Monday, April 29, 2024

ಸತ್ಯ | ನ್ಯಾಯ |ಧರ್ಮ

ಅಂಡಮಾನ್‌ ಡೈರಿ 3 | ಇಬ್ಬದಿಯ ಕೀಲು ಇಂತಿಪ್ಪ ಬಾಳು

ಅಂಡಮಾನ್ ಡೈರಿಯ ಈ ಮೂರನೆಯ ಭಾಗದಲ್ಲಿ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿಯರು ದ್ವೀಪ ಸಮೂಹವನ್ನು ವಶಪಡಿಸಿಕೊಂಡಾಗ ಅಲ್ಲಿನ ಮಹಿಳೆಯರ ಬದುಕು ಹೇಗೆ ಇತ್ತು ಎಂಬುದನ್ನು ಕಟ್ಟಿಕೊಡುವ ಸಣ್ಣ ಪ್ರಯತ್ನವನ್ನು ಮಾಡಲಾಗಿದೆ – ರಾಜಲಕ್ಷ್ಮೀ ಎನ್ ಕೆ.

ಇದಕ್ಕೆಲ್ಲ ಪ್ರೇರಣೆ ದೊರೆತದ್ದು ನಾನು ಶಕುಂತಲಾ ಶಿವರಾಂ ರವರ ಅಂಡಮಾನ್ ಇತಿಹಾಸದ ಬಗೆಗಿನ ಪುಸ್ತಕದಿಂದಲೂ ಎಂದರೆ ತಪ್ಪಾಗಲಿಕ್ಕಿಲ್ಲ. ಅಂಡಮಾನ್ ಕುರಿತ ಮಾಹಿತಿಯಿರುವ ಪುಸ್ತಕ ಇದಾಗಿರಬಹುದು ಎಂಬ ಕುತೂಹಲದಿಂದ ಎತ್ತಿಕೊಂಡ ಪುಸ್ತಕ ನನ್ನನ್ನು ಇತಿಹಾಸದ ವಿಭಿನ್ನ ಗಲ್ಲಿಗಳಲ್ಲಿ ಸುತ್ತಾಡಿಸಿ ಹೊಸ ಅನುಭವ, ಮಹಿಳೆಯರ “ಬದುಕು/ ದೇಶ ಕಟ್ಟುವ” ವಿಶಿಷ್ಠ ರೂಪದರ್ಶನ ಮಾಡಿಸುವ ಮೂಲಕ ಇತಿಹಾಸದ ಸ್ವರೂಪವನ್ನು ಮರು ನಿರೂಪಿಸಿತು ಎಂದೇ ಹೇಳಬಹುದು. ಶಕುಂತಲಾ ಶಿವರಾಂರವರು ಶಾಲಾ ಶಿಕ್ಷಕಿ ಆಗಿದ್ದವರು, ಅಂಡಮಾನ್ ನಲ್ಲಿ ಹುಟ್ಟಿ ಬೆಳೆದವರು. ಅವರಿಗೀಗ 85 ವರ್ಷ. ಅಂಡಮಾನನ್ನು ಜಪಾನ್ ಅಕ್ರಮಿಸುವಾಗ ಆಕೆಗೆ ಸುಮಾರು ಆರು ಅಥವಾ ಏಳು ವರ್ಷವಿದ್ದಿರಬಹುದು. ಮಸುಕಾದ ತನ್ನ ಕೆಲವೇ ನೆನಪುಗಳು ಹಾಗೂ ತನ್ನ ಓರಗೆಯವರ ನೆನಪುಗಳು, ತದನಂತರದಲ್ಲಿ ಆ ಸಮಯದಲ್ಲಿ ಬದುಕಿ ಬಾಳಿದ ಮಹಿಳೆಯರ ನೆನಪುಗಳ ಆಧಾರದಲ್ಲಿ ಶಕುಂತಲಾರವರು  ಜಪಾನ್ ಆಕ್ರಮಿತ ಅಂಡಮಾನ್ ನ ಮಹಿಳೆಯರ ಸ್ಥಿತಿಗತಿಗಳನ್ನು ಹೇಳುತ್ತಾರೆ.

ಅವರು ಎರಡನೇ ಮಹಾಯುದ್ಧದ ಕಾಲಘಟ್ಟವನ್ನು ಕಟ್ಟಿಕೊಡುವ ರೀತಿ ಇತರಿಗಿಂತ ತುಸು ಭಿನ್ನವಾಗಿದೆ. ಈ ಭಿನ್ನತೆಗೆ ನಿಖರವಾದ, ನಿರ್ದಿಷ್ಟವಾದ ಕಾರಣವೇನಾದರೂ ಇರಬಹುದೇನೋ?  ಅವರು ನೀಡುವ ಕಥಾನಕದಲ್ಲಿ ನನ್ನ ಅರಿವಿಗೆ  ಎರಡು ವಿಷಯಗಳು ಎದ್ದು ಕಾಣುತ್ತವೆ. ಮೊದಲನೆಯದು ಹಳೆಯ ಅನುಭವಗಳ ಕುರಿತಂತಹ ಒಂದು ರಮ್ಯ ಕಲ್ಪನೆ. ಎರಡನೆಯದು ಶತ್ರುಗಳ ಆಡಳಿತದಲ್ಲಿ ಅವರಲ್ಲಿದ್ದಿರಬಹುದೆಂದು ಭಾವಿಸಿದ ಒಳ್ಳೆಯ ಗುಣಗಳ ಬಗೆಗಿನ ಆರಾಧಕತೆ. ಈ ಆರಾಧಕಾ ಮನೋಭಾವ ಚಿತ್ರನಟ ಡಾ. ರಾಜಕುಮಾರ್ ನ್ನು ವೀರಪ್ಪನ್ ಸೆರೆಹಿಡಿದು ನಂತರ ಬಿಡುಗಡೆಯಾದ ಸಂದರ್ಭದಲ್ಲಿ ವೀರಪ್ಪನ್ “ಬಹಳ ಸಂಭಾವಿತ ಮನುಷ್ಯ” ಎಂದು ಹೇಳಿದ ರೀತಿಯದು. ಇದೊಂದು ರೀತಿಯ ವಿಚಿತ್ರ ಮನಸ್ಥಿತಿಯಲ್ಲಿ ಕಾಣಬರುವ ಪ್ರೀತಿ. ಸೆರೆ ಹಿಡಿದದ್ದು ಮರೆತೇಹೋಗಿ ಆತನ ಸಂಭಾವಿತತನ ಮನಸ್ಸಲ್ಲಿ ಉಳಿಯಿತು. ಅದೇ ರೀತಿ ಶಕುಂತಲಾರವರು ಜಪಾನ್ ಆಡಳಿತದ ಸಂದರ್ಭದಲ್ಲಿ ಅವರ ಹಿಂಸೆಯ ಕ್ರೌರ್ಯದ ಆಡಳಿತವನ್ನು ಗುರುತಿಸುತ್ತಾರಾದರೂ ಅವರಲ್ಲಿದ್ದ ಒಳ್ಳೆಯತನವನ್ನು ಹೊಗಳುವುದಕ್ಕೆ ಹಿಂದೇಟು ಹಾಕುವುದಿಲ್ಲ. ಕೆಲವೊಮ್ಮೆ ನೆನಪು ಕಟ್ಟಿಕೊಡುವ ಚರಿತ್ರೆಗಳು ರಮ್ಯ  ಕಲ್ಪನೆಗಳು, ಸಮರ್ಪಕ ಮುಕ್ತಾಯದ ಕಥೆಗಳಾಗಿರುತ್ತವೆ.

1942 ರಲ್ಲಿ ಅಂಡಮಾನ್ ದ್ವೀಪದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಮಹಾಯುದ್ಧವು ದ್ವೀಪವನ್ನು ಸಾಮಾಜಿಕವಾಗಿ, ರಾಜಕೀಯವಾಗಿ  ಆಡಳಿತಾತ್ಮಕವಾಗಿ ಅಲ್ಲೋಲಕಲ್ಲೋಲ ಮಾಡಿತು ಎನ್ನಲಾಗುತ್ತದೆ..ಆಗಷ್ಟೇ ಸುಂದರವಾಗಿ ನಿರ್ಮಾಣ ಗೊಳ್ಳುತ್ತಿದ್ದ ಒಂದು ಸಮಾಜ ಗುರುತಿಸಲಾರದಂತಹ ಹಾನಿಗೊಳಗಾಗುತ್ತದೆ. ಆರ್ಥಿಕ ಬೆಳವಣಿಗೆ ಕೂಡ ಚೇತರಿಸಲಾಗದಷ್ಟು ಕುಸಿಯುತ್ತದೆ. ಮಹಾಯುದ್ಧ ನಡೆಯುತ್ತಿದೆ ಎಂಬುದಷ್ಟೇ ದ್ವೀಪವಾಸಿಗಳಿಗೆ ಇದ್ದ ಜ್ಞಾನ. ಅವರಿಗೆ ಈ ಯುದ್ಧ ತಮ್ಮ ಜೀವನವನ್ನೇ ನಡುಗಿಸುವ ಭವಿಷ್ಯದ ದಿನಗಳ ಬಗ್ಗೆ ಒಂದಿಷ್ಟೂ ಕಲ್ಪನೆ ಇರಲಿಲ್ಲ.   ದ್ವೀಪದಲ್ಲಿ ಬೇರೆಡೆಯಿಂದ ಬಂದು ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಬ್ರಿಟಿಷ್ ಆಡಳಿತಗಾರರು ದ್ವೀಪವನ್ನು ತೊರೆದು ಹೋಗಲು ಅವಕಾಶವಿದೆ ಎಂದು ಘೋಷಿಸಿದಾಗ ಯುದ್ಧದ ಕಾರ್ಮೋಡಗಳು ತಮ್ಮ ದ್ವೀಪದ ಮೇಲೂ ಹಾದು ಹೋಗುತ್ತಿವೆ ಎಂಬ ಸೂಚನೆ ಅಲ್ಲಿನ ಜನರಿಗೆ ದೊರಕಿತು. ದ್ವೀಪದ ಮೇಲೆ ಬ್ರಿಟಿಷರ ಹಿಡಿತ ಸಡಿಲವಾಗುತ್ತಿದೆ ಎಂಬ ಸುಳಿವು ದೊರಕಿದ್ದು ಲಾರ್ಡ್ ವೇವಲ್ ಸಿಂಗಪುರದಿಂದ ಮಧ್ಯರಾತ್ರಿ  ಪೋರ್ಟ್ ಬ್ಲೇರ್ ನಲ್ಲಿ ಬಂದಿಳಿದಾಗ.

 ಯುದ್ಧದ ತೀವ್ರತೆ ಹಾಗೂ ದ್ವೀಪದ ಮೇಲೆ ಅದರ ಪರಿಣಾಮವನ್ನು ಮನಗಂಡ ಹಲವು ಅಧಿಕಾರಿಗಳು ತಮ್ಮ ಸಂಸಾರವನ್ನು ತ್ವರಿತ ಗತಿಯಲ್ಲಿ ಭಾರತದ ಮುಖ್ಯ ಭೂಮಿಗೆ ಸ್ಥಳಾಂತರಿಸಿದ್ದರು. ತದನಂತರ ತಮ್ಮ ಅಳಿದುಳಿದ ಕರ್ತವ್ಯವನ್ನು ಪೂರೈಸಿ ಅವರು ಕೂಡ ಭಾರತ ಮುಖ್ಯ ಭೂಮಿಗೆ ತೆರಳಿದರು. ಆದರೆ ಇಲ್ಲಿಯೇ ಹುಟ್ಟಿ ಬೆಳೆದ ಅಪಾರ ಜನಸಂಖ್ಯೆಯ  ಅಂಡಮಾನಿಗರು ಹೋಗುವುದಾದರೂ ಎಲ್ಲಿಗೆ? ತಮ್ಮದೇ ಭೂಮಿ ತಮ್ಮದೇ ಊರು…. ಹಾಗಾಗಿ ಅವರು ದ್ವೀಪದಲ್ಲಿಯೇ ಉಳಿದರು. ಆಂಗ್ಲರ ಆಡಳಿತ ಕೊನೆಗೊಂಡು ಜಪಾನ್ ಆಡಳಿತಗಾರರು ಅಧಿಕಾರವನ್ನು ಕೈಗೆತ್ತಿಕೊಳ್ಳುವ ನಡುವೆ ಜಪಾನ್ ಮಿಲಿಟರಿ ಸಿಪಾಯಿಗಳದ್ದೇ ರಾಜ್ಯಭಾರ ಕಾರುಬಾರು. ಭಾರತದ ವಿವಿಧ ಭಾಗಗಳಿಂದ. ಬರ್ಮಾದಿಂದ ಬಂದು ನೆಲೆ ನಿಂತ ಈ ಜನರ ಬದುಕು ಕೆಲಕಾಲ ಆಂಗ್ಲರ ಆಡಳಿತದಲ್ಲಿ, ಅರೆಕಾಲ ಜಪಾನಿಯರ ಕೈಯಲ್ಲಿ ರೂಪ/ವಿರೂಪ ಗೊಂಡಿತು.

 ತಮ್ಮೊಳಗೊಬ್ಬ ತಮ್ಮವನೇ ಆದ ನಾಯಕನಿದ್ದಿದ್ದರೆ ಬಸವಳಿದ ಈ ಜನರ ಬದುಕು ಬೇರೆಯೇ ಆಗುತ್ತಿತ್ತು. ಭಾರತ ಮುಖ್ಯ ಭೂಮಿಯ ಬ್ರಿಟಿಷ್ ವಸಾಹತೀಕರಣದ ಭಾರತೀಯರ ಬದುಕು ಒಂದು ತೆರನಾದರೆ ಇಲ್ಲಿಯ ಜನತೆಯ ಬದುಕು ಬೇರೆಯೇ ತೆರನಾಗಿತ್ತು. ಹಿಂಸೆಯ ಕುಲುಮೆ ಇಲ್ಲಿ ಜ್ವಲಂತವಾಗಿತ್ತು. ಎಲ್ಲಾ ಇತಿಹಾಸದ ಪುಸ್ತಕಗಳಲ್ಲಿ ಈ ವಿಷಯ ರಕ್ತ ರಂಜಿತವಾಗಿ, ವರ್ಣಮಯವಾಗಿ ಕಾಣಬರುತ್ತದೆ. ಅಸ್ಥಿರತೆ, ಭಯ, ಹಿಂಸೆ ತಾಂಡವವಾಡುತ್ತಿದ್ದ ವಾತಾವರಣದಲ್ಲಿ ಅಲ್ಲಿನ ಮಹಿಳೆಯರ ಸ್ಥಿತಿ ಏನಿತ್ತು ಎಂಬುದನ್ನು ಶಕುಂತಲಾ ಶಿವರಾಂರವರು ಪ್ರಸ್ತಾವಿಸುತ್ತಾರೆ. ಯಾವುದೇ ಜಪಾನಿ ಸೈನಿಕ ಅಂಡಮಾನ್ ಮಹಿಳೆಯರೊಂದಿಗೆ ದುರ್ನಡತೆ ತೋರಲಿಲ್ಲ, ಮಹಿಳೆಯರನ್ನು ಈ ಸೈನಿಕರು ಶೋಷಿಸಿದರು ಎಂಬುದು ಕೇವಲ ಗಾಳಿ ಸುದ್ದಿ ಅಷ್ಟೇ ಹೊರತು ನಿಜವಲ್ಲ. ಈ ಗಾಳಿ ಸುದ್ದಿ  ಹರಡುವುದಕ್ಕೆ ಕಾರಣವಾದ ಒಂದು ಕಥೆ  ಹೀಗಿದೆ.

ಜುಲ್ಫಿಕರ್ ಆಲಿ ಯ ಅಳಿಯ ಎರಡು ವರ್ಷದ ಹುಡುಗ ಕರಿಯರಂತಿಲ್ಲ. ಕಂದು ಬಣ್ಣದವನೂ ಅಲ್ಲ. ಆಂಗ್ಲರಂತೆ ಬಿಳಿಯ ತೊಗಲಿನವನು.. ಬಿಳಿ ತೊಗಲಿನ ಈ ಹುಡುಗ ಜಪಾನಿಯರ  ಸಂಶಯದ ಕಣ್ಣಿಗೀಡಾದ. ಜಪಾನಿ ಸೈನಿಕರಿಗೆ  ಅವನ ತಂದೆ ಆಂಗ್ಲನಿರಬಹುದು ಎಂಬ ಗುಮಾನಿ. ಹಾಗಾಗಿ ಆತನ ತಾಯಿಯನ್ನು ಸೈನಿಕರು ಹಿಂಬಾಲಿಸಿ ಗಮನಿಸುತ್ತಿದ್ದರು. ಆ ಹುಡುಗನ ತಾಯಿ ಗರ್ಭಿಣಿಯಾಗಿದ್ದಳು. ನಿರೀಕ್ಷೆಯಂತೆ  ಮಗುವನ್ನೂ ಹಡೆದಳು. ಆ ಮಗು ಕೂಡ ಮೊದಲಿನ ಮಗುವಿನಂತೆ ಬಿಳಿ ತೊಗಲನ್ನೇ ಹೊಂದಿತ್ತು. ಆನಂತರ ಸೈನಿಕರು ಆಕೆಯನ್ನು ಹಿಂಬಾಲಿಸುವುದು ನಿಂತಿತು. ಅವರ ಗುಮಾನಿ ಸರಿಯಲ್ಲ ಎಂದು ತಿಳಿಯಿತು. ಈ ಕಥೆಯಿಂದಾಗಿ  ಜಪಾನೀಯರು ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಜನರು ಭಾವಿಸಿದ್ದರು.

ಜಪಾನಿಯರು “ಹೆಚ್ಚು ಆಹಾರ ಬೆಳೆಯಿರಿ” ಎಂಬ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯನುಸಾರ ಹೊಲದಲ್ಲಿ ದುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರ ಅಗತ್ಯವಿತ್ತು. ಅಂತೆಯೇ ಸ್ಥಳೀಯರನ್ನು ಹೊಲದಲ್ಲಿ ದುಡಿಯಲು ನೇಮಿಸಿಕೊಂಡರು.  ಅಧಿಕ ದೈಹಿಕ ಶ್ರಮದ ಕೆಲಸವನ್ನು ಪುರುಷರಿಗೂ  ಕಡಿಮೆ ದೈಹಿಕ ಶ್ರಮದ ಕೆಲಸವನ್ನು ಮಹಿಳೆಯರಿಗೂ ನೀಡಲಾಯಿತು. ಮಹಿಳೆಯರು ದುಡಿಯುವ ಸ್ಥಳದಲ್ಲಿ  ಅವರೊಂದಿಗೆ ಇತರರು ಅತಿ ಸಲುಗೆಯಿಂದ ವರ್ತಿಸುವುದಾಗಲಿ, ಅಶ್ಲೀಲವಾಗಿ ನಡೆದುಕೊಳ್ಳುವುದಾಗಲಿ ನಡೆಯದಂತೆ ಕಟ್ಟೆಚ್ಚರವನ್ನು ವಹಿಸಿದ್ದರು.

ಜಪಾನೀಯರು ಅಂಡಮಾನಿನ ಮಹಿಳೆಯರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಶಕುಂತಲಾ ರವರು ನೆನಪಿಸಿಕೊಳ್ಳುತ್ತಾರೆ. ಜಪಾನಿಯರು ವಿವಿಧ ಕೆಲಸಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದರು. ಮುತ್ಯಾಲಮ್ಮ ಎಂಬಾಕೆ ಸೈನಿಕರಿಗೆ ತಿಂಡಿ  ಮಾರುವ ಮಳಿಗೆಯಲ್ಲಿ ನೇಮಿತಳಾಗಿದ್ದಳು. ಒಂದು ದಿನ ತಿಂಡಿ ಮಾರಾಟ ಮಾಡುವ ವೇಳೆಯಲ್ಲಿ ಇಬ್ಬರು ಸೈನಿಕರು ಯಾವುದೋ ಕಾರಣಕ್ಕೆ ಮಳಿಗೆಯೆದುರು ತಮ್ಮೊಳಗೆ ಜಗಳವಾಡ ತೊಡಗಿದರು. ಅವರ ಜಗಳದಿಂದ ಭಯ ಭೀತಳಾದ ಮುತ್ಯಾಲಮ್ಮ ಮಳಿಗೆಯನ್ನು  ಬಿಟ್ಟು ತನ್ನ ಮನೆಗೆ ಓಡಿ ಹೋದಳು. ಓಡಿ ಹೋದ ಆಕೆಯನ್ನು ಮನೆಯಿಂದ ಕರೆತರಲಾಯಿತು. ಆಕೆ ಓಡಿ ಹೋಗಲು ಕಾರಣವೇನು ಎಂದು ತಿಳಿದು ಆಕೆಗೆ ತಿಳುವಳಿಕೆ ನೀಡಲಾಯಿತು. ಕರ್ತವ್ಯ  ನಿರ್ವಹಿಸುವಾಗ ಲೋಪವೆಸಗುವುದು ಶಿಕ್ಷಾರ್ಹ ಅಪರಾಧವೆಂದು ಎಚ್ಚರಿಕೆ ನೀಡಲಾಯಿತು. ಆಕೆ  ಮಳಿಗೆಗೆ ಹಿಂತಿರುಗುವಾಗ ಆಕೆಗೊಂದು ಅಚ್ಚರಿ ಕಾದಿತ್ತು. ಆಕೆಯ ರಕ್ಷಣೆಗಾಗಿ ಮಳಿಗೆಯ ಮುಂಭಾಗದಲ್ಲಿ ಇಬ್ಬರು ಪೇದೆಯರನ್ನು ನೇಮಿಸಲಾಗಿರುತ್ತದೆ.

 ಜಪಾನ್ ಸೈನಿಕರು ತಮ್ಮ ಪತ್ನಿಯರನ್ನು ದ್ವೀಪಕ್ಕೆ ಕರೆತಂದಿರುವುದಿಲ್ಲ ಮತ್ತು ಅವರಿಗೆ ದ್ವೀಪದಲ್ಲಿ ವಿವಾಹವಾಗುವುದಕ್ಕೆ ಅನುಮತಿಯೂ ಇರುತ್ತಿರಲಿಲ್ಲ. ಬ್ರಿಟಿಷ್ ಆಡಳಿತವು ತಮ್ಮ ಸೈನಿಕರಿಗೆ ವಿವಾಹವಾಗುವುದಕ್ಕೆ ಅನುಮತಿ ನೀಡಿತ್ತು. ಈ ಸೌಲಭ್ಯವು ಜಪಾನ್ ಸೈನಿಕರಿಗೆ ಇರಲಿಲ್ಲ. ಹಾಗಾಗಿ ಜಪಾನಿಯರಿಗೆ ತಮ್ಮ ಲೈಂಗಿಕ ಅವಶ್ಯಕತೆಯನ್ನು ಪೂರೈಸಿಕೊಳ್ಳುವುದು ಸಮಸ್ಯೆಯಾಯಿತು. ಕುಟಿಲ ಬುದ್ಧಿಯ ಕೆಲವು ಸ್ಥಳೀಯ ದ್ವೀಪವಾಸಿಗಳು ಕೆಲವು ಗೌರವಾನ್ವಿತ ಕುಟುಂಬದ ಹೆಣ್ಣು ಮಕ್ಕಳನ್ನು ಹೆಸರಿಸಿ ಅವರು ತಮಗೆ ಲಭ್ಯವಿದ್ದಾರೆಂದು ಜಪಾನಿಯರಿಗೆ ಹೇಳಿದರು. ಆ ಮಹಿಳೆಯರನ್ನು ಗುಪ್ತ ಸ್ಥಳಕ್ಕೆ   ಕರೆ ತರಲಾಯಿತು. ಆ ಸಂದರ್ಭದಲ್ಲಿ  ಮಹಿಳೆಯರು ತಾವು ಕುಲೀನ ಮನೆತನದ  ಸ್ತ್ರೀಯರು ತಮ್ಮ ನಿರೀಕ್ಷೆ ತಪ್ಪು ಎಂದು ಹೇಳುತ್ತಾ ಇದು ಕೆಲವರ ಕುಟಿಲತೆಯ ಕರಾಮತ್ತು ಎಂಬುದನ್ನು ತಿಳಿಸುತ್ತಾರೆ. ಆಗ ಅವರನ್ನು ಗೌರವದಿಂದ ಹಿಂತಿರುಗಲು ವ್ಯವಸ್ಥೆ ಮಾಡಲಾಗುತ್ತದೆ.

ತಮ್ಮ ಅವಶ್ಯಕತೆಗಾಗಿ ಜಪಾನಿಯರು ಕೊರಿಯಾದ “ಕಂಫರ್ಟ್ ವಿಮೆನ್” ಗಳನ್ನು ದ್ವೀಪಕ್ಕೆ ಕರೆಸಿಕೊಳ್ಳುತ್ತಾರೆ. ಈ ಮಹಿಳೆಯರನ್ನು ವಿವಿಧ ಭಾಗಗಳಲ್ಲಿ ವಸತಿ ನೀಡಿ ನೆಲೆಗೊಳಿಸುತ್ತಾರೆ. ಇವರಿಗೆ ಬಿಳಿಯ ಸುಗಂಧರಾಜ ಹೂವಿನ ಸುಗಂಧ ಬಹಳ ಇಷ್ಟ. ಇದನ್ನು ಮನಗಂಡ ಸ್ಥಳೀಯರು ತಾವು ಬೆಳೆದ ಹೂವು ಹಾಗೂ ಹಣ್ಣುಗಳನ್ನು ಮಾರಲು ಆರಂಭಿಸುತ್ತಾರೆ.  ಪ್ರತಿನಿತ್ಯ ಮನೆ ಮನೆಗಳಿಗೆ ತೆರಳಿ ಮಕ್ಕಳು ಮಾರಾಟವನ್ನು ಮಾಡುತ್ತಿರುತ್ತಾರೆ. ಇಂತಹ ಹೆಣ್ಣು ಮಕ್ಕಳಲ್ಲಿ ಆನ್ನಿ ಕೂಡಾ ಒಬ್ಬಳು. ಆಕೆಗೆ ಸುಮಾರು 13 ಅಥವಾ 14 ವರ್ಷವಿರಬಹುದು. ನೋಡಲು ಬಹಳ ಸುಂದರವಾಗಿದ್ದಳು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವಳು. ಆಕೆ ಹೂವು ಹಣ್ಣುಗಳನ್ನು ಮಾರಾಟ ಮಾಡುವಾಗ ಸರಕಾರಿ ಸ್ವಾಮ್ಯದ ಹೊಲದ ಉಸ್ತುವಾರಿಯನ್ನು ಹೊಂದಿದ್ದ ಜಪಾನಿಯನಾದ ಒಸಾಕನ ಕಣ್ಣಿಗೆ ಬೀಳುತ್ತಾಳೆ. ಒಸಾಕ ಆಕೆಯನ್ನು ಪ್ರೀತಿಸುತ್ತಾನೆ. ಆತನಿಗೆ ಆಕೆಯನ್ನು ಮದುವೆಯಾಗಲು ಕಾನೂನಿನ ಸಮ್ಮತಿ ಇರುವುದಿಲ್ಲ. ಆದಾಗ್ಯೂ ಆಕೆಯನ್ನು ಮದುವೆಯಾಗಲು ಬಯಸುತ್ತಾನೆ. ತನ್ನಿಚ್ಛೆಯನ್ನು ಆಕೆಯ ತಂದೆಯಲ್ಲಿ ನಿವೇದಿಸುತ್ತಾನೆ. ಆರಂಭದಲ್ಲಿ ಆತ ಇದನ್ನು ನಿರಾಕರಿಸಿ ವಿರೋಧಿಸಿದರೂ ಕೊನೆಗೆ ಒಪ್ಪಿಕೊಳ್ಳುತ್ತಾನೆ. ಆನ್ನಿ ಹಾಗೂ ಒಸಾಕನ  ಮದುವೆಯು ಆನ್ನಿಯ ಕುಟುಂಬ, ಒಸಾಕನ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಗರ್ಜಿಯಲ್ಲಿ ಧರ್ಮ ಗುರುಗಳ ಸಾರಥ್ಯದಲ್ಲಿ ರಹಸ್ಯವಾಗಿ  ನೆರವೇರುತ್ತದೆ. ಭವಿಷ್ಯದ ಬಗ್ಗೆ ಕನಸು ಕಾಣುವ ಸಮಾಜ, ಪರಿಸ್ಥಿತಿ ಇಲ್ಲದಿದ್ದರೂ ಅವರೊಂದಿಷ್ಟು ಕನಸು ಕಟ್ಟಿಕೊಂಡರೊ ಏನೋ. ದಿನನಿತ್ಯದ  ಕ್ಷಣಗಳನ್ನು ಅವರು ಒಲುಮೆಯಿಂದ, ಸಂತೋಷದಿಂದ ಅನುಭವಿಸಲಾರಂಭಿಸಿದರು. ಪ್ರೀತಿ ಮತ್ತು ಪುನುಗಿನ ಸುಗಂಧವನ್ನು ಅಡಗಿಸಿಡುವುದು ಕಷ್ಟಸಾಧ್ಯ. ಒಸಾಕ ಹಾಗೂ ಆನ್ನಿ ಯ ವಿವಾಹದ ಸುದ್ದಿ ಜಪಾನಿ ಅಧಿಕಾರಿಗಳ ಕಿವಿ ಮುಟ್ಟಲು ಹೆಚ್ಚು ದಿನ ಬೇಕಾಗಲಿಲ್ಲ. ಅಧಿಕಾರಿಗಳು ಆನ್ನಿ ಯ ತಂದೆಯನ್ನು ತಮ್ಮ ಕಛೇರಿಗೆ ಕರೆಸಿಕೊಂಡರು. ವಿವಾಹವನ್ನು ಅಸಿಂಧುಗೊಳಿಸಿ ಆನ್ನಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕೆಂದು ಆದೇಶ ನೀಡಿದರು. ಆದೇಶವನ್ನು ಪಾಲಿಸದಿದ್ದಲ್ಲಿ ಅವರ ಕುಟುಂಬವನ್ನು ಸರ್ವನಾಶ ಮಾಡುವುದರೊಂದಿಗೆ ಒಸಾಕನ ಜೀವ ತೆಗೆಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಭಯಭೀತನಾದ ಆಕೆಯ ತಂದೆ ತನ್ನ ಮನೆಯ ಪಕ್ಕದಲ್ಲೇ ಮಗಳಿಗೊಂದು ಪುಟ್ಟ ಮನೆಯನ್ನು ಮಾಡಿ ಆಕೆಯ ವಸತಿಯ ವ್ಯವಸ್ಥೆ ಮಾಡಿದನು. ಗರ್ಭಿಣಿಯಾಗಿದ್ದ  ಆಕೆ ಆ ಮನೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಅಷ್ಟರಲ್ಲೇ ಎರಡನೇ ಮಹಾಯುದ್ಧ ಮುಗಿದು ಸೋತ ಜಪಾನೀಯರ ದ್ವೀಪದ ಆಡಳಿತವೂ ಕೊನೆಗಾಣುತ್ತದೆ.

 ಶರಣಾಗತರಾದ ಜಪಾನೀ ಸೈನಿಕರನ್ನು ಆಂಗ್ಲರು ಸೈನಿಕರ ಪಾಳ್ಯದಲ್ಲಿ ಸೆರೆ ಹಿಡಿದಿಟ್ಟರು. ಅಂಡಮಾನಿನ ಜನತೆ ಆಂಗ್ಲರ ಆಡಳಿತಕ್ಕೆ ಹಿಂತಿರುಗಿದರು. ಆಂಗ್ಲ  ಆಡಳಿತಾಧಿಕಾರಿಗಳಿಗೆ ಆನ್ನಿ ಹಾಗೂ ಒಸಾಕಾರ ವಿಷಯ ತಿಳಿಯುತ್ತದೆ. ಆನ್ನಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಬರಮಾಡಿಕೊಂಡು ಆಕೆಯ ವಿವಾಹದ ಬಗ್ಗೆ ಪ್ರಶ್ನಿಸಲಾಗುತ್ತದೆ. ಜಪಾನೀಯರು ಹಾಗೂ ಆಂಗ್ಲರು ಪರಸ್ಪರ ಶತ್ರುಗಳಾದ್ದರಿಂದ ತನಗೆ ಅಪಾಯವಾಗಬಹುದೆಂದು ಭಾವಿಸಿ ಭಯಗೊಂಡ ಆಕೆ ತನ್ನ ಗಂಡ ಚೈನಾದವನೆಂದು ಹೇಳುತ್ತಾಳೆ. ಆಕೆಯ ಬಗ್ಗೆ ಸಂಪೂರ್ಣ ಮಾಹಿತಿಯಿದ್ದ ಕಾರಣ ಆಕೆಗೆ ಸತ್ಯ ಹೇಳುವಂತೆ ಓಲೈಸಲಾಗುತ್ತದೆ.  ಆಕೆಯನ್ನು ಒಸಾಕನನ್ನು ಒಂದುಗೂಡಿಸುವ ಭರವಸೆಯನ್ನು ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಭರವಸೆ ಈಡೇರಿಸದೆ ಒಸಾಕನನ್ನು ಇತರ ಯುದ್ಧ ಖೈದಿಗಳಂತೆ ಸೆರೆಮನೆಗೆ ದೂಡುತ್ತಾರೆ. ಆನ್ನಿ ಕಾಲಾಂತರದಲ್ಲಿ ಬೇರೊಬ್ಬನನ್ನು ಮದುವೆಯಾದರೂ ಒಸಾಕನ ನೆನಪು ಆಕೆಯಲ್ಲಿ ಹಸಿಯಾಗಿಯೇ ಉಳಿಯುತ್ತದೆ. ಶಕುಂತಲಾರವರು ಹೇಳುವಂತೆ, ವೃದ್ಧೆಯಾದ ಆನ್ನಿ ಒಸಾಕನ ನೆನಪನ್ನ ಹಂಚಿಕೊಳ್ಳುವಾಗೆಲ್ಲ ಕಂಬನಿ ಮಿಡಿಯುತ್ತಾಳೆ. ಆಕೆಯ ಮಗಳು ಮಿಸ್ಕೊ. ಈಗ ಮಿಸ್ಕೊಗೂ ಮಕ್ಕಳಿದ್ದಾರೆ. ಅನ್ನಿಯಂತೆ ಒಸಾಕನು ಎಲ್ಲೋ ಒಂದೆಡೆ ಬದುಕಿರಬಹುದೇನೋ, ತನ್ನ ಮಗಳು, ಮೊಮ್ಮಕ್ಕಳನ್ನು ಭೇಟಿಯಾದಾನೇನೋ…ಇದೊಂದು ಕ್ಷಣದ ರಮ್ಯ ಕಲ್ಪನೆಯಷ್ಟೇ….

 ಇಬ್ಬದಿಯ ಕೀಲಾದ ಆಂಗ್ಲ ಹಾಗೂ ಜಪಾನೀಯರ ಆಡಳಿತದ ಬಗ್ಗೆ ಶಕುಂತಲಾರ ಧೋರಣೆ ಅಭಿಪ್ರಾಯ ಅಪರೂಪದ್ದೇನು ಅಲ್ಲ. ತಮ್ಮನ್ನು ಆಳುವವರನ್ನ ಸಮೂಹ ಸನ್ನಿಯಾಗಿ ಆರಾಧಿಸುವವರ ಸಂಖ್ಯೆ ಅಧಿಕವೆ. ರಾಜಮಹಾರಾಜರುಗಳ ಕಾಲದಿಂದ ಇಂದಿನವರೆಗೂ ನಾವಿದನ್ನು ಕಾಣುತ್ತಿದ್ದೇವೆ. ಇದು ಒಪ್ಪಿತವೇ ಒಪ್ಪಿತವಲ್ಲವೇ ಎನ್ನುವುದಕ್ಕಿಂತ ಹೆಚ್ಚಾಗಿ ನಾವು ಗಮನಿಸಬೇಕಾದ ಅಂಶ ಬೇರೆಯೇ ಇದೆ. ಒಂದು ಸಮುದಾಯವು ತಮ್ಮಿಚ್ಛೆಯಂತೆ ಬದುಕನ್ನು ಕಟ್ಟಿಕೊಳ್ಳುವ ಅವಕಾಶದಿಂದ ವಂಚಿತರಾಗುವ ಸತ್ಯವನ್ನು ಮರೆಮಾಚುವ ಶಕ್ತಿಯನ್ನ ಈ ಇಬ್ಬದಿಯ ಕೀಲುಗಳು ಹೊಂದಿದ್ದವು. ಆಳುವ ವರ್ಗದ ಸನ್ನಡತೆಯೇನು ಎಂದು ಸೂಕ್ಷ್ಮದರ್ಶಕದಲ್ಲಿ ಹುಡುಕಿ, ಮೆಚ್ಚಿ,  ಆರಾಧಿಸುವ ಮನಸ್ಥಿತಿಯನ್ನು ಆಳುವ ವರ್ಗವು ತನ್ನ ಕಥಾನಕದ ಮೂಲಕ ಜನರ ಮನದಲ್ಲಿ ಅಚ್ಚು ಹಾಕುತ್ತದೆ.. ಹಾಗಾಗಿ ದಾಸ್ಯದ ಮನಸ್ಥಿತಿ ಮತ್ತು ದಾಸ್ಯದಬಾಳು ಒಪ್ಪಿತವಾಗುತ್ತದೆ. ಇಬ್ಬದಿಯ ಕೀಲಿನಲಿ ಇಂತಿಪ್ಪ ಬಾಳು ಅಂಡಮಾನ್ ಜನತೆಯದಾಗಿತ್ತು.

ರಾಜಲಕ್ಷ್ಮೀ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಓದಿ :ಅಂಡಮಾನ್‌ ಡೈರಿ -1  ಉಸುಕಿನಲ್ಲಿ ಊರಿದ ಹೆಜ್ಜೆಗಳು

ಅಂಡಮಾನ್‌ ಡೈರಿ –2 ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು

Related Articles

ಇತ್ತೀಚಿನ ಸುದ್ದಿಗಳು