ಗೋಧ್ರಾ ಹತ್ಯಾಕಾಂಡ ಕೇಸ್, ಅಪರಾಧಿಯ ಜೀವಾವಧಿ – ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: 2002ರ ಗೋಧ್ರಾ ರೈಲು ದಹನ (Godhra Train Case) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬರ ಶಿಕ್ಷೆಯನ್ನು ಅನಾರೋಗ್ಯದ ಕಾರಣ ನೀಡಿ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಅಮಾನತುಗೊಳಿಸಿದೆ. ಅಪರಾಧಿ ಇರ್ಫಾನ್ ಸಿರಾಜ್ ಪಡಾ (Irfan) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.
18 ವರ್ಷಗಳ ಜೈಲು ವಾಸ, ಗುಜರಾತ್ ಸರ್ಕಾರದ ನಿಲುವು
ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದ ಅವರ ಪರ ವಕೀಲರು, ಪಡಾ ಅವರು ಈಗಾಗಲೇ 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂದು ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ ಸರ್ಕಾರದ ಪರ ವಕೀಲರು ಈ ಅರ್ಜಿಗೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.
ಕೇವಲ ವೈದ್ಯಕೀಯ ಕಾರಣಕ್ಕೆ ಶಿಕ್ಷೆ ಅಮಾನತು
ಪ್ರಕರಣದ ಸದ್ಯದ ಸನ್ನಿವೇಶ ಮತ್ತು ವಾಸ್ತವಿಕ ಅಂಶಗಳನ್ನು ಗಮನಿಸಿ, ಅರ್ಜಿದಾರರಿಗೆ ಕೇವಲ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಮಾತ್ರ ಶಿಕ್ಷೆಯನ್ನು ಅಮಾನತುಗೊಳಿಸಲು ನಾವು ಒಲವು ತೋರಿದ್ದೇವೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಗೋಧ್ರಾ ಪ್ರಕರಣದ ಹಿನ್ನೆಲೆ – ನ್ಯಾಯಾಲಯದ ಹಾದಿ
2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾ ಬಳಿ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆಯಲ್ಲಿ 59 ಮಂದಿ ಸಾವನ್ನಪ್ಪಿದ್ದು, ಈ ದುರಂತದ ಬಳಿಕ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಮಾರ್ಚ್ನಲ್ಲಿ ಬಂಧಿತರಾಗಿದ್ದ ಇರ್ಫಾನ್ ಸಿರಾಜ್ ಪಡಾ ಅವರಿಗೆ ಹಾಗೂ ಇತರ ಹಲವರಿಗೆ 2011ರ ಮಾರ್ಚ್ನಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಬಳಿಕ ಈ ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಯನ್ನು 2017ರ ಅಕ್ಟೋಬರ್ನಲ್ಲಿ ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಇನ್ನೂ ಬಾಕಿ ಇರುವಂತೆಯೇ, ಅನಾರೋಗ್ಯದ ಆಧಾರದ ಮೇಲೆ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ನೀಡಿದೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ