ಕಲಬುರಗಿ ಸಮೀಪ ಶರಣರ ವಚನ ಪರಂಪರೆಗೆ ಹೊಸ ಸ್ಪರ್ಶ; ವಚನ ಮಂಟಪ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆ
ಲಿಂಕ್ ನಕಲಿಸಲಾಗಿದೆ ✓
ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಹಾಗೂ ಅನುಭವ ಕೇಂದ್ರ ಸ್ಥಾಪನೆ.. ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳ ಅಭಿವೃದ್ಧಿಗೂ ಸರ್ಕಾರದ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಶರಣರ ವಚನ ಪರಂಪರೆ, ಸಾಮಾಜಿಕ ಕ್ರಾಂತಿ ಹಾಗೂ ಕನ್ನಡದ ಸಾಂಸ್ಕೃತಿಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಲಬುರಗಿ ಸಮೀಪದ ಕಪನೂರು ಗ್ರಾಮದಲ್ಲಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯೋಜನೆಯ ವಿನ್ಯಾಸ ಹಾಗೂ ಅನುಷ್ಠಾನದ ರೂಪುರೇಷೆಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವಚನ ಮಂಟಪವು ಕೇವಲ ಸ್ಮಾರಕವಾಗಿ ಉಳಿಯದೆ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಲಬುರಗಿ ತಾಲ್ಲೂಕಿನ ಕಪನೂರು ಗ್ರಾಮದ ಸರ್ವೆ ನಂ. 44/1ರಲ್ಲಿರುವ 6 ಎಕರೆ 6 ಗುಂಟೆ ಜಾಗದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ವಿವಿಧ ವಾಸ್ತುಶಿಲ್ಪಿಗಳು ಸಿದ್ಧಪಡಿಸಿರುವ ವಿನ್ಯಾಸ ಮತ್ತು ಪರಿಕಲ್ಪನಾ ವರದಿಗಳನ್ನು ಸಚಿವರು ಸಭೆಯಲ್ಲಿ ಪರಿಶೀಲಿಸಿದ್ದಾರೆ.
ವಚನ ಮಂಟಪದೊಂದಿಗೆ ಶರಣರ ಬದುಕು, ಸಾಧನೆ ಮತ್ತು ವಚನ ಚಳವಳಿಯ ಇತಿಹಾಸವನ್ನು ಪರಿಚಯಿಸುವ ವಸ್ತುಸಂಗ್ರಹಾಲಯ, ವ್ಯಾಖ್ಯಾನ ಕೇಂದ್ರ, ಅನುಭವ ಕೇಂದ್ರ ಹಾಗೂ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆಯೂ ಇದೆ.
ಬಸವಣ್ಣನವರು ಸೇರಿದಂತೆ ವಚನ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಶರಣ-ಶರಣೆಯರ ಜೀವನಚರಿತ್ರೆ, ಭಾವಚಿತ್ರಗಳು ಹಾಗೂ ವಚನಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದಂತಹ ವಚನ ಸಾಹಿತ್ಯದ ಮೂಲ ಆಶಯಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಪ್ರಸ್ತುತಿಗೆ ತಕ್ಕ ವಿನ್ಯಾಸದ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.
ವಚನ ಸಾಹಿತ್ಯದ ಕುರಿತು ಅಧ್ಯಯನ ನಡೆಸುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಆಸಕ್ತರಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಉಪನ್ಯಾಸ, ವಿಚಾರ ಸಂಕಿರಣ, ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತೆರೆದ ಸಭಾಂಗಣ ನಿರ್ಮಿಸುವ ಯೋಜನೆಯೂ ಇದೆ.
ಜಿಲ್ಲೆಯ ಐತಿಹಾಸಿಕ ತಾಣಗಳ ಅಭಿವೃದ್ಧಿಗೂ ಆದ್ಯತೆ
ವಚನ ಮಂಟಪದ ಯೋಜನೆಯ ಜತೆಗೆ ಕಲಬುರಗಿ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಸರ್ಕಾರ ಗಮನಹರಿಸಿದೆ.
ಕಾಳಗಿ ತಾಲ್ಲೂಕಿನ ಸೂರ್ಯನಾರಾಯಣ ದೇವಾಲಯದ ಸಂರಕ್ಷಣಾ ಕಾಮಗಾರಿ, ಸೇಡಂ ತಾಲ್ಲೂಕಿನ ಮಳಖೇಡ ಕೋಟೆಯ ಅಭಿವೃದ್ಧಿ ಹಾಗೂ ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಸಂರಕ್ಷಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಇದರೊಂದಿಗೆ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿಯಲ್ಲಿರುವ ಐತಿಹಾಸಿಕ ಬೌದ್ಧ ನೆಲೆ ಮತ್ತು ಅಲ್ಲಿನ ಪ್ರಾಚ್ಯ ಅವಶೇಷಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸುವುದರ ಜತೆಗೆ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಆಕರ್ಷಣೀಯ ತಾಣಗಳನ್ನಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಆಶಯವಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವುದರೊಂದಿಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವಿಡಿಯೊ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
Peepal Media Desk
Peepal Media · ರಾಜಕೀಯ ವಿಭಾಗ