ಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶ
ಲಿಂಕ್ ನಕಲಿಸಲಾಗಿದೆ ✓
ಸೂಕ್ತ ಪೂರಕ ದಾಖಲೆಗಳ ಬೆಂಬಲವಿಲ್ಲದಿದ್ದರೆ, ಕೇವಲ ಪ್ಯಾನ್ ಕಾರ್ಡ್ (PAN Card) ಮತ್ತು ಮತದಾರರ ಗುರುತಿನ ಚೀಟಿ (Voter ID / EPIC) ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಗೌಹಾಟಿ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಯಾವುದೇ ಔಪಚಾರಿಕ ತನಿಖೆಯಿಲ್ಲದೆ ಕೇವಲ ಸ್ವಯಂ ಘೋಷಣೆಗಳ ಆಧಾರದ ಮೇಲೆ ನೀಡಲಾಗುವ ಇಂತಹ ದಾಖಲೆಗಳು ಪೌರತ್ವಕ್ಕೆ ಅಂತಿಮ ಪುರಾವೆಯಾಗಲಾರವು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಮತ್ತು ನ್ಯಾಯಮೂರ್ತಿ ಸುಸ್ಮಿತಾ ಫುಕನ್ ಖೌಂಡ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅರ್ಜಿದಾರೆಯನ್ನು 1971ರ ಮಾರ್ಚ್ 25ರ ನಂತರ ಭಾರತಕ್ಕೆ ಪ್ರವೇಶಿಸಿದ ‘ವಿದೇಶಿ’ ಎಂದು ಘೋಷಿಸಿದ್ದ ವಿದೇಶಿಯರ ನ್ಯಾಯಾಧಿಕರಣದ (Foreigners Tribunal) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳು ಭಾರತೀಯ ಪೌರತ್ವದ ಪುರಾವೆಗಳಲ್ಲ. ಇವುಗಳನ್ನು ಆದಾಯ ತೆರಿಗೆ ಇಲಾಖೆ ಅಥವಾ ಭಾರತೀಯ ಚುನಾವಣಾ ಆಯೋಗವು ಯಾವುದೇ ಆಳವಾದ ಔಪಚಾರಿಕ ತನಿಖೆಯಿಲ್ಲದೆ ಕೇವಲ ಸ್ವಯಂ ಅರ್ಜಿಗಳ (self-application) ಆಧಾರದಲ್ಲಿ ನೀಡುತ್ತದೆ. ಆದ್ದರಿಂದ, ಈ ದಾಖಲೆಗಳನ್ನು ಬೆಂಬಲಿಸುವ ಮೂಲ ದಾಖಲೆಗಳು ಸಾಬೀತಾಗದ ಹೊರತು, ಇವುಗಳನ್ನು ಭಾರತೀಯ ಪೌರತ್ವಕ್ಕೆ ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಕೋರ್ಟ್ ಹೇಳಿದೆ.
ಅರ್ಜಿದಾರೆಯು ತಾನು 1977ರ ಏಪ್ರಿಲ್ 25ರಂದು ಅಸ್ಸಾಂನಲ್ಲಿ ಜನಿಸಿದ್ದಾಗಿ ಪ್ರತಿಪಾದಿಸಿದ್ದರು. ತನ್ನ ತಾತ-ಅಜ್ಜಿಯ ಹೆಸರುಗಳಿದ್ದ 1966 ಮತ್ತು 1970ರ ಮತದಾರರ ಪಟ್ಟಿಗಳು, ತಂದೆಯ ಪ್ಯಾನ್ ಕಾರ್ಡ್ ಮತ್ತು ವೋಟರ್ ಐಡಿ, ತನ್ನದೇ ಆದ ವೋಟರ್ ಐಡಿ, ಪಡಿತರ ಚೀಟಿ ಹಾಗೂ ಎನ್ಆರ್ಸಿ (NRC) ಅರ್ಜಿ ಸ್ವೀಕೃತಿ ರಸೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ, ತನ್ನ ತಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದ ಭಾರತೀಯ ಪ್ರಜೆ ಎಂದು ವಾದಿಸಿದ್ದರು.
ಆದರೆ, ಅರ್ಜಿದಾರೆಯು ತಾನು ಪ್ರತಿಪಾದಿಸುತ್ತಿರುವ ಪೋಷಕರೊಂದಿಗಿನ ರಕ್ತಸಂಬಂಧದ ಕೊಂಡಿಯನ್ನು (linkage) ದೃಢವಾದ ಮತ್ತು ವಿಶ್ವಾಸಾರ್ಹ ಪುರಾವೆಗಳ ಮೂಲಕ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ತೀರ್ಮಾನಿಸಿತು. ತಂದೆ ಎಂಎಲ್ಎ ಅಥವಾ ಕೌನ್ಸಿಲರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆಂಬ ಮಾತ್ರಕ್ಕೆ ಅರ್ಜಿದಾರೆಯು ಅವರ ಮಗಳೇ ಎಂದು ಸಾಬೀತಾಗುವುದಿಲ್ಲ ಎಂದ ನ್ಯಾಯಾಲಯ, ಪೌರತ್ವ ಕಾಯ್ದೆ 1955ರ ಸೆಕ್ಷನ್ 6A(2) ರ ಪ್ರಕಾರ 1970 ರಿಂದ 1997ರ ನಡುವೆ ಕುಟುಂಬವು ಅಸ್ಸಾಂನಲ್ಲಿ ನಿರಂತರವಾಗಿ ನೆಲೆಸಿರುವುದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ಗಮನಿಸಿತು.
ಅರ್ಜಿದಾರೆಯ ವಾದಗಳನ್ನು ತಳ್ಳಿಹಾಕಿದ ಹೈಕೋರ್ಟ್, ವಿದೇಶಿಯರ ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿಯಿತಲ್ಲದೆ, 2022ರಲ್ಲಿ ಆಕೆಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:
Peepal Media
Peepal Media · ದೇಶ ವಿಭಾಗ