Home ಅಂಕಣ ‘ಮಾರಿಕೊಂಡವರ’ ನಡುವೆ ದ್ಯಾವನೂರು ಮಹಾದೇವ ಮತ್ತು ಪ್ರಕಾಶ್ ರಾಜ್

‘ಮಾರಿಕೊಂಡವರ’ ನಡುವೆ ದ್ಯಾವನೂರು ಮಹಾದೇವ ಮತ್ತು ಪ್ರಕಾಶ್ ರಾಜ್

0

“ನಟ ಪ್ರಕಾಶ್‌ ರಾಜ್‌ರ ಮಾರಿಕೊಂಡ ಮಾಧ್ಯಮ’ಗಳ ಒಕ್ಕಣೆ ಸಾಕಷ್ಟು ಚರ್ಚೆಗೀಡಾಯ್ತು. ಪತ್ರಿಕಾಗೋಷ್ಠಿಯಲ್ಲಿ ಒಂದಷ್ಟು ಪತ್ರಕರ್ತರು ರೊಚ್ಚಿಗೆದ್ದು ರಾದ್ದಾಂತ ಮಾಡಿದರು.‘ಮಾರಿಕೊಂಡ’ ಈ ಚರ್ಚೆಯ ಸಂದರ್ಭಕ್ಕೆ ದ್ಯಾವನೂರು ಮಹಾದೇವ ಅವರಮಾರಿಕೊಂಡವರು’ ಕಥೆ ನೆನಪಾಗುತ್ತಿದೆ..” ಮಾಚಯ್ಯ ಹಿಪ್ಪರಿಗಿ ಅವರ ಬರಹದಲ್ಲಿ‌

ಮೊನ್ನೆ ನಟ ಪ್ರಕಾಶ್‌ ರಾಜ್‌ರ ಮಾರಿಕೊಂಡ ಮಾಧ್ಯಮ’ಗಳ ಒಕ್ಕಣೆ ಸಾಕಷ್ಟು ಚರ್ಚೆಗೀಡಾಯ್ತು. ಪತ್ರಿಕಾಗೋಷ್ಠಿಯಲ್ಲಿ ಒಂದಷ್ಟು ಪತ್ರಕರ್ತರು ರೊಚ್ಚಿಗೆದ್ದು ರಾದ್ದಾಂತ ಮಾಡಿದರು. ಹಾಗೆ ಮಾಡಿದ್ದನ್ನೆ, ಪ್ರಕಾಶ್‌ ರಾಜ್‌ಗೆ ತಾವು ನೀಡಿದ ‘ತಿರುಗೇಟು’ ಎಂದು ಸಂಭ್ರಮಿಸಿಕೊಂಡರು. ‘ಮಾರಿಕೊಂಡ’ ಈ ಚರ್ಚೆಯ ಸಂದರ್ಭಕ್ಕೆ ದ್ಯಾವನೂರು ಮಾದೇವ ಅವರಮಾರಿಕೊಂಡವರು’ ಕಥೆ ನೆನಪಾಗುತ್ತಿದೆ.

ಎಪ್ಪತ್ತರ ದಶಕದಲ್ಲಿ ತಮ್ಮ ತಾರುಣ್ಯದಲ್ಲಿದ್ದಾಗ ಅವರು ಬರೆದ ಪುಟ್ಟ ಕತೆ ಇದು. ಅಜಮಾಸು ಒಂದೂವರೆ ಸಾವಿರ ಪದಗಳ ಈ ಕತೆ, ಓದಿನ ವೇಗಕ್ಕೆ ಸಟ್ಟನೆ ಮುಗಿದುಹೋಗುತ್ತದಾದರೂ, ಓದಿ ಮುಗಿಸಿದ ನಂತರ ಸಾಗರದಂತೆ ಹರವಿಕೊಳ್ಳುತ್ತಾ ಸಾಗುತ್ತದೆ. ದ್ಯಾವನೂರರ ಕತೆಯೆಂದ ಮೇಲೆ ಅಲ್ಲಿ ಜಾತಿವ್ಯವಸ್ಥೆಯ ತಣ್ಣಗಿನ ಕ್ರೌರ್ಯ, ನಿರ್ಲಜ್ಜ ಸಾಮಾಜಿಕ ಶೋಷಣೆಯ ಧಾತು ಇದ್ದೇ ಇರುತ್ತೆ. ಆದರೆ ಕಾಡುವ ಪ್ರಶ್ನೆ, ಆ ಕ್ರೌರ್ಯ- ಆ ಶೋಷಣೆಗೆ ನಿಜಕ್ಕೂ ಬಲಿಪಶುವಾದದ್ದು ಯಾರು?

ಹೊಟ್ಟೆಪಾಡಿಗಾಗಿ ಹೆಣ್ತಿ ಲಚುಮಿಯನ್ನು ಕಟ್ಟಿಕೊಂಡು ದೇಶಾಂತರ ಹೊರಡುವ ಕುರುಬರ ಬೀರ ಬಂದು ತಲುಪಿದ್ದು ಗೌಡರ ತೋಟದ ಮನೆಗೆ. ಅಲ್ಲಿ ಬದುಕು ಸೊಂಪು. ಕೆಲಸ, ಕೂಲಿ, ಸಂಜೆಯಾದರೆ ಗೌಡರ ಮಗ ಕಿಟ್ಟಪ್ಪನ ಜೊತೆ ಸರಾಪು ನಶೆ. ಜಾತೀ ಪ್ರಪಂಚದಲ್ಲಿ ಕಳೆದುಕೊಂಡವರ ಬದುಕು ಇಷ್ಟು ಸಲೀಸಾಗಿ ಇರಲಿಕ್ಕುಂಟೆ? ಅಲ್ಲೊಂದಷ್ಟು ವಕ್ರರೇಖೆಗಳು ಅಡ್ಡಾದಿಡ್ಡಿ ಅಲೆದಾಡಿದಾಗಲೇ ವ್ಯವಸ್ಥೆಗೆ ಸಮಾಧಾನ. ಅಬ್ಬರಿಸುವ ಕಿರುಬನಂತಿದ್ದರೂ ಕಂಠಪೂರ್ತಿ ಕುಡಿದು, ಬುಸುಬುಸು ಬೀಡಿಗಳ ಎಳೆದು, ಏನೇನೋ ಕನವರಿಸುತ್ತಾ ಬಿದ್ದುಕೊಳ್ಳುವ ಬೀರನ ಹೆಣ್ತಿ ಲಚುಮಿಯನ್ನು, ಪ್ರೇಯಸಿಯ ಕಳೆದುಕೊಂಡು ದೇವದಾಸನಂತಾಗಿದ್ದ ಕಿಟ್ಟಪ್ಪ ತನ್ನ ಗೆಣೆತನಕ್ಕೆ ಸೆಳೆದುಕೊಳ್ತಾನೆ. ಅವನು ಕೊಟ್ಟ ರಗ್ಗು ಅವಳನ್ನು ಬೆಚ್ಚಗಿಡುತ್ತದೆ. ಕಥೆಯನ್ನು ಇಲ್ಲಿಗೇ ನಿಲ್ಲಿಸಿದರೆ, ಬೀರನ ಬೆನ್ನ ಹಿಂದೆ ಏನೇನೊ ನಡೆದುಹೋಗಿ, ಅವನೇ ದುರಂತ ನಾಯಕನಂತೆ ಕಾಣುತ್ತಾನೆ.

ಆದರೆ ಕಥೆ ನಿಂತರೂ, ಬದುಕು ನಿಲ್ಲುವುದಿಲ್ಲವಲ್ಲಾ! ಬೀರ ಅದೊಂದು ರಾತ್ರಿ ಕುಡಿದು ತಾರಾಡುತ್ತಾ ‘ನಿನ್ನ ಹಾಗೂ ನಿನ್ನ ಮಿಂಡ ಕಿಟ್ಟಪ್ಪನ್ನ ಮಚ್ಚಲ್ಲಿ ಕೊಚ್ಚಿ ಹಾಕ್ತೀನಿ’ ಎಂದು ಕನವರಿಸಿದಂತೆ ಮಾತಾಡ್ತಾನೆ. ಲಚುಮಿ ಬೆಚ್ಚಿಬೀಳ್ತಾಳೆ. ಎಲ್ಲವೂ ಗೊತ್ತಾಗಿಹೋಯ್ತಾ ಎಂದು ಗಾಬರಿಗೊಳ್ತಾಳೆ. ಹೇಳಿದಂತೆ ಕಡಿದೇ ತೀರುವನೇ ಎಂದು ನೆಮ್ಮದಿ ಕಳೆದುಕೊಳ್ತಾಳೆ. ದುರಂತ ನಾಯಕನಾಗಿದ್ದ ಬೀರ ಈಗ ಬಂಡಾಯಗಾರನಂತೆ ಕಥೆಯನ್ನು ಆವರಿಸುತ್ತಾನೆ. ಓದುಗನಿಗೆ ಲಚುಮಿ ಹಾದಿಗೆಟ್ಟವಳಂತೆ ಕಾಣಿಸುತ್ತಾಳೆ.

ಕತೆ ಆಗಲೂ ನಿಲ್ಲುವುದಿಲ್ಲ. ಅಷ್ಟೆಲ್ಲ ರಾದ್ದಾಂತ ನಡೆದ ಮಾರನೇ ದಿನ ಬೆಳಗೆದ್ದು ನೋಡುವ ವೇಳೆಗೆ, ತೋಟದ ಮನೆಯ ಮುಂದೆ ಕಿಟ್ಟಪ್ಪ-ಬೀರ ಪರಸ್ಪರ ನಗಾಡುತ್ತಾ ಮಾತಾಡುತ್ತಾ ನಿಂತಿರೋದನ್ನು ಕಂಡು ಲಚುಮಿ ಗೊಂದಲಕ್ಕೆ ತುತ್ತಾಗ್ತಾಳೆ! ಇಲ್ಲಿ ಬಲಿಪಶು ಯಾರು?

ಜಾತಿಯ ಕಾರಣಕ್ಕೆ ಎಲ್ಲವನ್ನೂ ಕಳೆದುಕೊಂಡ ಈ ಪ್ರಪಂಚದಲ್ಲಿ ಬೀರನಿಗೆ ಒಂದು ಬದುಕು ಬೇಕಾಗಿತ್ತು. ಅದು ಕಿಟ್ಟಪ್ಪನ ತೋಟದ ಮನೆಯಲ್ಲಿ ಸಿಕ್ಕಿತು. ಪ್ರೇಯಸಿಯಿಂದ ಅಗಲಿದ ಕಿಟ್ಟಪ್ಪನಿಗೆ ಬಿಸಿ ತಾಕಬೇಕಿತ್ತು. ಆ ಬಿಸಿ ಕೂಡಾ ಅದೇ ತೋಟದ ಮನೆಗೆ ಬಂದು ಸೇರಿತು. ಏನನ್ನೂ ಬಯಸದೆ ಗಂಡನ ಹಿಂದೆ ತಲೆಬಗ್ಗಿಸಿ ಹೊರಟುಬಂದಿದ್ದ ಲಚುಮಿ, ಅವರಿಬ್ಬರ ಬೇಕು-ತಾಕುಗಳಿಗೆ ಬಳಕೆಗೊಂಡಳು. ಅದು ಕೂಡಾ, ಗಂಡನಿಗೆ ವಂಚಿಸಿದ ಪಾಪಪ್ರಜ್ಞೆಯಲ್ಲಿ ಬೇಯುತ್ತಾ!

ಪ್ರಕಾಶ್‌ ರಾಜ್‌ ಅವರ ‘ಮಾರಿಕೊಂಡ ಮಾಧ್ಯಮ’ಗಳ ಒಕ್ಕಣೆಯಲ್ಲೂ, ದ್ಯಾವನೂರರ ‘ಮಾರಿಕೊಂಡವರು’ ಕತೆಯಲ್ಲೂ ಸಾಕಷ್ಟು ಸಾಮ್ಯತೆಗಳಿವೆ. ಕಥೆಯ ಲಚುಮಿ, ತಾನು ಅನುಕೂಲಸ್ತ ಕಿಟ್ಟಪ್ಪನ ಗೆಣೆತನ ಮಾಡಿ ಗಂಡನಿಗೆ ವಂಚಿಸಿದ್ದೇನೆ ಎಂದು ನರಳುತ್ತಾಳೆ; ಆದರೆ ಗಂಡ ಬೀರ, ತನಗೆ ಸಿಕ್ಕ ಬೆಚ್ಚನೆಯ ಬದುಕಿಗೆ ತನ್ನ ಹೆಂಡತಿಯ ಶೀಲದೊಟ್ಟಿಗೇ ರಾಜಿ ಮಾಡಿಕೊಂಡಿರುತ್ತಾನೆ. ಎಲ್ಲ ಗೊತ್ತಿದ್ದು ಕೂಡಾ, ಏನೂ ಗೊತ್ತಿಲ್ಲದವನಂತೆ ನಟಿಸುತ್ತಾ ಲಚುಮಿ ಪಾಪಪ್ರಜ್ಞೆಯಲ್ಲಿ ಬೇಯುವಂತೆ ಮಾಡಿರುತ್ತಾನೆ. ಆಸ್ತಿವಂತ ಕಿಟ್ಟಪ್ಪ ಇಲ್ಲಿ ಸಂತೃಪ್ತ ಫಲಾನುಭವಿ!

ಪ್ರಕಾಶ್‌ ರಾಜ್‌ ಅವರ ಹೇಳಿಕೆಗೆ ರೊಚ್ಚಿಗೆದ್ದ ಪತ್ರಕರ್ತರು, ಲಚುಮಿಯಾಗಿ ಕಂಡರೆ. ಅವರ ಮಾಧ್ಯಮ ಸಂಸ್ಥೆಗಳು, ಅವಳ ಗಂಡ ಬೀರನಂತೆಯೂ; ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸುತ್ತಿರುವ ಹಣವಂತರು/ರಾಜಕಾರಣಿಗಳು ಫಲಾನುಭವಿ ಕಿಟ್ಟಪ್ಪನಾಗಿಯೂ ಗೋಚರಿಸುತ್ತಾರೆ. ಗಂಡ ಬೀರನನ್ನು ಪ್ರಾಮಾಣಿಕ ಎಂದು ಭಾವಿಸಿದ ಹೆಂಡತಿ ಲಚುಮಿಯರೆಲ್ಲ ಅವತ್ತು, ಪ್ರಕಾಶ್‌ ರಾಜ್‌ ವಿರುದ್ಧ ತಿರುಗಿಬಿದ್ದು ರಾದ್ದಾಂತ ಮಾಡಿದರು. ಆದರೆ ತಮ್ಮ ಶೀಲವನ್ನು ತನ್ನ ಅನುಕೂಲಕ್ಕಾಗಿ ರಾಜಿಗಿಟ್ಟಿದ್ದೇ ಗಂಡ ಬೀರ ಎನ್ನುವ ಸತ್ಯ ಅವರಿಗೆ ಇನ್ನೂ ಮನವರಿಕೆಯಾಗಿಲ್ಲ. ಇಲ್ಲಿ ನಿಜವಾದ ಸಂತ್ರಸ್ತೆ ಲಚುಮಿ! ಆದರೆ ತನ್ನನ್ನು ಶೋಷಿಸುತ್ತಿರುವವರು ಯಾರು ಎಂದು ಮನವರಿಕೆಯಾಗುವವರೆಗೆ, ಆಕೆ ತನ್ನ ಶೋಷಕರನ್ನೇ ಪಾಲಕರೆಂದು ಭ್ರಮಿಸಿಕೊಂಡಿರುತ್ತಾಳೆ.

ಹಿರಿಯ ಪತ್ರಕರ್ತರಾದ ದಿನೇಶ್‌ ಅಮೀನ್ ಮಟ್ಟು ಅವರು ಇದನ್ನೇ “ಬೆರಳೆಣಿಕೆಯ ಪತ್ರಕರ್ತರು ಅಥವಾ ಸುದ್ದಿ ನಿರೂಪಕರನ್ನು ಬಿಟ್ಟರೆ ಉಳಿದಂತೆ ಬಹುಪಾಲು ಪತ್ರಕರ್ತರೇ ಸಂತ್ರಸ್ತರು; ಮಾಧ್ಯಮ ಸಂಸ್ಥೆಗಳು ನಿಜವಾದ ಶೋಷಕರು” ಎಂದು ಹೇಳುತ್ತಾರೆ. ಪತ್ರಿಕೋದ್ಯಮ ಇವತ್ತು `ಮಾರಿಕೊಂಡವರು’ ಅಥವಾ ‘ಗೋದಿ ಮೀಡಿಯಾ’ ಎಂಬ ಅವಹೇಳನಕ್ಕೆ ತುತ್ತಾಗುತ್ತಿದೆಯೆಂದರೆ, ಪತ್ರಕರ್ತರು ಆ ಆರೋಪ ಮಾಡಿದವರನ್ನು ಗುರಿಯಾಗಿಸಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ; ಅಂತಹ ಆರೋಪಕ್ಕೆ ತಮ್ಮ ವೃತ್ತಿಯನ್ನು ತಳ್ಳಿದ ನಿಜವಾದ ಶೋಷಕರ ಹುನ್ನಾರಗಳನ್ನು ಅರ್ಥ ಮಾಡಿಕೊಂಡು, ಅದರ ವಿರುದ್ಧ ವೃತ್ತಿರಕ್ಷಣೆಗೆ ಆಲೋಚಿಸಬೇಕಿದೆ. ಲಚುಮಿ, ಕಿಟ್ಟಪ್ಪನನ್ನು ಖುಷಿ ಪಡಿಸುತ್ತಾ; ಬೀರನನ್ನು ಕುರುಡಾಗಿ ನಂಬುತ್ತಾ ಕೂತಷ್ಟೂ ದಿನ, ಆಕೆ ಶೋಷಣೆಯ ಬಲಿಪಶುವಾಗಿಯೇ ಉಳಿಯುತ್ತಾಳೆ. ಹೆಚ್ಚೆಂದರೆ ಆಕೆಗೆ ಅನುಕಂಪ ಸಿಗಬಹುದೆ ಹೊರತು, ನ್ಯಾಯ ಸಿಗುವುದಿಲ್ಲ!

ದೇವನೂರು ಮಹಾದೇವರ ಮಾರಿಕೊಂಡವರು ಕಥೆ ಓದಿಗಾಗಿ: https://surl.li/ranrit

You cannot copy content of this page

Exit mobile version