ಹೆದ್ದಾರಿ ವಿಸ್ತರಣೆಗೆ 400 ವರ್ಷಗಳ ಪೀರ್ ಬಾಬಾ ದರ್ಗಾ ತೆರವು ವಿರೋಧಿಸಿ ಹಿಂದೂ–ಮುಸ್ಲಿಮರಿಂದ ಒಗ್ಗಟ್ಟು ಪ್ರದರ್ಶನ
ಲಿಂಕ್ ನಕಲಿಸಲಾಗಿದೆ ✓
ಬಿಹಾರದ ದರ್ಭಾಂಗ ಜಿಲ್ಲೆಯ ಚಂದನ್‌ಪಟ್ಟಿ–ರಘುನಾಥಪುರ ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸವಿರುವ ಪೀರ್ ಬಾಬಾ ದರ್ಗಾ ಮತ್ತು ಸ್ಮಶಾನವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ತೆರವುಗೊಳಿಸುವ ಪ್ರಸ್ತಾವಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ದರ್ಗಾ ಉಳಿಸುವಂತೆ ಆಗ್ರಹಿಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಒಟ್ಟಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಹಯಾಘಾಟ್ ಬ್ಲಾಕ್‌ನ ಈ ಗ್ರಾಮದಲ್ಲಿರುವ ಪೀರ್ ಬಾಬಾ ದರ್ಗಾಕ್ಕೆ ಸುಮಾರು ನಾಲ್ಕು ಶತಮಾನಗಳಿಂದ ಎಲ್ಲ ಧರ್ಮಗಳ ಜನರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಇದೀಗ ದರ್ಗಾ ಮತ್ತು ಸ್ಮಶಾನವನ್ನು ಉಳಿಸಿಕೊಳ್ಳಲು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮಜಾರ್ ಬಚಾವೋ ಸಂಘರ್ಷ ಮೋರ್ಚಾ ನೇತೃತ್ವದಲ್ಲಿ ದರ್ಗಾದ ಸಮೀಪ ಟೆಂಟ್ ಹಾಕಿಕೊಂಡು ಧರಣಿ ನಡೆಸಲಾಗುತ್ತಿದೆ. ಹಿಂದೂ ಸಮುದಾಯದ ರಾಜೇಶ್ ಎಂಬುವವರು ದರ್ಗಾದಲ್ಲಿ ಕುರಾನ್‌ಖಾನಿ ಆಯೋಜಿಸಿ, ಅದರ ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದು ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಹೆದ್ದಾರಿ ಮಾರ್ಗ ಬದಲಾವಣೆಗೆ ಗ್ರಾಮಸ್ಥರ ಆಕ್ಷೇಪ
ದರ್ಭಾಂಗ–ರೋಸೆರಾ ನಡುವಿನ ರಾಷ್ಟ್ರೀಯ ಹೆದ್ದಾರಿ 527E ಮಾರ್ಗವನ್ನು 2020ರಲ್ಲಿ ಅಂತಿಮಗೊಳಿಸಿದಾಗ ದರ್ಗಾದಿಂದ ಸುಮಾರು 50 ಅಡಿ ದೂರದಲ್ಲಿ ರಸ್ತೆ ಹಾದುಹೋಗುವಂತೆ ಯೋಜಿಸಲಾಗಿತ್ತು. ಇದರಿಂದ ದರ್ಗಾಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆದರೆ, 2025ರಲ್ಲಿ ಪರಿಷ್ಕರಿಸಲಾದ ನಕ್ಷೆಯಲ್ಲಿ ಹೆದ್ದಾರಿ ಮಾರ್ಗವನ್ನು ಬದಲಿಸಿ ದರ್ಗಾದ ಮೇಲೆಯೇ ಹಾದುಹೋಗುವಂತೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಉದ್ದೇಶಪೂರ್ವಕವಾಗಿ ರಸ್ತೆ ಮಾರ್ಗವನ್ನು ದರ್ಗಾದ ಕಡೆಗೆ ಬದಲಿಸಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತವೂ ರಸ್ತೆ ನಿರ್ಮಾಣ ಇಲಾಖೆಗೆ ಪತ್ರ ಬರೆದಿದೆ. ಪ್ರಸ್ತಾವಿತ ರಸ್ತೆ ಮಾರ್ಗದಲ್ಲಿ ದರ್ಗಾ, ಸ್ಮಶಾನ, ಪೆಟ್ರೋಲ್ ಬಂಕ್ ಮತ್ತು ಶಾಲೆ ಇರುವುದರಿಂದ ರಸ್ತೆ ಮಾರ್ಗವನ್ನು ಬದಲಿಸುವುದು ಸೂಕ್ತ ಎಂದು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ. ಜುಲೈ ಮತ್ತು ಆಗಸ್ಟ್ ನಡುವೆ ಮಜಾರ್ ಸಮಿತಿಯೊಂದಿಗೆ ನಾಲ್ಕು ಬಾರಿ ಸಭೆ ನಡೆಸಿದ ಬಳಿಕ ಈ ಅಭಿಪ್ರಾಯಕ್ಕೆ ಬಂದಿದೆ ಎಂದು ವರದಿ ತಿಳಿಸಿದೆ.
ದರ್ಗಾವನ್ನು ಬೇರೆಡೆ ನಿರ್ಮಿಸುವ ಪ್ರಸ್ತಾವ ತಿರಸ್ಕಾರ
ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆಗಸ್ಟ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ, ರಸ್ತೆ ಮಾರ್ಗದಲ್ಲಿನ ಶೇ.70ಕ್ಕೂ ಹೆಚ್ಚು ಭೂಸ್ವಾಧೀನ ಪರಿಹಾರವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗ ಮಾರ್ಗ ಬದಲಿಸಿದರೆ ಕಾಮಗಾರಿ ವಿಳಂಬವಾಗುವುದರ ಜತೆಗೆ ಈಗಾಗಲೇ ಖರ್ಚು ಮಾಡಿರುವ ಹಣ ವ್ಯರ್ಥವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಮಾರ್ಗ ಬದಲಿಸಿದರೆ ಸುಮಾರು ಎರಡು ಕಿಲೋಮೀಟರ್ ಹಿಂದಿನಿಂದಲೇ ಕಾಮಗಾರಿಯನ್ನು ಮರುಪ್ರಾರಂಭಿಸಬೇಕಾಗುತ್ತದೆ ಎಂದು ವರದಿಯಾಗಿದೆ.
ಇದೇ ವೇಳೆ, ಗ್ರಾಮಸ್ಥರು ಆಯ್ಕೆ ಮಾಡುವ ಸ್ಥಳದಲ್ಲಿ ಅಮೃತಶಿಲೆಯಿಂದ ಹೊಸ ದರ್ಗಾ ನಿರ್ಮಿಸಿ, ಅದರೊಂದಿಗೆ ಆಶ್ರಯ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವವನ್ನು ಜಿಲ್ಲಾಡಳಿತ ಮುಂದಿಟ್ಟಿತ್ತು. ಆದರೆ, ಗ್ರಾಮಸ್ಥರು ಈ ಪ್ರಸ್ತಾವವನ್ನು ಒಪ್ಪಿಕೊಳ್ಳಲಿಲ್ಲ. ಆಗಸ್ಟ್ 22ರಂದು ನಡೆದ ಸಭೆಯಲ್ಲಿ ಸ್ಮಶಾನ ಸಮಿತಿ ಮತ್ತು ಗ್ರಾಮಸ್ಥರು ಮಾತುಕತೆಯಿಂದ ಹಿಂದೆ ಸರಿದು ಧರಣಿ ಆರಂಭಿಸಿದರು.
ರಾಜಕೀಯ ನಾಯಕರ ಬೆಂಬಲ
ದರ್ಗಾ ಉಳಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಬೆಂಬಲ ಸೂಚಿಸಿದ್ದಾರೆ. ಬಿಹಾರ ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ, ಸ್ವತಂತ್ರ ಸಂಸದ ಪಪ್ಪು ಯಾದವ್, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಶಕೀಲ್ ಅಹ್ಮದ್ ಖಾನ್ ಮತ್ತು ಮಾಜಿ ಶಾಸಕ ಫರಾಜ್ ಫಾತ್ಮಿ ಗ್ರಾಮಸ್ಥರ ಬೇಡಿಕೆಗೆ ಬೆಂಬಲ ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರು ದರ್ಭಾಂಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಹೆದ್ದಾರಿ ಮಾರ್ಗ ಬದಲಿಸಿ 400 ವರ್ಷಗಳಷ್ಟು ಹಳೆಯ ದರ್ಗಾವನ್ನು ಉಳಿಸುವಂತೆ ಮನವಿ ಸಲ್ಲಿಸಿದ್ದಾರೆ.
ಪಾಟ್ನಾ ಹೈಕೋರ್ಟ್‌ನಲ್ಲೂ ವಿಚಾರಣೆ
ಸೆಪ್ಟೆಂಬರ್ 7ರಂದು ಭೂಸ್ವಾಧೀನ ಕಚೇರಿಯು ಪ್ಲಾಟ್ ಸಂಖ್ಯೆ 24ರಲ್ಲಿರುವ ಭೂಮಿಗೆ 9,76,493 ರೂಪಾಯಿ ಪರಿಹಾರ ನಿಗದಿಪಡಿಸಿರುವುದಾಗಿ ತಿಳಿಸಿತ್ತು. ಸೆಪ್ಟೆಂಬರ್ 13ರೊಳಗೆ ಭೂ ದಾಖಲೆಗಳೊಂದಿಗೆ ಹಾಜರಾಗುವಂತೆ ಭೂಮಿಯ ಮಾಲೀಕರಿಗೆ ಸೂಚಿಸಿತ್ತು. ಇದಕ್ಕೆ ಬಿಹಾರ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸೆಪ್ಟೆಂಬರ್ 30ರಂದು ಆಕ್ಷೇಪ ವ್ಯಕ್ತಪಡಿಸಿ, ರಸ್ತೆ ಮಾರ್ಗ ಬದಲಿಸುವಂತೆ ಸಲಹೆ ನೀಡಿತ್ತು.
ಈ ವಿವಾದ ಈಗ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದೆ. ಮೊಹಮ್ಮದ್ ನಸೀಮ್ ಅವರು ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
ನವೆಂಬರ್ 19ರಂದು ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಅಂತಿಮ ನಿರ್ಧಾರ ಕೈಗೊಳ್ಳಲು ಅಧಿಕಾರಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ರಸ್ತೆ ಮಾರ್ಗ ಬದಲಿಸುವ ಬೇಡಿಕೆಯನ್ನು ತಜ್ಞರಿಂದ ಮತ್ತೊಮ್ಮೆ ಪರಿಶೀಲಿಸುವ ಸಾಧ್ಯತೆಯಿದೆ ಎಂದೂ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಜಿತ್ ಕುಮಾರ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ನಿಗದಿಪಡಿಸಿದ್ದಾರೆ.
39.50 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಯೋಜನೆಗೆ 2022ರ ಜನವರಿಯಲ್ಲಿ 495.16 ಕೋಟಿ ರೂಪಾಯಿ ಮಂಜೂರಾಗಿತ್ತು. ಸದ್ಯ ಹೆದ್ದಾರಿ ಕಾಮಗಾರಿ, ದರ್ಗಾ ಮತ್ತು ಸ್ಮಶಾನದ ಭವಿಷ್ಯದ ಕುರಿತು ಅಂತಿಮ ನಿರ್ಧಾರಕ್ಕಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.
Peepal Media
Peepal Media · ದೇಶ ವಿಭಾಗ