ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿ
ಲಿಂಕ್ ನಕಲಿಸಲಾಗಿದೆ ✓
“..ರವಿವಾರ ಗುರುವಾರ ಬಂದರ ಸಾಕು ಶಾಲೆಯ ಬಿಟ್ಟು ಊರ ಮುಂದಿನ ಮೂರು ದಾರಿ ಖತ್ರಿಯೊಳಗ ಹಾಜರಾಗಿ, ಅಲ್ಲಿ ಇಡುತ್ತಿದ್ದ ಸಾಮಗ್ರಿಗಳ ಮೋಹದ ಜಾಲದಲ್ಲಿ ಬಿದ್ದು ಅವುಗಳನ್ನು ಎತ್ತಿಕೊಳ್ಳುವ ಆಟದಲ್ಲಿ ಮೈಮರೆತು ಕಳೆದುಹೋಗುತ್ತಿದ್ದೆವು..” ಲೇಖಕರಾದ ಆನಂದ ಬೋವಿಯವರ ಅಂಕಣ ಬರಹ
ಮುಂಜ ಮುಂಜಾನೆ ಮೂರು ದಾರಿ ಖತ್ರಿಯೊಳಗ ಮಂದಿ ಕೂಡಿದ್ದು ನೋಡಿ ಖಾತ್ರಿಯಾಗಿತ್ತು. ಈ ಮಂದಿ ತಾವು ಮುಂದ ಹೋಗುವದಿಲ್ಲ ಹೋಗುವವರನ್ನು ಮುಂದಕ್ಕೆ ಕಳಹಿಸುವದಿಲ್ಲ. ಯಾಕಂದ್ರ ಅವರ ತಲಿಯೊಳಗ ತುಂಬಿರುವ ಅನುಮಾನ ಶತಶತಮಾನ ಕಳದ್ರೂ ಹೊರಗ ಹೋಗುವ ಜಾಯಮಾನದಲ್ಲ, ಈ ಮನುಷ್ಯ ಪ್ರಾಣಿ ಭೂಮಿ ಮ್ಯಾಗ ಕಾಲಿಡುವಾಗ ಜೊತೆಗೆ ಕಟಕೊಂಡ ಬಂದಿರಬೇಕು. ಅಷ್ಟ ಮಂದಿ ಹೂಯ್ಯಂತ ಕೂಡಿದ್ರೂ ಅವರ ಕಡೆ ಯಾವ ಪರಿಹಾರನು ಇರಲಿಲ್ಲ. ಆದರ ಇವರ ಅನುಮಾನ ಮಾತ್ರ ಇವರನ್ನ ಮತ್ತ ಮತ್ತ ಕುಗ್ಗಿಸತ್ತಿತ್ತು. ಅವರ ಮ್ಯಾಲ ಇವರು, ಇವರ ಮ್ಯಾಲ ಅವರು ಹಂಗ ಈಡೀ ಊರ ಮಂದಿ ಮ್ಯಾಲ ಸಂಶಯಪಟ್ಟು ತಮ್ಮ ಎದೆಯೊಳಗಿನ ಬೈಗುಳುಗಳ ಉಗಳುಗಳಿಗೆ ಶಬ್ದದ ರೂಪ ಕೊಟ್ಟು ತಮ್ಮ ಮನಸ್ಸಿಗೆ ತಾವೇ ಸಮಾಧಾನ ಪಡುತ್ತಿದ್ದರು. ಅಂದ್ರ ಅಲ್ಲಿ ಏನಾಗಿತ್ತು..? ಈ ಪ್ರಶ್ನೆಗೆಲ್ಲಾ ಉತ್ತರ ಬಹಳ ಗಂಭೀರವಾದದ್ದು ಅಲ್ಲ. ಬಹಳ ಕುತೂಹಲ ಪಡಬೇಕಾಗಿಲ್ಲ. ಮೂರು ದಾರಿಯ ಖತ್ರಿ ಅಂದರ ಸಾಕು. ನಮ್ಮ ಹಳ್ಳಿಗಳ ಮೌಡ್ಯ ವಿಜೃಂಭಿಸಿ ಬಿಡುತ್ತೆ. ನಮ್ಮ ಮಂದಿ ಮಂಗಳ ಗ್ರಹಕ್ಕೂ ಹಾರತಾರೇನೋ..? ಆದರ ಈ ಮೂರ ದಾರಿ ಖತ್ರಿಯೊಳಗ ಬಿದ್ದ ಲಿಂಬೆ ಹಣ್ಣು ದಾಟಲಿಕ್ಕೆ ಗಡ ಗಡ ನಡುಗಿ ಕಾಲ ಅಲಗಾಡಿಸತಾರು, ಆಕಡೆ ಈಕಡೆ ಒಂದೊಂದು ದಾರಿ ಇದರ ನಡವೆ ಬರುವ ಇನ್ನೋಂದು ದಾರಿ ಸಂಗಮಿಸುವ ಈ ಮೂರು ದಾರಿ ಸರ್ಕಲ್ ಅಂದರ ಈಗಲೂ ನಮನ್ನು ನೋಡಿ ನಗುವ ವಿಸ್ಮಯವೇ ಸರಿ,
ಬಣ್ಣ ಬಣ್ಣದ ರಂಗೋಲಿ ಹಾಕಿ, ಅದರ ಮ್ಯಾಲ ಹೊಸ ಮೊರ ಇಟ್ಟು ಅದರ ತುಂಬ ತುಂಬಿರುವ ಅಕ್ಕಿ ಎಲೆ ಅಡಕಿ, ಬಾಳೆಹಣ್ಣು ಕುಂಕುಮ ಬಳಿದುಕೊಂಡ ಲಿಂಬೆ ಹಣ್ಣು ಮ್ಯಾಲೊಂದಿಷ್ಟು ಚಿಲ್ಲರೆ ರೊಕ್ಕ. ಯಾರಿಗುಂಟು, ಯಾರಿಗಿಲ್ಲ. ಆದರೂ ಅಷ್ಟೊಂದ ಧವಸ ಧಾನ್ಯ ಇಟ್ಟಿದ್ದರೂ ಯಾರು ಅದರ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಹೋಗಲಿ ಅದನ್ನು ದಾಟಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿಲ್ಲ, ಅಷ್ಟೊಂದು ಮೋಡಿ ಮಾಡಿದ ಖತ್ರಿ ಇವರನೆಲ್ಲಾ ನಿಲ್ಲಿಸಿ ಬಿಟ್ಟಿದೆ. ಅವರು ಮೊದಲು ದಾಟಲಿ, ಇವರು ಮೊದಲು ದಾಟಲಿ ಅವರ ಮುಖ ಇವರು ಅವರ ಮುಖ ಇವರು ನೋಡುತ್ತ, ಮೊದಲ ದಾಟಿ ಹೋದವರಿಗೆ ತಟ್ಟುವ ಪಾಪದ ಲೆಕ್ಕ ಹಾಕುತ್ತ ತಲೆ ಕೆಬರುತ್ತಿದ್ದರು. ಯಾರ ಮನ್ಯಾಗ ಯಾವ ತ್ರಾಸ ಇತ್ತೋ… ಯಾರಿಗೆ ಗೊತ್ತು. ಅಥವಾ ಯಾರ ಮ್ಯಾಲ ಅವರ ಹೊಟ್ಟೆಕಿಚ್ಚು ಇತ್ತೋ. ಮತ್ತ ಅವರ ಮಾಡಿದ ಪಾಪ ತೊಳೆದುಕೊಳ್ಳುವ ಪ್ರಾಯಶ್ಚಿತ್ತದ ಉಪಶಮನದ ಯೋಚನೆ ಹೋಳೆದಿತ್ತೋ ಏನೋ, ಅವರ ಮ್ಯಾಲ ಬಿದ್ದ ನೆದರ ತಗ್ಯಾಕ ಹೋಗದಿರಲುಬಹುದು. ಹೀಂಗ ಏನೇನ ನೆವಾ ಅದವಲ್ಲಾ ಅದಕ್ಕೆಲ್ಲ ಹೊಳೆಯುವ ಉಪಾಯ ಅಂದರನ ಮೂರು ದಾರಿಯ ಖತ್ರಿ. ತಮ್ಮ ತಮ್ಮ ನಸೀಬನೆಲ್ಲಾ ಈ ದಾರಿಯ ಮ್ಯಾಲ ಹಾಕಿ ಗುರುವಾರ, ರವಿವಾರ ಮತ್ತ ಅಮವಾಸೆಗೊಮ್ಮೆ ಇಲ್ಲಿ ಹಬ್ಬವಾಗುದಂತು ಸತ್ಯ.
ಖತ್ರಿಯೊಳಗ ಈ ಲಿಂಬೆಹಣ್ಣು ಕಂಡಾಗಲೆಲ್ಲಾ ನನ್ನ ಬಾಲ್ಯ ಬಹಳ ನೆನಪಾಗತೈತಿ. ಅದರಲ್ಲೂ ಐನಾರ ಗೆಳೆಯನೊಬ್ಬನ ತುಂಟತನ ನಗೆ ತರಸತೈತಿ. ಆಗ ಅವನಿಗಿದ್ದ ಧೈರ್ಯ, ಧಿಮಾಕು ವಾಚಾಳಿತನ ಇನ್ನು ಸುಳಿದಾಡತಾವ, ಈಗಲೂ ಸಹ ಜನ ಮೂರು ದಾರಿ ಒಳಗ ಲಿಂಬೆ ಹಣ್ಣು ಒಗೆಯುದನ್ನು ಬಿಟ್ಟಿಲ್ಲ. ಹಾಗೇ ಅದಕ್ಕೆ ಹೆದರಿ ದೂರ ಸರಿಯುದನ್ನು ಬಿಟ್ಟಿಲ್ಲ. ಜಾಗೃತಿಯೇ ಇಲ್ಲದ ನಮ್ಮ ಬಾಲ್ಯ ಕಾಲದಲ್ಲಿ ನಮಗೆಲ್ಲಾ ಒಳದಾರಿಗಳನ್ನು ತೋರಿಸಿ ಹುಸಿ ಮೌಡ್ಯತೆಗಳ ಬಗ್ಗೆ ಹೊಸ ಭರವಸೆ ನೀಡಿ ಜಬರದಸ್ತವಾಗಿ ಕೆಲವೊಂದು ಮೂಢನಂಬಿಕೆಗಳ ಬಗ್ಗೆ ವಿಚಾರಿಸುವಂತೆ ಪ್ರೇರೆಪಣೆ ನೀಡಿದ್ದ. ಅವನಲ್ಲಿದ್ದ ಧೈರ್ಯಕ್ಕೆ ಹುಚ್ಚುಸಾಹಸಕ್ಕೆ ಒಮ್ಮೊಮ್ಮೆ ಅವನ ಜಾತಿಯು ಕಾರಣವಾಗಿತ್ತು. ಆ ನಂಬಿಕೆ ಈಗಲು ಕೂಡ ಹಂಗ ಐತಿ. ಆಂವ ಏನ ತಪ್ಪ ಮಾಡಿದ್ರೂ ನಡಿತ್ತಿತ್ತು. ಬಾರಾ ಕೂನ ಮಾಪ್ ಅಂತಾರಲ್ಲಾ ಹಂಗ. ಅಂವ ನಮ್ಮನ್ನ ಒದ್ದರೂ ನಡಿತ್ತಿತ್ತು. ಆಂವ ಒದ್ದಾಗಲೊಮ್ಮೆ ನಿನ್ನ ಶಾಪ ಬಿಟ್ಟ ಹೋಯಿತು ಅಂತಿದ್ದ. ಆದರ ನಾವ ಅಪ್ಪಿ ತಪ್ಪಿ ಅಂವಗ ಕಾಲ ಏನಾದರೂ ಬಡಿಸಿದರ ನಮ್ಮ ಕಾಲಾಗ ಹುಳ ಬೀಳತಾವಂತ ಪೋಜ ಕೋಡುತ್ತಿದ್ದ. ಒಮ್ಮೆ ಆಟಾ ಆಡುವಾಗ ಅಂವಗ ಕಾಲ ಬಡಿಸದ್ದಕ್ಕೆ ಎಷ್ಟೋ ದಿನ ಆ ಖಿನ್ನತೆಯಿಂದ ನಾನು ಹೊರಗ ಬಂದಿರಲಿಲ್ಲ. ಎಷ್ಟೋ ಸಾರಿ ಕಾಲು ಕೈ ನೋಡಕೊಂಡು ಹುಳ ಬಿದ್ದಾವನ ಅಂತೇಳಿ ಹುಡಕಾಡುತ್ತಿದ್ದೆ.
ಆ ಸ್ವಾಮಿಯ ಜೋಡಿ ಅಡ್ಡಾಡಿ ಅಡ್ಡಾಡಿ ನಾವು ಒಮ್ಮೊಮ್ಮೆ ಅವನಂಗ ದೈವಿಪುರುಷರಾಗಿ ಬೀಡತ್ತಿದ್ದಿವಿ. ಈ ಮೂರು ದಾರಿಯ ಖತ್ರಿಯ ಕಳವಳಗಳಿಗೆ ಆಂವ ಒಂದು ಖತರನಾಕ ಐಡಿಯಾ ಹೇಳಿಕೊಟ್ಟಿದ್ದ. ಯಾರಾದರೂ ಎಸೆದಿದ್ದ ಆ ವಸ್ತುಗಳ ಮ್ಯಾಲ ನಮ್ಮ ಎಡಗಾಲನ್ನು ಇಟ್ಟು ಮಾರು ಸಾರಿ ದಾಟಬೇಕು. ನಂತರ ಅವುಗಳಿಗೆ ನಮಸ್ಕಾರ ಮಾಡಿ ಅವುಗಳನ್ನು ಎತ್ತಿಕೊಂಡರೆ, ಏನು ಆಗುವದಿಲ್ಲ. ಅಂವ ಕಲಿಸಿದ ಮಂತ್ರ ಮೊದಮೊದಲು ನಮಗ ಭಯ ತರಿಸುತ್ತಿತ್ತು. ಆದರ ಅದರ ಕಾರ್ಯಾಚರಣೆ ಅವನೇ ಆರಂಭಿಸಿದ. ಮೂರು ದಾರಿಯ ಖತ್ರಿಯೊಳಗ ಮಂದಿ ಕಡಿಮೆಯಾದ ಮ್ಯಾಲ ಆಂವ ಗಬಕ್ಕಗಬಕ್ಕ ಮೂರು ಸಾರಿ ಜೀಗದಂಗ ಮಾಡಿ. ದೇವರ ದೇವರ ಅನ್ನಕ್ಕೊಂತ ಕೈ ಮುಗಿದು ಅಲ್ಲಿ ನಿಂಬೆಹಣ್ಣಿನ ಕೂಡ ಇಡುತ್ತಿದ್ದ ಬೆಯಿಸಿದ ಮೊಟ್ಟೆ ಇಡಕೊಂಡು ಓಡಿ ಬೀಡುತ್ತಿದ್ದ. ಆ ತತ್ತಿ ತಿನ್ನೋ ಆಸೆಯಿಂದ ನಾವು ನಮಗೊಂದಿಷ್ಟು ನೀಡು ಅನ್ನತ ಅವನ ಬೆನ್ನು ಬಿಳತಿದ್ದಿವಿ. ಬರಬರುತ್ತ ಆ ಲಿಂಬೆಹಣ್ಣಿನ ಜೊತೆ ಕಾಯಂ ಆಗಿ ಇರುತ್ತಿದ್ದ ಚಿಲ್ಲರೆ ರೊಕ್ಕ ನಮ್ಮ ಪಾಕೀಟ್ಮನಿ ಆಯಿತು. ಈ ಕಾರ್ಯಾಚರಣೆಗಾಗಿ ಒಂದು ಗುಂಪು ಕಟ್ಟಿಬಿಟ್ಟಿವಿ. ಆಂವ ಹೇಳಿ ಕೊಟ್ಟ ತಂತ್ರ ದೊಡ್ಡ ಫಲ ನೀಡಿತು. ಅಲ್ಲಿ ಸಿಗುತ್ತಿದ್ದ ಹಣ್ಣು ಚಿಲ್ಲರೆ ಹಣ, ಮೊಟ್ಟೆ, ಸಣ್ಣಪುಟ್ಟ ನಮ್ಮ ಆಸೆಗಳಿಗೆ ಆಹಾರವಾಗಿತ್ತು.
ರವಿವಾರ ಗುರುವಾರ ಬಂದರ ಸಾಕು ಶಾಲೆಯ ಬಿಟ್ಟು ಊರ ಮುಂದಿನ ಮೂರು ದಾರಿ ಖತ್ರಿಯೊಳಗ ಹಾಜರಾಗಿ, ಅಲ್ಲಿ ಇಡುತ್ತಿದ್ದ ಸಾಮಗ್ರಿಗಳ ಮೋಹದ ಜಾಲದಲ್ಲಿ ಬಿದ್ದು ಅವುಗಳನ್ನು ಎತ್ತಿಕೊಳ್ಳುವ ಆಟದಲ್ಲಿ ಮೈಮರೆತು ಕಳೆದುಹೋಗುತ್ತಿದ್ದೇವು.
ಯಾವದಾದ್ರೂ ಎಷ್ಟ ದಿನ ಇರತೈತಿ. ನಮ್ಮ ಸಾಹಸಗಾಥೆಯ ವಿಚಾರಗಳು ಮನೆ ಕದ ಬಡಿಯಾಕ ತಡ ಆಗಲಿಲ್ಲ. ಒಮ್ಮೆ ನಮ್ಮ ಅವ್ವ ಮೂರು ದಾರಿಯ ಖತ್ರಿಯೊಳಗಿಂದ ದುಬಾ ದಬಾ ದುಬ್ಬಕ್ಕ ಚಪ್ಪರಸಕೊತ ನನ್ನ ಮೆರವಣಿಗೆ ಮಾಡಿದ ಮ್ಯಾಲ, ಈ ಎಡಗಾಲ ಮುಂದ ಮಾಡಿ ಲಿಂಬೆಹಣ್ಣಿನ ಮ್ಯಾಲ ಜೀಗಿಯುವದನ್ನ ಬಿಟ್ಟಬಿಟ್ಟಿನಿ ಕಾಣಿಸತೈತಿ.
ಈ ವಿಷಯಗಳೆಲ್ಲಾ ಇಂದು ನಮಗ ಹಾಸ್ಯದ ವಸ್ತುಗಳಾಗಬಹುದು. ಆದರೂ ಇಂದಿನ ಕಾಲಮಾನದಲ್ಲೂ ಇಂತಹ ಘಟನೆಗಳನ್ನ ನೋಡಿದ್ರ ನಾವ ಮತ್ತ ಶಿಲಾಯುಗಕ್ಕ ಹೊಂಟೇವಿ ಏನೋ ಅನ್ನಿಸತೈತಿ. ನಮ್ಮ ನಶೀಬನ್ನು ಹಣೆಬರಹವನ್ನು ಅಸೂಹೆಯನ್ನು ಅನಾರೋಗ್ಯವನ್ನು ಲಿಂಬೆಹಣ್ಣಿನ ಬಣ್ಣಕ್ಕೆ ಹೋಲಿಸಿ ಖತ್ರಿಯೊಳಗ ಎಸೆದ್ರ ಎಲ್ಲಾ ಬರೊಬ್ಬರಿ ಆಗುವಂಗ ಇದ್ರ, ಇಷ್ಟೆಲ್ಲ ಯಾಕ ಕಷ್ಟ ಪಡಬೇಕು. ಈ ಮೌಡ್ಯತೆ ಇನ್ನೂ ಎಷ್ಟು ಶತಮಾನಗಳ ತನಕ ನಮ್ಮನ್ನು ಕುಬ್ಬರನ್ನಾಗಿ ಮಾಡತೈತಿ ಏನೋ.? ಈ ಮೂಢನಂಬಿಕೆಗಳ ಪರಮಾಧಿಯೊಳಗೆ ನಾವು ಬಂಧನವಾಗಿರುವುದು ಹಾಗೂ ಹೊರಬರದೆ ಇರುವುದು ತುಂಬಾ ಅವಮಾನದ ಸಂಗತಿ, ಇತ್ತಿಚಿನ ದಿನಗಳಲ್ಲಿ ಜನ ಸಹ ಇಂತಹ ಸಮೂಹಸುನ್ನಿಗಳಿಗೆ ಒಳಗಾಗಿ ತಮ್ಮ ಪ್ರಾಣಗಳನ್ನೆ ಕಳೆದುಕೊಂಡಿದ್ದಾರೆ. ಎಷ್ಟು ಶಿಕ್ಷಣವಂತರಾದರೇನು.? ಅರಿವು ಮೂಡದ ಸಮಾಜದಲ್ಲಿ ಬದುಕುತ್ತಿದ್ದೇವೆ. ಈಗೀಗ ಅವುಗಳನ್ನೆ ನಂಬಿಕೆ, ಪರಂಪರೆ ಅಂತೇಳಿ ಮೌಡ್ಯತೆಗಳನ್ನೆ ವಿಜೃಂಭಿಸುತ್ತಿದ್ದಾರೆ. ಮುಗ್ಧ ಜನರ ಭಾವನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಿಸಿಕೊಳ್ಳುತ್ತಿದ್ದಾರೆ. ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವದನ್ನ ಮೂಡಿಸುವಲ್ಲಿ ವಿಫಲರಾಗುತ್ತಿದ್ದೇವೆ. ಇತ್ತಿಚಿನ ದಿನಗಳಲ್ಲಿ ಶಿಕ್ಷತರೆ ಮೌಡ್ಯಬಿತ್ತುವ ಕಾರ್ಯ ಮಾಡುತಿರುವುದು ಶೋಚನೀಯ.
ಮುಂಜಾನೆ ಕೂಡಿದ್ದ ಮಂದಿಯೆಲ್ಲಾ ತಮ್ಮ ತಮ್ಮ ದಾರಿ ಹಿಡಿದು ಹೋದ ಮ್ಯಾಲ ಮೂರು ದಾರಿಯ ಖತ್ರಿಯಲಿ ಅನಾಥವಾಗಿದ್ದ ಆ ವಸ್ತುಗಳನ್ನು ದೂರದಿಂದ ದಿಟ್ಟಿಸಿ ನೋಡುತ್ತಿದ್ದೆ. ಬಾಲ್ಯದ ಆ ಸಾಹಸ ನೆನಪಾಗಿ ಹಂಗಿಸುತ್ತಿತ್ತು. ಎಲ್ಲಿಂದಲೋ ಬಂದ ಹಸಿದ ನಾಯಿ ಗಬ ಗಬನೆ ತಿನ್ನಲು ಆರಂಭಿಸಿತು. ಆ ಸನ್ನಿವೇಶ ನೋಡಿ ತುಂಬಾ ಖುಷಿಯಾಯಿತು, ಕೊನೆಗೆ ಹಸಿದ ಹೊಟ್ಟೆಯಾದರು ತುಂಬಿತೆಂದು ಮನ ನಲಿವಾಯಿತು. ಆದರೆ ನಾಯಿಯು ಸಹ ತಿನ್ನದೆ ಬಿಟ್ಟ ಕುಂಕುಮ ಬಡಿದುಕೊಂಡ ಲಿಂಬೆಹಣ್ಣು ನನ್ನ ನೋಡಿ ಅಣಕಿಸತೊಡಗಿತು.
Peepal Media Desk
Peepal Media · ಅಂಕಣ ವಿಭಾಗ