ಬಿಹಾರ : ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರೋಧಿಸಿ ಕಾಂಗ್ರೆಸ್ ಸೋಮವಾರ ಚುನಾವಣಾ ಆಯೋಗದ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರನ್ನು (Rahul Gandhi) ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ರಾಹುಲ್ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕೊಂಡೊಯ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಇದು ಸಂವಿಧಾನವನ್ನು ಉಳಿಸುವ ಹೋರಾಟವಾಗಿದೆ. ಇದು ರಾಜಕೀಯ ಹೋರಾಟವಲ್ಲ. ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ಸಂವಿಧಾನದ ಉದ್ದೇಶದ ಉಳಿವಿಗಾಗಿ ಕಾಂಗ್ರೆಸ್ ಈ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ನಮಗೆ ಸ್ವಚ್ಛ, ಶುದ್ಧ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ನೀಡಬೇಕು. ಪರಿಷ್ಕರಣೆಯ ನೆಪದಲ್ಲಿ ಬೇಕಾಬಿಟ್ಟಿ ತಿದ್ದುಪಡಿ ಮಾಡಿರುವುದು ಸರಿಯಲ್ಲ ಎಂದು ನುಡಿದ ರಾಹುಲ್ ಗಾಂಧಿ, ಮತಗಳ್ಳತನ ಹಾಗೂ ಮತಪಟ್ಟಿಯ ತೀವ್ರ ಪರಿಷ್ಕರಣೆಯ ವಿರುದ್ದ ನಾವು ಖಂಡಿತಾ ದನಿಯೆತ್ತಲಿದ್ದೇವೆ ಎಂದರು. ಬಿಹಾರದಲ್ಲಿ ಲಕ್ಷಾಂತರ ಮಂದಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರ ಪರವಾಗಿ ಕಾಂಗ್ರೆಸ್ ನಿಂದ ನಾವು ಹೋರಾಡಲಿದ್ದೇವೆ. ಎಲ್ಲರಿಗೂ ಮತದಾನದ ಹಕ್ಕನ್ನು ಖಚಿತವಾಗಿ ಕೊಡಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಚುನಾವಣಾ ಆಯೋಗದ (Election Commision) ಪ್ರಧಾನ ಕಚೇರಿಗೆ ವಿರೋಧ ಪಕ್ಷ ಕಾಂಗ್ರೆಸ್ (Congress) ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿ ಆಗಸ್ಟ್ 8 ರಂದು ಕಾಂಗ್ರೆಸ್ ಮೆರವಣಿಗೆಯನ್ನು ನಿಗದಿ ಪಡಿಸಿದ್ದರು. ಆದರೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ನಿಧನದ ಹಿನ್ನಲೆ ಮುಂದೂಡಲಾಗಿತ್ತು.
ಅದರಂತೆ ಇದೀಗ ಇಂದು ವಿರೋಧ ಪಕ್ಷದ ಎಲ್ಲ ಶಾಸಕರು, ಸಂಸದರು ಸೇರಿ ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸಿತ್ತು.