ಸಿಡಿ ಮಾಡೋದು, ಪೋಸ್ಟರ್ ಅಂಟಿಸೋದು ಬಿಡ್ರಿ ಡಿಕೆಶಿ – ಎಚ್ಡಿಕೆ ಗರಂ
ಲಿಂಕ್ ನಕಲಿಸಲಾಗಿದೆ ✓
ತುಮಕೂರು : ಪೋಸ್ಟರ್ ಅಂಟಿಸೋ ಚಾಳಿ ಬಿಡಿ, ಸಿಡಿ ಮಾಡೋದು ಬಿಡಿ, ಇವೆಲ್ಲಾ ಸಿಎಂ ಮಾಡೋ ಕೆಲಸನಾ.. ಎಂದು ಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ತುರುವೇಕೆರೆ ಕ್ಷೇತ್ರದ ಸಿ.ಎಸ್. ಪುರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ಥಳಿ ಅನಾವರಣಗೊಳಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರ ಹಾಗೂ ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಅಲ್ಲ
ದೇವೇಗೌಡರ 70 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಬರೋಬ್ಬರಿ 28 ವರ್ಷಗಳ ಕಾಲ ಕೇವಲ ಶಾಸಕರಾಗಿಯೇ ಸೇವೆ ಸಲ್ಲಿಸಿದ್ದರು. ಆದರೆ ಈಗಿನವರು ಶಾಸಕರಾದ ತಕ್ಷಣವೇ ಮುಖ್ಯಮಂತ್ರಿ ಆಗಬೇಕು ಎಂದು ಆಸೆಪಡುತ್ತಾರೆ. ಹಳ್ಳಿ ಜನರ ಆಶೀರ್ವಾದದಿಂದ ದೇವೇಗೌಡರು ಪ್ರಧಾನಮಂತ್ರಿಯಾದರು. ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷವಲ್ಲ, ಬದಲಾಗಿ ಕಮ್ಯುನಿಸ್ಟರು ಬಲವಂತವಾಗಿ ದೇವೇಗೌಡರ ತಲೆಗೆ ಪ್ರಧಾನಿ ಪಟ್ಟ ಕಟ್ಟಿದರು ಎಂದು ಕುಮಾರಸ್ವಾಮಿ ಸ್ಮರಿಸಿದರು.
ನಾನು ನೋಡದೇ ಇರೋ ಸಿಎಂ ಸ್ಥಾನನಾ ಅದು?
ನಿನ್ನೆ ರಾತ್ರಿ ನನ್ನ ಮನೆ ಮುಂದೆ ಪೋಸ್ಟರ್ ಹಾಕಿದ್ದಾರೆ, ಅದನ್ನು ಬೆಳಗಿನ ಜಾವ ಮೂರುವರೆ ಸುಮಾರಿಗೆ ಪೊಲೀಸರು ತೆಗೆದು ಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗಿದ್ದಾರೆ ಅಂತಾ ನಾನು ಹೊಟ್ಟೆ ಕಿಚ್ಚು ಪಡುತ್ತಿದ್ದೇನೆ ಎಂದು ಹೇಳುತ್ತಾರೆ. ನಾನು ನೋಡದೇ ಇರೋ ಸಿಎಂ ಸ್ಥಾನನಾ ಅದು? ನಮ್ಮ ಮನೆಗೆ ಜನರು ಸಾಕ್ಷಾತ್ ಪ್ರಧಾನಮಂತ್ರಿ ಸ್ಥಾನವನ್ನೇ ಕೊಟ್ಟಿದ್ದಾರೆ. ಹಿಂದೆ ಡಿಕೆ ಶಿವಕುಮಾರ್ ಅವರು ಎಷ್ಟು ಜನಗಳ ಮನೆ ಹಾಳು ಮಾಡಿದ್ರೋ ಅದನ್ನು ನಾವು ಮರೆಯುತ್ತೇವೆ. ಆದರೆ ಈಗ ಸಿಎಂ ಆಗಿದ್ದೀರಿ, ಪ್ರಾಮಾಣಿಕವಾಗಿ ನಾಡಿನ ರೈತರ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನವರನ್ನು ನಂಬಬೇಡಿ ಎಂದು ಅಂದೇ ಹೇಳಿದ್ದೆ
2018ರ ಚುನಾವಣೆಯಲ್ಲಿ ನಾವು ಗೆದ್ದಿದ್ದು ಕೇವಲ 38 ಸ್ಥಾನಗಳನ್ನು ಮಾತ್ರ. ಆದರೆ ಅಂದು ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ನಮ್ಮ ತಂದೆಯವರ ಕೈ ಕಾಲು ಹಿಡಿದರು. ಆ ಸಂದರ್ಭದಲ್ಲೇ ನಾನು ತಂದೆಯವರಿಗೆ ಕಾಂಗ್ರೆಸ್ ನವರನ್ನು ನಂಬಬೇಡಿ ಎಂದು ಎಚ್ಚರಿಸಿದ್ದೆ. ಇಂದು ಗುತ್ತಿಗೆದಾರರು 39 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ದಿನಾಲೂ ಸರ್ಕಾರದ ಬಳಿ ಕೇಳುತ್ತಿದ್ದಾರೆ, ಆದರೆ ಸರ್ಕಾರದ ಬಳಿ ಹಣವೇ ಇಲ್ಲ. ಇತ್ತ ಕಾವೇರಿ ಜಲಾಶಯದಲ್ಲಿ ನೀರಿಲ್ಲ, ರೈತರಿಗೆ ಬೆಳೆ ಹಾಕಬೇಡಿ ಎಂದು ಹೇಳಿ ತಮಿಳುನಾಡಿಗೆ ಮಾತ್ರ ಯಥೇಚ್ಛವಾಗಿ ನೀರು ಬಿಟ್ಟಿರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿರೋಧ ಪಕ್ಷದವರ ಮನೆಗೆ ಪೋಸ್ಟರ್ ಅಂಟಿಸುವುದು ಕಡಿಮೆ ಮಾಡಿ
ನನಗೆ ಅಧಿಕಾರ ಕೊಡಿ ಎಂದು ನಾನು ಕೇಳಿದ್ದು ಪೋಸ್ಟರ್ ಅಂಟಿಸಲು ಅಲ್ಲ ಶಿವಕುಮಾರ್ ಅವರೇ. ವಿರೋಧ ಪಕ್ಷದವರ ಮನೆಗಳಿಗೆ ಪೋಸ್ಟರ್ ಅಂಟಿಸುವುದನ್ನು ಸ್ವಲ್ಪ ಕಡಿಮೆ ಮಾಡಿ. ರಾಜ್ಯ ಸರ್ಕಾರ ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತದೆ. ಪಿಂಕ್ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣ ಕಡಿಮೆ ನೀಡಿದೆ ಎನ್ನುತ್ತಾರೆ. ಆದರೆ ಈ ಮೆಟ್ರೋ ಯೋಜನೆಯನ್ನು ತಂದಿದ್ದೇ ದೇವೇಗೌಡರು. ನೀವು ಹೀಯಾಳಿಸುವ ಹಳ್ಳಿ ಗುಗ್ಗು ಪ್ರಧಾನಿಯಾದಾಗಲೇ ಈ ಯೋಜನೆ ಬಂದಿದ್ದು. 2028ರಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲವು ವಿಷಯಗಳನ್ನು ನುಂಗಿಕೊಂಡು ಹೋಗುತ್ತಿದ್ದೇನೆ. ಇವತ್ತೂ ಹೇಳುತ್ತೇನೆ, ನನಗೆ ಒಮ್ಮೆ ಐದು ವರ್ಷ ಅವಕಾಶ ಕೊಡಿ, ಮುಂದಿನ ಬಾರಿ ಎನ್ ಡಿ ಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ