ಕೊಚ್ಚಿ : ಅಕ್ರಮ ದಂತ ಹೊಂದಿರುವ ಆರೋಪದ ಮೇಲೆ ನಟ ಮೋಹನ್ ಲಾಲ್‌ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ.
ನಟ ಮೋಹನ್‌ಲಾಲ್ ವಿರುದ್ಧದ ಈ ಆರೋಪದ ಮೇಲಿನ ಮೊಕದ್ದಮೆಯನ್ನು ಹಿಂಪಡೆಯುವಂತೆ ಕೇರಳ ಸರ್ಕಾರದ ಮನವಿಯನ್ನು ಪೆರುಂಬವೂರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತೆ ತಿರಸ್ಕರಿಸಿದೆ. ಸರ್ಕಾರದ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಇರುವುದರಿಂದ ಮತ್ತು ಒಬ್ಬ ವ್ಯಕ್ತಿಯ ಪರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಮೋಹನ್ ಲಾಲ್ ಮತ್ತು ಪ್ರಕರಣದ ಇತರ ಆರೋಪಿಗಳಿಗೆ ನವೆಂಬರ್ 3 ರಂದು ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.
ಈ ದಂತವನ್ನು ಉಡುಗೊರೆಯಾಗಿ ಬಂದಿರುವುದಾಗಿ ಮೋಹನ್ ಲಾಲ್ ಹೇಳಿಕೊಂಡಿದ್ದರು. ಸೆರೆ ಸಿಕ್ಕ ಆನೆಗಳ ದಂತವಾಗಿರುವುದರಿಂದ ಅರಣ್ಯ ವನ್ಯಜೀವಿ ಕಾಯ್ದೆ ಮೋಹನ್ ಲಾಲ್ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿತ್ತು. ಆದರೆ ನ್ಯಾಯಾಲಯವು ಈ ವಾದಗಳನ್ನು ತಿರಸ್ಕರಿಸಿದೆ.
2011ರಲ್ಲಿ ಕೊಚ್ಚಿಯಲ್ಲಿರುವ ಮೋಹನ್ ಲಾಲ್ ಮನೆಯಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ತಪಾಸಣೆಯ ವೇಳೆ ದಂತವನ್ನು ವಶಪಡಿಸಿಕೊಳ್ಳಲಾಗಿತ್ತು. ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ನಟನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು.