ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆಗೆ ಸಿದ್ಧತೆ: 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
ಲಿಂಕ್ ನಕಲಿಸಲಾಗಿದೆ ✓
ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಬೃಹತ್ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ರಾಜ್ಯ ಸಹಾಯಕ ವನ್ಯಜೀವಿ ವಾರ್ಡನ್ ಮನೋಜ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆಯ ರೂಪುರೇಷೆಗಳನ್ನು ವಿವರಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಆನೆ-ಮಾನವ ಸಂಘರ್ಷ ತಡೆಗಟ್ಟುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸುದೀರ್ಘ ಸಭೆ ನಡೆಸಲಾಗಿದೆ. ಆನೆಗಳನ್ನು ಓಡಿಸುವುದು ಸುಲಭದ ಕೆಲಸವಲ್ಲ. ಇದು ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯಾಗಿದ್ದು, ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕಿದೆ ಎಂದು ತಿಳಿಸಿದರು.
ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರು ಗುಂಪುಗಳಾಗಿ 50ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳ ಚಲನವಲನವನ್ನು ಸಂಪೂರ್ಣವಾಗಿ ಗ್ರಹಿಸಿ ಸಹಜವಾಗಿ ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸುವುದು ಪ್ರಮುಖ ಉದ್ದೇಶವಾಗಿದೆ. ಆನೆಗಳು ಚದುರಿದರೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಹಾಸನ ಮತ್ತು ಚಿಕ್ಕಮಗಳೂರು ಡಿಸಿಎಫ್‌ಗಳ ಜಂಟಿ ಸಭೆ ನಡೆಸಿ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ. ಆರ್‌ಆರ್‌ಟಿ, ಇಟಿಎಫ್ ಸಿಬ್ಬಂದಿ ಹಾಗೂ ಸಾಕಾನೆಗಳ ಸಹಕಾರ ಪಡೆಯಲಾಗುವುದು. ಥರ್ಮಲ್ ಡ್ರೋನ್‌ಗಳು ಮತ್ತು ವಿಶೇಷ ವಾಹನಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಯಲಿದೆ.
ಆರು ತಂಡಗಳ ರಚನೆ
ಕಾರ್ಯಾಚರಣೆಗೆ ಕನಿಷ್ಠ 350ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಅಗತ್ಯವಿದ್ದು, ಆರು ಆನೆಗಳ ಗುಂಪುಗಳನ್ನು ಗಮನದಲ್ಲಿಟ್ಟುಕೊಂಡು ಆರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ಒಂದು ಥರ್ಮಲ್ ಡ್ರೋನ್, ವನ್ಯಜೀವಿ ವೈದ್ಯರು ಹಾಗೂ ಪ್ರತ್ಯೇಕ ಸಾಕಾನೆಗಳನ್ನು ನಿಯೋಜಿಸಲಾಗುತ್ತದೆ.
ಪೊಲೀಸ್ ಮತ್ತು ಕಂದಾಯ ಇಲಾಖೆ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಲಿದ್ದು, ಪ್ರತಿ ತಂಡದಲ್ಲಿ ಒಬ್ಬ ಡಿವೈಎಸ್ಪಿ ಹಾಗೂ ಒಬ್ಬ ಸಹಾಯಕ ಆಯುಕ್ತರನ್ನು ಒಳಗೊಂಡ ಸಮನ್ವಯ ವ್ಯವಸ್ಥೆ ರೂಪಿಸಲಾಗಿದೆ. ಆನೆಗಳ ಚಲನವಲನ ಹಾಗೂ ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಮನೋಜ್ ಕುಮಾರ್ ತಿಳಿಸಿದರು.
ಮೊದಲು ಜೀವಹಾನಿಗೆ ಕಾರಣವಾದ ಆನೆಗಳಿಗೆ ಟಾರ್ಗೆಟ್
ಇದುವರೆಗೆ ಇಂತಹ ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆದಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಹಕರಿಸಬೇಕು. ಕಾರ್ಯಾಚರಣೆಯ ಪ್ರಮುಖ ಉದ್ದೇಶ ಮತ್ತೊಂದು ಜೀವಹಾನಿ ಸಂಭವಿಸದಂತೆ ತಡೆಯುವುದಾಗಿದೆ. ಈ ನಿಟ್ಟಿನಲ್ಲಿ ಮೊದಲು ಜನರ ಪ್ರಾಣಹಾನಿಗೆ ಕಾರಣವಾದ ಆನೆಗಳನ್ನು ಸೆರೆಹಿಡಿಯಲು ಯೋಜನೆ ರೂಪಿಸಲಾಗಿದೆ ಎಂದರು.
ಈಗಾಗಲೇ ಏಳು ಸಾಕಾನೆಗಳು ಆಗಮಿಸಿದ್ದು, ಇನ್ನೂ ಏಳರಿಂದ ಎಂಟು ಸಾಕಾನೆಗಳು ಕಾರ್ಯಾಚರಣೆಗೆ ಆಗಮಿಸಲಿವೆ. ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಆನೆ-ಮಾನವ ಸಂಘರ್ಷವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಹಾಯಕ ವನ್ಯಜೀವಿ ವಾರ್ಡನ್ ಮನೋಜ್ ಕುಮಾರ್ ತಿಳಿಸಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ