Home ಅಂಕಣ ಮಣಿಪುರ | ಪ್ರಧಾನಿಯಿಂದ ಚಿಲ್ಲರೆ ರಾಜಕಾರಣ

ಮಣಿಪುರ | ಪ್ರಧಾನಿಯಿಂದ ಚಿಲ್ಲರೆ ರಾಜಕಾರಣ

0

ಕೇಂದ್ರದಲ್ಲಿರುವ ಮೋದಿ ಸರಕಾರ ಮತ್ತು ಮಣಿಪುರದಲ್ಲಿರುವ ಬಿರೇನ್ ಸಿಂಗ್ ಸರಕಾರ ಮನಸು ಮಾಡುತ್ತಿದ್ದರೆ ಗಲಭೆಯನ್ನು ತಕ್ಷಣ ಹತ್ತಿಕ್ಕಬಹುದಿತ್ತು. ತನ್ನ ಕರ್ತವ್ಯದಲ್ಲಿ ವಿಫಲವಾದ ಬಿರೇನ್ ಸಿಂಗ್ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ ಮಣಿಪುರವನ್ನು ಮಿಲಿಟರಿ ಕೈಯಲ್ಲಿ ಕೊಡಬಹುದಿತ್ತು. ಆದರೆ 2002 ರ ಗುಜರಾತ್ ಗಲಭೆಯಲ್ಲಿ ಮೋದಿಯವರು ತೋರಿದ ನಿರ್ಲಕ್ಷ್ಯವನ್ನು 2023 ರ ಮಣಿಪುರದಲ್ಲಿಯೂ ತೋರಿದರು. ಅದರ ಪರಿಣಾಮ ನಮ್ಮ ಕಣ್ಣಮುಂದಿದೆ – ಶ್ರೀನಿವಾಸ ಕಾರ್ಕಳ

“ಮೇ 3 ರ ಆ ದಿನ ನಮ್ಮ ಚುರಾಚಂದ್ ಪುರದಲ್ಲಿ ಕೆಲ ಅಹಿತಕರ ಘಟನೆಗಳು ನಡೆದವು. ಬಳಿಕ ನಮ್ಮ ನೆರೆಯ ಹಳ್ಳಿಗಳ ಮೇಲೆ ದಾಳಿ ಶುರುವಾದ ಮಾಹಿತಿ ದೊರೆಯಿತು. ಹಾಗಾಗಿ ನಾವು ಎರಡು ಮೂರು ಕುಟುಂಬಗಳು ಮನೆ ತೊರೆದು, ಅರಣ್ಯದಲ್ಲಿ ಬಚ್ಚಿಟ್ಟುಕೊಂಡೆವು.

ದಾಳಿ ನಡೆಸಿದ ಗುಂಪಿನಲ್ಲಿ ಸಾವಿರಾರು ಮಂದಿ ಇದ್ದರು. ಅವರು ಮನೆಗಳಿಗೆ ಬೆಂಕಿ ಇಡುತ್ತಿದ್ದರು. ಮನೆಯ ವಸ್ತುಗಳನ್ನು, ಕಡಿದು ತಿನ್ನಲು ಸಾಕುಪ್ರಾಣಿಗಳನ್ನು ಒಯ್ಯುತ್ತಿದ್ದರು. ಅವರು ಕೆಲ ಮೇಕೆಗಳನ್ನು ಕಡಿಯಲೆಂದು ಬೆನ್ನಟ್ಟಿದ್ದಾಗ ಅವು ಕಾಡಿಗೆ ಓಡಿ ನಾವು ಅಡಗಿ ಕುಳಿತಿದ್ದಲ್ಲಿಗೇ ಬಂದವು. ಅವುಗಳನ್ನು ಬೆನ್ನಟ್ಟಿ ಬಂದ ದಾಳಿಕೋರರು ನಮ್ಮನ್ನು ಪತ್ತೆ ಹಚ್ಚಿ ಹಿಡಿದುಕೊಂಡರು.

ಅದು ಮೇ 4. ನನ್ನ ಪತ್ನಿ ಮತ್ತು ಇನ್ನೊಂದು ಕುಟುಂಬದ ಯುವತಿಯ ಸಹಿತ ನಮ್ಮನ್ನು ಅವರು ತಮ್ಮೊಂದಿಗೆ ಒಯ್ದರು. ಅಲ್ಲಿ ಜಿಪ್ಸಿಯೊಂದರಲ್ಲಿ ಪೊಲೀಸರು ಇದ್ದರೂ, ಅವರು ನಮ್ಮ ನೆರವಿಗೆ ಬರಲಿಲ್ಲ. ಮಹಿಳೆಯರನ್ನು ಬೆತ್ತಲಾಗಲು ಬಲವಂತ ಪಡಿಸಿದರು. ಬೆತ್ತಲಾಗದಿದ್ದರೆ ಕೊಲ್ಲುವುದಾಗಿ ಬೆದರಿಸಿದರು. ಯುವತಿಯನ್ನು ರಕ್ಷಿಸಲು ಹೋದ ಆಕೆಯ ತಂದೆ ಮತ್ತು ಸಹೋದರರನ್ನು ಅಲ್ಲೇ ಹೊಡೆದು ಕೊಂದರು. ಆನಂತರ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ನಾವು ಜೀವ ಉಳಿಸಿಕೊಳ್ಳಲು ಅರಣ್ಯಕ್ಕೆ ಓಡಿಹೋದೆವು.

ಮಾನಭಂಗ ಅನುಭವಿಸಿದ ಹೆಣ್ಣುಮಕ್ಕಳು ಹತ್ಯೆಯಾದ ತಂದೆ ಮತ್ತು ಸಹೋದರನ ಬಳಿ ಹೋದಾಗ, ‘ಇಲ್ಲಿಂದ ಓಡಿಹೋಗಿ.. ಇಲ್ಲವಾದರೆ ನಿಮ್ಮನ್ನೂ ಕೊಲ್ಲುವೆವು..’ ಎಂದು ಬೆದರಿಸಿದರು. ಹೆಣ್ಣುಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಾಡಿನ ದಾರಿಯಾಗಿ ಬೇರೆ ಹಳ್ಳಿಗೆ ತಲಪಿ ಜೀವ ಉಳಿಸಿಕೊಂಡರು. ಆನಂತರ ನಾನು ಹೋಗಿ ನೋಡಿದಾಗ ನನ್ನ ಮನೆ ಪೂರ್ತಿಯಾಗಿ ಭಸ್ಮವಾಗಿತ್ತು.

ನಾವು ಕಣಿವೆಗೆ ಹೋಗಿ ಪೊಲೀಸರಲ್ಲಿ ದೂರು ಕೊಡುವಂತಿರಲಿಲ್ಲ. ಹೋದರೆ ನಮ್ಮ ಶತ್ರುಗಳಾದ ಮೈತೆಯಿಗಳ ಕೈಗೆ ಸಿಕ್ಕಿಬಿದ್ದು ಸಾಯುತ್ತಿದ್ದೆವು. ಪೊಲೀಸರು ಕೂಡಾ ನಮಗೆ ವಿರುದ್ಧವಾಗಿಯೇ ಇದ್ದರು. ಕೊನೆಗೆ ಬೇರೊಂದು ಪೊಲೀಸ್ ಠಾಣೆಯಲ್ಲಿ ಜೂನ್ 18 ರಂದು ಎಫ್ ಐ ಆರ್ ದಾಖಲಿಸಿ ನಾನು ದೂರದ ಹಳ್ಳಿಗೆ ಹೋಗಿಬಿಟ್ಟೆ. ಪೊಲೀಸರು ಯಾವ ಕ್ರಮವನ್ನೂ ಜರುಗಿಸಲಿಲ್ಲ.

ನಾನು ಭಾರತೀಯ ಸೇನೆಯಲ್ಲಿದ್ದು ಲಂಕಾ ಕಾರ್ಯಾಚರಣೆಯಲ್ಲಿ (ಐಪಿಕೆಎಫ್) ಭಾಗವಹಿಸಿದವನು. ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾದವನು. ನನ್ನ ಹಿರಿಯರು ಮೊದಲ ಮತ್ತು ಎರಡನೇ ಮಹಾಯುದ್ಧದಲ್ಲಿ ಹೋರಾಡಿ ಹುತಾತ್ಮರಾದವರು. ನನ್ನ ದೇಶವನ್ನು ನಾನು ರಕ್ಷಿಸಿದೆ. ಆದರೆ ನನ್ನ ನಿವೃತ್ತಿಯ ಬಳಿಕ ನನ್ನ ಮಡದಿಯ ಮಾನ, ನನ್ನ ಮನೆ ಮತ್ತು ನನ್ನ ಹಳ್ಳಿಗರನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಎಂದು ನನಗೆ ದುಃಖವಾಗಿದೆ, ನಾನು ಖಿನ್ನನಾಗಿದ್ದೇನೆ…”

ಇದು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್ ನಲ್ಲಿ ಕೆಲಸ ಮಾಡಿದ್ದ ಸುಬೇದಾರ್ ಒಬ್ಬರು ಟಿವಿ ವಾಹಿನಿಯೊಂದಿಗೆ ಜುಲೈ 21 ರ ಸುಮಾರಿಗೆ ಆಡಿದ ವಿಷಾದದ ಮಾತುಗಳು.

ಹೊತ್ತಿ ಉರಿಯುತ್ತಿರುವ ಮಣಿಪುರ

ಎಲ್ಲರಿಗೂ ಗೊತ್ತಿರುವ ಹಾಗೆ ಮೇ 3, 2023 ರಂದು ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ-ಝೋ ಆದಿವಾಸಿ ಸಮುದಾಯಗಳ ನಡುವೆ ಸಂಘರ್ಷ ಶುರುವಾಗಿತ್ತು. ಇದು ಶೀಘ್ರವೇ ಎರಡೂ ಸಮುದಾಯಗಳ ನಡುವೆ ಪರಸ್ಪರ ಹಿಂಸಾಚಾರ (150 ಕ್ಕೂ ಅಧಿಕ ಸಾವು), ಆಸ್ತಿಪಾಸ್ತಿಗಳಿಗೆ ಕಿಚ್ಚಿಡುವುದು (60 ಸಾವಿರ ಮಂದಿ ನೆಲೆ ಕಳೆದುಕೊಂಡರು, 375 ಕ್ಕೂ ಅಧಿಕ ಚರ್ಚುಗಳು ಭಸ್ಮ), ಸರಕಾರಿ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರ ಲೂಟಿ ಮಾಡಿ (4000 ಕ್ಕೂ ಅಧಿಕ), ವಿರೋಧಿಗಳ ಮೇಲೆ ಅದರ ಬಳಕೆ, ತಲೆ ಕತ್ತರಿಸಿ ಅದರ ಸಾರ್ವಜನಿಕ ಪ್ರದರ್ಶನ, ಅಂಬ್ಯುಲೆನ್ಸ್ ನಲ್ಲಿ ಸಾಗುತ್ತಿರುವವರನ್ನೂ ಹೊರಗೆಳೆದು ಕೊಂದು ಹಾಕುವುದು, ಸ್ವಾತಂತ್ರ್ಯ ಯೋಧರೊಬ್ಬರ 80 ರ ಹರೆಯದ ಮುದುಕಿಯ ಸಜೀವ ದಹನ, ಒಂದು ಸಮುದಾಯದ ಮಹಿಳೆಯರೇ ಇನ್ನೊಂದು ಸಮುದಾಯದ ಮಹಿಳೆಯರನ್ನು ಹಿಡಿದು ಅತ್ಯಾಚಾರ ನಡೆಸಲು ಗಂಡಸರಿಗೆ ಒಪ್ಪಿಸುವುದು, ಶಾಸಕರು, ಮಂತ್ರಿಗಳ ಮನೆಗಳನ್ನೂ ಸುಟ್ಟುಹಾಕುವುದು, ಜೀವರಕ್ಷಣೆಗಾಗಿ ತಮ್ಮವರು ಹೆಚ್ಚಾಗಿ ಇರುವ ಜಾಗಗಳನ್ನು ಸೇರುವ, ಆಮೂಲಕ ಒಂದು ರಾಜ್ಯದೊಳಗೇ ಎರಡು ಸಮುದಾಯಗಳ ನಡುವೆ ಪ್ರತ್ಯೇಕೀಕರಣದ ಗಡಿ ರೇಖೆ ಎಳೆಯುವುದು ಹೀಗೆ ಭೀಕರ ಸ್ವರೂಪ ಪಡೆಯಿತು.

ಪರಿಸ್ಥಿತಿ ಕೈಮೀರಿದರೂ, ಸಾಮಾಜಿಕ ಮಾಧ್ಯಮಗಳು ಮತ್ತು ಕೆಲ ಮುಖ್ಯವಾಹಿನಿ ಮುದ್ರಣ ಮಾಧ್ಯಮಗಳು ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡುತ್ತಿದ್ದರೂ, ಇದು ಮೇನ್ ಲ್ಯಾಂಡ್ ಎಂದು ಕರೆಯಲಾಗುವ ಈಶಾನ್ಯ ಭಾರತದಾಚೆಯ ಭಾರತದ ಜನರ ಗಮನ ಸೆಳೆದುದು ಕಡಿಮೆ. ‘ಮಣಿಪುರದಲ್ಲಿ ಏನೂ ಆಗೇ ಇಲ್ಲ’ ಎಂಬಂತೆ ಬಿರೇನ್ ಸಿಂಗ್ ರ ಮಣಿಪುರ ಸರಕಾರ ವರ್ತಿಸುತ್ತಿತ್ತು (ಮಣಿಪುರದ ಕಲಹಕ್ಕೆ ಮುಖ್ಯಕಾರಣವೇ ಅಲ್ಲಿನ ಪಕ್ಷಪಾತಿ ಸರಕಾರ ಎನ್ನುವುದು ಕುಕಿ ಸಮುದಾಯದ ಆರೋಪ).

ಮಣಿಪುರದ ಬಗ್ಗೆ ವಿದೇಶಗಳಲ್ಲಿ ಸುದ್ದಿಯಾಗುತ್ತಾ ಯುರೋಪಿಯನ್ ಸಂಸತ್ತು ಚರ್ಚಿಸಿದರೂ ಕೂಡಾ ನಮ್ಮ ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದರು; ಚುನಾವಣಾ ಪ್ರಚಾರಗಳಲ್ಲಿ, ರೈಲು ಉದ್ಘಾಟನೆಗಳಲ್ಲಿ, ಮಂಕೀಬಾತ್ ಗಳಲ್ಲಿ ವ್ಯಸ್ತರಾಗಿದ್ದರು. ಈಗಿನ ಆಳುವವರಿಗೆ ಅನುಕೂಲವಾಗುವ ಹಾಗೆ ಹೆಚ್ಚಿನ ಮುಖ್ಯವಾಹಿನಿಗಳು, ಅದರಲ್ಲೂ ಮುಖ್ಯವಾಗಿ ಟಿವಿ ವಾಹಿನಿಗಳು ನಡೆದುಕೊಳ್ಳುತ್ತಿದ್ದವು. ‘ಕಂಡೂ ಕಾಣದಂತೆ ಸುಮ್ಮನಿದ್ದುಬಿಡೋಣ, ನಿಧಾನಕ್ಕೆ ಎಲ್ಲವೂ ಮರೆವಿಗೆ ಸಂದುಹೋಗುತ್ತದೆ’ ಎಂದುಕೊಂಡಿದ್ದರೋ ಏನೋ ಇವರೆಲ್ಲ.

ವೈರಲ್ ಆದ ವೀಡಿಯೋ

ಆದರೆ, ಇವರೆಲ್ಲರೂ ಮೌನ ಮುರಿಯದೆ ವಿಧಿಯೇ ಇಲ್ಲ ಎಂಬಂಥ ಬೆಳವಣಿಗೆ ನಡೆದುದು ಇದೇ ಜುಲೈ 19, 2023 ದಂದು, ಸಂಸತ್ ಅಧಿವೇಶನ ಶುರುವಾಗುವ ಮುನ್ನಾ ದಿನ. ಅಂದು ಟ್ವಿಟರ್ ನಲ್ಲಿ ಇಡೀ ಜಗತ್ತೇ ಬೆಚ್ಚಿಬೀಳುವಂತೆ ಮತ್ತು ಮನುಷ್ಯರೆನಿಸಿಕೊಂಡವರನ್ನು ತಲೆತಗ್ಗಿಸುವಂತೆ ಮಾಡುವ ಘಟನೆಯ ಒಂದು ವೀಡಿಯೋ ಬೆಳಕಿಗೆ ಬಂತು. ಅದರಲ್ಲಿ ನೂರಾರು ಮಂದಿ ಗಂಡಸರು ಇಬ್ಬರು ಅಸಹಾಯಕ ಮಹಿಳೆಯರನ್ನು ಬೆತ್ತಲು ಮಾಡಿ, ಅವರ ಗುಪ್ತಾಂಗಗಳಿಗೆ ಕೈಹಾಕುತ್ತಾ ಅವರನ್ನು ಹೊಲವೊಂದರತ್ತ ಒಯ್ಯುವ ದೃಶ್ಯವಿತ್ತು (ಅದರಲ್ಲಿ 20 ರ ಹರೆಯದ ಯುವತಿಯನ್ನು ಬಳಿಕ ಗ್ಯಾಂಗ್ ರೇಪ್ ಮಾಡಲಾಯಿತಂತೆ).

ಟ್ವಿಟರ್ ನಂತಹ ಜಾಗತಿಕ ಸಾಮಾಜಿಕ ಮಾಧ್ಯಮದಲ್ಲಿ ಬಂದ ಕಾರಣ ಅದು ಕ್ಷಣಗಳಲ್ಲಿ ಜಗತ್ತಿನ ಕಣ್ಣಿಗೆ ಬಿತ್ತು. ಘಟನೆಯ ಬಗ್ಗೆ ಜನಾಕ್ರೋಶ ಭುಗಿಲೆದ್ದಿತು. ಕುಕಿಗಳಲ್ಲಿ ಹೆಚ್ಚಿನವರು ಕ್ರೈಸ್ತ ಮತಾನುಯಾಯಿಳಾಗಿರುವುದರಿಂದ ವಿದೇಶದಲ್ಲಿ ಇದು ಬೇರೆಯೇ ತೆರನ ಆಕ್ರೋಶಕ್ಕೆ ಕಾರಣವಾಯಿತು. ಮಣಿಪುರ ಮತ್ತು ಮೋದಿ ಸರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ? ಆದಿವಾಸಿ ಸಮುದಾಯದಿಂದಲೇ ಬಂದ ರಾಷ್ಟ್ರಪತಿಗಳು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಎಂದು ಇಡೀ ದೇಶವೇ ಪ್ರಶ್ನಿಸತೊಡಗಿತು. ‘ಇದು ಸಹಿಸಲಾಗದ ಆಘಾತಕಾರಿ ಘಟನೆ’ ಎಂದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸುಮೋಟೋ ಆಗಿ ಕೈಗೆತ್ತಿಕೊಂಡು ಸರಕಾರದಿಂದ ಉತ್ತರ ಕೇಳಿತು.

ಈಗ ಮೋದಿ ಸರಕಾರ ಕೃತಕ ನಿದ್ದೆಯಿಂದ ಎಚ್ಚರಗೊಳ್ಳುವುದು ಅನಿವಾರ್ಯವಾಯಿತು. ಇನ್ನೇನು ಸಂಸತ್ ಅಧಿವೇಶನ ಆರಂಭವಾಗುವುದಿತ್ತು. ಇನ್ನೂ ಮೌನವಾಗಿ ಉಳಿದರೆ ಸಂಸತ್ತಿನ ಕಟಕಟೆಯಲ್ಲಿ ನಿಲ್ಲುವುದು ಅನಿವಾರ್ಯವಾಗುವ ಸಾಧ್ಯತೆ ಇತ್ತು. ಎಂದೇ, ಇದೇ ಜುಲೈ 20 ಗುರುವಾರದಂದು ಸಂಸತ್ ಹೊರಗೆ ಪ್ರಧಾನಿಯವರು ಒಂದು ಹೇಳಿಕೆ ನೀಡಿದರು.

ಸಾಮಾನ್ಯವಾಗಿ ಓರ್ವ ಜವಾಬ್ದಾರಿಯುತ ಪ್ರಧಾನಿ ಏನು ಹೇಳಿಕೆ ನೀಡುತ್ತಿದ್ದರು? ‘ಮಣಿಪುರದಲ್ಲಿ ಏನು ನಡೆದಿದೆ ಅದು ಅಕ್ಷಮ್ಯ ಅಪರಾಧ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ, ಹಿಂಸಾಚಾರ ಕೊನೆಗೊಳಿಸಲು ಎಲ್ಲ ಯತ್ನ ಮಾಡುತ್ತೇವೆ’ ಎನ್ನುತ್ತಿದ್ದರೋ ಏನೋ. ಆದರೆ 1800 ಗಂಟೆಗಳ ಮೌನದ ಬಳಿಕ 30 ಸೆಕೆಂಡುಗಳ ಕಾಲ ಮಣಿಪುರದ ಬಗ್ಗೆ ಮಾತನಾಡಿದ ಮೋದಿ ಸಾಹೇಬರು ಹೇಳಿದ್ದು ಇಷ್ಟು- “ಮಣಿಪುರದ ಘಟನೆಯಿಂದ ದೇಶ ನಾಚಿಕೆ ಪಡುವಂತಾಗಿದೆ. ವಿಶೇಷವಾಗಿ ಮಹಿಳೆಯರ ವಿರುದ್ಧದ ಅಪರಾಧದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳನ್ನು ಬಲಪಡಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಘಟನೆಯು ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರ ಎಲ್ಲೇ ಆಗಿರಬಹುದು, ಅಪರಾಧಿ ದೇಶದ ಯಾವುದೇ ಮೂಲೆಯಲ್ಲಿದ್ದರೂ ತಪ್ಪಿಸಿಕೊಳ್ಳಬಾರದು. ಯಾವುದೇ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಾನು ನನ್ನ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ..”

ಗಂಭೀರ ಪ್ರಕರಣದಲ್ಲಿಯೂ ಚಿಲ್ಲರೆ ರಾಜಕಾರಣ

ಈ ಮಾತುಗಳನ್ನು ಆಡುವಾಗ ಪ್ರಧಾನಿಗಳ ಮುಖದಲ್ಲಿ ಒಂದಿಷ್ಟೂ ವಿಷಾದವಾಗಲೀ, ಆಕ್ರೋಶವಾಗಲೀ ಇದ್ದಂತೆ ಕಾಣಿಸಲಿಲ್ಲ. ಚುನಾವಣಾ ಸಭೆಯಲ್ಲಿ ವೀರಾವೇಶದಿಂದ ಮಾತಾಡುವ ಅವರ ಸಹಜ ಧಾಟಿಯಲ್ಲಿಯೇ ಅವರು ಮಾತಾಡಿದರು. ಮಣಿಪುರದ ಬರ್ಬರ ಘಟನೆಯ ಬಗ್ಗೆ ಮಾತನಾಡಿದ್ದೇನೋ ಸರಿ. ಆದರೆ ಅಲ್ಲಿ ಕಾಂಗ್ರೆಸ್ ಆಡಳಿತ ಇರುವ ಛತ್ತೀಸ್ ಗಢ ಮತ್ತು ರಾಜಸ್ಥಾನವನ್ನು ಎಳೆದು ತಂದುದೇಕೆ? ಮಣಿಪುರದಲ್ಲಿ 80 ದಿನಗಳಿಂದ ಭೀಕರ ಹಿಂಸಾಚಾರ ನಡೆಯುತ್ತಿದೆ. ಅದು ನಿಲ್ಲುವ ಲಕ್ಷಣವೂ ಕಾಣಿಸುತ್ತಿಲ್ಲ. ಎರಡು ಬುಡಕಟ್ಟು ಸಮುದಾಯಗಳು ಇನ್ನೆಂದೂ ಜತೆಯಾಗಿ ಬಾಳದಂತೆ ಮನಸು ಮುರಿದುಹೋಗಿದೆ. ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಅತ್ಯಾಚಾರ ನಡೆದಿದೆ. ಇವು ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ನಡೆದಿವೆಯೇ? ರಾಜಸ್ಥಾನವನ್ನು, ಛತ್ತೀಸ್ ಗಢವನ್ನು ಉಲ್ಲೇಖಿಸುವುದಾದರೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಉಲ್ಲೇಖ ಯಾಕಿಲ್ಲ? ಅವು ಬಿಜೆಪಿ ಆಡಳಿತದ ರಾಜ್ಯಗಳೆಂದೇ? ರಾಜಸ್ಥಾನದ ಅತ್ಯಾಚಾರ ಘಟನೆಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಲಾಗಿದೆ (ಬಂಧಿತರು ಎಬಿವಿಪಿಯವರು ಕೂಡಾ). ಆದರೆ ಮಣಿಪುರ ಘಟನೆಯಲ್ಲಿ ಭಾಗಿಯಾದವರ ಮೇಲೆ ಎಫ್ ಐ ಆರ್ ಆದ ಬಳಿಕ ಎರಡು ತಿಂಗಳಾದರೂ ಯಾಕೆ ಬಂಧನವಾಗಲಿಲ್ಲ? (ವೀಡಿಯೋ ಹೊರಬಂದ ಮೇಲಷ್ಟೇ ಬಂಧನವಾಗಿದೆ).

ಗಮನ ಬೇರೆಡೆ ತಿರುಗಿಸುವ ಕುತಂತ್ರ

ಪ್ರಧಾನಿಯ ಇಶಾರೆಯನ್ನು ಸರಿಯಾಗಿಯೇ ಅರ್ಥಮಾಡಿಕೊಂಡ ಅವರ ಬೆಂಬಲಿಗರು ತಕ್ಷಣ ಕಾರ್ಯಪ್ರವೃತ್ತರಾದರು. ಗಮನ ಬೇರೆಡೆ ಸೆಳೆಯುವ What-aboutery ಯುದ್ಧೋಪಾದಿಯಲ್ಲಿ ಆರಂಭಗೊಂಡಿತು. ‘ಮಣಿಪುರದ ಬಗ್ಗೆ ಮಾತಾಡುವ ನೀವು ಬಂಗಾಳದ ಬಗ್ಗೆ, ರಾಜಸ್ಥಾನದ ಬಗ್ಗೆ ಯಾಕೆ ಮಾತಾಡುವುದಿಲ್ಲ?’ ಎಂದು ಬಿಜೆಪಿಯ ನಾಯಕರು, ಅವರ ಟ್ರೋಲ್ ಆರ್ಮಿಯ ಚಿಳ್ಳೆಪಿಳ್ಳೆಗಳೂ ಪ್ರಶ್ನಿಸಲಾರಂಭಿಸಿದವು. ನಿರೀಕ್ಷೆಯಂತೆಯೇ ಮಣಿಪುರ ಘಟನೆಗೆ ಮುಸ್ಲಿಂ ಹೆಸರು ಜೋಡಿಸುವ ಯತ್ನವನ್ನೂ ನಡೆಸಲಾಯಿತು. ಇದರಲ್ಲಿ ಬಿಜೆಪಿಯ ತುತ್ತೂರಿಯೇ ಆಗಿರುವ ಸ್ಮಿತಾ ಪ್ರಕಾಶ್ ಅವರ ವಾರ್ತಾಸಂಸ್ಥೆ ಎಎನ್‍ಐ ಮುಂಚೂಣಿಯ ಪಾತ್ರ ವಹಿಸಿತು. ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಮುಸ್ಲಿಂ ವ್ಯಕ್ತಿಯನ್ನು ಅದು ಮಣಿಪುರ ಅತ್ಯಾಚಾರ ಪ್ರಕರಣಕ್ಕೆ ಜೋಡಿಸಿತು. ಈ ವಿಷಯ ವೈರಲ್ ಅಗಿ, 12 ಗಂಟೆಗಳ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿತು. ಆದರೆ ಅಷ್ಟಾಗುವಾಗ ಆಗಬೇಕಾದ ಹಾನಿ ಆಗಿಹೋಗಿತ್ತು. ಮಣಿಪುರದ ಬೆತ್ತಲೆ ಮೆರವಣಿಗೆ ಮತ್ತು ಗ್ಯಾಂಗ್ ರೇಪ್ ನಂತಹ ಪ್ರಕರಣವೊಂದರ ದಿಕ್ಕುತಪ್ಪಿಸಲು ಸಹಾಯ ಮಾಡುವಂತಹ ಹೇಳಿಕೆ ನೀಡಿದ್ದು ಸ್ವತಃ ಪ್ರಧಾನಿಗಳೇ ಅಲ್ಲವೇ? ಇದು ಚಿಲ್ಲರೆ ರಾಜಕಾರಣವಲ್ಲವೇ?

ಸಂವಿಧಾನದ 355 ನೇ ಪರಿಚ್ಛೇದ ಹೀಗೆ ಹೇಳುತ್ತದೆ – “ಹೊರಗಿನ ಅತಿಕ್ರಮಣ ಮತ್ತು ಒಳಗಿನ ತಲ್ಲಣಗಳಿಂದ ಪ್ರತಿಯೊಂದು ರಾಜ್ಯವನ್ನು ರಕ್ಷಿಸುವುದು ಮತ್ತು ಈ ಸಂವಿಧಾನದ ಈ ನಿರ್ದೇಶನಕ್ಕೆ ಅನುಗುಣವಾಗಿ ಪ್ರತಿಯೊಂದು ರಾಜ್ಯಸರಕಾರ ನಡೆದುಕೊಳ್ಳುವಂತೆ ಖಾತರಿಪಡಿಸುವುದು ಒಕ್ಕೂಟ ಸರಕಾರದ ಕರ್ತವ್ಯವಾಗಿರುತ್ತದೆ”. ಕೇಂದ್ರದಲ್ಲಿರುವ ಮೋದಿ ಸರಕಾರ ಮತ್ತು ಮಣಿಪುರದಲ್ಲಿರುವ ಬಿರೇನ್ ಸಿಂಗ್ ಸರಕಾರ (ಡಬ್ಬಲ್ ಎಂಜಿನ್ ಸರಕಾರ) ಮನಸು ಮಾಡುತ್ತಿದ್ದರೆ ಗಲಭೆಯನ್ನು ತಕ್ಷಣ ಹತ್ತಿಕ್ಕಬಹುದಿತ್ತು. ತನ್ನ ಕರ್ತವ್ಯದಲ್ಲಿ ವಿಫಲವಾದ ಬಿರೇನ್ ಸಿಂಗ್ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ ಮಣಿಪುರವನ್ನು ಮಿಲಿಟರಿ ಕೈಯಲ್ಲಿ ಕೊಡಬಹುದಿತ್ತು. ಆದರೆ 2002 ರ ಗುಜರಾತ್ ಗಲಭೆಯಲ್ಲಿ ಮೋದಿಯವರು ತೋರಿದ ನಿರ್ಲಕ್ಷ್ಯವನ್ನು 2023 ರ ಮಣಿಪುರದಲ್ಲಿಯೂ ತೋರಿದರು. ಅದರ ಪರಿಣಾಮ ನಮ್ಮ ಕಣ್ಣಮುಂದಿದೆ. ಮಣಿಪುರ ಇನ್ನೆಂದೂ ಗುಣವಾಗದ ರೀತಿಯಲ್ಲಿ ಗಾಯಗೊಂಡಿದೆ.

ಇದೀಗ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಗೊಂಡಿದೆ. ಮಣಿಪುರ ಗಲಭೆಯ ಬಗ್ಗೆ ಓರ್ವ ಜವಾಬ್ದಾರಿಯುತ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸಂಸತ್ ಒಳಗಡೆ ಸ್ಪಷ್ಟೀಕರಣ ಕೊಡಬೇಕು ಎಂದು ಇಡೀ ದೇಶವೇ ಅಪೇಕ್ಷಿಸುತ್ತಿದೆ. ಇದು ವಿಪಕ್ಷಗಳ ಸರಳ ಬೇಡಿಕೆ ಕೂಡಾ ಆಗಿದೆ. ಆದರೆ ಪ್ರಧಾನಿಗಳು ಇದಕ್ಕೆ ಸಿದ್ಧರಿಲ್ಲ! ಇದೇ ಕಾರಣದಿಂದ ಸಂಸತ್ ಕಲಾಪ ಕೋಲಾಹಲದಲ್ಲಿ ಮುಳುಗಿಹೋಗಿದೆ. ಕಲಾಪವನ್ನು ಪದೇ ಪದೇ ಮುಂದೂಡಲಾಗುತ್ತಿದೆ.

ನರೇಂದ್ರ ಮೋದಿಯವರು ದೇಶದ ಪ್ರಧಾನಿ. ಅವರು 56 ಇಂಚಿನ ಎದೆಯುಳ್ಳ ಧೈರ್ಯಶಾಲಿ, ವಿಶ್ವಗುರು ಎಂದೆಲ್ಲ ಅವರ ಬೆಂಬಲಿಗರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂತಹ ಧೈರ್ಯಶಾಲಿ ನಾಯಕ, ದೇಶದ ಸಂಸತ್ ನಲ್ಲಿ ಪುಟ್ಟದೊಂದು ಹೇಳಿಕೆ ನೀಡಿ, ವಿಸ್ತೃತ ಚರ್ಚೆಗೆ, ಆಮೂಲಕ ಸಂಸತ್ತಿನ ಸುಗಮ ಕಾರ್ಯಕಲಾಪಕ್ಕೆ ಯಾಕೆ ಅನುವು ಮಾಡಿಕೊಡುತ್ತಿಲ್ಲ, ಮಣಿಪುರ ಸಮಸ್ಯೆಯ ಪರಿಹಾರಕ್ಕೆ ಸಣ್ಣದಾದರೂ ಒಂದು ಪ್ರಯತ್ನ ಯಾಕೆ ಮಾಡುತ್ತಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ!

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನು ಓದಿದ್ದೀರಾ?

ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ?

ಮಣಿಪುರ ಹಿಂಸಾಚಾರದ ಹಕೀಕತ್ತುಗಳಲ್ಲಿದೆ ’ಕಾಂತಾರ’ ಕಥೆ!

You cannot copy content of this page

Exit mobile version