ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ KSRTC ಟಿಕೆಟ್ ತಪಾಸಣಾ ಇನ್ಸ್‌ಪೆಕ್ಟರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳದ ತಪಾಸಣಾ ಇನ್ಸ್‌ಪೆಕ್ಟರ್ ಶಕುನಿಗೌಡ (57) ಮೃತ ಅಧಿಕಾರಿ. ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆದು, ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ರಸ್ತೆ ದಾಟುತ್ತಿದ್ದ ವೇಳೆ, ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಶಕುನಿಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗೆ ತನಿಖೆ ಮುಂದುವರಿದಿದೆ.
