ಬೆಳಗಾವಿ: ಆಡಳಿತರೂಢ ಕಾಂಗ್ರೆಸ್ ಪಕ್ಷದ ನಾಯಕರು ಸದನದಲ್ಲಿ ಯಾವುದೇ ವಿಷಯದ ಚರ್ಚೆಗೆ ಉತ್ತರ ಕೊಡದೇ ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಮುಡಾ ಹಗರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಸಿಕ್ಕಿಕೊಂಡಿದ್ದಾರೆ. ರಾಜ್ಯದಲ್ಲಿ ವಕ್ಫ್ ನಿಂದ ಭೂಕಬಳಿಕೆಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಹಿಂದೂ ದೇವಾಲಯಗಳೂ ಕೈತಪ್ಪಿ ಹೋಗುವ ಸ್ಥಿತಿಯಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆಯಲ್ಲಿ 700 ಕೋಟಿ ಹಗರಣವಾಗಿದೆ. ಮೂಡಾ, ವಾಲ್ಮಿಕಿ ನಿಗಮಗಳಲ್ಲಿ ಅಕ್ರಮ ನಡೆದಿದೆ. ಇದೆಲ್ಲ ವಿಚಾರಗಳ ಬಗ್ಗೆ ನಾವು ಚರ್ಚೆಗೆ ಮುಂದಾದರೆ ಅದ್ಯಾವುದಕ್ಕೂ ಉತ್ತರವನ್ನೂ ನಿಡದೇ ಕಾಂಗ್ರೆಸ್ ನಾಯಕರು ಓಡಿ ಹೋಗುವ ಕೆಲಸ ಮಾಡುತ್ತಿದ್ದಾರೆ.
ಅನಗತ್ಯವಾಗಿ ಬೇರೆ ಬೇರೆ ವಿಚಾರಗಳನ್ನು ತಂದು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಮಾಡಿ ಸದನವನ್ನು ಮುಂದೂಡಿದರು. ಈಗಾಗಲೆ ವಕ್ಫ್ ಬೋರ್ಡ್ ಬಗ್ಗೆ ನಾವು ಮಾತನಾಡಿದ್ದೇವೆ. ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಡಿದ್ದೇವೆ ಅವರು ಉತ್ತರ ನೀಡಬೇಕು ಅಷ್ಟೇ ಎಂದು ಆಗ್ರಹಿಸಿದರು.
ಇಂದು ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದ್ದೇವೆ. ವಿಜಯೇಂದ್ರ ಮೇಲೆ 150 ಕೋಟಿ ಆಮಿಷ ಆರೋಪ ಮಾಡಿದ್ದಾರೆ. ವಿಜಯೇಂದ್ರ ಯಾಕೆ ಲಂಚ ಕೊಡುತ್ತಾರೆ? ಈವರೆಗೆ ಸಿಕ್ಕಿ ಹಾಕಿಕೊಂಡಿರುವವರು ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ನಾಯಕರೇ ನಮಗೆ ಆಮಿಷವೊಡ್ದಿದ್ದು ಎಂದು ಮಣಿಪ್ಪಾಡಿ ಕೂಡ ಹೇಳಿದ್ದಾರೆ. ಸದನವನ್ನು ಡೈವರ್ಟ್ ಮಾಡಲು ಇಂತಹ ವಿಚಾರವನ್ನು ಕಾಂಗ್ರೆಸ್ ನವರು ತರುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಬಗೆಯುತ್ತಿರುವ ದ್ರೋಹ. ಈ ಮೂಲಕ ಜನಸಾಮನ್ಯರ ವಿಷಯ ಚರ್ಚೆಗೆ ಬರದಂತೆ ಮಾಡುತ್ತಿದ್ದಾರೆ. ಸ್ವತಃ ಹಗ್ರಣದಲ್ಲಿ ಸಿಲುಕಿರುವುದರಿಂದ ಚರ್ಚೆಗೆ ಬಂದರೆ ಮಾನ ಮರ್ಯಾದೆ ಹೋಗುತ್ತೆ ಎಂಬ ಕಾರಣಕ್ಕೆ ಈಗ ವಿಷಯಾಂತರ ಮಾಡುವ ಕುತಂತ್ರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.