Home Uncategorized ಹಿಂದುತ್ವ ರಾಜಕಾರಣದ ಕಥೆ – 25 : ಬಲಿಲ್ಲ ಮಾದರಿ ಮತ್ತು ಆರ್‌ಎಸ್‌ಎಸ್‌ ಹುಟ್ಟು

ಹಿಂದುತ್ವ ರಾಜಕಾರಣದ ಕಥೆ – 25 : ಬಲಿಲ್ಲ ಮಾದರಿ ಮತ್ತು ಆರ್‌ಎಸ್‌ಎಸ್‌ ಹುಟ್ಟು

0

ಏನೇ ಆದರೂ, ದೇಶವನ್ನು ಆಳುತ್ತಿದ್ದ ಬ್ರಿಟಿಷರ ಮೇಲೆ ಮುನ್ಜೇ ಅವರಿಗಾಗಲಿ, ಅವರು ಅಧ್ಯಕ್ಷರಾಗಿದ್ದ ಹಿಂದೂ ಮಹಾಸಭಾಕ್ಕೆ ಆಗಲಿ, ಅವರು ಮಾರ್ಗದರ್ಶನ ನೀಡುತ್ತಿದ್ದ ಆರ್‌ಎಸ್‌ಎಸ್‌ಗಾಗಲಿ ಯಾವ ವಿರೋಧವೂ ಇರಲಿಲ್ಲ.

ಆರ್‌ಎಸ್‌ಎಸ್‌ ಎಂಬ ಹೃಸ್ವನಾಮದಲ್ಲಿ ಗುರುತಿಸಕೊಳ್ಳುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಬರೆಯಲಾದ ಆರಂಭ ಕಾಲದ ವಿಮರ್ಶಾ ಲೇಖನಗಳಲ್ಲಿ ಒಂದು ಡಿ.ವಿ ಕೇಲ್ಕರ್‌ ೧೯೫೦ ಫೆಬ್ರವರಿ ೪ರಂದು ಎಕನಾಮಿಕ್‌ ವೀಕ್ಲಿಯಲ್ಲಿ (ನಂತರ ಅದು ಎಕನಾಮಿಕ್‌ ಆಂಡ್‌ ಪೊಲಿಟಿಕಲ್‌ ವೀಕ್ಲಿ ಎಂದಾಯ್ತು) ಬರೆದ ದಿ ಆರ್‌ಎಸ್‌ಎಸ್‌ ಎಂಬ ಲೇಖನ. ಕೇಲ್ಕರ್‌ ಆರ್‌ಎಸ್‌ಎಸ್‌ ವಿರೋಧಿ ಆಗಿರಲಿಲ್ಲವೆಂದು ಮಾತ್ರವಲ್ಲ, ಅದರ ಸ್ಥಾಪಕ ನಾಯಕರೂ ಮೊದಲ ಸರಸಂಘಚಾಲಕರೂ ಆಗಿದ್ದ ಕೇಶವ್‌ ಬಲಿರಾಮ್‌ ಹೆಡ್ಗೆವಾರ್‌ ಅವರ ಗೆಳೆಯ ಮತ್ತು ಸಹವರ್ತಿಯೂ ಆಗಿದ್ದರು. ಅವರು ಹೆಡ್ಗೆವಾರ್‌ ಬಗ್ಗೆ ಹೇಳುವುದು ಹೀಗೆ:
ನಾಗಪುದ ಒಂದು ತೆಲುಗು ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ೧೮೮೯ ಏಪ್ರಿಲ್‌ ೧ರಂದು ಹೆಡ್ಗೆವಾರ್‌ ಜನನ. ನಾಗಪುರ ಆಗ ಬ್ರಿಟಿಷ್‌ ಆಡಳಿತದ ಸೆಂಟ್ರಲ್‌ ಪ್ರಾವಿನ್ಸ್‌ನ ಭಾಗವಾಗಿತ್ತು. ಸಾವರ್ಕರ್‌ ಅವರ ತಂದೆಯವರಂತೆ ಹೆಡ್ಗೆವಾರ್‌ ತಂದೆತಾಯಿಗಳು ಬ್ಯುಬೋನಿಕ್‌ ಪ್ಲೇಗ್ ರೋಗಕ್ಕೆ ಬಲಿಯಾಗಿದ್ದರು. ಅವರು ಆರಂಭದ ದಿನಗಳಲ್ಲಿ ಸಾವರ್ಕರ್‌ ರೀತಿಯಲ್ಲಿಯೇ ಬ್ರಿಟಿಷ್‌ ವಿರೋಧಿ ಬ್ರಾಹ್ಮಣಿಸ್ಟ್‌ ಆಗಿದ್ದರು. ನಾಗಪುರದ ನೀಲ್‌ ಸಿಟಿ ಹೈಸ್ಕೂಲಿನಲ್ಲಿ ಕಲಿಯುವಾಗ ವಂದೇ ಮಾತರಂ ಹಾಡಿದ ಕಾರಣಕ್ಕೆ ಅಲ್ಲಿಂದ ಹೊರಹಾಕಲ್ಪಟ್ಟಿದ್ದರು. ೧೯೦೫ರ ಬಂಗಾಲ ವಿಭಜನೆಯ ನಂತರ ಬಂಕಿಮ್‌ ಚಂದ್ರ ಚಟ್ಟೋಪಾಧ್ಯಾಯ ಬರೆದ ಆನಂದಮಠ ಎಂಬ ಸನ್ಯಾಸಕ್ರಾಂತಿ ಕಾದಂಬರಿಯಲ್ಲಿ ಬಳಸಿಕೊಂಡಿದ್ದ ವಂದೇ ಮಾತರಂ ಹಾಡು ನಂತರ ಬ್ರಿಟಿಷ್‌ ವಿರೋಧಿ ಘೋಷಣೆಯಾಗಿ ರೂಪಾಂತರಗೊಂಡಿತ್ತು. ಅದರಲ್ಲೂ ವಿಶೇಷವಾಗಿ ಬಂಗಾಲಿ ಬ್ರಿಟಿಷ್‌ ವಿರೋಧಿ ಬ್ರಾಹ್ಮಣ ಹೋರಾಟಗಳ ಕೈಯಲ್ಲಿ. ಬ್ರಿಟಿಷರಿಗೆದುರಾಗಿ ನುಡಿ ಪ್ರತಿರೋಧ ಎಂಬ ನೆಲೆಯಲ್ಲಿ ಅದು ಉತ್ತರ ಭಾರತದಾದ್ಯಂತ ಜನಪ್ರಿಯಗೊಂಡಿತ್ತು. ಆದ್ದರಿಂದ ಒಂದು ಹಂತದಲ್ಲಿ ಅದನ್ನು ಘೋಷಣೆ ಎಂಬ ರೀತಿಯಲ್ಲಿ ಬಳಸುವುದನ್ನು ಕಾನೂನು ಬಾಹಿರವೆಂದು ಬ್ರಿಟಿಷರು ಘೋಷಿಸುತ್ತಾರೆ. ಅದೇ ಹೊತ್ತು ಆ ಹಾಡನ್ನಾಗಲೀ, ಆ ಹಾಡು ಇರುವ ಆನಂದಮಠ ಎಂಬ ಕಾದಂಬರಿಯನ್ನಾಗಲೀ ನಿಷೇಧಿಸಲಿಲ್ಲ. ನೀಲ್‌ ಸಿಟಿ ಸ್ಕೂಲಿನಿಂದ ಹೆಡ್ಗೆವಾರನ್ನು ಹೊರ ಹಾಕುವುದರ ಹಿಂದೆ ಇದು ಕಾರಣವಾಗಿ ಕೆಲಸ ಮಾಡಿತ್ತು. ಅದರ ಜೊತೆಗೆ, ರಿಡ್ಲಿ ಸರ್ಕ್ಯುಲರ್‌ ಎಂದು ಕರೆಯಲ್ಪಡುತ್ತಿದ್ದ, ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಂದ ದೂರ ನಿಲ್ಲಿಸುತ್ತಿದ್ದ ನಿಷೇಧಾಜ್ಞೆಯೂ ಜಾರಿಯಲ್ಲಿದ್ದದ್ದು ಇದಕ್ಕೆ ಪೂರಕವಾಗಿತ್ತು. ನಂತರ ತನ್ನ ವಿದ್ಯಾಭ್ಯಾಸವನ್ನು ಯವತ್‌ ಮಾಲಿನ ನ್ಯಾಷನಲ್‌ ಸ್ಕೂಲಿನಲ್ಲಿ ಮುಂದುವರಿಸುತ್ತಾರೆ. ಆದರೆ, ಆ ಶಾಲೆ ಮುಚ್ಚಿ ಹೋದ ಕಾರಣ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ರಾಜಧಾನಿಯೆಂದು ಗುರುತಿಸಲ್ಪಟ್ಟಿದ್ದ ಪುಣೆಯಲ್ಲಿ ೧೯೧೦ರ ತನಕ ಮೆಟ್ರಿಕ್ಯುಲೇಷನ್‌ ಪಾಸಾಗುವ ತನಕ ಕಲಿಯುತ್ತಾರೆ. ಅದೇ ವರ್ಷ ಕಲ್ಕತ್ತಾದ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಅಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರನೂ ಪತ್ರಕರ್ತನೂ ಆಗಿದ್ದ ಶ್ಯಾಂ ಸುಂದರ್‌ ಚಕ್ರವರ್ತಿ, ಮೋತಿಲಾಲ್‌ ಘೋಷ್‌ ಮೊದಲಾದವರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಾರೆ. ಅಲ್ಲಿಂದ ಎಲ್.ಎಂ.ಎಸ್‌ ಡಿಗ್ರೀ ಪಡೆದು ಮರಳಿ ನಾಗಪುರಕ್ಕೆ ಬಂದರಾದರೂ ಡಾಕ್ಟರ್‌ ಆಗಿ ಕೆಲಸ ಮಾಡಲಿಲ್ಲ. ಕೌಟುಂಬಿಕ ಬದುಕಿಗೂ ಹೊರಳಿಕೊಳ್ಳಲಿಲ್ಲ.

೧೯೧೯ ರಿಂದ ೧೯೨೩ರವರೆಗೆ ನಾಗಪುರದಲ್ಲಿ ಡಿ.ವಿ ಕೇಲ್ಕರ್‌ ಪ್ರತಿದಿನ ಹೆಡ್ಗೆವಾರ್‌ ಜೊತೆ ಭೇಟಿಯಾಗುತ್ತಿದ್ದರು. ಆ ಕಾಲದಲ್ಲಿ ಹಲವಾರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರೊಂದಿಗೆ ಕೇಲ್ಕರ್‌ ಕೂಡ ಭಾಗವಹಿಸುತ್ತಿದ್ದರು. ಹೆಡ್ಗೆವಾರ್‌ ಒಬ್ಬ ಸಮರ್ಥ ಭಾಷಣಗಾರರಾಗಿದ್ದರೆಂದೂ ಕೇಳುಗರನ್ನು ಮೌನವಾಗಿಸುವ ಶಕ್ತಿ ಅವರಿಗಿತ್ತೆಂದೂ ಕೇಲ್ಕರ್‌ ಹೇಳುತ್ತಾರೆ. ಲೋಕಮಾನ್ಯ ತಿಲಕರ ಅನುಯಾಯಿಯಾಗಿದ್ದರು ಹೆಡ್ಗೆವಾರ್.‌ ಆದರೆ, ಮಂಡಾಲೆ ಜೈಲಿನಿಂದ ಹೊರಬಂದ ನಂತರ ತಿಲಕ್‌ ಸ್ವೀಕರಿಸಿದ, ಪ್ರಭುತ್ವದೊಳಗಡೆ ನಿಂತುಕೊಂಡು ಹೋರಾಡುವ ರೀತಿಯನ್ನು ಅವರು ಒಪ್ಪಿಕೊಳ್ಳಲಿಲ್ಲ. ಮಹಾತ್ಮಾ ಗಾಂಧಿ ಅಸಹಕಾರ ಚಳುವಳಿ ಆರಂಭಿಸಿದಾಗ ಅವರು ಅದರ ಕಾರ್ಯಕರ್ತನಾದರು. ಕಾಂಗ್ರೆಸಿನ ನಾಗಪುರ ಸಮ್ಮೇಳನದ ಸಮಯದಲ್ಲಿ ಅದರ ಸ್ವಾಗತ ಸಮಿತಿಯಲ್ಲಿ ಕೆಲಸ ಮಾಡಿದ್ದು ಮತ್ತು ಅಲ್ಲಿ ರಾಜಕಾರಣದಲ್ಲಿ ತಿಲಕ್‌ ಸ್ಕೂಲಿನ ಒಂದೊಂದೇ ಇಟ್ಟಿಗೆಗಳು ಮುರಿದು ಬೀಳುವುದನ್ನೂ ಕೇಲ್ಕರ್‌ ನೆನಪಿಸುತ್ತಾರೆ. ಅದರಲ್ಲಿ ಹೆಡ್ಗೆವಾರ್‌ಗೆ ದೊಡ್ಡ ಪಾಲಿತ್ತು. ಅದೇ ಹೊತ್ತು ಕೇಲ್ಕರ್‌ ಮತ್ತು ಹೆಡ್ಗೆವಾರ್‌ ತಿಲಕರ ನೀತಿಗಳಿಂದ ನಿಯಂತ್ರಿತಗೊಂಡಿದ್ದ, ನಂತರದ ಹಿಂದುತ್ವ ರಾಜಕಾರಣದಲ್ಲಿ ದೊಡ್ಡ ಪಾಲುವಹಿಸಿದ ಡಾ. ಬಿ.ಎಸ್‌ ಮುನ್ಜೇ ಅವರ ರಾಷ್ಟ್ರೀಯ ಮಂಡಲದಲ್ಲಿ ಅಸೋಸಿಯೇಟ್‌ ಸದಸ್ಯರಾಗಿದ್ದರು. ಆಗ ಅಸಹಕಾರ ಚಳುವಳಿಯಲ್ಲಿ ಹೆಡ್ಗೆವಾರ್‌ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಸಹಕಾರ ಚಳುವಳಿಯನ್ನು ಹಿಂಪಡೆದುಕೊಂಡಾಗ ಎಷ್ಟು ವೇಗದಲ್ಲಿ ಅದರೊಳಗೆ ನುಸುಳಿದ್ದರೋ ಅದಕ್ಕಿಂತಲೂ ವೇಗದಲ್ಲಿ ಅಲ್ಲಿಂದ ಕಾಲ್ಕಿತ್ತರು ಹೆಡ್ಗೆವಾರ್.‌ ಹೆಡ್ಗೆವಾರ್‌ ಅವರ ಬ್ರಾಹ್ಮಣ ರಾಜಕಾರಣವೇ ಅದಕ್ಕೆ ಮುಖ್ಯ ಕಾರಣವಾಗಿತ್ತು. ಗಾಂಧಿ ಸಾಧಿಸಿ ತೋರಿಸಿದ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಲೋಕ ಆ ಬ್ರಾಹ್ಮಣ ರಾಜಕಾರಣವನ್ನು ಬೆದರಿಸಿತು. ೧೯೨೧ರ ಮಲಬಾರ್‌ ಗಲಭೆಯನ್ನು ಸಾವರ್ಕರ್‌ ರೀತಿಯಲ್ಲಿ ಹೆಡ್ಗೆವಾರ್‌ ಕೂಡ ಬಳಸಿಕೊಂಡರು. ಮಲಬಾರ್‌ ಗಲಭೆಯಲ್ಲಿ ಪಾಲ್ಗೊಂಡಿದ್ದ ಬಹುಪಾಲು ಜನರು ಸಾವನ್ನಪ್ಪಿ, ಉಳಿದವರು ಗಡಿಪಾರಾಗಿದ್ದರು. ಹಾಗಾಗಿ ಅವರ ವಾದ ಸಾರ್ವಜನಿಕ ವಲಯದಲ್ಲಿ ಕಂಡು ಬರಲು ಸಾಧ್ಯವೇ ಇರಲಿಲ್ಲ. ಯಾರ ವಿರುದ್ಧ ಆ ಗಲಭೆ ನಡೆದಿತ್ತೋ ಅದೇ ಬ್ರಿಟಿಷರು ಮತ್ತು ಸಿ. ಶಂಕರನ್‌ ನಾಯರ್‌ ತರದ ಸವರ್ಣ ಹಿಂದೂಗಳು ಮುಂದಿಟ್ಟಿದ್ದ ಮುಸ್ಲಿಂ ವಿರೋಧಿ ವಿಶ್ಲೇಷಣೆಯನ್ನೇ ಮಾಧ್ಯಮಗಳು ಪ್ರಚಾರ ಪಡಿಸಿದವು. ಈ ವಿಶ್ಲೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಸಾವರ್ಕರ್‌ ಭಾವನಾತ್ಮೆಕತೆಯಿಂದ ಬರೆದ ಕಾದಂಬರಿ, ನಾನೇಕೆ ಜಾಗೃತನಾಗಿರಬೇಕು? ಕುರಿತು ನಾವು ಗಮನಿಸಿದೆವು. ಒಂದು ಕಾಲದಲ್ಲಿ ಬ್ರಿಟಿಷ್‌ ವಿರೋಧಿಯಾಗಿದ್ದ ಹೆಡ್ಗೆವಾರ್‌ ಕೂಡ ಒಡೆದು ಆಳಲೆಂದು ಬ್ರಿಟಿಷರು ಉದ್ಧೇಶಪೂರ್ವಕವಾಗಿ ನಡೆಸಿದ ಚಟುವಟಿಕೆಗಳ ಕಾರಣದಿಂದ ಉಂಟಾದ ಹಿಂದೂ-ಮುಸ್ಲಿಂ ಗಲಭೆಗಳನ್ನು ಮುಂದಿಟ್ಟುಕೊಂಡು ಅವರಿಗೆ ಬೇಕಾದ ಮುಸ್ಲಿಂ ವಿರೋಧಿ ರಾಜಕಾರಣದ ವಕ್ತಾರರಾಗಿ ಬದಲಾಗುತ್ತಾರೆ. ಬಾಂಬೆ ಪ್ರಾವಿನ್ಸಲ್ಲಿ ನಡೆದ ಹಾಗೆ ಸೆಂಟ್ರಲ್‌ ಪ್ರಾವಿನ್ಸ್‌ನ ನಾಗಪುರದಲ್ಲೂ ಬ್ರಾಹ್ಮಣಿಸಂ ಶಕ್ತಿ ಸಂಪಾದಿಸುವುದು ಗಣೇಶೋತ್ಸವವನ್ನು ಬಳಿಸಿಕೊಂಡೇ ಆಗಿತ್ತು. ಬಹುತೇಕ ಸಂದರ್ಭಗಳಲ್ಲಿ ದೇವರ ಪೂಜೆ ಎಂಬುದಕ್ಕಿಂತ ಮಿಗಿಲಾಗಿ ಭಾರತದ ಬಹುಜನರ ಸಂಸ್ಕೃತಿಯ ಮೇಲೆ ಸಾಮಾಜಿಕ ಅಧಿಕಾರದ ಮೇಲುಗೈ ಸಾಧಿಸಲು ಒಂದು ಮಾರ್ಗವೆಂಬ ರೀತಿಯಲ್ಲಿ ಮಾತ್ರವೇ ನಾಗಪುರದಲ್ಲೂ ಇದನ್ನು ಆಯೋಜಿಸಲಾಗಿತ್ತು. ೧೯೨೩ ಸೆಪ್ಟೆಂಬರ್‌ ಅಕ್ಟೋಬರ್‌ ತಿಂಗಳುಗಳಲ್ಲಿ ನಾಗಪುರದ ಡಿಂಡಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಬ್ರಾಹ್ಮಣ ನಾಯಕನೆಂಬ ನೆಲೆಯಲ್ಲಿ ಹೆಡ್ಗೆವಾರ್‌ ತನ್ನ ಗುರುತನ್ನು ಮೂಡಿಸಿಕೊಳ್ಳುವುದು. ಗಣೇಶೋತ್ಸವದ ಮೆರವಣಿಗೆ ಮುಸ್ಲಿಮರ ಮಸೀದಿಯ ಮುಂದೆ ಆಕ್ರಮಣಕಾರಿ ರೀತಿಯಲ್ಲಿ ನಡೆದು ಹೋದ ಘಟನೆ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತದೆ. ಮ್ಯಾಜಿಸ್ಟ್ರೇಟ್‌ ಮೆರವಣಿಗೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮತ್ತು ಮಿತಿಗಳನ್ನು ಸೂಚಿಸುತ್ತಾರೆ. ಇದರ ವಿರುದ್ಧ ೧೯೨೩ ಅಕ್ಟೋಬರ್‌ ೩೧ರಿಂದ ನವೆಂಬರ್‌ ೧೧ರ ತನಕ ಬ್ರಾಹ್ಮಣರು ಸತ್ಯಾಗ್ರಹ ನಡೆಸುತ್ತಾರೆ. ಕೊನೆಗೆ ಪೊಲೀಸರು, ಮಸೀದಿ ಸಮಿತಿ ಮತ್ತು ಬ್ರಾಹ್ಮಣರು ಸೇರಿಕೊಂಡು ನಡೆಸಿದ ಚರ್ಚೆಯಲ್ಲಿ ಮೆರವಣಿಗೆಯ ಮೇಲೆ ಮ್ಯಾಜಿಸ್ಟ್ರೇಟ್‌ ಹೇರಿದ ನಿರ್ಬಂಧಗಳನ್ನು ಹಿಂಪಡೆಯಲಾಗುತ್ತದೆ. ನಿರ್ಬಂಧಗಳನ್ನು ಹೇರಿದ್ದು ಮತ್ತು ಅದನ್ನು ಹಿಂಪಡೆದುಕೊಂಡದ್ದು ಸರಕಾರವೇ ಆಗಿದ್ದರೂ, ಇದು ಮುಸ್ಲಿಮರ ಮೇಲೆ ಚಲಾಯಿಸಿದ ಸಾಮಾಜಿಕ ಅಧಿಕಾರವೆಂದೇ ಬ್ರಾಹ್ಮಣರು ಕಂಡರು. ಅದನ್ನು ನೆಲೆನಿಲ್ಲಿಸಿಕೊಂಡು ಮುಂದಕ್ಕೆ ಕೊಂಡುಹೋಗಲು ನಾಗಪುರ ಹಿಂದೂಸಭಾ ಎಂಬ ಸಂಘಟನೆಯನ್ನು ಕಟ್ಟಲಾಗುತ್ತದೆ. ಜೈ ಶಂಕರ್‌ ಭೋನ್ಸ್ಲೇ ಅಧ್ಯಕ್ಷ, ಡಾ. ಬಿ.ಎಸ್‌ ಮುನ್ಜೇ ಉಪಾಧ್ಯಕ್ಷ ಮತ್ತು ಹೆಡ್ಗೆವಾರ್‌ ಕಾರ್ಯದರ್ಶಿಯೂ ಆಗುತ್ತಾರೆ.

ಈ ಸಮಯದಲ್ಲಿಯೇ ಸಾವರ್ಕರ್‌ ಸಹೋದರ ಬಾಬಾರಾವ್‌ ಎಂಬ ಗಣೇಶ್‌ ದಾಮೋದರ್‌ ಸಾವರ್ಕರ್‌ ಜೈಲಿನಿಂದ ಬಿಡುಗಡೆಗೊಂಡು ಹೊರಬರುವುದು. ತನ್ನ ಬ್ರಿಟಿಷ್‌ ವಿರೋಧಿ ಹೋರಾಟವನ್ನು ಅಮರಣಾಂತ ಮುಂದೂಡಿದ್ದ ಬಾಬಾರಾವ್‌ ೧೯೨೩-೨೪ರ ಹೊತ್ತಿಗೆ ತರುಣ್‌ ಹಿಂದೂಸಭಾ ಎಂಬ ಹೆಸರಿನಲ್ಲಿ ಹಿಂದುತ್ವ ರಾಜಕಾರಣವನ್ನು ಮುಂದಕ್ಕೊಯ್ಯಲು ಒಂದು ಸಂಘಟನೆಯನ್ನು ಹುಟ್ಟು ಹಾಕುತ್ತಾರೆ. ಅದರ ಜೊತೆಗೆ ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನೂ ಆಗುತ್ತಾರೆ. ಸಾವರ್ಕರ್‌ ಅವರ ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡ ಹಿಂದೂ ಜನಾಂಗೀಯ ರಾಜಕಾರಣವನ್ನು ಮುಂದಕ್ಕೊಯ್ಯಲು ಯುವಜನರನ್ನು ಒಟ್ಟುಗೂಡಿಸುವ ಗುರಿಯನ್ನು ತರುಣ್‌ ಹಿಂದೂಸಭಾ ಹೊಂದಿತ್ತು. ಆದ್ದರಿಂದಲೇ ಸನಾತನಿಗಳನ್ನು, ಆರ್ಯಸಮಾಜದವರನ್ನು, ಜೈನರನ್ನು, ಸಿಕ್ಖರನ್ನು ಬಾಬಾರಾವ್‌ ಈ ಸಂಘಟನೆಯಲ್ಲಿ ಮುಸ್ಲಿಂ ವಿರೋಧಿ ಹಿಂದೂ ಜನಾಂಗೀಯ ರಾಜಕಾರಣವನ್ನು ಮುನ್ನಡೆಸಲೆಂದು ಸೇರಿಸುತ್ತಾರೆ. ಬ್ರಾಹ್ಮಣರ ಉತ್ಸವಗಳನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದು, ಶುದ್ಧಿ ಚಳುವಳಿಯ ಮೂಲಕ ಇತರ ಧರ್ಮಗಳ ಜನರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವುದು, ಲಾಠಿ ಬಳಸಿಕೊಂಡು ದೈಹಿಕ ತರಬೇತಿ ನೀಡುವುದು ಮೊದಲಾದವು ತರುಣ್‌ ಹಿಂದೂಸಭಾದ ಕಾರ್ಯಕ್ರಮಗಳಾಗಿದ್ದವು. ಐನೂರರಷ್ಟು ಯುವಕರನ್ನು ಈ ಸಂಘಟನೆಯ ಅಡಿಯಲ್ಲಿ ತರಲು ಬಾಬಾರಾವ್‌ಗೆ ಸಾಧ್ಯವಾಗಿತ್ತು.

೧೯೨೪ರಲ್ಲಿ ತರುಣ್ ಹಿಂದೂಸಭಾವನ್ನು ಬಾಂಬೆ ಪ್ರಾಂತ್ಯದ ಹೊರಗೆ ವ್ಯಾಪಿಸುವ ಗುರಿಯೊಂದಿಗೆ ಬಾಬಾರಾವ್‌ ನಾಗಪುರ ತಲುಪುತ್ತಾರೆ. ಅಲ್ಲಿ ಹೆಡ್ಗೆವಾರನ್ನು ಭೇಟಿಯಾಗುತ್ತಾರೆ. ಹಲವಾರು ಸಭಾಗಳ ಮೂಲಕ ಹರಿದು ಹಂಚಿ ಹೋಗಿರುವ ಹಿಂದೂ ಜನಾಂಗೀಯ ರಾಜಕಾರಣವನ್ನು ಒಟ್ಟುಗೂಡಿಸಲು ಒಂದು ಕೇಂದ್ರ ಸಂಘಟನೆಯ ಅಗತ್ಯತೆಯ ಕುರಿತು ಅವರು ಚರ್ಚಿಸುತ್ತಾರೆ. ಇದರ ಮುಂದುವರಿಕೆಯಾಗಿ ೧೯೨೪ರ ಹಿಂದೂ ಮಹಾಸಭಾ ಸಮ್ಮೇಳನವು ʼಹಿಂದೂ ಸ್ವಯಂ ಸೇವಕ್‌ ಸಂಘಟನೆʼಯನ್ನು ಕಟ್ಟಲು ಡಾ. ಬಿ.ಎಸ್‌ ಮುನ್ಜೇ ಮತ್ತು ಬಾಬಾರಾವ್‌ ಅವರಿಗೆ ಜವಾಬ್ದಾರಿ ವಹಿಸುತ್ತದೆ. ಅದರ ಭಾಗವಾಗಿ ಬಾಬಾರಾವ್‌, ಡಾ. ಬಿ.ಎಸ್ ಮುನ್ಜೇ, ಡಾ. ಎಲ್.ವಿ ಪರಾಂಜಪೆ, ಭಾವುಜಿ ಕಾರ್ವೇ, ಅಣ್ಣ ಸೋಹೋನಿ, ಚೋಲ್ಕರ್‌, ವಿಶ್ವನಾಥ್‌ ಕೇಲ್ಕರ್‌, ಡಾ. ತೋಲ್ಕರ್‌ ಮೊದಲಾದವರೊಂದಿಗೆ ಸೇರಿಕೊಂಡು ಡಾ. ಹೆಡ್ಗೆವಾರ್‌ ೧೯೨೫ ಸೆಪ್ಟೆಂಬರ್‌ ೨೭ ವಿಜಯ ದಶಮಿ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ರೂಪು ನೀಡುತ್ತಾರೆ.

ಮಾರ್ಸಿಯ ಕಸೋಲಾರಿ ೨೦೦೦ ಜನವರಿ ೨೨ರಂದು ಎಕನಾಮಿಕ್‌ ಆಂಡ್‌ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದ ಲೇಖನದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯನ್ನು ವಿಕಾಸಗೊಳಿಸುವುದರಲ್ಲಿ ಡಾ. ಬಿ.ಎಸ್‌ ಮುನ್ಜೇ ಅವರು ವಹಿಸಿದ ಬಲುದೊಡ್ಡ ಪಾತ್ರದ ಕುರಿತು ಹೇಳುತ್ತಾರೆ. ೧೯೩೧ ಮಾರ್ಚ್‌ ೧೫ರಿಂದ ೨೪ರ ತನಕದ ದಿನಗಳಲ್ಲಿ ಅವರು ಇಟಲಿಗೆ ಭೇಟಿ ನೀಡಿ ಅಲ್ಲಿ ಬೆನಿಟೊ ಮುಸೊಲಿನಿಯ ಜೊತೆಗೆ ಮಾತುಕತೆಯನ್ನೂ ನಡೆಸುತ್ತಾರೆ. ದೆಹಲಿಯ ನೆಹರು ಮೆಮೋರಿಯಲ್‌ ಮ್ಯೂಸಿಯಂ ಆಂಡ್‌ ಲೈಬ್ರರಿಯಲ್ಲಿ ಕಾಪಿಟ್ಟಿರುವ ಮುನ್ಜೇ ಅವರ ದಿನಚರಿಯ ೧೩ ಪುಟಗಳಲ್ಲಿ ಈ ಭೇಟಿಯ ಕುರಿತ ಮಾಹಿತಿಗಳಿವೆ. ಮುಸೊಲಿನಿಯ ಸೇನಾ ಕಾಲೇಜು, ಸೆಂಟ್ರಲ್‌ ಮಿಲಿಟರಿ ಸ್ಕೂಲ್‌ ಆಫ್‌ ಫಿಸಿಕಲ್‌ ಎಜುಕೇಷನ್‌, ಫ್ಯಾಸಿಸ್ಟ್‌ ಅಕಾಡೆಮಿ ಆಫ್‌ ಫಿಸಿಕಲ್‌ ಎಜುಕೇಷನ್‌ ಮೊದಲಾದ ಕಡೆಗಳಿಗೆ ಮುನ್ಜೇ ಭೇಟಿ ನೀಡುತ್ತಾರೆ. ಬಲಿಲ್ಲ ಸಂಘಟನೆಯ ಮತ್ತು ಅವಾಂಗ್‌ ಗಾರ್ಡಿಸ್ಟಿ ಸಂಘಟನೆಯ ಚಟುವಟಿಕೆಗಳನ್ನು ಗಮನಿಸಲು ನೀಡಿದ ಭೇಟಿ ಅದರಲ್ಲಿ ಮುಖ್ಯವಾದದ್ದು. ೧೯೨೬ರಿಂದ ೩೭ರ ನಡುವೆ ಕಾರ್ಯಾಚರಿಸಿದ ಇಟಲಿಯ ಯುವ ರಾಷ್ಟ್ರೀಯ ಸಂಘಟನೆಯಾಗಿತ್ತು ಬಲಿಲ್ಲ. ಅದನ್ನು ನಂತರ ಮುಸೊಲಿನಿಯ ರಾಷ್ಟ್ರೀಯ ಫ್ಯಾಸಿಸ್ಟ್‌ ಪಾರ್ಟಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ೬ರಿಂದ ೧೮ ವರ್ಷದ ನಡುವಿನ ಮಕ್ಕಳು ಮತ್ತು ಯುವಕರನ್ನು ಈ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿತ್ತು ಎಂಬುದು ಆರ್‌ಎಸ್‌ಎಸ್‌ ಮತ್ತು ಈ ಸಂಘಟನೆಯ ನಡುವಿನ ಆಶ್ಚರ್ಯಕರ ರೀತಿಯಲ್ಲಿ ಹೊಂದಾಣಿಕೆಯಾಗುವ ಸಂಗತಿ. ಪ್ರತಿವಾರ ನಡೆಯುವ ಸಭೆಗಳು, ದೈಹಿಕ ವ್ಯಾಯಾಮಗಳು, ಅರೆಸೈನಿಕ ತರಬೇತಿಗಳು, ಮಾರ್ಚುಗಳು ಮತ್ತು ಪರೇಡುಗಳು ಈ ಸಂಘಟನೆಯ ಅಜೆಂಡಾದ ಮುಖ್ಯ ಅಂಶಗಳಾಗಿದ್ದವು. ಮುನ್ಜೇ ತನ್ನ ದಿನಚರಿಯಲ್ಲಿ ಆ ಭೇಟಿಯ ಕುರಿತು ಹೀಗೆ ಬರೆಯುತ್ತಾರೆ:

ʼಉನ್ನತ ಮಟ್ಟದ ಶಿಸ್ತು ಮತ್ತು ಸಂಘಟನಾತ್ಮಕ ನಿಯಮಗಳನ್ನು ಇನ್ನೂ ಹೊಂದಿಕೊಂಡಿಲ್ಲದಿದ್ದರೂ ಬಲಿಲ್ಲ ಸಂಘ ಮತ್ತು ಅದರ ಸಮಗ್ರ ಸಂಘಟನಾ ಕಲ್ಪನೆಯೂ ನನ್ನನ್ನು ಬಹಳವಾಗಿ ಆಕರ್ಷಿಸಿತು. ಇಟಲಿಯ ಸೈನ್ಯವನ್ನು ಮರುಕಟ್ಟುವುದೇ ಮುಸೊಲಿನಿಯ ಒಟ್ಟು ಕಲ್ಪನೆಯಾಗಿತ್ತು. ಇಟಲಿಯನ್ನರು ಸಾಮಾನ್ಯವಾಗಿ ಭಾರತೀಯರ ಹಾಗೆ ಸುಲಭದಲ್ಲಿ ಸ್ನೇಹ ಸಂಪಾದಿಸಬಹುದಾದ ಜನರೂ, ಮನಸ್ಸಿನಲ್ಲಿ ಸೈನಿಕಶಕ್ತಿ ಎಂಬ ಕಲ್ಪನೆಯನ್ನು ಹೊಂದಿಲ್ಲದವರೂ ಆಗಿದ್ದಾರೆ. ಯುದ್ಧದ ಚಟುವಟಿಕೆಗಳನ್ನು ಕಡೆಗಣಿಸಿ ಶಾಂತಿ ಕಾರ್ಯದಲ್ಲಿ ತೊಡಗಿಕೊಳ್ಳಲು ಭಾರತೀಯರಿಗೆಂಬಂತೆ ಅವರಿಗೂ ಕಲಿಸಿಕೊಡಲಾಗಿದೆ. ತನ್ನ ದೇಶದ ಮೂಲಭೂತ ದೌರ್ಬಲ್ಯವನ್ನು ಮುಸೊಲಿನಿ ಅರ್ಥಮಾಡಿಕೊಂಡು ಅದರ ಪರಿಹಾರಕ್ಕಾಗಿ ಬಲಿಲ್ಲ ಸಂಘಟನೆಯ ಕುರಿತ ತನ್ನ ಯೋಜನೆಗೆ ರೂಪುರೇಷೆಯನ್ನೂ ನೀಡಿದರು. ಇಟಲಿಯ ಸೈನಿಕ ಶಕ್ತಿ ರೂಪೀಕರಣಕ್ಕೆ ಇದಕ್ಕಿಂತ ಶಕ್ತವಾದ ದಾರಿ ಬೇರೊಂದು ಇರಲಿಕ್ಕಿಲ್ಲ. ಫ್ಯಾಸಿಸಂ ಜನರ ನಡುವೆ ಒಗ್ಗಟ್ಟು ಎಂಬ ಚಿಂತನೆಯನ್ನು ಸ್ಪಷ್ಟವಾಗಿ ಹರಡುತ್ತಿದೆ. ಭಾರತಕ್ಕೆ, ಅದರಲ್ಲೂ ಹಿಂದೂ ಭಾರತಕ್ಕೆ ಹಿಂದೂಗಳ ಮರುಸೈನ್ಯ ರೂಪೀಕರಣಕ್ಕೆ ಇಂತಹದ್ದೊಂದು ಸಂಘಟನಾ ವ್ಯವಸ್ಥೆಯು ಅತ್ಯಗತ್ಯವಾಗಿದೆ. ಸೈನಿಕ ಹಿಂದೂ ಸೈನಿಕೇತರ ಹಿಂದೂ ಎಂಬ ರೀತಿಯಲ್ಲಿ ಬ್ರಿಟಿಷರು ತಂದಿರುವ ಕೃತಕ ವರ್ಗೀಕರಣ ಅಪ್ರತ್ಯಕ್ಷವಾಗಬೇಕು. ಈ ಸಂಗತಿಯನ್ನು ಸ್ವತಂತ್ರವಾಗಿ ಒಳಗೊಂಡಿಲ್ಲದಿದ್ದರೂ ಡಾ. ಹೆಡ್ಗೆವಾರ್‌ ನೇತೃತ್ವದಲ್ಲಿ ನಾಗಪುರದಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಂತಹದ್ದೊಂದು ಸಂಘಟನೆಯಾಗಿದೆ. ಹೆಡ್ಗೆವಾರ್‌ ಅವರ ಈ ಸಂಘಟನೆಯನ್ನು ಮಹಾರಾಷ್ಟ್ರ ಮತ್ತು ಇತರ ಪ್ರಾಂತ್ಯಗಳಲ್ಲಿ ಶಕ್ತವಾಗಿ ವ್ಯಾಪಿಸಲು ನಾನು ನನ್ನ ಶಿಷ್ಟ ಬದುಕನ್ನು ಮುಡಿಪಾಗಿಡುತ್ತೇನೆ.ʼ

ಮುಂದುವರಿದು ಬಲಿಲ್ಲ ಸಂಘಟನೆಯ ದೈಹಿಕ ತರಬೇತಿ ಮತ್ತು ಸೈನಿಕ ವೇಷಗಳನ್ನು ಮುನ್ಜೇ ಶ್ಲಾಘಿಸುತ್ತಾರೆ.

ʼಗಂಡು, ಹೆಣ್ಣುಗಳು ತಂತಮ್ಮ ನಾವಿಕ, ಸೈನಿಕ ಸಮವಸ್ತ್ರಗಳನ್ನು ಧರಿಸಿಕೊಂಡು ಲಲಿತವಾದ ದೈಹಿಕ ಮತ್ತು ಸೈನಿಕ ತಾಲೀಮುಗಳನ್ನು ನಡೆಸುವುದನ್ನು ಕಂಡು ನಾನು ಉತ್ತೇಜಿತನಾದೆ.ʼ

ಮುನ್ಜೇ ಇಟಲಿಯಲ್ಲಿ ಕೇವಲ ಫ್ಯಾಸಿಸಮ್ಮಿನ ಔತಣ ಸವಿದು ಬರಲಿಲ್ಲ. ಫ್ಯಾಸಿಸ್ಟ್‌ ಮುಖ್ಯಸ್ಥ ಮುಸೊಲಿನಿಯನ್ನು ಭೇಟಿಯೂ ಆಗುತ್ತಾರೆ. ೧೯೩೧ ಮಾರ್ಚ್‌ ೧೯ರಂದು ಅಪರಾಹ್ನ ೩ ಗಂಟೆಯ ಹೊತ್ತಿಗೆ ಅವರು ಮುಸೊಲಿನಿಯನ್ನು ಭೇಟಿಯಾಗುತ್ತಾರೆ. ಮಾರ್ಚ್‌ ೨೦ರ ದಿನಚರಿ ಟಿಪ್ಪಣಿಯಲ್ಲಿ ಆ ಭೇಟಿಯ ಕುರಿತು ಹೀಗೆ ಬರೆಯಲಾಗಿದೆ:

ʼ…ನಾನು ಬಾಗಿಲ ಬಳಿ ತಲುಪಿದ್ದನ್ನು ತಿಳಿಸಿದ ಮರುಕ್ಷಣವೇ ಅವರು ಎದ್ದು ನಿಂತು ನನ್ನನ್ನು ಸ್ವಾಗತಿಸಲೆಂದು ನನ್ನ ಬಳಿಗೆ ಬಂದರು.

ಡಾ. ಮುನ್ಜೇ ಎಂದು ಹೇಳಿಕೊಂಡು ನಾನು ಅವರಿಗೆ ಹಸ್ತಲಾಘವ ಮಾಡಿದೆ. ನನ್ನ ಕುರಿತು ಎಲ್ಲವೂ ಅವರಿಗೆ ತಿಳಿದಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಒಬ್ಬ ವ್ಯಕ್ತಿಯಂತೆ ಆತ ನನಗೆ ಕಾಣಿಸಿದರು. ಗಾಂಧಿಯ ಕುರಿತು ದೊಡ್ಡ ಗೌರವವನ್ನೂ ಹೊಂದಿದ್ದರು. ಮೇಜಿನ ಎದುರುಗಡೆ ಕುರ್ಚಿ ಎಳೆದುಕೊಂಡು ನನ್ನ ಮುಂದೆಯೇ ಕುಳಿತು ಸುಮಾರು ಅರ್ಧಗಂಟೆಗಳ ಕಾಲ ನನ್ನೊಂದಿಗೆ ಮಾತನಾಡಿದರು. ಗಾಂಧಿಯ ಕುರಿತು ಮತ್ತು ಗಾಂಧಿಯ ಚಳುವಳಿಯ ಕುರಿತು ಕೇಳಿದ ನಂತರ ಅವರು ಒಂದು ಪ್ರಶ್ನೆಯನ್ನು ಮುಂದಿಟ್ಟರು. ʼಇಂಡಿಯಾ ಮತ್ತು ಇಂಗ್ಲೆಂಡ್‌ ನಡುವೆ ಶಾಂತಿ ಸ್ಥಾಪಿಸಲು ದುಂಡುಮೇಜಿನ ಸಭೆಗೆ ಸಾಧ್ಯವಿದೆಯೇ?ʼ ಸಾಮ್ರಾಜ್ಯದ ಉಳಿದ ಡೊಮಿನಿಯನ್‌ಗಳ ಹಾಗೆ ನಮಗೂ ಸಮಾನ ಪದವಿಯನ್ನು ದೊರಕಿಸಿಕೊಡಲು ಬ್ರಿಟಿಷರು ಮನಃಪೂರ್ವಕವಾಗಿ ಬಯಸುತ್ತಾರಾದರೆ ಸಾಮ್ರಾಜ್ಯದಡಿಯಲ್ಲಿ ಶಾಂತಿ ಮತ್ತು ವಿಧೇಯತೆಯಿಂದ ಬದುಕುವುದರಲ್ಲಿ ನಮಗೆ ವಿರೋಧವಿಲ್ಲ. ಹಾಗಲ್ಲದಿದ್ದರೆ ಗಲಭೆಗಳು ಹೊಸರೀತಿಯಲ್ಲಿ ಮತ್ತೆ ಮತ್ತೆ ಮುಂದುವರಿಯುತ್ತಲೇ ಇರುತ್ತವೆ. ಇಂಡಿಯಾ ಬ್ರಿಟನ್‌ ಜೊತೆ ಸೌಹಾರ್ದತೆಯಿಂದಲೂ ಶಾಂತಿಯಿಂದಲೂ ವ್ಯವಹರಿಸುವುದಾದರೆ, ಅವರಿಗೆ (ಬ್ರಿಟಿಷರಿಗೆ) ಯೂರೋಪಿಯನ್‌ ದೇಶಗಳ ನಡುವೆ ಅತ್ಯಂತ ಉನ್ನತ ಪದವಿ ಗಳಿಸಲು ಮತ್ತು ಅದನ್ನು ನೆಲೆನಿಲ್ಲಿಸಲು ಸಾಧ್ಯವಿದೆ. ಉಳಿದ ಡೊಮಿನಿಯನ್‌ಗಳಿಗೆ ಸಮಾನವಾಗಿರುವಂತಹ ಡೊಮಿನಿಯನ್‌ ಪದವಿ ಇಂಡಿಯಾಗೆ ನೀಡುವುದಿಲ್ಲವಾದರೆ ಇಂಡಿಯಾ ಕೂಡ ಆ ರೀತಿಯಲ್ಲಿ ವರ್ತಿಸುವುದಿಲ್ಲ. ಸೆನ್ಯೋರ್‌ ಮುಸೊಲಿನಿ ನನ್ನ ಈ ಅಭಿಪ್ರಾಯದಲ್ಲಿ ತೃಪ್ತನಾದರು. ವಿಶ್ವವಿದ್ಯಾಲಯಕ್ಕೇ ಭೇಟಿ ನೀಡಿದಿರೇ ಎಂದು ಕೇಳಿದರು. ಗಂಡುಮಕ್ಕಳಿಗೆ ನೀಡುತ್ತಿರುವ ಸೈನಿಕ ತರಬೇತಿಯಲ್ಲಿ ನನಗೆ ಆಸಕ್ತಿಯಿದೆಯೆಂದೂ ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಜರ್ಮನಿಗಳ ಸೈನಿಕ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆಂದೂ ನಾನು ಹೇಳಿದೆ. ಇಟಲಿ ಭೇಟಿಯೂ ಇದೇ ಕಾರಣಕ್ಕೆ ಆಗಿದೆಯೆಂದೂ, ವಿದೇಶಾಂಗ ಮತ್ತು ಯುದ್ಧ ಸಚಿವಾಲಯಗಳು ಈ ವಿದ್ಯಾಭ್ಯಾಸ ಕೇಂದ್ರಗಳ ಭೇಟಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸಿಕೊಟ್ಟರೆಂದು ತಿಳಿಸಲು ಸಂತೋಷವಿದೆಯೆಂದೂ ನಾನು ಹೇಳಿದೆ. ಈ ಮುಂಜಾನೆ ಮತ್ತು ಅಪರಾಹ್ನಗಳಲ್ಲಿ ಬಲಿಲ್ಲ ಮತ್ತು ಇತರ ಫ್ಯಾಸಿಸ್ಟ್‌ ಸಂಘಟನೆಗಳ ಕಾರ್ಯಾಲಯಗಳಿಗೆ ಭೇಟಿ ನೀಡಿದೆನೆಂದೂ ಅವು ದೊಡ್ಡ ಮಟ್ಟದಲ್ಲಿ ನನ್ನನ್ನು ಆಕರ್ಷಿಸಿದವು ಎಂದೂ ಸೇರಿಸಿದೆ. ಅವಳ (ಇಟಲಿಯ) ಅಭಿವೃದ್ಧಿ ಮತ್ತು ಪ್ರಗತಿಗಾಗಿ ಇವೆಲ್ಲವೂ ಇಟಲಿಗೆ ಅತ್ಯಗತ್ಯವಾಗಿ ಬೇಕಾದವು. ಸುದ್ದಿ ಪತ್ರಿಕೆಗಳು ಇವುಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಅಷ್ಟೇನೂ ಸುಖಕರವಲ್ಲದ ಸಂಗತಿಗಳನ್ನು ಬರೆಯುತ್ತಿವೆಯಾದರೂ ನನಗೆ ಇಲ್ಲಿ ವಿರೋಧಿಸಬೇಕಾದ ಅಂತಹ ಯಾವ ಸಂಗತಿಯೂ ಕಾಣ ಸಿಗಲಿಲ್ಲ.

ಸೆನ್ಯೋರ್‌ ಮುಸೊಲಿನಿ: ಇವುಗಳ ಕುರಿತು ತಮ್ಮ ಅಭಿಪ್ರಾಯವೇನು?
ಡಾ. ಮುನ್ಜೇ: ಯುವರ್‌ ಎಕ್ಸಲೆನ್ಸಿ, ನಾನು ಅತಿಯಾಗಿ ಆಕರ್ಷಿತನಾಗಿರುವೆ. ಮುನ್ನಡೆಯಲು ಮತ್ತು ಎತ್ತರಕ್ಕೆ ಏರಲು ಬಯಸುವ ಪ್ರತಿಯೊಂದು ದೇಶಕ್ಕೂ ಇಂತಹ ಸಂಘಟನೆಗಳ ಅಗತ್ಯವಿದೆ. ನಮ್ಮ ಸೈನಿಕ ಶಕ್ತಿ ರೂಪೀಕರಣಕ್ಕಾಗಿ ಭಾರತಕ್ಕೂ ಇಂತಹದ್ದೊಂದು ಸಂಘಟನೆಯ ಅಗತ್ಯವಿದೆ. ನೂರೈವತ್ತು ವರ್ಷಗಳ ಬ್ರಿಟಿಷ್‌ ಸಾಮ್ರಾಜ್ಯಶಾಹಿ ಆಡಳಿತದಲ್ಲಿ ಭಾರತೀಯರು ತಮ್ಮ ಸೈನಿಕ ಮನೋಭಾವದಿಂದ ಬಹಳ ದೂರ ತಳ್ಳಲ್ಪಟ್ಟಿದ್ದಾರೆ. ಆದರೆ, ಈಗ ಭಾರತ ಅವಳ ಪ್ರತಿರೋಧದ ಕರ್ತವ್ಯವನ್ನು ಕೈಗೆತ್ತಿಕೊಳ್ಳಲು ಸ್ವಯಂ ಸನ್ನದ್ದರಾಗಲು ತೀರ್ಮಾನಿಸಿ ನಾನು ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಸಮಾನ ಗುರಿಯನ್ನು ಹೊಂದಿರುವ ಒಂದು ಭಾರತೀಯ ಸಂಘಟನೆಯೊಂದನ್ನು ನಾನು ಈಗಾಗಲೇ ಆರಂಭಿಸಿದ್ದೇನೆ. ಸಂದರ್ಭ ಕೂಡಿ ಬಂದರೆ ಭಾರತದ ಮತ್ತು ಇಂಗ್ಲೆಂಡಿನ ಸಾರ್ವಜನಿಕ ಸಭೆಗಳಲ್ಲಿ ತಮ್ಮ ಬಲಿಲ್ಲ ಮತ್ತು ಇತರ ಸಂಘಟನೆಗಳ ಕುರಿತು ಮಾತನಾಡಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಅವುಗಳಿಗೆ ನಾನು ಸೌಭಾಗ್ಯವನ್ನೂ ಉತ್ತಮ ಭವಿಷ್ಯವನ್ನೂ ಕೋರುತ್ತೇನೆ.

ಸೆನ್ಯೋರ್‌ ಮುಸೊಲಿನಿ ಅತ್ಯಂತ ಸಂತೋಷಗೊಂಡು ಹೀಗೆ ಹೇಳಿದರು. ʼಧನ್ಯವಾದಗಳು. ಆದರೆ ನಿಮ್ಮದು ಕಠಿಣ ಗುರಿ. ಆದರೂ ನಾನು ನಿಮಗೂ ವಿಜಯ ಕೋರುತ್ತೇನೆ.ʼ ನಂತರ ಅವರು ಎದ್ದು ನಿಂತು ನಮಸ್ಕರಿಸಿದರು.

ಮುನ್ಜೇ ೧೯೨೭ರಿಂದ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೆಡ್ಗೆವಾರರ ಗುರು ಎಂಬ ನೆಲೆಯಲ್ಲಿ ಮುನ್ಜೇ ಅವರ ಈ ಭೇಟಿಯು ಅತ್ಯಂತ ಮುಖ್ಯವಾಗುತ್ತದೆ. ಪೇಶ್ವೆಗಳ ಸೈನಿಕ ತರಬೇತಿಯ ಸ್ಮರಣೆಯಿಂದ ಫಾಡ್ಕೇ ಮತ್ತು ದಾಮೋದರ್‌ ಹರಿ ಚಾಪೇಕರ್‌ ಸ್ಥಾಪಿಸಿದ್ದ ದೈಹಿಕ ತರಬೇತಿ ಸಂಘಗಳೂ, ತಿಲಕ್‌ ಆಹ್ವಾನ ನೀಡಿ ರೂಪಿಸಿದ್ದ ವ್ಯಾಯಾಮಶಾಲೆಗಳೂ, ಸಾವರ್ಕರ್‌ ಅವರ ಮಿತ್ರಮೇಳ ಮತ್ತು ಅಭಿನವ್‌ ಭಾರತ್‌ ಮುಂದಿಟ್ಟಿದ್ದ ಮಾದರಿಗಳನ್ನೂ ಚರಿತ್ರೆಯ ಮೂಲಕ ಕಲ್ಪಿಸಿಕೊಂಡ ಮತ್ತು ಅರೆ-ಸೈನಿಕ ರಾಜಕೀಯ ತರಬೇತಿಯ ಮೂಲಕ ಗೆಲುವು ಕಂಡ ಒಂದು ಫ್ಯಾಸಿಸ್ಟ್‌ ಮಾದರಿಯೊಂದಿಗೆ ಜೋಡಿಸಿಕೊಂಡ ಯೋಜನೆಯೊಂದನ್ನು ಮುನ್ಜೇ ನಿಜವಾಗಿ ಮುಂದಿಟ್ಟಿದ್ದರು. ಅಷ್ಟೇ ಅಲ್ಲ, ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಫ್ಯಾಸಿಸಮ್ಮಿನ ಅಂತಿಮ ಮಾತು ಎಂಬ ರೀತಿಯಲ್ಲಿ ಆ ಕಾಲದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ ಮುಸೊಲಿನಿ. ಇಟಲಿಯಿಂದ ಮರಳಿ ಬಂದ ಮೇಲೆ ತಿಲಕರ ಕೇಸರಿಯ ಜೊತೆ ಸ್ಥಾಪಿಸಿದ, ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಮುಖವಾಣಿಗಳಲ್ಲಿ ಒಂದಾದ ಮರಾಠ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮುನ್ಜೇ ಹೀಗೆ ಹೇಳುತ್ತಾರೆ.

ʼನಿಜವಾಗಿ (ಹಿಂದುತ್ವ) ನಾಯಕರು ಜರ್ಮನಿಯ ಯುವ ಮುನ್ನಡೆಯನ್ನೂ ಇಟಲಿಯ ಬಲಿಲ್ಲ ತರಹದ ಫ್ಯಾಸಿಸ್ಟ್‌ ಸಂಘಟನೆಗಳನ್ನೂ ಅನುಕರಿಸಬೇಕಾಗಿದೆ. ಭಾರತಕ್ಕೆ ಪರಿಚಯಿಸಬೇಕಾಗಿರುವುದೂ, ಭಾರತೀಯ ಸಂದರ್ಭಕ್ಕೆ ತಕ್ಕಂತೆ ಅದನ್ನು ರೂಪಾಂತರಿಸಿಕೊಳ್ಳುವುದೂ ಅತ್ಯಂತ ಪ್ರಮುಖ ಸಂಗತಿಯಾಗಿದೆಯೆಂದು ನಾನು ಭಾವಿಸುತ್ತೇನೆ. ಈ ಸಂಘಟನೆಗಳ ಕಾರ್ಯಾಚರಣೆಯನ್ನು ನೇರವಾಗಿ ನಾನು ಕಂಡು ಬಂದಿದ್ದೇನೆ. ಅವುಗಳು ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿವೆ.‌ʼ

ಅದರ ನಂತರ ಬಲಿಲ್ಲ ಸಂಘಟನೆಯ ರೀತಿಯಲ್ಲಿ ಆರ್‌ಎಸ್‌ಎಸ್‌ ಅನ್ನು ರೂಪಾಂತರಗೊಳಿಸುವ ಕುರಿತು ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಹಿಂದೂ ಸಮುದಾಯದ ಸೈನಿಕ ಶಕ್ತಿ ರೂಪೀಕರಣ ಎಂಬ ಫ್ಯಾಸಿಸ್ಟ್‌ ಕಲ್ಪನೆ ಮುನ್ಜೇ ಅವರನ್ನು ಬಹುವಾಗಿ ಆಕರ್ಷಿಸಿತ್ತು ಎಂದು ಕಾಣುತ್ತದೆ. ೧೯೩೪ ಜನವರಿ ೩೧ರಂದು ಫ್ಯಾಸಿಸಂ ಮತ್ತು ಮುಸೊಲಿನಿಯ ಕುರಿತ ಸೆಮಿನಾರಿನಲ್ಲಿ ಅದೇ ರೀತಿಯ ಮಾತುಗಳನ್ನು ಆಡುತ್ತಾರೆ. ಕಾವ್ಡೇ ಶಾಸ್ತ್ರಿ ಈ ಸೆಮಿನಾರನ್ನು ಆಯೊಜಿಸಿದ್ದರು. ಹೆಡ್ಗೆವಾರ್‌ ಅಧ್ಯಕ್ಷರಾಗಿದ್ದರು. ಈ ಸಂಗತಿಯನ್ನು ಮುನ್ಜೇ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾರೆ. ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ, ಮುನ್ಜೇ ತಮ್ಮ ದಿನಚರಿಯಲ್ಲಿ ದಾಖಲಿಸಿರುವ ೧೯೩೪ ಮಾರ್ಚ್‌ ೩೧ರಂದು ಜರ್ಮನ್‌ ಮತ್ತು ಇಟಲಿ ಮಾದರಿಯನ್ನು ಬಳಸಿಕೊಂಡು ಸೈನಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ಹೆಡ್ಗೆವಾರ್‌, ಲಾಲು ಗೋಖಲೆ ಅವರುಗಳ ಜೊತೆ ಒಮ್ಮತಕ್ಕೆ ಬರಲಾಗಿತ್ತು ಎಂಬುದು. ಅಲ್ಲಿ ನಡೆದ ಮಾತುಕತೆ ಹೀಗಿತ್ತು.

ಲಾಲು ಗೋಖಲೆ: ತಾವು ಹಿಂದೂಸಭಾದ ಅಧ್ಯಕ್ಷರಾಗಿದ್ದೀರಿ. ಹಿಂದೂಗಳನ್ನು ಸಂಘಟಿಸುವ ಕುರಿತು ತಾವು ಭಾಷಣಗಳನ್ನೂ ಮಾಡುತ್ತೀರಿ. ಆದರೆ ಇದು ಸಾಧ್ಯವಿದೆಯೇ?

ನಾನು (ಮುನ್ಜೇ) ಹೇಳಿದೆ. ನಾನು ಬಹಳ ತಡವಾಗಿ ಆಲೋಚಿಸತೊಡಗಿದ ವಿಷಯದ ಕುರಿತು ತಾವು ಸ್ಪಷ್ಟವಾಗಿ ಕೇಳುತ್ತಿದ್ದೀರಿ. ಭಾರತದಾದ್ಯಂತ ಇರುವ ಹಿಂದೂಯಿಸಮ್ಮಿಗೆ ಏಕೀಕೃತ ರೂಪ ನೀಡಲು ಹಿಂದೂ ಧರ್ಮಶಾಸ್ತ್ರದಲ್ಲಿ ಬೇರೂರಿಕೊಂಡಿರುವ ಒಂದು ಯೋಜನೆಯನ್ನು ತಯಾರಿಸುವ ಕುರಿತು ನಾನು ಯೋಚಿಸುತ್ತಿದ್ದೇನೆ. ಶಿವಾಜಿಯ ರೀತಿಯಲ್ಲಿ ಹಳೆಯದೋ ಅಥವಾ ಮುಸೊಲಿನಿ, ಹಿಟ್ಲರ್‌ಗಳ ರೀತಿಯಲ್ಲಿ ಈ ಕಾಲದ್ದೋ ಆದ ಸರ್ವಾಧಿಕಾರಿಯ ಅಡಿಯಲ್ಲಿ ಸ್ವರಾಜ್ಯ ನಿರ್ಮಾಣವಾದರೆ ಮಾತ್ರವೇ ಈ ಯೋಜನೆ ಫಲಿಸುತ್ತದೆ ಎಂಬುದೇ ನನ್ನ ಚಿಂತೆ. ಅಂದರೆ, ಅಂತಹ ಒಬ್ಬ ಸರ್ವಾಧಿಕಾರಿ ಹುಟ್ಟಿ ಬರುವ ತನಕ ನಾವು ಕೈಕಟ್ಟಿ ಕೂರಬೇಕು ಎಂದರ್ಥವಲ್ಲ. ಅದಕ್ಕಾಗಿ ಒಂದು ವೈಜ್ಞಾನಿಕ ಯೋಜನೆಯನ್ನು ವಿನ್ಯಾಸಗೊಳಿಸಿ ಕೆಲಸ ಮಾಡಬೇಕು.ʼ

೧೯೩೩ರ ರಾಷ್ಟೀಯ ಸ್ವಯಂಸೇವಕ ಸಂಘದ ಕುರಿತ ಒಂದು ಟಿಪ್ಪಣಿ ಎಂಬ ನೆಲೆಯಲ್ಲಿ ಬ್ರಿಟಿಷ್‌ ಇಂಟೆಲಿಜೆನ್ಸ್‌ ರಿಪೋರ್ಟನ್ನೂ ಕಸೋಲಾರಿ ಬೊಟ್ಟು ಮಾಡಿ ತೋರಿಸುತ್ತಾರೆ. ಫ್ಯಾಸಿಸ್ಟರು ಇಟಲಿಯಲ್ಲೂ ನಾಜಿಗಳು ಜರ್ಮನಿಯಲ್ಲೂ ಮುಂದೆ ಏನಾಗಿ ಹೋದರೋ ಅದನ್ನೇ ಸಂಘವು ಬಯಸುತ್ತಿರುವುದು ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗದು.

ಹಿಂದೂ ಸಮುದಾಯದ ಸೈನಿಕ ಶಕ್ತಿ ರೂಪೀಕರಣಕ್ಕಾಗಿ ಮುನ್ಜೇ ಆರಂಭಿಸಿದ ಪ್ರಯೋಗಗಳಲ್ಲಿ ಭೊನ್ಸ್ಲೇ ಸೈನಿಕ ಶಾಲೆ ಮತ್ತು ಸೆಂಟ್ರಲ್‌ ಹಿಂದೂ ಮಿಲಿಟರಿ ಎಜುಕೇಷನ್‌ ಸೊಸೈಟಿಯೂ ಸೇರುತ್ತದೆ. ಅವುಗಳ ಗುರಿಯಾಗಿ ಮುನ್ಜೇ ಈ ಕೆಳಗಿನ ಅಂಶಗಳನ್ನು ಮುಂದಿಟ್ಟಿದ್ದರು.
೧. ಹಿಂದೂಗಳ ಸೈನಿಕ ಶಕ್ತಿ ಮರುರೂಪೀಕರಣಕ್ಕೆ ಮತ್ತು ಮಾತೃಭೂಮಿಯ ಸಂರಕ್ಷಣೆಯ ಕರ್ತವ್ಯವನ್ನು ಸಂಪೂರ್ಣವಾಗಿ ಹೊತ್ತುಕೊಳ್ಳಲು ಯುವಕರನ್ನು ಸಜ್ಜುಗೊಳಿಸುವುದು.
೨. ವೈಯಕ್ತಿಕ ಮತ್ತು ರಾಷ್ಟ್ರೀಯ ಪ್ರತಿರೋಧಕಲೆ ಮತ್ತು ಇದರ ವಿಜ್ಞಾನವನ್ನು ಯುವಕರಿಗೆ ಕಲಿಸಿಕೊಡುವುದು ಮತ್ತು ಸನಾತನ ಧರ್ಮದ ಕುರಿತು ಅವರಿಗೆ ಅರಿವು ಮೂಡಿಸುವುದು.

ಈ ಸಂಸ್ಥೆಗಳಿಗೆ ಧನಸಹಾಯ ಯಾಚಿಸಿಕೊಂಡು ಸ್ಥಿತಿವಂತರ ನಡುವೆ ಹರಿದಾಡುತ್ತಿದ್ದ ಕರಪತ್ರವೊಂದರಲ್ಲಿ ಮುನ್ಜೇ ಫ್ಯಾಸಿಸ್ಟ್ ಇಟಲಿ ಮತ್ತು ನಾಜಿ ಜರ್ಮನಿಯ ಕುರಿತು ವಿವರಗಳನ್ನು ನೀಡುತ್ತಾರೆ. ‘ಎದುರಾಳಿಗಳನ್ನು ಗುಂಪು ಗುಂಪಾಗಿ ಕೊಂದು ಹಾಕಲು ಮತ್ತು ಅಗತ್ಯ ಬಂದರೆ ಸ್ವತಃ ಸಾಯಲು ಅಥವಾ ಗಾಯಗೊಳ್ಳಲು ‘ನಮ್ಮ ಹುಡುಗರಿಗೆ’ ತರಬೇತಿ ನೀಡಲು ಈ ಸಂಸ್ಥೆಗಳನ್ನು ಆರಂಭಿಸಲಾಗುತ್ತಿದೆ’ ಎಂದು ಹೇಳುತ್ತಾರೆ. ಇದರ ಜೊತೆಗೆ ಅವರು ಸೇರಿಸುವುದು ಹೀಗೆ. ‘ಯುರೋಪ್ ಜೊತೆ ನಾವು ಸಾಧಿಸಬೇಕಾಗಿರುವ ಶಾಂತಿಯೂ ಸಹಕಾರವೂ ಆಧಾರವಾಗಿಟ್ಟಿರುವುದು ದಶಲಕ್ಷದಷ್ಟು ಸ್ಟೀಲ್ ಬಯನೆಟ್ಟುಗಳನ್ನು ಎಂದು ಹೇಳುವಾಗ ಸೆನ್ಯೋರ್ ಮುಸೊಲಿನಿಯೆಂಬ ಆಧುನಿಕ ಇಟಲಿಯ ಪಿತಾಮಹ ಇದೇ ವಿಚಾರವನ್ನು ಇನ್ನಷ್ಟು ಗಟ್ಟಿಯೂ ಸ್ಪಷ್ಟವೂ ಆದ ಭಾಷೆಯಲ್ಲಿ ಹೇಳುತ್ತಾರೆ.

ಮುಸೊಲಿನಿಯ ಡಾಕ್ಟ್ರಿನ್ ಆಫ್ ಫ್ಯಾಸಿಸಂ ಎಂಬ ಪುಸ್ತಕದಿಂದ ಆವೇಶಗೊಂಡು ಮುನ್ಜೇ ಇಂತಹ ವಾಗ್ಬಾಣಗಳನ್ನು ಧಾರಾಳವಾಗಿ ಪ್ರಯೋಗಿಸುತ್ತಾರೆ. ಜರ್ಮನಿಯ ಎವಾಲ್ಡ್ ಬೋನ್ಡೇ ಬರೆದ ಸೈನಿಕವಿಜ್ಞಾನ ಎಂಬ ಪುಸ್ತಕದ ಬಗ್ಗೆಯೂ ಮುನ್ಜೇ ವಿವರಿಸುತ್ತಾರೆ. ‘ತನ್ನ ರಕ್ತವು ದೇಶ-ದೇವರಿಗಾಗಿ ಹರಿಯುವುದಾದರೆ ಸಾಯುತ್ತಿರುವ ವೀರನಿಗೆ ಸುಲಭದಲ್ಲಿ ಸಾವು ಬರುತ್ತದೆ.’

ಬ್ರಿಟಿಷ್ ಇಂಡಿಯಾದಲ್ಲಿ ಇದ್ದುಕೊಂಡು ಹೀಗೆಲ್ಲ ಬರೆಯುವಾಗ ಯಾರು, ಯಾರ ವಿರುದ್ಧ ಹಿಂದೂ ಸಮುದಾಯ ಸೈನಿಕ ಶಕ್ತಿ ರೂಪೀಕರಣ ಮಾಡಬೇಕು ಎಂಬುದನ್ನು ಮುನ್ಜೇ ಸ್ಪಷ್ಟವಾಗಿ ಹೇಳುವುದಿಲ್ಲ. ಏನೇ ಆದರೂ, ದೇಶವನ್ನು ಆಳುತ್ತಿದ್ದ ಬ್ರಿಟಿಷರ ಮೇಲೆ ಮುನ್ಜೇ ಅವರಿಗಾಗಲಿ, ಅವರು ಅಧ್ಯಕ್ಷರಾಗಿದ್ದ ಹಿಂದೂ ಮಹಾಸಭಾಕ್ಕೆ ಆಗಲಿ, ಅವರು ಮಾರ್ಗದರ್ಶನ ನೀಡುತ್ತಿದ್ದ ಆರ್‌ಎಸ್‌ಎಸ್‌ಗಾಗಲಿ ಯಾವ ವಿರೋಧವೂ ಇರಲಿಲ್ಲ.

You cannot copy content of this page

Exit mobile version