ ಹೋಗ್ಬೇಕು. ಮೆಕ್ಯಾನಿಕಲನ್ನು ಮಂಡಿಸಿದಂತ ನ್ಯೂಟನ್ ಮತ್ತು ರಿಲೇಟಿವಿಟಿಯನ್ನು ಮಂಡಿಸಿದಂತ ಐನ್ಸ್ಟೈನ್- ಇವರ ನಡುವೆ ಶತಮಾನಗಳ ನಡುವಿನ ಅಂತರ ಇದೆ. ಆದ್ರೆ, ಇಬ್ರ ನಡುವೆ ಭಿನ್ನತೆಯಿಲ್ಲ. ಏಕಂದ್ರೆ, ಅದೊಂದು ಕಂಟಿನ್ಯೂಅಸ್ ಪ್ರೊಸೆಸ್. ಆದ್ದರಿಂದ ಮೆಕ್ಯಾನಿಕಲ್ ಕಾನ್ಸೆಪ್ಟನ್ನು ನಿರಾಕರಿಸಬೇಕಂದ್ರೂನೆ, ಅದಕ್ಕೆ ಬೇಕಾಗಿರತಕ್ಕಂತದ್ದು- ಒಂದು ತಾರ್ಕಿಕವಾದ ಚಿಂತನಾ ಕ್ರಮ ಸಾಯನ್ಸ್ನಲ್ಲಿ ಕಾಣಿಸಿಕೊಳ್ತದೆ. ಟೆಕ್ನಾಲಜಿ ವಿಷಯ ಮಾತಾಡ್ತಿಲ್ಲ; ಪರ್ ಸೇ, ಸಾಯನ್ಸ್ ಬಗ್ಗೆ ಮಾತಾಡ್ತಿದ್ದೀನಿ. ಆದ್ರೆ ಕುವೆಂಪು ಅವ್ರು ಅವ್ರ ವಿಜ್ಞಾನದ ಕಾನ್ಸೆಪ್ಟ್ ಒಳಗಡೆ ಅನುಭವದ ಪ್ರಮಾಣವನ್ನ ಕೊಡುವಂತದ್ದು. ನಾನೇನು ಹೇಳ್ತಾ ಇದ್ದೀನಿ ಅಂದ್ರೆ, ಅವ್ರು ಪ್ಯಾರಾ ಸಾಯನ್ಸಲ್ಲಿ ನಂಬಿಕೆ ಇದ್ದಂತವ್ರು. ಪ್ಯಾರಾ ಸಾಯನ್ಸ್ ಅಂದ್ರೆ, ವಿಜ್ಞಾನದ ರೀತಿ ಕಾಣಿಸ್ತದದು, ವಿಜ್ಞಾನದ ರೀತಿ ಪ್ರಯೋಗಗಳನ್ನೆಲ್ಲಾ ಅವ್ರು ಬಳಸ್ತಾ ಇರ್ತಾರೆ. ಆದ್ರೆ ಅವ್ರು ಸಾಧಿಸ್ಲಿಕ್ಕೆ ಪ್ರಯತ್ನಪಡತಕ್ಕಂತದ್ದು ಬೇರೆ. ಉದಾಹರಣೆಗೆ ಪುನರ್ಜನ್ಮ- ರಿಇನ್ಕಾರ್ನೇಶನ್ ಎಂಬಂತ ಒಂದು ಸಿದ್ಧಾಂತದ ಕುರಿತು ಅವ್ರು ಸಂದರ್ಶನಗಳಲ್ಲಿ ಮಾತಾಡ್ತಾರೆ. ನಂಬಿಕೆಯಲ್ಲ ಅದು; ಶ್ರದ್ಧೆ ಅಂತ ಹೇಳ್ತಾರವರು. ಶ್ರದ್ಧೆಯ ವಿಚಾರದಲ್ಲಿ ಅವ್ರು ಏನು ಹೇಳ್ತಾರಂದ್ರೆ, ಅದು ಪ್ರಮಾಣವನ್ನ ನಿರೀಕ್ಷಿಸುವುದಿಲ್ಲ ಅಂತ.
ಅಂದ್ರೆ, ನನ್ಗೆ ಅದ್ರಲ್ಲಿ ನಂಬಿಕೆ ಇಲ್ಲಾಂತಾದ್ರೆ, ಇನ್ನೊಬ್ಬ್ರಿಗೆ ಇರತಕ್ಕಂತ ನಂಬಿಕೆಯನ್ನ ಪ್ರಶ್ನಿಸೋಕಾಗಲ್ಲ. ಪುನರ್ಜನ್ಮದಲ್ಲಿ ನಿಮ್ಗೆ ನಂಬಿಕೆ ಇಲ್ಲಾಂತಂದ್ರೆ, ಉಳಿದವರಿಗೆ ಇರೋ ನಂಬಿಕೆಯನ್ನ ನೀವು ಪ್ರಶ್ನಿಸೋಕಾಗಲ್ಲ. ಅದು ಅವ್ರ ಶ್ರದ್ಧೆ ಅನ್ನುವಂತದ್ದು. ಇದು- ಒಂದು ಕುವೆಂಪು ಅವ್ರ ವಿಚಾರದಲ್ಲಿ ಇರುವ ಡಿಸ್ಟಿಂಕ್ಷನ್ ಅನ್ನುವಂತದ್ದು. ಅಂದ್ರೆ, ಹೀ ಬಿಲೀವ್ಸ್ ಇನ್ ಪ್ಯಾರಾ ಸಾಯನ್ಸ್. ಅನ್ಯ ಗ್ರಹಗಳಿಂದ ಬರತಕ್ಕಂತ ಜೀವಿಗಳ ಬಗ್ಗೆ ಇರ್ಲಿ- ಇದು ಪ್ರಪಂಚದಾದ್ಯಂತ ಇರುವ ಆಸಕ್ತಿಯ ವಿಷಯ- ಇದು ಸಾಯನ್ಸ್ನ ಬಾರ್ಡರ್ನ ಆಚೆಗಿರುವ ವಿಷಯ. ಅದನ್ನ ಸಾಮಾನ್ಯವಾಗಿ ಪ್ಯಾರಾ ಸಾಯನ್ಸ್ ಅಂತ ಕರೀತಾರೆ. ಪ್ಯಾರಾ ಸಾಯನ್ಸ್ನ ಟೂಲ್ಸ್ ಆಗ್ಲಿ, ಅದ್ರ ಥಿಯರಿಟಿಕಲ್ ಮಾಡೆಲ್ಗಳಾಗ್ಲೀ ಸಾಯನ್ಸ್ನ ಒಳಗಡೆ ಬರೋದಿಲ್ಲ. ಅವರು ಮಾಡಿದಂತ ಕೆಲವು ಮಾಡೆಲ್ಗಳನ್ನ, ಪ್ರಯೋಗಗಳನ್ನ, ಕ್ಯಾಸಿಯಂತವರು ಮಾಡಿದ ಪ್ರಯೋಗಗಳನ್ನ- ಜನ ಸತ್ತು ಹೋದಾಗ ಆತ್ಮ ಅವ್ರ ದೇಹದಿಂದ ಹೇಗೆ ಮಾಯ ಆಗತ್ತೆ, ಅದ್ರ ಫೋಟೋ ಹೇಗೆ ಬರ್ತದೆ, ಇಂತಾ ಕೆಲ್ಸಗಳನ್ನೆಲ್ಲಾ ಬಹಳ ಮಾಡಿದ್ದಾರೆ. ಬಹಳ ಕುತೂಹಲಕಾರಿಯಾದಂತ, ಕೆಲವ್ರಿಗೆ ರೋಮಾಂಚಕಾರಿಯಾಗಿರತಕ್ಕಂತ ಪ್ರಯೋಗಗಳನ್ನ ಜಗತ್ತಿನಾದ್ಯಂತ ಮಾಡ್ತಾನೇ ಇದ್ದಾರೆ. ಅದೇಕೆ, ನಮ್ಮ ನಿಮ್ಹಾನ್ಸ್ನಲ್ಲೇನೆ ಅಂತಾ ಪ್ರಯೋಗ ನಡ್ದಿತ್ತು- ವರ್ಮಾ ಅವ್ರ ನೇತೃತ್ವದಲ್ಲಿ. ಅದು ಪುನರ್ಜನ್ಮದ ಬಗೆಗೆ ಇತ್ತದು. ಆದ್ರೆ, ಅದನ್ನ ಸಾಯನ್ಸ್ ಅಂತ ಹೇಳೋಕೆ ಆಗೋದಿಲ್ಲ. ಇದು ಬಹಳ ಇಂಪಾರ್ಟೆಂಟ್. ಹಾಗಾಗಿ ವಿಜ್ಞಾನ ಬುದ್ಧಿ ಅಂತ ಅವ್ರು (ಕುವೆಂಪು) ಹೇಳುವಾಗ, ಅದು ನಮ್ಮ ಗ್ರಹಿಕೆಗೂ ಸ್ವಲ್ಪ ಆಚೆಗೆ ಹೋಗ್ತದೆ. ಉದಾಹರಣೆಗೆ, ದೇವ್ರ ಬಗ್ಗೆ ಅವ್ರು ಮಾತಾಡ್ತಾರೆ. ದೇವ್ರು ಅನ್ನುವ ಅಸ್ತಿತ್ವ ಇದೆಯಾ, ಇಲ್ವಾ? ದೇವರು ಅನ್ನೋನು ಇದಾನಾ, ಇಲ್ವಾ? ಇದಾನಾ! ಪುಲ್ಲಿಂಗ ಬಳಸ್ಬೇಕಾ ಗೊತ್ತಿಲ್ಲ. ಅಭ್ಯಾಸ ಅದು. ಅನುಭವ ಪ್ರಮಾಣದಲ್ಲಿ ಹೇಳ್ಬೇಕಂದ್ರೆ, ದೇವರು ಅನ್ನೋ ಎಕ್ಸ್ಪೀರಿಯೆನ್ನ್ ನನ್ಗೆ ಆಗಿಲ್ಲ; ಆಗಿಲ್ಲ ಅಂದ್ರೆ, ಆದವರ ಬಗ್ಗೆ ನೀವು ಪ್ರಶ್ನೆ ಮಾಡೋದು ಬೇಡ. ಆಗಿದೆ ಅನ್ತಕ್ಕೋರನ್ನ ನೀವು ಅನುಮಾನದಿಂದ ನೋಡೋಕೆ ಬರಲ್ಲ.
ಆದುದರಿಂದ, ಇನ್ನೂ ಬಹಳ ವಿಚಿತ್ರವಾದ ತರ್ಕವೊಂದನ್ನು ಅವ್ರು ಮಂಡಿಸ್ತಾರೆ. ಇಲ್ಲ ಅನ್ನೊದನ್ನ ಹೇಗೆ ಪತ್ತೆ ಮಾಡಿದ್ರಿ? ಎಲ್ಲಾ ಕಡೆ ಹೋಗಿ ಹುಡ್ಕೊಂಡು ಬಂದ್ರಾ? ಎಲ್ಲಾ ಕಡೇನೂ ಪರೀಕ್ಷೆ ಮಾಡಿ, ಇಲ್ಲ ಅನ್ನೊದನ್ನ ಕನ್ಫರ್ಮ್ ಮಾಡ್ಕೊಂಡಿದ್ದೀರ? ನೀವು ಎಲ್ಲೆಲ್ಲಿ ಹೋಗೋಕೆ ಸಾಧ್ಯವೋ, ಎಲ್ಲೆಲ್ಲಾ ಪರೀಕ್ಷೆ ಮಾಡೋಕೆ ಸಾಧ್ಯವೋ ಅಲ್ಲಿ ಇಲ್ಲ ಅಂತೀರಿ. ಅಷ್ಟೇ ಎಕ್ಸ್ಪೀರಿಯೆನ್ಸಿಂದ ಎಲ್ಲೂ ಇಲ್ಲ ಅಂತ ಹೇಗೆ ಹೇಳ್ತೀರಿ ನೀವು? ಈ ಆರ್ಗ್ಯುಮೆಂಟನ್ನ ಸಂದರ್ಶನವೊಂದರಲ್ಲಿ ಮಂಡಿಸ್ತಾರೆ ಕುವೆಂಪು ಅವ್ರು.
ಆದ್ದರಿಂದ, ಕುವೆಂಪು ಅವ್ರ ವಿಜ್ಞಾನದ ವ್ಯಾಖ್ಯೆ ಸ್ವಲ್ಪ ಮಟ್ಟಿಗೆ ಬೇರೆ ತರದ್ದು. ಇಪ್ಪತ್ತನೆಯ, ಇಪ್ಪತ್ತೊಂದನೆಯ ಶತಮಾನದಲ್ಲಿ ವೈಜ್ಞಾನಿಕ ಚಿಂತನೆ, ವಿಜ್ಞಾನ ಬುದ್ಧಿ ಅಂತ ನಾವು ಏನು ಹೇಳ್ತೀವಿ, ಅದಕ್ಕಿಂತ ಭಿನ್ನವಾದದ್ದು ಅದು. ಅದೇ ರೀತಿಯಲ್ಲಿ ವೈಜ್ಞಾನಿಕ ನೆಲೆಯಲ್ಲಿ ಪವಾಡಗಳನ್ನ ಒಪ್ಪದೇ ಇರುವಂತವರನ್ನ, ನಿರಾಕರಿಸುವವರನ್ನ ಕುವೆಂಪು ಡಿನೈ ಮಾಡ್ತಾರೆ. ಉದಾಹರಣೆಗೆ ಕೋವೂರು ಅಂತವ್ರು- ನಿಮ್ಗೆಲ್ಲಾ ಗೊತ್ತಿರತಕ್ಕಂತವ್ರು- ಶ್ರೀಲಂಕಾದವ್ರು, ಭಾರತದಲ್ಲಿ ಬಹಳ ಪ್ರಖ್ಯಾತರಾಗಿದ್ದವ್ರು- ಪವಾಡಗಳನ್ನ ಬಯಲು ಮಾಡತಕ್ಕಂತವ್ರು- ಕೋವೂರು ಅಂತವರ ವಿಧಾನಗಳನ್ನ ಕುವೆಂಪು ಅವ್ರು ಒಪ್ಪೋದಿಲ್ಲ. ನೀವು ಬೂದಿ ತರ್ಸೋದು, ಬೇರೆನ್ನನ್ನೋ ತರ್ಸೋದು ಮಾಡುವ ಮುಖಾಂತರ ನೀವು ನಿರಾಕರಿಸೋದಕ್ಕೆ ಬರೋದಿಲ್ಲ; ಪವಾಡಗಳು ನಡೆಯುವುದೇ ಇಲ್ಲ ಅಂತ ಹೇಳೋಕೆ ಬರೋದಿಲ್ಲ. ಅದನ್ನ ಸಮರ್ಥಿಸೋದಕ್ಕೆ ಅವ್ರು ಬೇರೆಯೇ ವಿಧಾನ ಅನುಸರಿಸ್ತಾರೆ. ಆದ್ದರಿಂದ ಈ ವೈಚಾರಿಕತೆ ಮತ್ತು ವಿಜ್ಞಾನ ಬುದ್ಧಿ ಅನ್ನೋದು ಇದೆಯಲ್ಲ- ಇವೆರಡನ್ನೂ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಹೇಗೆ ಜೊತೆಯಲ್ಲಿ ಇರಿಸೋದು ಅನ್ನೋದು ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಹೊಸದಾಗಿ ಯೋಚಿಸುವವ್ರಿಗೆ ಹೇಗೆ ಒಂದು ಸಮಸ್ಯೆಯಾಗಿಯೇ ಉಳಿಯುತ್ತೆ? ಉಳಿಯುತ್ತಾ ಇಲ್ವಾ ಎಂಬುದನ್ನ ನಿಮ್ಮ ಮುಂದೆ ಒಂದು ಪ್ರಶ್ನೆಯನ್ನಾಗಿ ಇಡ್ತಾ ಇದ್ದೀನಿ.
ಎರಡನೇದು, ಭೂತಕಾಲದೊಡನೆ ನಾವು ಹೊಂದಿಕೊಳ್ಳತಕ್ಕಂತ- ಆ ರಿಲೇಶನ್ ಯಾವ ತರದ್ದು? ಇದ್ದಲ್ಲಿ ಕುವೆಂಪು ತಾಳತಕ್ಕಂತ ನಿಲುವು ಏನಂದ್ರೆ, ಅವ್ರೇ ಕೊಟ್ಟಿರುವ ಒಂದು ಉದಾಹರಣೆ ಮೂಲಕ- ಮತ್ತೆ ಮತ್ತೆ ಮತ್ತೆ ಅದನ್ನು ಉಲ್ಲೇಖಿಸಲಾಗ್ತದೆ- ಹಳೇ ಕಾಲದ ಆಭರಣಗಳು ಅಂತೇಳಿ ಅವುಗಳನ್ನ ಬಿಸಾಕಾಗೋದಿಲ್ಲ; ಅದು ಚಿನ್ನ ಆಗಿರೋದ್ರಿಂದ ಅದನ್ನು ಖರೀದಿಸಿ, ನಮಗೆ ಬೇಕಾಗಿರತಕ್ಕಂತ, ನಮ್ಮ ಕಾಲಕ್ಕೆ ಅಗತ್ಯವಾದ ಆಭರಣಗಳನ್ನಾಗಿ ಪರಿವರ್ತಿಸ್ಕೋಬಹುದು. ಅದೇ ರೀತಿಯಲ್ಲಿ ಪುರಾತನವಾದ, ಪ್ರಾಚೀನವಾದ ಚಿಂತನಾಕ್ರಮಗಳಲ್ಲಿ, ಅವುಗಳ ವಿಚಾರಗಳಲ್ಲಿ- ನಮ್ಗೆ ಒಪ್ಪಿಗೆ ಆಗಿಲ್ಲ ಎಂಬ ಕಾರಣಕ್ಕಾಗಿ ಅವಗಳನ್ನ ಸಾರಾಸಗಟಾಗಿ ನಿರಾಕರಿಸೋಕಾಗಲ್ಲ. ಅವ್ರಲ್ಲಿ ನಮಗೆ ಉಪಯುಕ್ತವಾದದ್ದನ್ನ ಆಯ್ಕೆ ಮಾಡಿಕೊಳ್ಬೇಕಾಗಿ ಬರ್ತದೆ. ನಮಗೆ ಬೇಕಾದ ರೀತಿಯಲ್ಲಿ ಪುನರ್ರಚಿಸಿಕೊಳ್ಬೇಕಾಗಿ ಬರ್ತದೆ. ಇದೂ ಕೂಡಾ ಸ್ವಲ್ಪ ಮಟ್ಟಿಗೆ ಒಂದು ಚರ್ಚೆ ಮಾಡ್ಬೇಕಾದಂತ ವಿಚಾರ ಅಂತ ಕಾಣುತ್ತೆ. ಏಕೆಂತಂದ್ರೆ 1974ರ ಉಪನ್ಯಾಸದಲ್ಲಿ ಮೊದಲನೇ ಸರ್ತಿ ಹೇಳಿರೋದವರು- ಕಲಾವಿದರು ಮತ್ತು ಸಾಹಿತಿಗಳ ಸಮಾವೇಶದಲ್ಲಿ, ಮೈಸೂರ್ನಲ್ಲಿ ಮಂಡಿಸ್ತಾರವ್ರು- ಪ್ರಾಚೀನವಾದದ್ದು ಸಂಪೂರ್ಣವಾಗಿ ತ್ಯಾಜ್ಯವಾದದ್ದಲ್ಲ ಅನ್ನೋದನ್ನ ವಿವರಿಸೋದೋಸ್ಕರ ಈ ಉದಾಹರಣೆಯನ್ನ ಕೊಟ್ರು ಅವ್ರು. ಬಹಳ ಇಂಪಾರ್ಟೆಂಟ್ ಆಗಿ ಬರಹಗಾರರಿಗೆ ಒಂದು ರೀತಿಯ ಸೂಚನೆಗಳನ್ನು ಕೊಡ್ತಾರವ್ರು. ಬರಹಗಾರರಾಗಿ, ಹಳೆಗಾಲದ ಚಿಂತನೆಗಳೇನಿವೆ ಅವುಗಳಲ್ಲಿ ಕೂಡಾ- ಅದು ಪ್ರಗತಿಪರ ಅಲ್ಲ ಅಂತ ಸಂಪೂರ್ಣವಾಗಿ ನಿರಾಕರಿಸ್ಬಾರ್ದು. ಅದು ಪುರಾಣಗಳಿರ್ಬಹುದು, ಮಹಾಕಾವ್ಯಗಳಿರ್ಬಹುದು, ಅವುಗಳನ್ನ ನಮ್ಮ ಕಾಲಕ್ಕೆ ತಕ್ಕಂತೆ, ಅವುಗಳನ್ನ ಪುನರ್ ವ್ಯಾಖ್ಯಾನ ಮಾಡಿ ಮಂಡಿಸ್ಬೇಕಾಗಿಬರ್ತದೆ ಅಂತ. ಒಂದು ರೀತಿಯಲ್ಲಿ ತಾವೇನು ಮಾಡ್ತಾ ಇದ್ರೋ, ಅದನ್ನ ಸಮರ್ಥಿಸುವಂತಾ ರೀತಿಯಲ್ಲಿ ಮಂಡನೆಯನ್ನ ಅವ್ರು ಮಾಡ್ತಾರೆ. ಅದು ಯಾಕಾಗಿ ಬಂತು ಅಂತ ನಿಮ್ಮಲ್ಲಿ ಕೆಲವರಿಗೆ ಗೊತ್ತಿರ್ಬಹುದು. ಯಾಕಂದ್ರೆ, 1973ರಲ್ಲಿ ಬಸಲಿಂಗಪ್ಪನೋರು ಯಾವೊಂದು ಉಪನ್ಯಾಸ ಕೊಟ್ಟಿದ್ರೋ, ಅದ್ರಲ್ಲಿ ಇಡೀ ಸಾಹಿತ್ಯವನ್ನ, ಕನ್ನಡ ಸಾಹಿತ್ಯವನ್ನ ಬೂಸಾ ಅಂತ ಹೇಳಿದ್ರು. ಅದಕ್ಕೇ, ಬೂಸಾ ಅಂತ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ, ಎಲ್ಲವೂ ತಿರಸ್ಕಾರಯೋಗ್ಯವಾದದ್ದಲ್ಲ, ಅದರಲ್ಲೂ ಪೌಷ್ಟಿಕವಾದ ಅಂಶಗಳು ಇರ್ತವೆ, ಅದರಿಂದಾಗಿ, ಅದನ್ನು ನಾವು ತಕೋಬೇಕಾಗ್ತದೆ ಅಂತೇಳಿ. ಎಗೇನ್, ನನ್ಗೆ ಸಮಸ್ಯೆ ಬರ್ತಂಕಂತದ್ದು ಏನಂದ್ರೆ, ಯಾರು ತಗೋಬೇಕಾಗಿಬರ್ತದೆ, ಯಾರಿಗೆ ಅದು ಉಪಯುಕ್ತವಾಗ್ತದೆ? ಬಸವಲಿಂಗಪ್ಪನೋರು ಹೇಳ್ತಾ ಇದ್ದದ್ದು ಒಂದು ನಿರ್ದಿಷ್ಟವಾದ ಸಂದರ್ಭದಲ್ಲಿ. ನಿರ್ದಿಷ್ಟವಾದಂತ, ಒಂದು ಸಾಮಾಜಿಕವಾದಂತ ಸಂದರ್ಭದಲ್ಲಿ. ಅವ್ರು ಯಾವುದನ್ನ ದಲಿತ, ಶೋಷಿತರು, ಅನ್ಯಾಯಕ್ಕೆ ಒಳಗಾಗಿರತಕ್ಕಂತೋರು, ತಮ್ಮ ಕೊನೆ, ಹಕ್ಕು ಅಂತ- ಒಪ್ಕೊಳ್ದೇ ನಿರಾಕರಿಸ್ಬೇಕು ಅಂತ ಹೇಳ್ತಾ ಇದ್ರು? ಈ ಹಿನ್ನೆಲೆನಲ್ಲಿ ಮಾತಾಡ್ತಿದ್ರವ್ರು. ಮಲ ಹೊರುವ ಪದ್ಧತಿಯನ್ನ ನಿಷೇಧಿಸುವಾಗ, ಅದ್ರ ಹಿಂದೆ ಒಂದು ಫಿಸಿಕಲ್ ಆಕ್ಟ್ ಇದ್ದಿದ್ದು ಇಂಪಾರ್ಟೆಂಟು. ಅದು- ಉಳ್ಳವರ ತ್ಯಾಜ್ಯವನ್ನ ಹೊರುವ ಹೊರೆ, ನನ್ದಲ್ಲ; ಅದನ್ನ ನಾನು ಮಾಡೋದಿಲ್ಲ ಅಥವಾ ಅದನ್ನ ಮಾಡುವ ಅಗತ್ಯ ಇಲ್ಲ; ದ್ಯಾಟ್ ಶುಡ್ ಬಿ ರಿಜೆಕ್ಟೆಡ್. ಮಲ ಹೊರುವ ಪದ್ಧತಿಯನ್ನ ಡಿಗ್ರೇಡ್ ಮಾಡ್ತಿದ್ದಂತದ್ದು ಇತ್ಯಾದಿಗಳು ಸಹಜ. ಅದ್ರ ಹಿಂದೆ ಒಂದು ತಾತ್ವಿಕತೆ ಇದೆ. ಹಾಗಿರುವಾಗ ಯಾವುದು ಉಪಯುಕ್ತ, ಯಾವುದು ಉಪಯುಕ್ತ ಅಲ್ಲ, ಅಥ್ವಾ ಎಷ್ಟು ಉಪಯುಕ್ತ, ಎಷ್ಟು ಉಪಯುಕ್ತ ಅಲ್ಲ ಅನ್ನೊದನ್ನ ನಿರ್ಧಾರ ಮಾಡೋರು ಯಾರು? ಹಾಗಾಗಿ ಬೌದ್ದಿಕತೆ, ಭೌದ್ಧಿಕ ಜಗತ್ತು ಸೃಷ್ಟಿ ಮಾಡಿರತಕ್ಕಂತದ್ದನ್ನ ಸಂಪೂರ್ಣ ನಿರಾಕರಣೆಗೆ ಯೋಗ್ಯವಾದಂತದ್ದಾಗಿದ್ರೆ, ಅದನ್ನ ನಿರಾಕರಿಸುವ ಹಕ್ಕು ಪ್ರತಿಯೊಬ್ರಿಗೂ ಇದೆ. ಅದು ಬಿಟ್ಟುಹೋಗ್ಬೇಕು, ಅದು ಬೇಕಾಗಿಲ್ಲ, ಅದನ್ನ ತ್ಯಜಿಸ್ಬೇಕು, ಅದು ಪೋಷಕಾಂಶವನ್ನ ಹೊಂದಿಲ್ಲ ಅಂತ ಹೇಳ್ಬೇಕು. ಈ ಹಿನ್ನೆಲೆನಲ್ಲಿ ಬಸವಲಿಂಗಪ್ಪನವರು ಹೇಳಿದ್ದು ಅದನ್ನ. ಸ್ವಲ್ಪ ಮಟ್ಟಿಗೆ ಕುವೆಂಪು ಅವ್ರು ಅದನ್ನ ಇನ್ನೊಂದು ರೀತಿಯಲ್ಲಿ ಆರ್ಗ್ಯೂ ಮಾಡಿ, ಸಂದರ್ಶನ ಒಂದ್ರಲ್ಲಿ, ಬೇರೆ ರೀತಿಯಲ್ಲಿ ಮುಗಿಸೋಕೆ ಪ್ರಯತ್ನಪಡ್ತಾರೆ. ಬೂಸಾ- ಅದು ಕೂಡಾ ಉಪಯುಕ್ತ, ಹತ್ತಿ ಕಾಳು, ಹತ್ತಿ ಹಿಂಡಿ ಮಾತ್ರ ಕೊಡೋಕಾಗೋದಿಲ್ಲ, ಬೂಸಾ ಕೂಡಾ ಕೊಡ್ಬೇಕಾಗ್ತದೆ, ಬೂಸಾ ಕೂಡಾ ಆಹಾರ ಅಂತೇಳಿ, ಬಸವಲಿಂಗಪ್ಪನವರ ಆರ್ಗ್ಯುಮೆಂಟನ್ನ ಸಂಪೂರ್ಣವಾಗಿ ಬೇರೊಂದು ರೀತಿಯಲ್ಲಿ ಮಂಡಿಸೋಕೆ ಪ್ರಯತ್ನಪಡ್ತಾರೆ. ಅಂದ್ರೆ ಬೂಸಾ ಕೂಡಾ ತಿರಸ್ಕಾರಯೋಗ್ಯವಾದದ್ದಲ್ಲ; ಅದೂ ಸ್ವಲ್ಪ ಮಟ್ಟಿಗೆ ಪೋಷಕಾಂಶವನ್ನ ಹೊಂದಿರ್ತದೆ, ತುಂಬಾ ಪೌಷ್ಟಿಕವಾದದ್ದನ್ನ ಮಾತ್ರ ಕೊಡೋಕಾಗೋದಿಲ್ಲ ಅಂತ ಒಂದು ಜಾಣತನದ- ನನ್ನ ಪ್ರಕಾರ ಅದು ಜಾಣತನದದ್ದೇ- ವಾದ ಮಂಡಿಸ್ತಾರವರು. ಭೂತಕಾಲದೊಂದಿಗೆ ಸಂವಾದ ಅನ್ನೋದು ಕೂಡಾ ನಾವು ಚರ್ಚೆ ಮಾಡಬೇಕಾದಂತ ಒಂದು ಸಂಗತಿ.
ಮೂರನೇದು, ಪುರೋಹಿತಶಾಹಿಯ ಬಗ್ಗೆ. ಇದು ಅವರ 74ರ ಉಪನ್ಯಾಸದಲ್ಲಿ ಬಹಳ ಸ್ಪಷ್ಟವಾಗಿ ಕಾಣುವ ಒಂದು ಚಿಂತನಾಕ್ರಮ, ಒಂದು ಐಡಿಯಾಲಜಿ- ಒಂದು ಆಕೃತಿ ಅಂತ ಹೇಳ್ತಾರೆ. ಆದ್ರೆ ಇದು ಒಂದು ಸಾಮಾಜಿಕವಾದ ಪ್ರೋಗ್ರಾಮ? ಅಂದ್ರೆ ಒಂದು ಸಾಮಾಜಿಕವಾದ ಕಾರ್ಯಕ್ರಮಾನ? ಅಲ್ಲಿ ಅಷ್ಟು ಸ್ಪಷ್ಟವಾಗಿ ಇಲ್ಲ ಅದು- ಅಂದ್ರೆ ಅಲ್ಲಿ ಮಂಡಿಸೋದಿಲ್ಲ ಅವ್ರು. ಮುಂದೆ ಬಹಳಷ್ಟು ಕಡೆಗಳಲ್ಲಿ, ಬಹಳಷ್ಟು ಉಪನ್ಯಾಸಗಳಲ್ಲಿ ಮತ್ತೆ ಅವ್ರು ಸ್ಪಷ್ಟಪಡಿಸ್ತಾರೆ. ಬ್ರಾಹ್ಮಣರಿಗೂ ಪುರೋಹಿತಶಾಹಿಗೂ ಇರುವ ಸಂಬಂಧ ಮತ್ತು ಎಲ್ಲಾ ಧರ್ಮಗಳಲ್ಲೂ ಪುರೋಹಿತಶಾಹಿ ಇರ್ತದೆ- ಅದು ಕ್ರೈಸ್ತ ಧರ್ಮ ಇರ್ಬೌಹುದು, ಇಸ್ಲಾಂ ಇರ್ಬೌಹುದು, ಆಯಾ ಸಮಾಜದ ಪ್ರಿವಿಲೇಜ್ಡ್ ಕ್ಲಾಸ್ ಅಂತ ಏನಿರ್ತದೆ, ಸೋಕಾಲ್ಡ್ ಪ್ರಿವಿಲೇಜ್ಡ್ ಲೆವೆಲ್ ಅಂತ ಏನಿರ್ತದೆ- ಅವ್ರು ತಮ್ಮ ಸಮಾಜದ ಕೆಳಗಿನವರ ಮೇಲೆ ಹೇರತಕ್ಕಂತ ವೈಚಾರಿಕವಾದಂತ ಒಂದು ಮಾಯಾಜಾಲ. ಅದ್ರಲ್ಲಿ ಸಿಕ್ಕಿಹಾಕ್ಕೊಳ್ಳುವಂತೆ ಮಾಡ್ತಾರಂತೆ. ಇದು ಪುರೋಹಿತಶಾಹಿಯ ಒಂದು ತಂತ್ರ ಅಂತ ಅವ್ರು ಹೇಳ್ತಾರೆ. ಇದು- ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಬೇಕಾದ್ರೆ ಬಹಳ ಚರ್ಚೆ ಮಾಡ್ಬೇಕಾದ ಕಾನ್ಸೆಪ್ಟ್ ಇದು.ಅವ್ರು ಹೇಳೋದ್ರಲ್ಲಿ ಯಾವುದೇ ಬಗೆಯ ಉತ್ಪ್ರೇಕ್ಷೆನೂ ಇಲ್ಲ; ಸಂಪೂರ್ಣವಾಗಿ ನಿಜ. ಆದ್ರೆ ಇದು ನಮ್ಮ ಸಮಾಜವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪೂರ್ಣ ಸಾಧ್ಯತೆ ಅಥವಾ ಅವಕಾಶವನ್ನ ಕೊಡೋದಿಲ್ಲ ಅಂತ ನನಗನಿಸ್ತದೆ. ಯಾಕಂದ್ರೆ, ಈ ಸಮಸ್ಯೆ ಬಸವಣ್ಣನಿಗೂ ಬಂದಿತ್ತು. ಬಸವಣ್ಣ ವೇದಗಳ ಪ್ರಾಮಣ್ಯವನ್ನ, ಉಪನಿಷದ್ಗಳ ಪ್ರಾಮಣ್ಯವನ್ನ, ಪುರಾಣಗಳ ಪ್ರಾಮಣ್ಯವನ್ನ ನಿರಾಕರಿಸಿಲ್ವ? ನಿರಾಕರಿಸಿ, ಅವ್ರು ಮಂಡಿಸಿದ ಧಾರ್ಮಿಕ ನೆಲೆ ಯಾವುದಂದ್ರೆ, ಬಹುದೇವತಾ ಉಪಾಸನೆಯಿಂದ ಏಕದೇವತಾ ಉಪಾಸನೆಯ ಕಡೆಗೆ, ಅಂದ್ರೆ ಪಾಲಿಥಿಯಿಸಂನಿಂದ ಮೊನೋಥಿಯಿಸಂ ಕಡೆಗೆ ದಾಟಿದ್ರು. ಇದು ಅವರು ಇಂಪಾರ್ಟೆಂಟ್ಲಿ ಮಾಡಿದಂತದ್ದು. ಅದಕ್ಕೆ ಒಂದು ಕೂಡು ಹೊಂದಾಗಿ ಅವ್ರು- ಇಷ್ಟ ಲಿಂಗವನ್ನು ಧರಿಸತಕ್ಕಂತದ್ದು, ಹೀಗೆ ಕೆಲವು ಆಚರಣೆಗಳನ್ನು ಕಲ್ಪಿಸಿದ್ರು. ಅಂದ್ರೆ, ಅವರು ಶರಣರಾಗ್ತಾರೆ; ಅವರು ಭಕ್ತರಾಗ್ತಾರೆ. ಅಂದ್ರೆ ಇಡೀ ಜಗತ್ತೀಗ ಭಕ್ತರು ಮತ್ತು ಭವಿಗಳಿಂದ ಕೂಡ್ತದೆ. ಈ ಭವಿಗಳಿದ್ದಾರಲ್ಲ, ಅವ್ರು ಈ ಮೊನೋಥಿಯಿಸಂನ ವ್ಯಾಪ್ತಿಯಿಂದ ಹೊರಗಡೆ ಇರತಕ್ಕಂತವ್ರು. ಅವ್ರು ಬಹುದೇವತಾ ಉಪಾಸನೆಯನ್ನ ಮಾಡ್ತಕ್ಕಂತವ್ರು. ಅವ್ರ ಬಗೆಗೆ ಬಸವಣ್ಣನವ್ರು ಅಪಾರವಾದ ಟೀಕೆಗಳನ್ನ ಮಾಡ್ತಾರೆ. ಅದು ಅವ್ರ ವಚನಗಳಲ್ಲಿ ಕಾಣ್ತದೆ. ಒಂದು ಉದಾಹರಣೆ ಕೊಡ್ತೇನೆ- ಹಲವಾರು ಸಿಗತ್ವೆ. ಇದು ತಕ್ಷಣ ಸಿಕ್ಕಿದ್ದು: “ಗಂಡ ಶಿವಲಿಂಗದೇವರ ಭಕ್ತ: ಹೆಂಡತಿ ಮಾರಿ ಮಸಣಿಯ ಭಕ್ತೆ! ಗಂಡ ಕೊಂಬುದು ಪಾದೋದಕ-ಪ್ರಸಾದ: ಹೆಂಡತಿ ಕೊಂಬುದು ಸುರೆ-ಮಾಂಸ! ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗೆ ತೊಳೆದಂತೆ.” ಈ ಹೆಂಡದ ಮಡಕೆಯ ಹೊರಗೆ ತೊಳೆದಂತೆ ಎಂಬುದನ್ನ ಕನ್ನಡ ಸಾಹಿತ್ಯದಲ್ಲಿ ಬೇರೆಬೇರೆ ರೀತಿಯಲ್ಲಿ ಹೇಳ್ತಾನೇ ಇರ್ತಾರೆ. ಅಂದ್ರೆ ಅದನ್ನವ್ರು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡ್ತಾರೆ. ಮರಗಳನ್ನ ಪೂಜೆ ಮಾಡ್ತಕ್ಕಂತದ್ದು, ಮೊರಗಳನ್ನ ಪೂಜೆ ಮಾಡ್ತಕ್ಕಂತದ್ದು, ಮಸಣಿಯನ್ನ ಪೂಜೆ ಮಾಡ್ತಕ್ಕಂತದ್ದು, ಈ ಭವಿಗಳ ಜಗತ್ತಿನ ಶ್ರದ್ಧಾಕೇಂದ್ರ ಇದೆಯಲ್ಲ, ಅದು ಪುರೋಹಿತಶಾಹಿಯ ಪರಿಣಾಮ ಅಲ್ಲ; ತಾನೇ ಸೃಷ್ಟಿಸಿಕೊಂಡ ಜಗತ್ತದು. ಮೈಲಾರನ ಭಕ್ತರಿರ್ಬಹುದು, ಮಾದೇಶ್ವರನ ಭಕ್ತರಿರ್ಬಹುದು, ಅಥವಾ ಜುಂಜಪ್ಪನ ಭಕ್ತರಿರ್ಬಹುದು- ಅದು ಎಕ್ಸಿಸ್ಟ್ ಆಗ್ತಿರೋ ಕ್ರಮ ಇದೆಯಲ್ಲ- ಪುರೋಹಿತಶಾಹಿಯ ಪರಿಣಾಮ ಅಲ್ಲ ಅದು. ಆ ಬಗೆಯ ಆಚರಣೆಗಳನ್ನ ಕುವೆಂಪು ಅವ್ರು ಕೆಲವೊಂದು ಸಂದರ್ಭಗಳಲ್ಲಿ ನಿರಾಕರಿಸ್ತಾರೆ. ಮಾದೇಶ್ವರನ ಬೆಟ್ಟಕ್ಕೆ ಭಕ್ತರುಗಳು ಹೋಗುವಂತದ್ದು, ಇನ್ನೆಲ್ಲೋ ಜಾಥಾಗಳಲ್ಲಿ ಹೋಗುವಂತದ್ದು- ಅವನ್ನೆಲ್ಲಾ ಟೀಕೆ ಮಾಡ್ತಾರೆ. ಆದ್ರೆ, ಈ ಐಡಿಯಾಲಜಿ ಎಲ್ಲಿಂದ ಸೃಷ್ಟಿಯಾಗ್ತದೆ? ಅದು ಹೊರಗಡೆಯಿಂದ ಸೃಷ್ಟಿಯಾಗ್ತದೋ ಅಥವಾ ಸಮಾಜದ ಒಳಗಡೆನೇ ಈ ಒಂದು ಐಡಿಯಾಲಜಿ ಇದೆಯಾ? ಆ ಐಡಿಯಾಲಜಿಯ ಕಾರಣಗಳೇನು? ಮತ್ತೆ ಯಾಕವು ಶೃದ್ಧೆಯ ಕೇಂದ್ರಗಳಾಗಿ ಬೆಳೀತಾಹೋಗ್ತವೆ? ಅವುಗಳ ಹಿಂದೆ ಇರತಕ್ಕಂತ ಸಾಮಾಜಿಕ ಒತ್ತಡಗಳೇನು ಅನ್ನೋದನ್ನ ನಾವು ಪರೀಕ್ಷೆ ಮಾಡದೇ ಹೋದ್ರೆ, ಇಡೀ ಸಮಾಜದ ಒಳಗಡೆ ಇರುವಂತ ಈ ರಚನೆಗಳನ್ನು ಅರ್ಥಮಾಡಿಕೊಳ್ಳೋದು ಕಷ್ಟ. ನಾನು ಬಹಳ ಸಂದರ್ಭಗಳಲ್ಲಿ ಒಂದು ಎಕ್ಸಾಂಪಲನ್ನು ಕೊಡ್ತಾ ಇರ್ತೀನಿ. ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿದ್ದಾಗ ಅಲ್ಲಿನ ವಿರೂಪಾಕ್ಷ ದೇವಾಲಯ- ವಿರೂಪಾಕ್ಷ ದೇವಾಲಯದ ಬೇರೆ ಕತೆಗಳನ್ನು ಬಿಡೋಣ ಸದ್ಯಕ್ಕೆ- ಅದಕ್ಕೆ ಬೇರೆ ಪರಿವೇಶಗಳು ಕೂಡಾ ಇವೆ. ಈಶ್ವರನಿಗೂ, ಅಧಿಕೃತವಲ್ಲದ ಪಂಪಾದೇವಿಗೂ- ಪಂಪಾದೇವಿ ಅಧಿಕೃತ ದೇವತೆ ಅಲ್ಲ- ನೀವು ವಿರೂಪಾಕ್ಷ ದೇವಾಲಯವನ್ನು ನೋಡಿದ್ರೆ, ಆಕೆಗೆ ಕೊಟ್ಟಿರತಕ್ಕಂತ ಜಾಗ ಉಪಪತ್ನಿಯ ಜಾಗ. ಆದ್ರೆ, ಈಶ್ವರ ಮತ್ತು ಪಂಪಾದೇವಿಯ ಮದುವೇನೆ ಸುತ್ತಮುತ್ತಲಿನ ಜನರಿಗೆ ಪ್ರಧಾನವಾದಂತ ಆಚರಣೆ. ಮೊದಲಿಗೆ ನಿಶ್ಚಿತಾರ್ಥ ಮಾಡ್ತಾರೆ. ಅಲ್ಲಿಯ ವರೆಗೆ ಯಾವ ನಿಶ್ಚಿತಾರ್ಥವೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯಲ್ಲ. ಈಶ್ವರನಿಗೂ ಅಂದ್ರೆ ಪಂಪಾಪತಿಗೂ, ಪಂಪಾದೇವಿ ಅಂದ್ರೆ ಪಂಪೆಗೂ ನಿಶ್ಚಿತಾರ್ಥ ಆದ್ಮೇಲೇನೇ ಮದುವೆಗಳನ್ನು ಮಾಡ್ತಕ್ಕಂತದ್ದು. ಆಮೇಲೆ ಮದುವೆಯನ್ನ ದೊಡ್ಡ ಆಚರಣೆಯನ್ನಾಗಿ ಮಾಡ್ತಾರೆ. ಎರಡ್ನೇದು, ಶ್ರಾವಣ ಮಾಸ ಬಂತೂಂದ್ರೆ, ಇಡೀ ಉತ್ತರ ಕರ್ನಾಟಕದ ಬೇರೆಬೇರೆ ಕಡೆಗಳಿಂದ ಭಜನಾ ಮೇಳಗಳು- ನಡ್ಕೋಂಡು ಬರ್ತಾ ಇರ್ತಾರವ್ರು- ವಾರಗಳ ಕಾಲ ನಡ್ಕೊಂಡು ಬಂದು, ವಿರೂಪಾಕ್ಷ ದೇವಾಲಯದ ಒಳಗಡೆ ಕೂತ್ಕೊಂಡು, ರಾತ್ರಿಯೆಲ್ಲಾ ಭಜನೆ ಮಾಡಿ, ಬೆಳಗಾತ ಎದ್ದೋಗ್ತಾರೆ. ನಡೆದೋ, ಬಸ್ಸಲ್ಲೋ, ಯಾವುದ್ರಲ್ಲೋ ಹೊರಟೋಗ್ತಾರೆ- ಬರ್ಬೇಕಾದ್ರೆ ಮಾತ್ರ ನಡ್ಕೊಂಡೋಗ್ಬೇಕು ಅಂತಿದೆ; ಹೋಗ್ಬೇಕಾದ್ರೆ ಏನುಂತೇನಿಲ್ಲ. ಇದ್ನೆಲ್ಲಾ ನಮ್ಮ ಕನ್ನಡ ವಿಶ್ವವಿದ್ಯಾಲಯದ ಪರಿಷ್ಕರಣವಾದಿಗಳು ಅದನ್ನ ನೋಡಿ, ನಮ್ಮ ಕಂಬಾರರು ಏನಂತಾರೆ- ಏನ್ ಪಾಪ, ಅವ್ರೆಲ್ಲಾ ಬಂದು ಅಲ್ಲಿ ಭಜನೆ ಮಾಡ್ತಾರೆ, ಸರಿಯಾದ ವ್ಯವಸ್ಥೆ ಇಲ್ಲ ಅಲ್ಲಿ. ಅವ್ರಿಗೆಲ್ಲಾ ಒಂದು ವ್ಯವಸ್ಥೆ ಮಾಡ್ಬೇಕು ಅಂತ ನಮ್ಗೆಲ್ಲಾ ಆದೇಶ ಕೊಡ್ತಾರೆ. ನಾವೆಲ್ಲಾ ಅಲ್ಲಿಗೆ ಹೋಗಿ, ಒಂದು ವೇದಿಕೆಯನ್ನ ಸೃಷ್ಟಿ ಮಾಡಿ, ಅವ್ರಿಗೆಲ್ಲಾ ಮೈಕು-ಗಿಯ್ಕು ಅಂತ ಎಲ್ಲಾ ವ್ಯವಸ್ಥೆ ಮಾಡಿ, ನೀವು ಬಂದು ಇಲ್ಲಿ ಭಜನೆ ಮಾಡಿ ಅಂತ ಕೇಳ್ಕೊಂಡ್ವು. ಭಜನಾ ಮಂಡಳಿಯವರ್ಯಾರೂ ಕೇರ್ ಮಾಡ್ಲಿಲ್ಲ ನಮ್ಮನ್ನು. ಅವ್ರು ತಾವು ಒಂದು ಕಂಬದ ಹತ್ರ ಕೂತು ತಮ್ಮ ಪಾಡಿಗೆ ತಾವು ಭಜನೆ ಮಾಡ್ತಾ ಇದ್ರು, ಇನ್ನೊಂದು ಕಂಬದ ಹತ್ರ ಕೂತು ಇನ್ಯಾರೋ ಭಜನೆ ಮಾಡ್ತಾ ಇದ್ರು. ನಾವು ಅವ್ರಿಗಂತ ತಯಾರು ಮಾಡಿದ್ದ ಊಟಗೀಟ ಏನು ತಿನ್ಲಿಲ್ಲ ಅವ್ರು. ತಮ್ಮ ಪಾಡಿಗೆ ತಾವು ಜತೆ ಮಾಡ್ಕೊಂಡು ಹೋಗ್ಬಿಟ್ರು. ಯಾರು ಯಾರನ್ನೂ ಕೇಳ್ತಾನೆ ಇಲ್ಲ. ನನ್ಗೆ ಆವತ್ನಿಂದ ಇದೊಂದು ಕಾಡೋಕೆ ಶುರುವಾಯ್ತು- ಇದೇನಿದು ವಿಚಿತ್ರವಾದದ್ದು? ವಾಟ್ ಮೇಕ್ಸ್ ದೆಮ್ ಟು ಡೂ ಲೈಕ್ ದಿಸ್? ಯಾರು ಇದನ್ನ- ಈ ಆಚರಣೆಯನ್ನ ಹೇರಿದ್ದು ಯಾರು? ಯಾವ ಕಡೆಯಿಂದ ಬರ್ತಾ ಇದೆ ಇದು? ಗೊತ್ತಿಲ್ಲ, ನನಗಿನ್ನೂ ಅರ್ಥ ಆಗಿಲ್ಲ. ಪುರೋಹಿತಶಾಹಿಯ ನಿರಾಕರಣೆ, ಅಂದ್ರೆ ಪುರೋಹಿತಶಾಹಿಯನ್ನು ಎದುರಿಸಬೇಕು ಅನ್ನುವಾಗ, ಮೇಲಿಂದ ಬರತಕ್ಕಂತ, ಮೇಲಿಂದ ನಮ್ಮ ಮೇಲೆ ಹೇರತಕ್ಕಂತ ಐಡಿಯಾಲಜಿಯನ್ನು ಎದುರಿಸ್ಬೇಕು- ಸರಿ. ನಮ್ಮ ಒಳಗಡೇನೇ ಹುಟ್ತಾ ಇರ್ತದಲ್ಲ- ಅದರ ಜೊತೆಗೆ ಯಾವ ರೀತಿಯ ಸಂವಾದ ಮಾಡ್ಬೇಕು? ಸಮಾಜದ ಬೇರೆಬೇರೆ ಸ್ತರಗಳಿಂದ ರೂಪುಗೊಳ್ತಾ ಇರ್ತದಲ್ಲ, ಅದನ್ನ ಯಾವ ರೀತಿ ಅರ್ಥ ಮಾಡಿಕೊಳ್ಬೇಕು ಮತ್ತು ಅದನ್ನ ಆಧುನಿಕ ಜಗತ್ತಿಗೆ ಯಾವ ರೀತಿ ಪರಿವರ್ತಿಸ್ಬೇಕು? ಒಂದು ಪ್ರಜಾಪ್ರಭುತ್ವವಾದಿ ಚಿಂತನೆಗೆ ಅವುಗಳನ್ನ ಹೇಗೆ ಮುಪ್ಪುಗೊಳಿಸ್ಬೇಕು? ಬಸವಣ್ಣ ಇಂತಾ ಎಷ್ಟೊಂದು ಕಾಂಟ್ರಾಡಿಕ್ಷನ್ಗಳಲ್ಲಿ ಸಿಕ್ಕಾಕೊಂಡಿದ್ರೋ ಗೊತ್ತಿಲ್ಲ. ಅಂದ್ರೆ, ವಚನ ಚಳವಳಿ, ಶರಣ ಚಳವಳಿ ಇವುಗಳಿಗೆಲ್ಲಾ ಬೇರೆಬೇರೆ ಕಾರಣಗಳನ್ನ ಇದರಲ್ಲಿ ನೋಡ್ಬಹುದು ನಾವು-ಯುಗಳ ದೃಷ್ಟಿಯಲ್ಲಿ, ಅಂದ್ರೆ, ಭವಿ ಮತ್ತು ಭಕ್ತರ ದೃಷ್ಟಿಯಲ್ಲಿ.
ನಾಲ್ಕನೇದು ಸಮಾನತೆಯ ವ್ಯಾಖ್ಯೆ. ಅಂದ್ರೆ, ಕುವೆಂಪು ಅಲ್ಟಿಮೇಟಾಗಿ ನಂಬಿದ್ದು- ಸಮಸಮಾಜದ ಸ್ಥಾಪನೆ ಆಗ್ಬೇಕು ಎಂಬುದರ ಬಗ್ಗೆ. ಅದ್ರ ಬಗ್ಗೆ ಯಾವುದೇ ಸಂದೇಹ ಇಲ್ಲ. ಮತ್ತೆ ಅವ್ರೂ ಕೂಡಾ ಬೇರೆಬೇರೆ ಸಂದರ್ಭಗಳಲ್ಲಿ ಹಿಂಜರಿಕೆ ಇಲ್ದೇನೇ, ನಿಸ್ಸಂದೇಹವಾಗಿ ಹೇಳಿದ್ದಾರೆ, ಮತ್ತು ಅವ್ರ ಕೊನೆಯ ಹಂತದ ಮನುಜ ಮತ- ವಿಶ್ವಪಥ ಚಿಂತನೆಗಳಲ್ಲಿ ಮತ್ತು ಅವರು ಕೊಟ್ಟಂತ- ನಿರ್ಣಯಾತ್ಮಕವಾಗಿ ಆಡಿದ ಮಾತುಗಳಲ್ಲಿ ಈ ಅಂಶ ಕಾಣಿಸಿಕೊಳ್ತದೆ. ಸಮಾನತೆ ಅನ್ತಕ್ಕಂತದ್ದು ಅಥವಾ ಸರ್ವೋದಯ ಅನ್ತಕ್ಕಂತದ್ದು ಒಂದು ಗುರಿ. ಸರಿ- ಅದನ್ನ ಸಾಧಿಸತಕ್ಕಂತ ದಾರಿ ಯಾವುದು?- ಹೌ ಟು ಅಚೀವ್ ದ್ಯಾಟ್? ಗುರಿಯನ್ನು ತೋರಿಸ್ಬೋದು, ಆದ್ರೆ ದಾರಿ ಯಾವುದು?- ಮೊದಲನೇ ಪ್ರಶ್ನೆ. ಎರಡ್ನೇದು- ಅವ್ರೇ ಬೇರೆಬೇರೆ ಸಂದರ್ಭಗಳಲ್ಲಿ ಹೇಳಿರೋ ಹಾಗೆ- ಮನುಷ್ಯ… ಮಗುವೊಂದು ಹುಟ್ಟುವಾಗ ಅದು ವಿಶ್ವಮಾನವನಾಗಿರ್ತದೆ; ನಂತ್ರ ನಾವದನ್ನ ಅಲ್ಪಮಾನವನನ್ನಾಗಿ ಮಾಡ್ತೀವಿ, ಅದನ್ನ ಬಿಟ್ಟು ನಾವು ಮತ್ತೆ ವಿಶ್ವಮಾನವರಾಗ್ಬೇಕು ಅಂತಾರೆ. ಕರೆಕ್ಟ್, ಒಪ್ಕೊಳ್ಳೋಣ. ಈಗ ವಿಶ್ವಮಾನವನಾಗಿ ಹುಟ್ಟಿರುವಂತ ಮನುಷ್ಯನನ್ನ ಅಲ್ಪಮಾನವನಾಗಿ ಪರಿವರ್ತಿಸತಕ್ಕಂತ ವ್ಯವಸ್ಥೆ ಯಾವುದು? ಒಂದು ರಾಜಕೀಯ ವ್ಯವಸ್ಥೆನಾ, ಸಾಂಸ್ಕೃತಿಕವಾದ ವ್ಯವಸ್ಥೆನಾ, ಸಾಮಾಜಿಕವಾದ ವ್ಯವಸ್ಥೆನಾ ಅಥವಾ ಇದರ ಅಪರೇಟಿವ್ ಮೆಕ್ಯಾನಿಸಂ ಆಗಿರುವಂತ ಶಿಕ್ಷಣ ವ್ಯವಸ್ಥೆನಾ ಅಥವಾ ಆರ್ಥಿಕ ವ್ಯವಸ್ಥೆನಾ? ಯಾವುದು ಈ ತರ ಮಾಡ್ತಾ ಇರೋದು? ಇದ್ರಲ್ಲಿ ಯಾವುದೇ ವ್ಯತ್ಯಾಸ ಮಾಡ್ದೇನೇನೇ, ಬದಲಾವಣೆ ಮಾಡ್ದೇನೇನೇ, ಕೇವಲ ಹಂಬಲದಿಂದ- ಸಮಾನತೆ ಬರ್ಬೇಕು ಎಂಬ ಹಂಬಲದಿಂದ, ಸರ್ವೋದಯವಾಗಬೇಕು ಎಂಬ ಹಂಬಲದಿಂದ, ಆ ದಾರಿಯಲ್ಲಿ, ಆ ಗುರಿಯನ್ನ ತಲ್ಪೋಕೆ ಆಗುತ್ತಾ? ಇಂದೊಂದು ಪ್ರಶ್ನೆ- ನಾನು ಹಾಕ್ಕೊಳ್ಳೋಕೆ ಪ್ರಯತ್ನಪಡ್ತಿರೋತಕ್ಕಂತದ್ದು. ಎರಡ್ನೇದು- ಕುವೆಂಪು, ವ್ಯಕ್ತಿಗಳ ನಡುವಣ, ವ್ಯಕ್ತಿಗಳು ಸಾಧಿಸಬೇಕಾದದ್ದು ಇದೆಯಲ್ಲ- ಅವ್ರೆಲ್ಲಾ ಇಕ್ವಲ್ ಫೂಟಿಂಗಲ್ಲಿ ಇಲ್ಲ ಅನ್ನೋದನ್ನ ಒಪ್ಕೊಳ್ತಾರವರು- ಅಂದ್ರೆ ಜನ ಬೇರೆಬೇರೆ ರೀತಿಯಲ್ಲಿದ್ದಾರೆ ಅನ್ಕೊಂಡು. ಆದ್ರೆ, ಅದರ ಕಾರಣಗಳನ್ನ ಸಾಮಾಜಿಕವಾಗಿ ಕಂಡ್ಕೊಳ್ಳೋದಿಲ್ಲ ಅವ್ರು; ಪೂರ್ವಜನ್ಮದಿಂದ ಪಡ್ಕೊಂಡು ಬಂದಂತ ಸಂಸ್ಕಾರಗಳಿಂದ ಆ ರೀತಿ ಆಗ್ತದೆ- ಅಂದ್ರೆ ನಾನಿವತ್ತು ಜಾತಿ ಕಾರಣ ಅನ್ತೀವಿ, ಆರ್ಥಿಕ ಸ್ಥಿತಿ ಕಾರಣ ಅನ್ತೀವಿ- ಅವೆಲ್ಲಾ ಈಕ್ವಲ್ ಫೂಟಿಂಗಲ್ಲಿ ಇಲ್ಲ. ಅದಕ್ಕಾಗಿ ನಾವು ಇಕ್ವಾಲಿಟಿ ಮತ್ತು ಇಕ್ವಿಟಿ ಎಂಬ ಎರಡು ಕಾನ್ಸೆಪ್ಟ್ಗಳನ್ನ ತಗೊಂಬರ್ತೀವಿ. ಇಕ್ವಿಟಿ ಅನ್ತಕ್ಕಂತದ್ದು- ಅವರವರ ಅಗತ್ಯಗಳಿಗೆ ತಕ್ಕಂತ ಸಂಗತಿಗಳನ್ನ ಕೊಡ್ತಕ್ಕಂತದ್ದು. ಅಗತ್ಯವಿರ್ಲಿ, ಇಲ್ಲದಿರ್ಲಿ ಎಲ್ಲರಿಗೂ ಬೇಕಾದನ್ನ ಕೊಡ್ತಕ್ಕಂತದ್ದು ಇಕ್ವಾಲಿಟಿ. ಉದಾಹರಣೆಗಳು ಬೇಕಾದಷ್ಟಿವೆ. ಇವೆರಡು ಕಾನ್ಸೆಪ್ಟುಗಳನ್ನು ಕೊಟ್ಟು ದೊಡ್ಡದೊಡ್ಡ ಚರ್ಚೆಗಳನ್ನು ಮಾಡಲಾಗಿದೆ. ಕುವೆಂಪು ಕೂಡಾ – ಬೇರೆಬೇರೆ ಫೂಟಿಂಗ್ನಲ್ಲಿರೋದ್ರಿಂದಾಗಿ, ಅವರವರ ಸಾಮರ್ಥ್ಯದಿಂದಾಗಿ, ಅವರವರ ಸಿದ್ಧತೆಗಳಿಂದಾಗಿ ಈ ಸರ್ವೋದಯದ ಹಂತಕ್ಕೆ ಏಕಕಾಲಕ್ಕೆ ತಲಪಲು ಸಾಧ್ಯವಿಲ್ಲ; ಇದು ನಿರಂತರವಾಗಿ ನಡೆಯತಕ್ಕಂತದ್ದು; ನಿರಂತರವಾಗಿ ವಿಕಾಸ ಆಗ್ಕೊಂಡು ಬರ್ತದೆ ಅಂತಾರೆ. ಅದನ್ನವರು ಬೇರೆಬೇರೆ ರೀತಿಗಳಲ್ಲಿ ಮಂಡಿಸ್ತಾರೆ. ಅವರ ರಾಮಾಯಣದರ್ಶನಂದಲ್ಲೂ ಈ ಮಾತುಗಳು ಮೇಲಿಂದಮೇಲೆ, ಮೇಲಿಂದಮೇಲೆ ಬರ್ತಾನೆ ಇರ್ತವೆ. ಆದ್ರಿಂದ ಪ್ರತಿಯೊಬ್ರು ಕೂಡಾ ಆ ಹಂತಕ್ಕೆ ತಲ್ಪೋಕೆ- ಪೂರ್ಣ ಮಾನವನಾಗೋದಕ್ಕೆ ಪ್ರಯತ್ನವನ್ನ ಮಾಡ್ತಾರೆ. ಇದು ಏಕಕಾಲಕ್ಕೆ ಸಂಭವಿಸತಕ್ಕಂತದ್ದಲ್ಲ. ಅದು ಸಾಮಾಜಿಕವಾದಂತ ಒಂದು ಸಂಭವ. ಸರ್ವೋದಯ ಆಗಿರತಕ್ಕಂತ ಒಂದು ಸಮಾಜವನ್ನ ನೀವು ಕಲ್ಪಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಅದನ್ನ ಅವ್ರೂ ಕೂಡಾ ಹೇಳ್ತಾರೆ- ಇನ್ನು ಹತ್ತು ಸಾವಿರ ವರ್ಷಗಳು ಕಳೆದ್ರೂ ನನ್ನ ಈ ನಾನು ಹೇಳುವ ಈ ಕಲ್ಪನೆ ಬರುತ್ತೆ ಅಂತ ನನ್ಗನಿಸಲ್ಲ; ಆದ್ರೆ ಹೇಳೋದು ನನ್ನ ಕೆಲ್ಸ- ನಾನು ಹೇಳ್ತೀನಿ. ಈ- ವ್ಯಕ್ತಿಗಳ ನಡುವಣ ಸಾಮರ್ಥ್ಯದ ತಾರತಮ್ಯ, ವ್ಯಕ್ತಿಗಳಿಗೆ ಇರತಕ್ಕಂತ ಅವಕಾಶಗಳ ತಾರತಮ್ಯ, ವ್ಯಕ್ತಿಗಳ ಸಿದ್ಧತೆಗಳಲ್ಲಿ ಇರತಕ್ಕಂತ ತಾರತಮ್ಯ- ಇವೆಲ್ಲವೂ ಆಯಾ ವ್ಯಕ್ತಿಗೆ ಮಾತ್ರ ಸಂಬಂಧಪಟ್ಟಿದ್ದಾ, ಅಥವಾ ಅದಕ್ಕೆ ಕಾರಣವಾಗಿರತಕ್ಕಂತ ಸಂಗತಿಗಳು ಸಾಮಾಜಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಇವೆಯಾ ಅನ್ನೋದನ್ನ ಕುವೆಂಪು ಅವರ ವೈಚಾರಿಕ ನೆಲೆಯಲ್ಲಿ ಗ್ರಹಿಸುವುದು ಸ್ವಲ್ಪ ಕಷ್ಟ. ಆದ್ರೆ ಅದಿಲ್ಲ ಅಂತ ಅವ್ರು ಹೇಳೋದಿಲ್ಲ; ಅದನ್ನು ಮೀರೋದಕ್ಕೆ ಒಬ್ಬ ವ್ಯಕ್ತಿಗೆ ಸಾಧ್ಯ ಅನ್ನೋದ್ರಲ್ಲಿ ನಂಬಿಕೆ ಇದೆ ಅವ್ರಿಗೆ. ಹಂಬಲದಿಂದಾಗಿ ಈ ಎಲ್ಲಾ ಉಪಾದಿಗಳನ್ನ ಮೀರೋದಕ್ಕೆ ಸಾಧ್ಯ ಇದೆ ಅನ್ನೋದ್ರಲ್ಲಿ ನಂಬಿಕೆ ಇಟ್ಕೊಂಡೋರವ್ರು. ಅವರ ಆಧ್ಯಾತ್ಮದ ಕಲ್ಪನೆ, ತಪಸ್ಸಿನ ಕಲ್ಪನೆ, ಹಾರೈಕೆಯ ಕಲ್ಪನೆ, ಹಂಬಲಿಕೆಯ ಕಲ್ಪನೆಯಲ್ಲಿ ಇವೆಲ್ಲವೂ ಕೂಡಾ ಕಾಣಿಸಿಕೊಳ್ತವೆ. ನಾನು ಮುಖ್ಯವಾಗಿ ನಾಲಕ್ಕು ನೆಲೆಗಳಲ್ಲಿ ನನ್ನ ಕೆಲವು- ತಕರಾರು ಅಂತ ಹೇಳಲ್ಲ- ನಾನು ಅರ್ಥ ಮಾಡ್ಕೊಳ್ಳೋದಕ್ಕೆ ಕಷ್ಟ ಆಗ್ತಿರತಕ್ಕಂತ ಕೆಲವು ಸಂಗತಿಗಳನ್ನ ನಿಮ್ಮ ಎದುರು ಇಟ್ಟಿದ್ದೀನಿ.
Peepal Media Desk
Peepal Media · ಅಂಕಣ ವಿಭಾಗ