ಪತಿ ವಿರುದ್ಧ ಪೊಲೀಸ್ ದೂರು ನೀಡಿಲ್ಲವೆಂಬ ಕಾರಣಕ್ಕೆ ಪತ್ನಿಯ ದೌರ್ಜನ್ಯದ ಆರೋಪ ಸುಳ್ಳಾಗುವುದಿಲ್ಲ: ಕರ್ನಾಟಕ ಹೈಕೋರ್ಟ್
ಲಿಂಕ್ ನಕಲಿಸಲಾಗಿದೆ ✓
ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ ದಂಪತಿಗೆ ವಿಚ್ಛೇದನ ಮಂಜೂರು – ಮಕ್ಕಳ ಭವಿಷ್ಯ, ಸಾಮಾಜಿಕ ಗೌರವದ ಆತಂಕದಿಂದ ಮಹಿಳೆಯರು ಮೌನವಾಗಿರಬಹುದು ಎಂದ ನ್ಯಾಯಪೀಠ
ಬೆಂಗಳೂರು: ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂಬ ಕಾರಣಕ್ಕೆ ಪತ್ನಿ ಮಾಡಿರುವ ದೈಹಿಕ ಹಾಗೂ ಮಾನಸಿಕ ಕಿರುಕುಳದ ಆರೋಪಗಳನ್ನು ಸುಳ್ಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವೈವಾಹಿಕ ಜೀವನದ ಗೌಪ್ಯತೆ, ಸಾಮಾಜಿಕ ಗೌರವಕ್ಕೆ ಧಕ್ಕೆಯಾಗುವ ಭೀತಿ, ಮಕ್ಕಳ ಭವಿಷ್ಯದ ಚಿಂತೆ ಹಾಗೂ ಮದುವೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ಅನೇಕ ಮಹಿಳೆಯರು ಪತಿಯ ವಿರುದ್ಧ ಪೊಲೀಸ್ ದೂರು ನೀಡಲು ಹಿಂದೇಟು ಹಾಕಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ವಿಚ್ಛೇದನ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ.ಎಸ್. ಭರತ್ ಕುಮಾರ್ ಅವರ ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.
19 ವರ್ಷಗಳ ದಾಂಪತ್ಯದಲ್ಲಿ ಕಿರುಕುಳದ ಆರೋಪ
ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಈ ದಂಪತಿ 1999ರ ಜೂನ್ 4ರಂದು ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರಿಯಿದ್ದಾಳೆ. ಮದುವೆಯಾದ ಕೆಲವೇ ತಿಂಗಳಲ್ಲಿ ಪತಿ ಮದ್ಯವ್ಯಸನಕ್ಕೆ ಒಳಗಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದರು ಎಂಬುದು ಪತ್ನಿಯ ಆರೋಪವಾಗಿತ್ತು.
ಪತಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಒಂದು ಸಂದರ್ಭದಲ್ಲಿ ಕುತ್ತಿಗೆ ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಆಕೆ ನ್ಯಾಯಾಲಯದಲ್ಲಿ ವಿವರಿಸಿದ್ದರು. ಅಲ್ಲದೆ, 29 ಚೆಕ್ಗಳ ಮೂಲಕ ತನ್ನಿಂದ ಸುಮಾರು 25.08 ಲಕ್ಷ ರೂಪಾಯಿ ಪಡೆದಿದ್ದು, ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಚಿನ್ನಾಭರಣಗಳನ್ನು ಪಡೆದು ದುಶ್ಚಟಗಳಿಗೆ ಬಳಸಿಕೊಂಡಿದ್ದಾರೆ. ವ್ಯವಹಾರ ಆರಂಭಿಸುವ ನೆಪದಲ್ಲಿ ತನ್ನ ತಾಯಿಯಿಂದಲೂ ಎರಡು ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಪತಿಯ ವರ್ತನೆಯಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಹಾಗೂ ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿರುವುದಾಗಿಯೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಕೌಟುಂಬಿಕ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆ
ಈ ಹಿನ್ನೆಲೆಯಲ್ಲಿ ಪತ್ನಿ 2017ರಲ್ಲಿ ವಿಚ್ಛೇದನ ಕೋರಿ ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಪತಿಯ ವಿರುದ್ಧ ಪೊಲೀಸ್ ದೂರು ದಾಖಲಿಸದಿರುವುದು ಹಾಗೂ ಸಲ್ಲಿಸಿದ್ದ ವೈದ್ಯಕೀಯ ದಾಖಲೆಗಳು ಆರೋಪಗಳನ್ನು ಸಮರ್ಥಿಸಲು ಸಾಕಾಗುವುದಿಲ್ಲ ಎಂಬ ಕಾರಣ ನೀಡಿ 2019ರ ಡಿಸೆಂಬರ್ 13ರಂದು ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಪೊಲೀಸ್ ದೂರು ದಾಖಲಿಸದಿರುವುದನ್ನೇ ದೌರ್ಜನ್ಯದ ಆರೋಪಗಳನ್ನು ತಿರಸ್ಕರಿಸಲು ಆಧಾರವಾಗಿ ಬಳಸಲಾಗದು ಎಂದು ಸ್ಪಷ್ಟಪಡಿಸಿದೆ.
ಮದುವೆಯನ್ನು ಉಳಿಸಿಕೊಳ್ಳುವ ಆಶಯ, ಮಕ್ಕಳ ಭವಿಷ್ಯದ ಕಾಳಜಿ, ಸಂಗಾತಿಯ ಮೇಲಿನ ಆರ್ಥಿಕ ಅಥವಾ ಕೌಟುಂಬಿಕ ಅವಲಂಬನೆ ಹಾಗೂ ಪತಿಯ ವರ್ತನೆ ಬದಲಾಗಬಹುದು ಎಂಬ ನಿರೀಕ್ಷೆ ಮಹಿಳೆಯರು ದೂರು ನೀಡದೆ ಇರಲು ಕಾರಣವಾಗಿರಬಹುದು ಎಂದು ನ್ಯಾಯಪೀಠ ವಿವರಿಸಿದೆ.
ಅಂತಿಮವಾಗಿ ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ಕೌಟುಂಬಿಕ ದೌರ್ಜನ್ಯದ ಪ್ರಕರಣಗಳಲ್ಲಿ ಮಹಿಳೆಯರ ಅನುಭವ ಮತ್ತು ಲಭ್ಯವಿರುವ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂಬ ಸಂದೇಶವನ್ನು ಈ ತೀರ್ಪು ನೀಡಿದೆ. ಕೇವಲ ಪೊಲೀಸ್ ದೂರು ದಾಖಲಾಗಿಲ್ಲ ಎಂಬ ಕಾರಣಕ್ಕೆ ದೌರ್ಜನ್ಯದ ಆರೋಪಗಳನ್ನು ನಿರ್ಲಕ್ಷಿಸುವಂತಿಲ್ಲ ಎಂಬುದು ಈ ತೀರ್ಪಿನ ಪ್ರಮುಖ ಕಾನೂನು ಮಹತ್ವವಾಗಿದೆ.
Peepal Media Desk
Peepal Media · ಕಾನೂನು ವಿಭಾಗ