ಭಾರತೀಯ ಮೂಲದ ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪಶ್ಚಿಮ ನ್ಯೂಯಾರ್ಕ್ ನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆಗೆ ಈ ಕೃತ್ಯ ನಡೆದಿದೆ. ಸಲ್ಮಾನ್ ರಶ್ದಿಯವರದ್ದೇ ಉಪನ್ಯಾಸ ಇದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ್ಕೂ ಕೆಲವೇ ಕ್ಷಣಗಳ ಮುಂಚೆ ಈ ಘಟನೆ ನಡೆದದ್ದು ಸ್ಥಳೀಯ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ರಶ್ದಿಯವರ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು ಗಂಭೀರ ಗಾಯಗಳಾಗಿವೆ. ಇದನ್ನು ತಡೆಯಲು ಬಂದ ಸಂಘಟಕರ ಮೇಲೂ ದುಷ್ಕರ್ಮಿ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಸಂಘಟಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಘಟನೆ ಸ್ಥಳದಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವು ಗಂಟೆಗಳ ಶಸ್ತ್ರಚಿಕಿತ್ಸೆ ನಂತರ ರಶ್ದಿಯವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಅವರು ಒಂದು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ ರಾಯ್ಟರ್ಸ್ ವರದಿ ಮಾಡಿದೆ.
ತಕ್ಷಣವೇ ಸ್ಥಳದಲ್ಲಿ ಇದ್ದ ಸ್ಥಳೀಯ ಮಿಲಿಟರಿ ಪಡೆಗಳು ದಾಳಿಕೋರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿಕೊರನ ಬಗ್ಗೆ ಈ ವರೆಗೂ ಯಾವುದೇ ಮಾಹಿತಿ ಹೊರಬಂದಿಲ್ಲ. ಹಾಗೂ ದಾಳಿಗೆ ಮೂಲ ಕಾರಣ ಕೂಡಾ ತಿಳಿದು ಬಂದಿಲ್ಲ.
ರಶ್ದಿಯವರ ಎರಡನೇ ಕಾದಂಬರಿ ‘ಮಿಡ್ನೈಟ್ ಚಿಲ್ಡ್ರನ್’ಗೆ ಪ್ರಸಿದ್ಧ ಬೂಕರ್ ಪ್ರಶಸ್ತಿ ದೊರಕಿದ್ದು ವಿಮರ್ಶಕರ ಮತ್ತು ತೀರ್ಪುಗಾರರ ವಿಶೇಷ ಪ್ರಶಂಸೆಗೆ ಭಾಜನವಾಗಿದೆ. ಅವರ ನಾಲ್ಕನೇ ಕಾದಂಬರಿ ‘ಸೈಟಾನಿಕ್ ವರ್ಸಸ್’ನಿಂದ ಅವರು ಸಾರ್ವಜನಿಕವಾಗಿ ಹಲವಷ್ಟು ಟೀಕೆಗಳನ್ನು ಕೇಳಿದ ನಂತರ ಬಹಿರಂಗವಾಗಿ ಒಂಟಿಯಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಹಲವು ವರ್ಷಗಳಿಂದ ಮುಸ್ಲಿಂ ಮೂಲಭೂತವಾದಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿತ್ತು ಎಂದು ಅಂತರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.