ಬೆಳಗಾವಿ : ಸರ್ಕಾರಿ ಶಾಲಾ ಮಕ್ಕಳಿಗೆ (School Students ) ಬಾಳೆಹಣ್ಣು (Banana ) ಹಾಗೂ ಮೊಟ್ಟೆ (Egg) ನೀಡೋ ವಿಚಾರವಾಗಿ ಶಿಕ್ಷಕರಿಗೆ ಹೊರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಮೊಟ್ಟೆ, ಬಾಳೆಹಣ್ಣು ವಿತರಿಸುವ ಕಾರ್ಯದಿಂದ ಶಿಕ್ಷಕರು ಪಾಠ-ಪ್ರವಚನ ಗಳಿಗೆ ಹೆಚ್ಚಾಗಿ ಗಮನ ಹರಿಸಲಾಗುತ್ತಿಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ಹೆಚ್ಚಿನ ಜವಾಬ್ದಾರಿ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ನಿರ್ಧರಿಸಿದೆ.
ಬಾಳೆಹಣ್ಣು ಹಾಗೂ ಮೊಟ್ಟೆ ಬೆಲೆ ಹೆಚ್ಚಾಗಿದ್ದು, ಸರ್ಕಾರ ನೀಡುವ ಹಣದಲ್ಲಿ ಖರೀದಿ ಕಷ್ಟವಾಗಿದೆ. ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಶಿಕ್ಷಕರ ಜವಾಬ್ದಾರಿ ಕಡಿಮೆ ಮಾಡಲು ಸರಕಾರ ಮುಂದಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದು, ವಿಧಾನಸಭಾ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ವಿತರಿಸುವ ಶಿಕ್ಷಕರ ಜವಾಬ್ದಾರಿಯನ್ನು ಕಡಿಮೆ ಮಾಡಲಾಗುವುದು. ರಾಜ್ಯದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವ ಸಮಯಕ್ಕಿಂತ ಮಧ್ಯಾಹ್ನದ ಬಿಸಿಯೂಟದ ಸಿದ್ಧತೆಗೆ ಹೆಚ್ಚಿನ ಸಮಯ ವ್ಯಯ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಕರ ಮೂಲ ವೃತ್ತಿಗೆ ಧಕ್ಕೆಯಾಗುತ್ತಿದೆ. ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಶಿಕ್ಷಕರಿಗೆ ನೀಡಲಾಗುವ ಆರೋಗ್ಯ ಸಂಜೀವಿನಿ ವಿಮಾ ಯೋಜನೆಯನ್ನು ಅನುದಾನ ರಹಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ಸರ್ಕಾರಿ ಶಾಲಾ ಶಿಕ್ಷಕರಿಗೆ ಹಂತ ಹಂತವಾಗಿ ಮುಂಬಡ್ತಿ ನೀಡದೆ ಏಕಕಾಲಕ್ಕೆ ಬಡ್ತಿ ನೀಡುವ ಬಗ್ಗೆ ಇನ್ನೆರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
