ಕುಲಗಾಂ ದಾಳಿ | ಅಮಿತ್ ಶಾ ಗೃಹಮಂತ್ರಿಯಾಗಿ ಮುಂದುವರೆಯಲು ಯೋಗ್ಯರಲ್ಲ: ಪವನ್ ಖೇರಾ
ಲಿಂಕ್ ನಕಲಿಸಲಾಗಿದೆ ✓
ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಮೀರ್ ಬಜಾರ್‌ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಗೃಹ ಸಚಿವರಾಗಿ ಮುಂದುವರಿಯಲು ಅಮಿತ್ ಶಾ ಅನರ್ಹರು” ಎಂದು ಕಿಡಿಕಾರಿದ ಖೇರಾ, 370ನೇ ವಿಧಿಯನ್ನು ರದ್ದುಗೊಳಿಸಿದ ಮೂಲ ಉದ್ದೇಶವೇ ಈಡೇರಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 2:15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಮೀರ್ ಬಜಾರ್ ಪ್ರದೇಶದ ಭದ್ರತಾ ಚೆಕ್‌ಪೋಸ್ಟ್ (ನಾಕಾ) ಮೇಲೆ ಬೈಕ್‌ನಲ್ಲಿ ಬಂದ ಅಪರಿಚಿತ ಉಗ್ರರು ಏಕಾಏಕಿ ಅಂಧಾಭಿಮಾನದಿಂದ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮೂವರು ಯೋಧರು ಗಾಯಗೊಂಡಿದ್ದು, ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಮತ್ತೊಬ್ಬ ಯೋಧನ ಸ್ಥಿತಿ ಗಂಭೀರವಾಗಿದೆ. ಗಾಯಾಳು ಯೋಧರನ್ನು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್‘ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಗಾಯಗೊಂಡ ಯೋಧರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಾ, ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
“ಕುಲ್ಗಾಂನ ಮೀರ್ ಬಜಾರ್‌ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದಿರುವ ಉಗ್ರರ ದಾಳಿಯ ಸುದ್ದಿ ತೀವ್ರ ಕಳವಳಕಾರಿಯಾಗಿದೆ. ಆದರೆ ಇಲ್ಲಿ ಪ್ರಮುಖ ಪ್ರಶ್ನೆಯೆಂದರೆ, ಈ ಬಗ್ಗೆ ಕೇಂದ್ರ ಗೃಹ ಸಚಿವರು ಏನು ಹೇಳುತ್ತಾರೆ? 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದರೆ ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಪ್ರಧಾನ ಮಂತ್ರಿಯವರೂ ಆ ಮಾತನ್ನು ಸಮರ್ಥಿಸಿಕೊಂಡಿದ್ದರು. ಆದರೆ ಏಳು ವರ್ಷಗಳ ನಂತರವೂ ಕುಲ್ಗಾಂನ ಮುಕ್ತ ಮಾರುಕಟ್ಟೆಯಲ್ಲಿ ಸಿಆರ್‌ಪಿಎಫ್ ತುಕಡಿಯ ಮೇಲೆಯೇ ಉಗ್ರರು ದಾಳಿ ನಡೆಸುತ್ತಿದ್ದಾರೆ ಎಂದರೆ, 2019ರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಧಾರಗಳು ತಮ್ಮ ಗುರಿಯನ್ನು ತಲುಪಲು ವಿಫಲವಾಗಿವೆ ಎಂಬುದು ಸ್ಪಷ್ಟವಾಗಿದೆ,” ಎಂದು ಖೇರಾ ಹೇಳಿದರು.
ಮುಂದುವರಿದು ಮಾತನಾಡಿದ ಅವರು, “2019ರಲ್ಲಿ ನೀಡಿದ ಬೃಹತ್ ಭರವಸೆಗಳ ಬಗ್ಗೆ ಗೃಹ ಸಚಿವರು ಈಗೇನು ಹೇಳುತ್ತಾರೆ? ಅಂದು ಅವರು ಸುಳ್ಳು ಹೇಳಿದ್ದರೇ ಅಥವಾ ಅಂದಿನಿಂದ ಅವರ ಕಾರ್ಯವೈಖರಿ ತೀರಾ ನಿರಾಶಾದಾಯಕವಾಗಿದೆಯೇ? ಈ ಎರಡೂ ಕಾರಣಗಳಿಂದಾಗಿ ಅವರು ಭಾರತದ ಗೃಹ ಸಚಿವರಾಗಿ ಮುಂದುವರಿಯಲು ಕಿಂಚಿತ್ತೂ ಅರ್ಹರಲ್ಲ,” ಎಂದು ವಾಗ್ದಾಳಿ ನಡೆಸಿದರು.
ದಾಳಿಯ ನಂತರ ಪರಾರಿಯಾದ ಉಗ್ರರನ್ನು ಸೆರೆಹಿಡಿಯಲು ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆಯ ತುಕಡಿಗಳು ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಇಡೀ ಪ್ರದೇಶವನ್ನು ಸುತ್ತುವರಿದು ಶೋಧ ತೀವ್ರಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:
Peepal Media
Peepal Media · ದೇಶ ವಿಭಾಗ