ಊರ ಬಯಲಿನ ನಡುವೆ : ಈಗ ಅಂಗಳವೂ ಇಲ್ಲ, ಆಡುವವರೂ ಇಲ್ಲ!
ಲಿಂಕ್ ನಕಲಿಸಲಾಗಿದೆ ✓
“..ಈಗ ಬಹುತೇಕ ಎಲ್ಲರ ಮನೆಗಳ ಮುಂದೆ ಸಿಮೆಂಟ್ ರಸ್ತೆಗಳು ರಾರಾಜಿಸುತ್ತಿವೆ. ಕಲ್ಲು, ಮಣ್ಣು, ಕಟ್ಟಿಗೆಗಳಿಂದ ನಿರ್ಮಾಣವಾಗಿದ್ದ ಮನೆಗಳು, ಗುಡಿಸಲುಗಳು ನಿಧಾನವಾಗಿ ಮರೆಯಾಗುತ್ತಿವೆ..” ವೀರಪ್ಪ ಹ. ತಾಳದವರ ಅವರ ಬರಹದಲ್ಲಿ
ಒಂದು ಕಾಲವಿತ್ತು. ಮನೆಗಳ ಮುಂದೆ ವಿಶಾಲವಾದ ಅಂಗಳಗಳಿದ್ದವು. ಅಂಗಳದಲ್ಲಿ ಮಕ್ಕಳ ನಗು, ಕೂಗು, ಆಟದ ಸದ್ದು ಸದಾ ಕೇಳಿಬರುತ್ತಿತ್ತು. ಸಂಜೆಯಾದರೆ ಸಾಕು, ಊರಿನ ಮಕ್ಕಳೆಲ್ಲ ಒಂದೆಡೆ ಸೇರಿ ಆಟವಾಡುತ್ತಿದ್ದ ದೃಶ್ಯವೇ ಒಂದು ಸಂಭ್ರಮವಾಗಿತ್ತು. ಆದರೆ ಇಂದು ಅಂಗಳವೂ ಇಲ್ಲ, ಆಡುವ ಮಕ್ಕಳೂ ಇಲ್ಲ. ಕಾಲ ಬದಲಾಗಿದೆ, ಹಾಗೆ ಮನುಷ್ಯರ ಬದುಕಿನಒಡನಾಟವೂ ಬದಲಾಗಿದೆ.
ಈಗ ಬಹುತೇಕ ಎಲ್ಲರ ಮನೆಗಳ ಮುಂದೆ ಸಿಮೆಂಟ್ ರಸ್ತೆಗಳು ರಾರಾಜಿಸುತ್ತಿವೆ. ಕಲ್ಲು, ಮಣ್ಣು, ಕಟ್ಟಿಗೆಗಳಿಂದ ನಿರ್ಮಾಣವಾಗಿದ್ದ ಮನೆಗಳು, ಗುಡಿಸಲುಗಳು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳ ಜಾಗದಲ್ಲಿ ಬಣ್ಣಬಣ್ಣದ ಟೈಲ್ಸ್, ಮಾರ್ಬಲ್ಗಳಿಂದ ಅಲಂಕೃತಗೊಂಡ ಸುಂದರ ಮನೆಗಳು ತಲೆ ಎತ್ತಿವೆ. ಆದರೆ ಆ ಮನೆಗಳ ಮುಂದೆ ಹಿಂದೆ ಇದ್ದಂತಹ ಅಂಗಳದ ಸಂಭ್ರಮ ಮಾತ್ರ ಕಾಣೆಯಾಗುತ್ತಿದೆ.
ಈಗ ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಧಾವಂತದ ಬದುಕಿನಲ್ಲಿ ಮಗ್ನರಾಗಿದ್ದಾರೆ. ಮಕ್ಕಳು, ಯುವಜನರು ಓದು, ಅಭ್ಯಾಸದ ಜೊತೆಗೆ ಮೊಬೈಲ್ ಲೋಕದಲ್ಲಿ ತಮ್ಮನ್ನು ತಾವು ಕಳೆದುಕೊಂಡಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದು ಕಣ್ಣು ಮಿಟುಕಿಸುವಷ್ಟರಲ್ಲಿ ನಮ್ಮ ಮುಖ, ದೇಹದ ಚಿತ್ರಗಳೇ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತವೆ. ನಾವೇ ನಮ್ಮನ್ನು ನಂಬದಂತಹ ಅಚ್ಚರಿ, ಆಶ್ಚರ್ಯಗಳ ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ.
ಗೂಗಲ್, ಸಾಮಾಜಿಕ ಜಾಲತಾಣಗಳು, ಅಂತರ್ಜಾಲದ ವಿವಿಧ ಸಾಧನಗಳು ಜಗತ್ತನ್ನೇ ನಮ್ಮ ಅಂಗೈಯಲ್ಲಿ ತಂದು ನಿಲ್ಲಿಸಿವೆ. ಇವುಗಳ ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ಕೂಡ ವೇಗವಾಗಿ ಬೆಳೆಯುತ್ತಿದೆ. ಕ್ಷಣಮಾತ್ರದಲ್ಲಿ ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳುವ ಅವಕಾಶ ಇಂದು ಪ್ರತಿಯೊಬ್ಬರ ಕೈಯಲ್ಲಿದೆ.
ಕಾಲ ಬೆಳೆಯುತ್ತಿದೆ ಎಂಬ ಸಂತೋಷ ಒಂದು ಕಡೆಯಾದರೆ, ನಮ್ಮ ಬದುಕಿನ ನಲಿವುಗಳನ್ನು ಸದ್ದಿಲ್ಲದೆ ತೆರೆಮರೆಗೆ ಸರಿಸುತ್ತಿದೆಯಲ್ಲ ಎಂಬ ಆತಂಕ, ದುಃಖ ಮತ್ತೊಂದು ಕಡೆ ಕಾಡುತ್ತಿದೆ.
ನಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಂಡರೆ ಎಷ್ಟೊಂದು ಸುಂದರ ನೆನಪುಗಳು ಕಣ್ಣಮುಂದೆ ಬರುತ್ತವೆ! ನಮಗಿಂತ ಹಿಂದಿನವರ ಬಾಲ್ಯವನ್ನು ನೆನೆದರೆ ಆ ಕಾಲದ ಬದುಕಿನ ಸೊಗಸೇ ಬೇರೆ. ಅಂದು ಮುಂಜಾನೆ ಎದ್ದು ಊಟ ಮಾಡಿ ಮನೆಯಿಂದ ಹೊರಬಿದ್ದರೆ ಸಾಕು; ಬಹುತೇಕ ಇಡೀ ದಿನ ಅಂಗಳದಲ್ಲಿಯೇ ಆಟವಾಡುತ್ತ ಕಳೆಯುತ್ತಿದ್ದೆವು. ಮನೆಗೆ ಯಾವಾಗ ಹೋಗಬೇಕು ಎಂಬುದೇ ನೆನಪಾಗುತ್ತಿರಲಿಲ್ಲ. ಹಸಿವಾದರೂ ಆಟದ ಹಸಿವು ನಮ್ಮನ್ನು ಮನೆಯ ನೆನಪೇ ಬಾರದಂತೆ ಮಾಡುತ್ತಿತ್ತು. ಕೊನೆಗೆ ಅವ್ವ, ಅಪ್ಪ ಹುಡುಕಿಕೊಂಡು ಬಂದು ಗದರಿಸಿದಾಗಲೇ ನಮಗೊಂದು ಮನೆಯಿದೆ ಎಂಬ ಅರಿವಾಗುತ್ತಿತ್ತು.
ಧೂಳು, ಮಣ್ಣಿನಿಂದ ಕೂಡಿದ ನಮ್ಮ ಅಂಗಿಗಳು, ಆಟವಾಡುತ್ತ ಎಡವಿ, ಜಾರಿ ಬಿದ್ದು ಗಾಯ ಮಾಡಿಕೊಂಡ ಕೈಕಾಲುಗಳು ಬಾಲ್ಯದ ಸಾಹಸಗಳಿಗೆ ಸಾಕ್ಷಿಯಾಗಿದ್ದವು. ಗೆಳೆಯರೊಂದಿಗಿನ ಗುದ್ದಾಟ, ಮುನಿಸು, ಜಗಳ ಎಲ್ಲವೂ ಕೆಲವೇ ಕ್ಷಣಗಳ ಆಟವಾಗಿದ್ದವು. ಸ್ವಲ್ಪ ಹೊತ್ತಿನಲ್ಲೇ ಎಲ್ಲವನ್ನೂ ಮರೆತು ಮತ್ತೆ ಒಟ್ಟಿಗೆ ಸೇರಿ ಆಟವಾಡುತ್ತಿದ್ದೆವು. ಅಂದು ಮನಸ್ಸಿನಲ್ಲಿ ದ್ವೇಷವಿರಲಿಲ್ಲ, ಕಪಟವಿರಲಿಲ್ಲ. ಮುನಿಸು ಕ್ಷಣಿಕವಾಗಿತ್ತು, ಸ್ನೇಹ ಮಾತ್ರ ಶಾಶ್ವತವಾಗಿತ್ತು.
ಶನಿವಾರ, ಭಾನುವಾರ ಶಾಲೆಯ ರಜಾದಿನಗಳೆಂದರೆ ನಮಗೆ ಇನ್ನೊಂದು ಬಗೆಯ ಸಂಭ್ರಮ. ಎಮ್ಮೆ, ಮೇಕೆಗಳನ್ನು ಕಾಯುವ ಕಾಯಕವೂ ನಮ್ಮ ಬಾಲ್ಯದ ದಿನಚರಿಯ ಭಾಗವಾಗಿತ್ತು. ಮುಂಜಾನೆ ಎದ್ದು ಸೆಗಣಿ ಬಾಚುವುದು, ದನಕರುಗಳ ಆರೈಕೆ ಮಾಡುವುದು, ಮೇವು ತರುವುದು ಹೀಗೆ ನಿತ್ಯದ ಕೆಲಸಗಳ ನಡುವೆ ಆಟಕ್ಕೂ ಸಮಯ ಮೀಸಲಾಗಿರುತ್ತಿತ್ತು. ಕೆಲಸವೇ ಆಟ, ಆಟವೇ ಬದುಕು ಎಂಬಂತೆ ನಮ್ಮ ಬಾಲ್ಯ ಸಾಗುತ್ತಿತ್ತು.
ಅಂದು ಊರಿನ ಗುಡಿ, ಗುಂಡಾರಗಳು, ಕಟ್ಟೆಗಳು ಜನಜಂಗುಳಿಯಿಂದ ಗಿಜಿಗುಡುತ್ತಿದ್ದವು. ಪಗಡೆ ಆಡುವವರು ಯಾರೋ, ಚೌಕಾಬಾರ ಆಡುವವರು ಯಾರೋ, ಹುಲಿಮನೆ, ಎಲೆ ಆಟಗಳಲ್ಲಿ ಮಗ್ನರಾದವರು ಇನ್ನಾರೋ! ಕೆಲವರು ಮಂಗಳೂರು ಗಣೇಶ ಬಿಡಿ, ಚುಟ್ಟಾ, ಚಿಲುಮೆ ಸೇದಿ ಬಸ್ನಂತೆ ಕಾರ್ಖಾನೆಯ ಹೊಗೆ ಬಿಡುತ್ತಿದ್ದರು. ಇನ್ನು ಕೆಲವರು ಎಲೆ ಅಡಿಕೆ, ತಂಬಾಕು ಹಾಕಿಕೊಂಡು ಬಾಯಿಯನ್ನು ಟೊಮ್ಯಾಟೊ ಹಣ್ಣಿನಂತೆ ಕೆಂಪಗೆ ಮಾಡಿಕೊಂಡು ಪಿಚಕ್… ಪಿಚಕ್… ಎಂದು ಉಗುಳುತ್ತಿದ್ದರು.
ಅಲ್ಲಿ ಗದ್ದಲ, ಗಲಾಟೆ, ಜಗಳ, ತಮಾಷೆ, ಊರಿನ ಒಣಸುದ್ದಿ, ಚರ್ಚೆ, ಮಾತುಕತೆ ಹೀಗೆ ಏನೆಲ್ಲ ನಡೆಯುತ್ತಿತ್ತು. ದೊಡ್ಡವರ ಲೋಕವೇ ಒಂದು ರೀತಿಯ ಸಂಭ್ರಮವಾಗಿದ್ದರೆ, ಎಳೆಯರ ಗೌಜು, ಗದ್ದಲ ಮತ್ತೊಂದು ಕಡೆ ನಿರಂತರವಾಗಿ ನಡೆಯುತ್ತಿತ್ತು.
ಅಪ್ಪ, ಅಜ್ಜ, ಅಣ್ಣ ಅಥವಾ ಊರಿನ ಹಿರಿಯರು ಗುಡಿ, ಗುಂಡಾರಗಳ ಕಟ್ಟೆಯ ಮೇಲೆ ಕುಳಿತು ಆಟವಾಡುತ್ತಿದ್ದರೆ, ಅವರ ನಡುವೆ ಓಡಾಡುತ್ತಿದ್ದ ನಮಗೂ ಒಂದಿಷ್ಟು ಕೆಲಸ ಸಿಗುತ್ತಿತ್ತು. ವಿಶ್ರಾಂತಿಗೆಂದು ಕುಳಿತಿದ್ದ ಹಿರಿಯರು ಎಳೆಯರನ್ನು ಕರೆದು ಒಂದು ರೂಪಾಯಿ, ಎರಡು ರೂಪಾಯಿ ಕೊಟ್ಟು ಅಂಗಡಿಗೆ ಕಳುಹಿಸುತ್ತಿದ್ದರು. ಅಂಗಡಿಯಿಂದ ಏನಾದರೂ ತಂದುಕೊಡುವುದರಲ್ಲಿಯೂ ನಮಗೊಂದು ಖುಷಿ ಇರುತ್ತಿತ್ತು. ಕೆಲವೊಮ್ಮೆ ಉಳಿದ ಚಿಲ್ಲರೆ ಹಣದಲ್ಲಿ ನಮಗಿಷ್ಟವಾದ ಸಣ್ಣಪುಟ್ಟ ತಿಂಡಿಗಳನ್ನು ಕೊಂಡುಕೊಳ್ಳುತ್ತಿದ್ದೆವು. ಆ ಪುಟ್ಟ ಸಂತೋಷಕ್ಕೆ ಇಂದಿನ ದೊಡ್ಡ ದೊಡ್ಡ ಉಡುಗೊರೆಗಳೂ ಸಾಟಿಯಾಗಲಾರವು.
ಆಟಗಳಿಗೂ ಆಗ ಎಷ್ಟೊಂದು ವೈವಿಧ್ಯವಿತ್ತು! ಕಣ್ಣಾಮುಚ್ಚಾಲೆ, ಕುಂಟೆಬಿಲ್ಲೆ, ಬುಗುರಿ, ಗೋಲಿ, ಚಿನ್ನಿದಾಂಡು, ಲಗೋರಿ, ಅಳಗುಳಿ ಮಣೆ, ಚೌಕಾಬಾರ, ಹುಲಿಮನೆ ಹೀಗೆ ಒಂದೊಂದು ಆಟಕ್ಕೂ ಅದರದೇ ಆದ ನಿಯಮ, ಸಂಭ್ರಮವಿತ್ತು. ಆಟದಲ್ಲಿ ಸೋತರೂ ಗೆದ್ದರೂ ಮನಸ್ಸಿನಲ್ಲಿ ಬೇಸರವಿರಲಿಲ್ಲ. ಗೆಳೆಯರ ಜೊತೆ ಸೇರಿ ಕಾಲ ಕಳೆಯುವುದೇ ನಮಗೆ ದೊಡ್ಡ ಗೆಲುವಾಗಿತ್ತು.
ಮಳೆಗಾಲದಲ್ಲಿ ಕೆಸರಿನಲ್ಲಿ ಆಟವಾಡುವುದು, ಬೇಸಿಗೆಯಲ್ಲಿ ಮರದ ನೆರಳಿನಲ್ಲಿ ಕುಳಿತು ಹರಟೆ ಹೊಡೆಯುವುದು, ಹಳ್ಳದ ನೀರಿನಲ್ಲಿ ಈಜಾಡುವುದು, ಹೊಲಗದ್ದೆಗಳ ಬದುಗಳಲ್ಲಿ ಓಡಾಡುವುದು, ಮರ ಹತ್ತಿ ಹಣ್ಣು ಕೀಳುವುದು ಇವೆಲ್ಲವೂ ನಮ್ಮ ಬಾಲ್ಯದ ಅವಿಭಾಜ್ಯ ಅಂಗಗಳಾಗಿದ್ದವು. ಪ್ರಕೃತಿಯೇ ನಮ್ಮ ಆಟದ ಮೈದಾನವಾಗಿತ್ತು. ಮಣ್ಣೇ ನಮ್ಮ ಸಂಗಾತಿಯಾಗಿತ್ತು. ಗೆಳೆಯರೇ ನಮ್ಮ ಜಗತ್ತಾಗಿದ್ದರು.
ಇನ್ನು ಮಹಿಳೆಯರ ಆಟ, ಚಟುವಟಿಕೆಗಳೇ ವಿಭಿನ್ನವಾಗಿರುತ್ತಿದ್ದವು. ಹುಣ್ಣಿಮೆಯ ಬೆಳದಿಂಗಳಲ್ಲಿ ರಾತ್ರಿ ಹೊತ್ತು ಮನೆಯ ಅಂಗಳದಲ್ಲಿ ಗೆಳತಿಯರೆಲ್ಲ ಸೇರಿ ಆಡುವ ಆಟಗಳು, ಅವ್ವಂದಿರ ಶೋಭಾನೆ ಹಾಡುಗಳು, ಅವರು ಹೇಳುತ್ತಿದ್ದ ದೆವ್ವ, ಭೂತಗಳ ಸ್ವಾರಸ್ಯಕರ ಕಥೆಗಳು ಭಯ, ರೋಮಾಂಚನದ ಜೊತೆಗೆ ಸಂತಸವನ್ನೂ ಉಂಟುಮಾಡುತ್ತಿದ್ದವು. ಬೆಳದಿಂಗಳ ಬೆಳಕಿನಲ್ಲಿ ಹೆಣ್ಣುಮಕ್ಕಳ ನಗು, ಹಾಡು, ಆಟಗಳು ಹಳ್ಳಿಯ ರಾತ್ರಿಗಳಿಗೆ ವಿಶೇಷ ಕಳೆ ತರುತ್ತಿದ್ದವು. ಅಜ್ಜಿಯರು, ಅವ್ವಂದಿರು ಹಾಡುತ್ತಿದ್ದ ಶೋಭಾನೆ ಹಾಡುಗಳ ನಾದ ಇಂದಿಗೂ ಕಿವಿಯಲ್ಲಿ ಗುನುಗುನಿಸುತ್ತಿದೆ.
ಕಾಲ ಕಳೆದಂತೆ ಈಗ ಇವೆಲ್ಲವನ್ನೂ ಕಾಣುವುದು ಅಪರೂಪವಾಗಿದೆ. ಅಂದು ಗಿಜಿಗುಡುತ್ತಿದ್ದ ಗುಡಿ, ಗುಂಡಾರಗಳು, ಕಟ್ಟೆಗಳು ಇಂದು ಬಿಕೋ ಎನ್ನುತ್ತಿವೆ. ಅಂದು ರೂಪಾಯಿ ಕೊಟ್ಟು ಅಂಗಡಿಗೆ ಕಳುಹಿಸುತ್ತಿದ್ದ ಹಿರಿಯರು, ಅಜ್ಜಂದಿರು ಇಂದು ನಮ್ಮೊಂದಿಗಿಲ್ಲ. ಅವರು ಗೆರೆ ಎಳೆದು ಆಡುತ್ತಿದ್ದ ಹುಲಿಮನೆ, ಚೌಕಾಬಾರದ ಗೆರೆಗಳು ಅಳಿಸಿಹೋಗಿ ಆ ಜಾಗದಲ್ಲಿ ಚಿತ್ತಾರ ಮೂಡಿಸುವ ಟೈಲ್ಸ್ಗಳು ಬಂದಿವೆ. ಇನ್ನು ಎಳೆಯರ ಸದ್ದು ಅತ್ತ ಸುಳಿಯುವುದೇ ಅಪರೂಪವಾಗಿದೆ. ಅಂದು ಅಂಗಳದಲ್ಲಿ ಗೂಡು ಕಟ್ಟುತ್ತಿದ್ದ ಹಕ್ಕಿಗಳೂ ಇಂದು ಕಾಣೆಯಾಗುತ್ತಿವೆ.
ಇಲ್ಲಿ ತಂತ್ರಜ್ಞಾನ ಬೇಡವೆಂದಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ವಿಜ್ಞಾನ, ತಂತ್ರಜ್ಞಾನ, ಅಂತರ್ಜಾಲ, ಕೃತಕ ಬುದ್ಧಿಮತ್ತೆ ಇವೆಲ್ಲವೂ ಮಾನವ ಬದುಕಿಗೆ ಅಗತ್ಯವಾದ ಕೊಡುಗೆಗಳೇ. ಆದರೆ ಅವುಗಳ ಬಳಕೆಯ ನಡುವೆ ನಮ್ಮ ಬಾಲ್ಯದ ಸಹಜತೆ, ಮಾನವೀಯ ಸಂಬಂಧಗಳು, ಪ್ರಕೃತಿಯ ಒಡನಾಟ ಮತ್ತು ಬದುಕಿನ ಸೊಗಡನ್ನು ಕಳೆದುಕೊಳ್ಳುತ್ತಿರುವುದು ನಮ್ಮ ಬದುಕಿನ ಅವನತಿಯ ಸಂಕೇತದಂತೆ ಭಾಸವಾಗುತ್ತಿದೆ.
ಮಕ್ಕಳಿಗೆ ಓದು ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ. ಮೊಬೈಲ್ ಜಗತ್ತಿನ ಜ್ಞಾನ ಎಷ್ಟು ಅಗತ್ಯವೋ, ಮಣ್ಣಿನ ಅಂಗಳದ ಅನುಭವವೂ ಅಷ್ಟೇ ಅಗತ್ಯ. ಗೆಳೆಯರೊಂದಿಗೆ ಬೆರೆತು ಆಡುವ ಆಟಗಳು ದೈಹಿಕ ಆರೋಗ್ಯದ ಜೊತೆಗೆ ಸ್ನೇಹ, ಸಹಕಾರ, ಸೋಲು-ಗೆಲುವುಗಳನ್ನು ಸ್ವೀಕರಿಸುವ ಮನೋಭಾವವನ್ನೂ ಬೆಳೆಸುತ್ತವೆ.
ಒಂದು ಕಾಲದಲ್ಲಿ ನಮ್ಮ ಅಂಗಳಗಳು ಮಕ್ಕಳ ನಗುವಿನಿಂದ ತುಂಬಿದ್ದವು. ಆದರೆ ಇಂದು ಆ ಅಂಗಳಗಳೇ ಇಲ್ಲವಾಗುತ್ತಿವೆ. ಇದ್ದರೂ ಅಲ್ಲಿ ಆಡುವ ಮಕ್ಕಳಿಲ್ಲ. ಮನೆಗಳು ದೊಡ್ಡದಾಗಿವೆ, ಮನಸ್ಸುಗಳು ಚಿಕ್ಕದಾಗಿವೆ. ಸೌಲಭ್ಯಗಳು ಹೆಚ್ಚಾಗಿವೆ. ಬದುಕು ಕೂಡ ವೇಗವಾಗಿದೆ. ಆದರೆ ಈ ವೇಗದ ಬದುಕಿನಲ್ಲಿ ನಮ್ಮ ಬಾಲ್ಯದ ಮುಗ್ಧತೆ, ಗೆಳೆಯರ ಒಡನಾಟ, ಅಂಗಳದ ಆಟದ ಸಂಭ್ರಮ ಎಲ್ಲಿ ಕಳೆದುಹೋಯಿತೆಂದು ತಿಳಿಯುತ್ತಿಲ್ಲ.
ಇಂದು ಹಿಂದಿರುಗಿ ನೋಡಿದಾಗ ಆ ಮಣ್ಣಿನ ಅಂಗಳಗಳು, ಗೆಳೆಯರ ಕೂಗು, ಅವ್ವನ ಗದರಿಕೆ, ಅಪ್ಪನ ಏಟು, ಅಜ್ಜನ ಹರಟೆ, ಗುಡಿಯ ಕಟ್ಟೆಯ ಆಟಗಳು ಎಲ್ಲವೂ ನೆನಪಿನ ಬುತ್ತಿಯಲ್ಲಿ ಮಧುರವಾಗಿ ಉಳಿದಿವೆ. ಮತ್ತೆ ಆ ದಿನಗಳು ಮರಳಿ ಬರಲಾರವು. ಆದರೆ ಮುಂದಿನ ಪೀಳಿಗೆಗೆ ಅಂತಹ ಬಾಲ್ಯವನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಅಂಗಳಗಳನ್ನು ಉಳಿಸೋಣ, ಆಟದ ಮೈದಾನಗಳನ್ನು ಬೆಳೆಸೋಣ, ಮಕ್ಕಳಿಗೆ ಮೊಬೈಲ್ ಜೊತೆಗೆ ಮಣ್ಣಿನ ಒಡನಾಟವನ್ನೂ ಕಲಿಸೋಣ. ಏಕೆಂದರೆ ಬಾಲ್ಯವೆಂಬುದು ಮತ್ತೊಮ್ಮೆ ಮರಳಿ ಸಿಗದ ಅಮೂಲ್ಯ ಸಂಪತ್ತು.
Peepal Media Desk
Peepal Media · ಅಂಕಣ ವಿಭಾಗ