2024ರ ಚುನಾವಣಾ ಮತ ಎಣಿಕೆಯಲ್ಲಿ ಭಾರೀ ವ್ಯತ್ಯಾಸ: ಬಯಲಾಯ್ತು ಸ್ಫೋಟಕ ಸತ್ಯ
2024ರ ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ಚುನಾವಣೆಗಳಲ್ಲಿ ಪೋಲಾದ ಮತಗಳು ಮತ್ತು ಇವಿಎಂಗಳಲ್ಲಿ ಎಣಿಕೆಯಾದ ಮತಗಳ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಬಹಿರಂಗಪಡಿಸಿದೆ. ಪೂರ್ಣ ವಿವರ ಇಲ್ಲಿದೆ.
ಲಿಂಕ್ ನಕಲಿಸಲಾಗಿದೆ ✓
2024ರ ಚುನಾವಣೆಗಳ ಮತ ಎಣಿಕೆಯ ನಿಖರತೆ ಹಾಗೂ ನಿರ್ವಹಣೆಯ ಸುತ್ತ ದೇಶವ್ಯಾಪಿ ತೀವ್ರ ಚರ್ಚೆಗೆ ಕಾರಣವಾಗುವಂತಹ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಒಟ್ಟು 51 ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಯಲ್ಲಿ ಚಲಾವಣೆಗೊಂಡ ಮತಗಳ ಸಂಖ್ಯೆಗೂ, ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಎಣಿಕೆಯಾದ ಮತಗಳ ಸಂಖ್ಯೆಗೂ ನಡುವೆ ಭಾರೀ ವ್ಯತ್ಯಾಸಗಳು ಕಂಡುಬಂದಿವೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಬಿಡುಗಡೆ ಮಾಡಿರುವ ತನಿಖಾ ವರದಿ ಬಹಿರಂಗಪಡಿಸಿದೆ.
ಚುನಾವಣಾ ಆಯೋಗದ ಆಂತರಿಕ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಈ ಮೂರು ರಾಜ್ಯಗಳ 530 ಕ್ಷೇತ್ರಗಳಿಗೆ ಸೇರಿದ ಸುಮಾರು 4,212 ಭೌತಿಕ ದಾಖಲೆಗಳನ್ನು ಡಿಜಿಟಲೀಕರಿಸಿ, ಮರುಪರಿಶೀಲಿಸಿ ವಿಶ್ಲೇಷಿಸಿದ ನಂತರ ಈ ಆಘಾತಕಾರಿ ಸತ್ಯಾಂಶಗಳು ಬೆಳಕಿಗೆ ಬಂದಿವೆ.
ಈ ತನಿಖೆಯ ಪ್ರಕಾರ, ಒಟ್ಟು 51 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮತಗಟ್ಟೆಗೆ ಬಂದ ಮತದಾರರ ಅಧಿಕೃತ ಸಂಖ್ಯೆಯನ್ನೇ ಚುನಾವಣಾ ಅಧಿಕಾರಿಗಳು ನಮೂದಿಸಿಲ್ಲ. ಅಂತಹ ಜಾಗಗಳಲ್ಲಿ ‘ಶೂನ್ಯ’ ಅಥವಾ ‘ನಿಲ್’ ಎಂದು ಬರೆಯಲಾಗಿದ್ದು, ಇವುಗಳಲ್ಲಿ ಹತ್ತು ಕ್ಷೇತ್ರಗಳು ಮಹಾರಾಷ್ಟ್ರ ಮತ್ತು ಹರಿಯಾಣಕ್ಕೆ ಸೇರಿವೆ. ಗಮನಾರ್ಹ ಸಂಗತಿಯೆಂದರೆ, ಈ ಹತ್ತು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ.
ಮತದಾರರ ಸಂಖ್ಯೆಯನ್ನು ಶೂನ್ಯ ಎಂದು ನಮೂದಿಸಿರುವುದು ಅಲ್ಲಿ ಮತದಾನವೇ ನಡೆದಿಲ್ಲವೇ ಅಥವಾ ಅಧಿಕಾರಿಗಳು ತಪ್ಪು ಮಾಹಿತಿ ದಾಖಲಿಸಿದ್ದಾರೆಯೇ ಎಂಬ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಉಳಿದ 32 ಕ್ಷೇತ್ರಗಳಲ್ಲಿ ಪೋಲಾದ ಮತಗಳು ಹಾಗೂ ಇವಿಎಂಗಳಲ್ಲಿ ಎಣಿಕೆಯಾದ ಮತಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿದ್ದು, 12 ಕ್ಷೇತ್ರಗಳಲ್ಲಿ ಮತಗಳ ಎಣಿಕೆ ಕಡಿಮೆಯಾಗಿದ್ದರೆ, 20 ಕ್ಷೇತ್ರಗಳಲ್ಲಿ ಚಲಾವಣೆಗಿಂತ ಹೆಚ್ಚು ಮತಗಳು ಲೆಕ್ಕಕ್ಕೆ ಬಂದಿರುವುದು ಪತ್ತೆಯಾಗಿದೆ.
ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಂಡುಬಂದಿರುವ ಅಂಕಿ-ಅಂಶಗಳ ವ್ಯತ್ಯಾಸಗಳು ತೀವ್ರ ಅಚ್ಚರಿ ಮೂಡಿಸುವಂತಿವೆ. ಹರಿಯಾಣದ ಬದ್ಧಲ್ ವಿಧಾನಸಭಾ ಕ್ಷೇತ್ರದಲ್ಲಿ 2024ರ ಅಕ್ಟೋಬರ್ ಚುನಾವಣೆಯಲ್ಲಿ ಬರೋಬ್ಬರಿ 3.32 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ದಾಖಲೆಗಳು ಹೇಳುತ್ತಿದ್ದರೂ, ಇವಿಎಂಗಳಲ್ಲಿ ಕೇವಲ 1.60 ಲಕ್ಷ ಮತಗಳನ್ನು ಮಾತ್ರ ಲೆಕ್ಕಹಾಕಲಾಗಿದೆ.
ಈ ಕ್ಷೇತ್ರದಲ್ಲಿ ಕೇವಲ 6,181 ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಅಭ್ಯರ್ಥಿ ಮತಗಳ ಕಳವು ನಡೆದಿದೆ ಎಂದು ಆರೋಪಿಸಿ ಈಗಾಗಲೇ ಪಂಜಾಬ್-ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅತ್ತ ಮುಂಬೈ ನಾರ್ತ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆಲುವು ಸಾಧಿಸಿದ್ದು, ಇಲ್ಲಿ 18.11 ಲಕ್ಷ ಮತಗಳು ಪೋಲಾಗಿದ್ದರೂ ಇವಿಎಂಗಳಲ್ಲಿ ಎಣಿಕೆಯಾಗಿದ್ದು ಕೇವಲ 10.33 ಲಕ್ಷ ಮತಗಳು ಮಾತ್ರ.
ಅಂದರೆ ಸುಮಾರು 7.78 ಲಕ್ಷ ಮತಗಳು ಲೆಕ್ಕಕ್ಕೆ ಸಿಕ್ಕಿಲ್ಲ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಇದೇ ವೇಳೆ ಹರಿಯಾಣದ ಕೈತಲ್‌ನಲ್ಲಿ 215 ಮತಗಳು ಮಾತ್ರ ದಾಖಲಾಗಿದ್ದರೂ ಇವಿಎಂನಲ್ಲಿ 1.67 ಲಕ್ಷ ಮತಗಳು ಎಣಿಕೆಯಾಗಿವೆ.
ಈ ಬೆಳವಣಿಗೆಗಳ ನಡುವೆ ಚುನಾವಣಾ ಆಯೋಗದ ಸಮರ್ಥನೆಗಳು ವಿವಾದವನ್ನು ಶಮನ ಮಾಡುವ ಬದಲು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಹಿಂದೆ ಹರಿಯಾಣ ಫಲಿತಾಂಶದ ಬಳಿಕ ಕಾಂಗ್ರೆಸ್ ಮರುಮತದಾನಕ್ಕೆ ಆಗ್ರಹಿಸಿದಾಗ 1,600 ಪುಟಗಳ ವರದಿ ಸಲ್ಲಿಸಿದ್ದ ಆಯೋಗವು ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿವೆ ಎಂದು ಹೇಳಿತ್ತು. ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಆಯೋಗ, ಫಾರ್ಮ್-17 ಮತದಾನ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದೀಗ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಎತ್ತಿರುವ ಈ ಗಂಭೀರ ಪ್ರಶ್ನೆಗಳು ಮತ್ತು ಆಯೋಗದ ಆಂತರಿಕ ಅಂಕಿ-ಅಂಶಗಳಲ್ಲೇ ಕಂಡುಬಂದಿರುವ ಈ ಭಾರೀ ಏರುಪೇರುಗಳು ಭಾರತೀಯ ಚುನಾವಣಾ ವ್ಯವಸ್ಥೆ ಹಾಗೂ ಮತ ಎಣಿಕೆಯ ಪಾರದರ್ಶಕತೆಯ ಮೇಲೆ ಮತ್ತೆ ದೊಡ್ಡ ಮಟ್ಟದ ಆತಂಕದ ನೆರಳು ಬೀರುವಂತೆ ಮಾಡಿವೆ.
ಇದನ್ನೂ ನೋಡಿ:
Peepal Media
Peepal Media · ದೇಶ ವಿಭಾಗ