ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆಜನನುಡಿ 2026 LIVE: ಮಂಗಳೂರಿನಲ್ಲಿ ಎರಡು ದಿನಗಳ ಚಿಂತನ ಮಂಥನ ಒಂದು ಆರಂಭ; ಪ್ರತಿ ಅಪ್‌ಡೇಟ್‌ಗೆ ‘PEEPAL ‘ ನೋಡಿಬೆಲೆ ಏರಿಕೆಯ ಬಿಸಿ: ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಸಂಕಷ್ಟದ ಹೊಡೆತ!ಊರ ಬಯಲಿನ ನಡುವೆ : ಈಗ ಅಂಗಳವೂ ಇಲ್ಲ, ಆಡುವವರೂ ಇಲ್ಲ!ಆಶಾ ಕಾರ್ಯಕರ್ತೆಯರ ಹೋರಾಟ: 10 ದಿನ ವಿಧಾನಸೌಧಕ್ಕೆ ರಜೆ ಘೋಷಿಸಿ; ಆಗ್ರಹ!ಸಂಪುಟ ಪುನಾರಚನೆ ಚರ್ಚೆ ಮತ್ತೆ ಮುನ್ನೆಲೆಗೆ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ವರಿಷ್ಠರ ಮೇಲೆ ಒತ್ತಡ; ದೆಹಲಿಗೆ ಹೊರಟು ಸಿಎಂ ಡಿಕೆಶಿಕ್ಷೇತ್ರ ಮರುವಿಂಗಡಣೆಗೆ ಡಿಎಂಕೆ ಬೆಂಬಲ!; ರಾಜ್ಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವುದರ ಬಗ್ಗೆ ನಿರೀಕ್ಷೆಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ದೌರ್ಬಲ್ಯವಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ಪತಿ ವಿರುದ್ಧ ಪೊಲೀಸ್ ದೂರು ನೀಡಿಲ್ಲವೆಂಬ ಕಾರಣಕ್ಕೆ ಪತ್ನಿಯ ದೌರ್ಜನ್ಯದ ಆರೋಪ ಸುಳ್ಳಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ಹೆದ್ದಾರಿ ವಿಸ್ತರಣೆಗೆ 400 ವರ್ಷಗಳ ಪೀರ್ ಬಾಬಾ ದರ್ಗಾ ತೆರವು ವಿರೋಧಿಸಿ ಹಿಂದೂ–ಮುಸ್ಲಿಮರಿಂದ ಒಗ್ಗಟ್ಟು ಪ್ರದರ್ಶನಪತ್ರಕರ್ತರೆಂದು ಗುರುತಿಸಿಕೊಳ್ಳಲು ಅರ್ಹತೆಗಳೇನು? ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ರಕ್ಷಣೆ ನೀಡಬೇಕೇ? ಸುಪ್ರೀಂ ಕೋರ್ಟ್ ಪ್ರಶ್ನೆಕ್ಷೇತ್ರ ಮರುವಿಂಗಡಣೆ ಮಸೂದೆಗೆ ಮತ್ತೆ ವೇದಿಕೆ ಸಿದ್ಧ? ನವೆಂಬರ್ 30ರಿಂದ ಸಂಸತ್ ವಿಶೇಷ ಅಧಿವೇಶನಪೆಟ್ರೋಲ್‌ನಲ್ಲಿ ಮತ್ತೊಂದು ಬದಲಾವಣೆಗೆ ಕೇಂದ್ರದ ಸಿದ್ಧತೆ; E25 ಜಾರಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆKSRTC ಪುರುಷ ನೌಕರರಿಗೆ ಗುಡ್‌ನ್ಯೂಸ್: ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆ ಮಂಜೂರುಚಳಿಗಾಲದ ನಡುವೆಯೇ ಮತ್ತೆ ಮಳೆ ಮುನ್ಸೂಚನೆ: ನವೆಂಬರ್ 28ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆಕಾಂಗ್ರೆಸ್ ವಿರುದ್ಧ ಬಿಜೆಪಿ–ಜೆಡಿಎಸ್ ಜಂಟಿ ಸಮರಕ್ಕೆ ಸಿದ್ಧತೆ; ಚುನಾವಣಾ ಮೈತ್ರಿಗೆ ಸಮನ್ವಯ ಸಮಿತಿ ರಚನೆ25 ಲಕ್ಷ ಸರ್ಕಾರಿ ಉದ್ಯೋಗ, ರೈತರ ಸಾಲ ಮನ್ನಾ, ವೃದ್ಧೆಯರಿಗೆ ₹40 ಸಾವಿರ ಪಿಂಚಣಿ: ಅಖಿಲೇಶ್ ಯಾದವ್ ಭರ್ಜರಿ ಚುನಾವಣಾ ಘೋಷಣೆಅಮಾಯಕರನ್ನು ನಕ್ಸಲಿಸಂಗೆ ಸೆಳೆದವರಿಗೂ ಹೊಣೆಗಾರಿಕೆ ನಿಗದಿಯಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮುರಾಹುಲ್ ಗಾಂಧಿ ಹೆಸರಿನ ಪೋಸ್ಟ್‌ಗಳಿಗೆ ನಿರ್ಬಂಧ; ‘ಮೆಟಾ’ ವಿರುದ್ಧ ಕಾನೂನು ಸಮರಕ್ಕೆ ಇಳಿದ ಕಾಂಗ್ರೆಸ್ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು: ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಪತ್ತೆ

ಬೆಲೆ ಏರಿಕೆಯ ಬಿಸಿ: ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಸಂಕಷ್ಟದ ಹೊಡೆತ!

MMurali Maluru

Murali Maluru ಅಂಕಣ

• 5 ನಿಮಿಷದ ಓದು

ಬೆಲೆ ಏರಿಕೆಯ ಬಿಸಿ: ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಸಂಕಷ್ಟದ ಹೊಡೆತ!

‘…ದಿನಸಿ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಹಕರು ತಮ್ಮ ಖರೀದಿ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚು ಬೆಲೆಯ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಖರೀದಿಸುವುದು…. ಲೇಖಕಿಯಾದ ಹಡಪದ ಸರ್ವಮಂಗಳಾ ರವರ ಬರಹದಲ್ಲಿ….

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಜನಸಾಮಾನ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಪ್ರಮುಖ ಆರ್ಥಿಕ ಸಮಸ್ಯೆಯಾಗಿದೆ. ದೇಶದ ಆರ್ಥಿಕತೆಯ ಆರೋಗ್ಯವನ್ನು ಅಳೆಯುವ ಪ್ರಮುಖ ಸೂಚಕಗಳಲ್ಲಿ ಹಣದುಬ್ಬರವೂ ಒಂದು. ಆಹಾರ ಪದಾರ್ಥಗಳು, ಹಾಲು, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ, ಇಂಧನ ಹಾಗೂ ಸಾರಿಗೆ ವೆಚ್ಚಗಳು ಹೆಚ್ಚುತ್ತಿರುವುದರಿಂದ ಕುಟುಂಬಗಳ ಮಾಸಿಕ ಖರ್ಚು ನಿರಂತರವಾಗಿ ಏರುತ್ತಿದೆ. 

ಕರ್ನಾಟಕದಲ್ಲಿ 2026ರ ಅಕ್ಟೋಬರ್ ತಿಂಗಳ ಆಹಾರ ಹಣದುಬ್ಬರವು ಶೇ. 12.16ಕ್ಕೆ ತಲುಪಿದ್ದು, ಇದು ದೇಶದ ಆಹಾರ ಹಣದುಬ್ಬರದ ಶೇ. 8.94ಕ್ಕಿಂತ ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ಚಿಲ್ಲರೆ ಹಣದುಬ್ಬರ ಶೇ. 7.07 ಇದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಅದು ಶೇ. 6.09ರಷ್ಟಿತ್ತು. ಈ ಅಂಕಿಅಂಶಗಳು ಕರ್ನಾಟಕದ ಗ್ರಾಹಕರು ಎದುರಿಸುತ್ತಿರುವ ಬೆಲೆ ಏರಿಕೆಯ ಒತ್ತಡವನ್ನು ಸ್ಪಷ್ಟಪಡಿಸುತ್ತವೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಪರಿಷ್ಕರಣೆ ಪ್ರಮುಖ ಪಾತ್ರವಹಿಸಿದೆ. 2026ರ ನವೆಂಬರ್ 1 ರಿಂದ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲಾಗಿದ್ದು, ಹಿಂದೆ 46 ರೂ. ಇದ್ದ ಟೋನ್‌ಡ್ ಹಾಲಿನ ಬೆಲೆ ಈಗ 54 ರೂ. ಗೆ ಏರಿಕೆಯಾಗಿದೆ. ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಬೆಲೆ 23 ರೂ. ಯಿಂದ 27 ರೂ. ಕ್ಕೆ ಏರಿದೆ. ಹಾಲಿನ ವಿವಿಧ ವರ್ಗಗಳ ಬೆಲೆಗಳು ಕೊಬ್ಬಿನ ಅಂಶದ ಆಧಾರದ ಮೇಲೆ ಹೆಚ್ಚಿಸಲಾಗಿದ್ದು, ಕೆಲವು ಉತ್ಪನ್ನಗಳಲ್ಲಿ ಪ್ರತಿ ಲೀಟರ್‌ಗೆ 8 ರೂ. ಯಿಂದ 12 ರೂ. ವರೆಗೆ ಏರಿಕೆ ಕಂಡುಬಂದಿದೆ. ಈ ಏರಿಕೆ ಚಹಾ, ಕಾಫಿ, ಹೋಟೆಲ್ ಆಹಾರ ಹಾಗೂ ಮಕ್ಕಳ ದಿನನಿತ್ಯದ ಪೌಷ್ಟಿಕ ಆಹಾರದ ವೆಚ್ಚವನ್ನೂ ಹೆಚ್ಚಿಸುವ ಸಾಧ್ಯತೆ ಇದೆ.

ಹಾಲಿನ ಬೆಲೆ ಏರಿಕೆಯ ಜೊತೆಗೆ ಮೊಸರು, ತುಪ್ಪ, ಬೆಣ್ಣೆ ಮತ್ತು ಪನೀರ್‌ನ ಬೆಲೆಗಳೂ ಹೆಚ್ಚಾಗಿವೆ. ಒಂದು ಕೆ.ಜಿ. ಮೊಸರಿನ ಬೆಲೆ 54 ರೂ. ಯಿಂದ 68 ರೂ. ಏರಿಕೆಯಾಗಿದೆ. ಒಂದು ಲೀಟರ್ ತುಪ್ಪದ ಬೆಲೆ 700 ರೂ. ಯಿಂದ 850 ರೂ. ಕ್ಕೆ ಹೆಚ್ಚಿದ್ದು, ಒಂದು ಕೆ.ಜಿ. ಬೆಣ್ಣೆಯ ಬೆಲೆ 700 ರೂ. ಯಿಂದ 780 ರೂ. ಕ್ಕೆ ಏರಿಕೆಯಾಗಿದೆ. ಪನೀರ್‌ನ ಬೆಲೆ ಒಂದು ಕೆ.ಜಿ. ಗೆ 408 ರೂ. ಯಿಂದ 485 ರೂ. ಕ್ಕೆ ಏರಿದೆ. ಈ ರೀತಿಯ ಬೆಲೆ ಏರಿಕೆಗಳು ಮನೆಗಳಲ್ಲಿ ಆಹಾರ ತಯಾರಿಕೆಯ ವೆಚ್ಚವನ್ನಷ್ಟೇ ಅಲ್ಲದೆ ಹೋಟೆಲ್, ಬೇಕರಿ, ಸಿಹಿತಿಂಡಿ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಉತ್ಪಾದನಾ ವೆಚ್ಚವನ್ನೂ ಹೆಚ್ಚಿಸುತ್ತವೆ. ಉತ್ಪಾದನಾ ವೆಚ್ಚ ಹೆಚ್ಚಾದಾಗ ವ್ಯಾಪಾರಿಗಳು ಅಂತಿಮವಾಗಿ ಅದರ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆ ಇರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಒತ್ತಡ ಹೆಚ್ಚಾಗುತ್ತದೆ.

ಅಡುಗೆ ಎಣ್ಣೆ, ಅಕ್ಕಿ ಮತ್ತು ಸಕ್ಕರೆಯ ಬೆಲೆಗಳಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ 2024ರ ಆಗಸ್ಟ್‌ನಲ್ಲಿ ಪ್ರತಿ ಕೆ.ಜಿ. ಗೆ ರೂ. 114.38 ಇದ್ದು, 2026ರ ಆಗಸ್ಟ್‌ನಲ್ಲಿ ರೂ.192.25ಕ್ಕೆ ಏರಿಕೆಯಾಗಿದೆ. ಇದು ಸುಮಾರು ಶೇ. 68.1ರ ಹೆಚ್ಚಳವಾಗಿದೆ. ಕೊತ್ತಂಬರಿ ಬೆಲೆ ಪ್ರತಿ ಕೆ.ಜಿ. ಗೆ 31.38 ರೂ. ಯಿಂದ 40.38 ರೂ. ಏರಿದೆ. ಸಕ್ಕರೆಯ ಬೆಲೆ 2022ರ ಆಗಸ್ಟ್‌ನಲ್ಲಿ 40.25 ರೂ. ಇದ್ದು, 2026ರಲ್ಲಿ 53.34 ರೂ. ಕ್ಕೆ ತಲುಪಿದೆ; ಇದರಿಂದ ಸುಮಾರು ಶೇ. 32.5ರ ಏರಿಕೆ ದಾಖಲಾಗಿದೆ. ಅಕ್ಕಿಯ ಬೆಲೆ ಇದೇ ಅವಧಿಯಲ್ಲಿ 48.25 ರೂ. ರಿಂದ 61.72 ರೂ. ಏರಿದ್ದು, ಸುಮಾರು ಶೇ. 27.9ರ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಗಳು ಸಾಮಾನ್ಯ ಕುಟುಂಬಗಳ ಆಹಾರ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ ದಿನನಿತ್ಯದ ಖರೀದಿ ಸಾಮರ್ಥ್ಯವನ್ನು ಕುಗ್ಗಿಸುತ್ತವೆ.

ದಿನಸಿ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಹಕರು ತಮ್ಮ ಖರೀದಿ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚು ಬೆಲೆಯ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಖರೀದಿಸುವುದು, ಪರ್ಯಾಯ ವಸ್ತುಗಳನ್ನು ಬಳಸುವುದು, ಬ್ರ್ಯಾಂಡ್ ಬದಲಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಅಕ್ಕಿ, ಹಾಲು, ಎಣ್ಣೆ, ಬೇಳೆ ಮತ್ತು ತರಕಾರಿ ಮುಂತಾದ ಅಗತ್ಯ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಬೆಲೆ ಏರಿಕೆಯ ಪರಿಣಾಮ ಕಡಿಮೆ ಆದಾಯದ ಕುಟುಂಬಗಳು, ದಿನಗೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಮತ್ತು ಸ್ಥಿರ ಆದಾಯ ಹೊಂದಿರುವ ಉದ್ಯೋಗಿಗಳ ಮೇಲೆ ಹೆಚ್ಚು ತೀವ್ರವಾಗಿ ಬೀಳುತ್ತದೆ.

ಅದೇ ರೀತಿ, ಬೇಳೆಕಾಳುಗಳು, ಧಾನ್ಯಗಳು, ಮಾಂಸ ಮತ್ತು ತರಕಾರಿಗಳ ಬೆಲೆ ಏರಿಕೆಯೂ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸಂಕಷ್ಟಕ್ಕೆ ಒಳಪಡಿಸಿದೆ. ಕಡಿಮೆ ಮಳೆ, ಬರ ಪರಿಸ್ಥಿತಿ, ಕೃಷಿ ಉತ್ಪಾದನೆಯ ಕುಸಿತ, ಪಶು ಆಹಾರದ ವೆಚ್ಚ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆ ಇವು ಬೆಲೆ ಏರಿಕೆಗೆ ಕಾರಣವಾಗಿವೆ. ಕೃಷಿ ಉತ್ಪಾದನೆ ಕಡಿಮೆಯಾದಾಗ ಮಾರುಕಟ್ಟೆಗೆ ಬರುವ ಸರಕುಗಳ ಪ್ರಮಾಣ ಕುಗ್ಗುತ್ತದೆ. ಬೇಡಿಕೆ ಸ್ಥಿರವಾಗಿರುವ ಸಂದರ್ಭದಲ್ಲಿ ಸರಬರಾಜು ಕಡಿಮೆಯಾದರೆ ಬೆಲೆ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯು ವಿಶೇಷವಾಗಿ ಆಹಾರ ಹಣದುಬ್ಬರಕ್ಕೆ ಕಾರಣವಾಗುತ್ತದೆ.

ಕರ್ನಾಟಕವು ಅಕ್ಕಿ ಮತ್ತು ಬೇಳೆಕಾಳುಗಳ ಉತ್ಪಾದನೆಯಲ್ಲಿ ಪ್ರಮುಖ ರಾಜ್ಯವಾಗಿದ್ದರೂ, ಉತ್ಪಾದನಾ ಕೊರತೆ ಮತ್ತು ಮಾರುಕಟ್ಟೆಯ ಅಸ್ಥಿರತೆ ಗ್ರಾಹಕರ ಮೇಲೆ ಪರಿಣಾಮ ಬೀರುತ್ತವೆ. ಇಂಧನ ಬೆಲೆಗಳು ಹಾಗೂ ಸಾರಿಗೆ ವೆಚ್ಚಗಳ ಹೆಚ್ಚಳವೂ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಾರಿಗೆ ವೆಚ್ಚ ಹೆಚ್ಚಾದಾಗ ಕೃಷಿ ಉತ್ಪನ್ನಗಳನ್ನು ಹೊಲಗಳಿಂದ ಮಾರುಕಟ್ಟೆಗೆ ಸಾಗಿಸುವ ವೆಚ್ಚ, ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಸಾಗಿಸುವ ವೆಚ್ಚ ಹಾಗೂ ದಿನಸಿ ವಸ್ತುಗಳ ವಿತರಣಾ ವೆಚ್ಚ ಹೆಚ್ಚಾಗುತ್ತದೆ.

ಇದರ ಪರಿಣಾಮವಾಗಿ ಉತ್ಪಾದಕರು ಮತ್ತು ವ್ಯಾಪಾರಿಗಳು ತಮ್ಮ ವೆಚ್ಚಗಳನ್ನು ಸರಿಹೊಂದಿಸಲು ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಬಹುದು. ಸಾರ್ವಜನಿಕ ಸಾರಿಗೆ ದರಗಳಲ್ಲಿ ಹೆಚ್ಚಳವಾದರೆ ಉದ್ಯೋಗಿಗಳು,

ವಿದ್ಯಾರ್ಥಿಗಳು ಮತ್ತು ದಿನನಿತ್ಯ ಪ್ರಯಾಣಿಸುವ ಜನರ ಮಾಸಿಕ ವೆಚ್ಚವೂ ಹೆಚ್ಚುತ್ತದೆ. ಈ ರೀತಿಯಾಗಿ ಒಂದು ಕ್ಷೇತ್ರದಲ್ಲಿನ ಬೆಲೆ ಏರಿಕೆಯು ಇತರ ಕ್ಷೇತ್ರಗಳಿಗೂ ವ್ಯಾಪಿಸಿ ಒಟ್ಟಾರೆ ಜೀವನ ವೆಚ್ಚವನ್ನು ಹೆಚ್ಚಿಸುತ್ತದೆ. ಸಾರಿಗೆ ವೆಚ್ಚದ ಹೆಚ್ಚಳವೂ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಬಸ್ ದರಗಳು, ಇಂಧನ ವೆಚ್ಚಗಳು ಮತ್ತು ವಾಹನ ನಿರ್ವಹಣಾ ವೆಚ್ಚಗಳು ಹೆಚ್ಚಾದಾಗ ಉದ್ಯೋಗಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ಹೆಚ್ಚಿನ ಹಣವನ್ನು ಸಾರಿಗೆಗಾಗಿ ಖರ್ಚು ಮಾಡಬೇಕಾಗುತ್ತದೆ.

ಕರ್ನಾಟಕದಲ್ಲಿ 2025ರ ಜನವರಿ 2ರಂದು ಸಾರ್ವಜನಿಕ ಸಾರಿಗೆ ದರಗಳಲ್ಲಿ ಶೇ. 15ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿತ್ತು. ಸಾರಿಗೆ ವೆಚ್ಚ ಹೆಚ್ಚಳವು ಉದ್ಯೋಗಿಗಳ ಪ್ರಯಾಣ ವೆಚ್ಚವನ್ನು ಮಾತ್ರವಲ್ಲದೆ ಸರಕುಗಳ ಸಾಗಣೆ ವೆಚ್ಚವನ್ನೂ ಹೆಚ್ಚಿಸುವುದರಿಂದ ಪರೋಕ್ಷವಾಗಿ ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯು ಕುಟುಂಬಗಳ ಉಳಿತಾಯದ ಮೇಲೆಯೂ ಪರಿಣಾಮ ಬೀರುತ್ತದೆ. ಆದಾಯದ ಬಹುಪಾಲು ಆಹಾರ, ಮನೆ ಬಾಡಿಗೆ, ವಿದ್ಯುತ್, ಸಾರಿಗೆ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅಗತ್ಯಗಳಿಗೆ ಖರ್ಚಾದಾಗ, ಭವಿಷ್ಯಕ್ಕಾಗಿ ಹಣ ಉಳಿಸುವ ಅವಕಾಶ ಕಡಿಮೆಯಾಗುತ್ತದೆ.

ಮಧ್ಯಮ ವರ್ಗದ ಕುಟುಂಬಗಳು ತಮ್ಮ ಜೀವನಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಕಡಿಮೆ ಆದಾಯದ ಕುಟುಂಬಗಳು ತಮ್ಮ ಆಹಾರದ ಗುಣಮಟ್ಟ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ ಮತ್ತು ಇತರ ಅಗತ್ಯಗಳ ಮೇಲೆ ವೆಚ್ಚ ಕಡಿತಗೊಳಿಸುವ ಪರಿಸ್ಥಿತಿಯನ್ನು ಎದುರಿಸಬಹುದು. ಇದರಿಂದ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಸಣ್ಣ ವ್ಯಾಪಾರಿಗಳು, ಹೋಟೆಲ್‌ಗಳು, ಬೇಕರಿಗಳು, ಗೃಹಾಧಾರಿತ ಉದ್ಯಮಗಳು ಮತ್ತು ಸಣ್ಣ ಉತ್ಪಾದನಾ ಘಟಕಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದಾಗ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಆದರೆ ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾದರೆ, ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ವ್ಯಾಪಾರಿಗಳಿಗೆ ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಲಾಭದ ಪ್ರಮಾಣ ಕುಗ್ಗುವುದು, ವ್ಯಾಪಾರದ ವಿಸ್ತರಣೆ ಕುಂಠಿತಗೊಳ್ಳುವುದು ಮತ್ತು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಬೆಲೆ ಏರಿಕೆ ಕೇವಲ ಗ್ರಾಹಕರ ಸಮಸ್ಯೆಯಾಗಿರದೆ, ಉತ್ಪಾದಕರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಒಟ್ಟಾರೆ ಆರ್ಥಿಕ ವ್ಯವಸ್ಥೆಯ ಸಮಸ್ಯೆಯಾಗಿದೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯಲ್ಲಿ ರೆಪೊ ದರವನ್ನು ಪ್ರಮುಖ ಸಾಧನವಾಗಿ ಬಳಸುತ್ತದೆ. ಹಣದುಬ್ಬರ ಹೆಚ್ಚಾದಾಗ ಬಡ್ಡಿದರ ಹೆಚ್ಚಿಸುವ ಮೂಲಕ ಮಾರುಕಟ್ಟೆಯಲ್ಲಿನ ಹಣದ ಹರಿವು ಮತ್ತು ಬೇಡಿಕೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಬಹುದು. ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಮುಖ್ಯವಾಗಿ ಪೂರೈಕೆ ಕೊರತೆ ಮತ್ತು ಉತ್ಪಾದನಾ ಸಮಸ್ಯೆಗಳಿಂದ ಉಂಟಾದರೆ, ಕೇವಲ ಬಡ್ಡಿದರ ಹೆಚ್ಚಳದಿಂದ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ.

ಬಡ್ಡಿದರ ಹೆಚ್ಚಳದಿಂದ ಗೃಹಸಾಲ, ವಾಹನ ಸಾಲ ಮತ್ತು ಉದ್ಯಮಗಳ ಸಾಲದ ವೆಚ್ಚವೂ ಹೆಚ್ಚಾಗಬಹುದು. ಇದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಮತ್ತೊಂದು ರೀತಿಯ ಒತ್ತಡ ಉಂಟಾಗುವ ಸಾಧ್ಯತೆಯಿದೆ. ಹಣದುಬ್ಬರ ನಿಯಂತ್ರಣವು ಕೇವಲ ಆರ್ಥಿಕ ನೀತಿಯ ವಿಚಾರವಲ್ಲ; ಅದು ಸಾಮಾಜಿಕ ಮತ್ತು ಜನಜೀವನಕ್ಕೆ ಸಂಬಂಧಿಸಿದ ಮಹತ್ವದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಆರ್ಥಿಕ ನೀತಿಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ಸರಬರಾಜನ್ನು ಹೆಚ್ಚಿಸುವುದು, ಕೃಷಿ ಉತ್ಪಾದನೆಗೆ ಬೆಂಬಲ ನೀಡುವುದು, ಮಾರುಕಟ್ಟೆಯಲ್ಲಿ ಕೃತಕ ಕೊರತೆ ಮತ್ತು ದಾಸ್ತಾನು ಸಂಗ್ರಹಣೆಯನ್ನು ನಿಯಂತ್ರಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ದುರ್ಬಲ ವರ್ಗಗಳಿಗೆ ಗುರಿಪಡಿಸಿದ ಆರ್ಥಿಕ ನೆರವು ನೀಡುವುದು ಪ್ರಮುಖ ಕ್ರಮಗಳಾಗಿವೆ.

ಜೊತೆಗೆ, ಸಾರಿಗೆ ಮತ್ತು ಇಂಧನ ವೆಚ್ಚಗಳನ್ನು ನಿಯಂತ್ರಿಸುವುದು ಹಾಗೂ ಕೃತಕ ಅಭಾವ ಸೃಷ್ಟಿಸುವ ಮತ್ತು ಅನಗತ್ಯ ದಾಸ್ತಾನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ರೈತರಿಂದ ಗ್ರಾಹಕರವರೆಗೆ ನೇರ ಮಾರುಕಟ್ಟೆ ಸಂಪರ್ಕ ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಪ್ರೋತ್ಸಾಹಿಸಬೇಕು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಖರೀದಿ ಸಾಮರ್ಥ್ಯವನ್ನು ಕಾಪಾಡಲು ಸೂಕ್ತ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಈ ರೀತಿಯಲ್ಲಿ ವ್ಯವಸ್ಥೆಯನ್ನು ಸುಧಾರಿಸುವುದು ಬೆಲೆ ಸ್ಥಿರತೆಗೆ ಸಹಕಾರಿಯಾಗುತ್ತದೆ. ಒಟ್ಟಾರೆ, ಬೆಲೆ ಏರಿಕೆ ಮತ್ತು ಹಣದುಬ್ಬರವು ಜನಸಾಮಾನ್ಯರ ಜೀವನಮಟ್ಟ, ಖರೀದಿ ಸಾಮರ್ಥ್ಯ, ಉಳಿತಾಯ, ಆಹಾರ ಭದ್ರತೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿವೆ. ಹಾಲು, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ತರಕಾರಿ, ಇಂಧನ ಮತ್ತು ಸಾರಿಗೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಕುಟುಂಬಗಳ ಮಾಸಿಕ ಬಜೆಟ್ ಅನ್ನು ಅಸ್ಥಿರಗೊಳಿಸುತ್ತಿದೆ.

ವಿಶೇಷವಾಗಿ ಕಡಿಮೆ ಆದಾಯದ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಮೂಲಭೂತ ಅಗತ್ಯಗಳಿಗಾಗಿ ಬಳಸಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಆದ್ದರಿಂದ ಬೆಲೆ ಏರಿಕೆಯನ್ನು ಕೇವಲ ಮಾರುಕಟ್ಟೆಯ ಸಾಮಾನ್ಯ ಬೆಳವಣಿಗೆಯಾಗಿ ಪರಿಗಣಿಸದೆ, ಜನರ ಜೀವನಮಟ್ಟ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ಗಂಭೀರ ಆರ್ಥಿಕ ಸಮಸ್ಯೆಯಾಗಿ ನೋಡಬೇಕು. ಬೆಲೆ ಸ್ಥಿರತೆ, ಉತ್ಪಾದನಾ ವೃದ್ಧಿ, ಸಮರ್ಪಕ ಸರಬರಾಜು, ಪರಿಣಾಮಕಾರಿ ಸರ್ಕಾರದ ನೀತಿಗಳು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆಯ ಮೂಲಕವೇ ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡಿ ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. 

ದಿನಸಿ ವಸ್ತುಗಳ ಬೆಲೆ ಏರಿಕೆ:

– ಹಡಪದ ಸರ್ವಮಂಗಳಾ

(ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ, ಶ್ರೀ ಲಕ್ಷ್ಮಿ ಕಾನೂನು ಕಾಲೇಜು, ಬೆಂಗಳೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ)

ವಿಷಯಗಳು: #ಬೆಲೆ ಏರಿಕೆ
MMurali Maluru

Murali Maluru

Peepal Media · ಅಂಕಣ ವಿಭಾಗ

Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.

ಸಂಬಂಧಿತ ಸುದ್ದಿಗಳು