ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರಿಂದ ಪ್ರಕರಣ ದಾಖಲು; ರಷ್ಯಾ ಸಚಿವರ ವಿಡಿಯೊ ತಿರುಚಿದ ಆರೋಪ
ಲಿಂಕ್ ನಕಲಿಸಲಾಗಿದೆ ✓
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಹೇಳಿಕೆಯನ್ನು ತಿರುಚಿ, ಭಾರತದ ವಿರುದ್ಧ ಅವರು ಮಾತನಾಡಿದ್ದಾರೆ ಎಂಬ ತಪ್ಪು ಸಂದೇಶ ನೀಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಪೊಲೀಸರ ಸೈಬರ್ ವಿಭಾಗವು ಮಂಗಳವಾರ ಪ್ರಶಾಂತ್ ಭೂಷಣ್ ಅವರ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೆಯಾಗಿದ್ದ ವಿಡಿಯೊವನ್ನು ಗಮನಿಸಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ ವಿಡಿಯೊದಲ್ಲಿ ಜನರನ್ನು ದಾರಿತಪ್ಪಿಸುವ ಹಾಗೂ ಪ್ರಚೋದನೆಗೆ ಕಾರಣವಾಗಬಹುದಾದ ಅಂಶಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಷ್ಯಾ ವಿದೇಶಾಂಗ ಸಚಿವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ಬಂದಿತ್ತು. ಭಾರತದ ಆಂತರಿಕ ವ್ಯವಹಾರಗಳು ಹಾಗೂ ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಲಾವ್ರೊವ್ ಟೀಕೆ ಮಾಡಿದ್ದಾರೆ ಎಂಬಂತೆ ಮೂಲ ವಿಡಿಯೊವನ್ನು ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಈ ವಿಡಿಯೊದ ಮೂಲ, ಅದರ ಸಂಪಾದನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ವಿಧಾನ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಕುರಿತು ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Peepal Media Desk
Peepal Media · ದೇಶ ವಿಭಾಗ