Sunday, April 28, 2024

ಸತ್ಯ | ನ್ಯಾಯ |ಧರ್ಮ

ನಮ್ಮತನ ನಮ್ಮ ನಂದಿನಿಯಲ್ಲಿದೆ..

ನಂದಿನಿ ಅದರ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಗುಣಮಟ್ಟದ ಆಹಾರ ತಯಾರಿಕಾ ಘಟಕವಾಗಿ ಉಚ್ಛ್ರಾಯ ಸ್ಥಿತಿಯಲ್ಲಿರುವ ಹೊತ್ತು ಅದನ್ನು ಮತ್ತೊಂದು ಬ್ರಾಂಡಿಗೆ ಸಂಯೋಜನೆ ಮಾಡುವ ಚಿಂತನೆ ಕರ್ನಾಟಕದ ಹೆಮ್ಮೆಯನ್ನೇ ನಾಶಮಾಡುವುದಾಗಿದೆ. ದಕ್ಷಿಣಭಾರತದ ಸ್ವಂತಿಕೆ, ಗುರುತು, ಭಾಷೆ, ಸಂಸ್ಕೃತಿಗಳ ಮೇಲೆ ಉತ್ತರಭಾರತದ ಛಾಪು ಮೂಡಿಸುವ ತಂತ್ರ ಇದಾಗಿದೆ-

ಪ್ರೊ. ಆರ್‌ ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು

ಕೇಂದ್ರ ಸಹಕಾರ ಸಚಿವರು ಮಂಡ್ಯದ ಗೆಜ್ಜಲಗೆರೆಯಲ್ಲಿ ಡೈರಿ ಉದ್ಘಾಟನೆ ಮಾಡಿ ಮಾತನಾಡಿ ‘ಅಮೂಲ್ ಮತ್ತು ನಂದಿನಿ ಒಟ್ಟಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು. ಸಚಿವರಾದ ಅಮಿತ್ ಶಾ ಅವರು ಈ ಮಾತನ್ನು ಸಲಹೆಯಂತೆ ಹೇಳಿದ್ದರೂ ಅದರ ಹಿಂದೆ ಇರುವ ಚಿತಾವಣೆಯನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಹುದು.

ಈ ಮಾತು ಹೊರಬಿದ್ದ ಒಂದು ತಿಂಗಳಲ್ಲೇ ಬೆಂಗಳೂರಿನಲ್ಲಿ ನಂದಿನಿ ಬೆಣ್ಣೆ ಮತ್ತು ತುಪ್ಪದ ಕೊರತೆ ತಲೆದೋರಿತು. ನಾನೇ ಖುದ್ದಾಗಿ ಹಲವು ನಂದಿನಿ ಬೂತುಗಳಿಗೆ ಭೇಟಿ ನೀಡಿ ಬೆಣ್ಣೆಯನ್ನು ಕೇಳಿದೆ. ನಂದಿನಿ ಬೆಣ್ಣೆಯಿಂದ ಮನೆಯಲ್ಲಿ ತಯಾರಿಸುವ ತುಪ್ಪ ನಮ್ಮ ತಾಯಿ ಹಳ್ಳಿಯಲ್ಲಿ ಮಾಡುತ್ತಿದ್ದ ತುಪ್ಪದಂತೆ ಸುವಾಸನೆಯಿಂದ ಕೂಡಿದ್ದು ಮರಳು ಮರಳಿನಂತೆ ತಿನ್ನಲು ರುಚಿಯಾಗಿರುತ್ತಿತ್ತು. ಆದರೆ ಬೆಣ್ಣೆ ಸಿಗಲಿಲ್ಲ. ಅನಂತರ ತುಪ್ಪಕ್ಕೂ ಕುತ್ತು ಬಂದಿದೆ. ಈಗ ಗಲಾಟೆ ಪ್ರಾರಂಭವಾದ ಮೇಲೆ 200 ಗ್ರಾಂ ಬೆಣ್ಣೆ ದೊರೆಯುತ್ತಿದೆ. ಆದರೆ ಹಸಿರು ಬಣ್ಣದ ಪ್ಯಾಕೆಟ್ ಹಾಲಿಗೆ ನಿತ್ಯ ಕೊರತೆ ಕಾಣುತ್ತಿದೆ. ಆದರೆ ಈ ಹಿಂದೆ ಎಲ್ಲ ಮಾಲುಗಳಲ್ಲೂ ನಂದಿನಿ ಬೆಣ್ಣೆ ದೊರೆಯುತ್ತಿತ್ತು. ಇದ್ದಕ್ಕಿದ್ದಂತೆ ಬೆಣ್ಣೆ ಇಲ್ಲವಾಗುತ್ತಿದೆ. ಹಾಲು ದೊರೆಯುವಲ್ಲಿ ಕೊರತೆ ಪ್ರಾರಂಭವಾಗುತ್ತಿದೆ. ನಂದಿನಿ ಹಾಲಿಗಿಂತ ಹತ್ತು ರೂಪಾಯಿಗಳಷ್ಟು ದುಬಾರಿಯಾಗಿರುವ ಹಾಲನ್ನು ಪಡೆಯುವಂತೆ ಮಾಡುವ ಹುನ್ನಾರದ ಜೊತೆಗೆ ಅಮೂಲ್ ಬೆಣ್ಣೆ ಖರೀದಿ ಮಾಡಲೇ ಬೇಕಾದ ಅನಿವಾರ್ಯತೆಯನ್ನು ಜನರಿಗೆ ತಂದು ಒಡ್ಡಿರುವ ಸ್ಥಿತಿಗೂ ಮಾನ್ಯ ಸಚಿವರು ಆಡಿದ ಮಾತಿಗೂ ಸಂಬಂಧ ನಿಧಾನವಾಗಿ ಗೋಚರಕ್ಕೆ ಬರುತ್ತಿದೆ.

ಭಾರತ ಮುಕ್ತ ಮಾರುಕಟ್ಟೆಯ ಕಾರಣ ಹೇಳುವ ಅಧಿಕಾರಿಗಳು ಈ ಮಾತು ನಂದಿನಿಗೂ ಅನ್ವಯಿಸುತ್ತದೆ ಎಂಬುದನ್ನು ತಿಳಿದಿರಬೇಕಲ್ಲವೆ? ನಂದಿನಿ ಉತ್ಪನ್ನಗಳಿಗೆ ಭಾರತದಾದ್ಯಂತ ಮಾರುಕಟ್ಟೆಯನ್ನು ಕಲ್ಪಿಸಬಹುದಲ್ಲವೆ? ಕರ್ನಾಟಕದ ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಅಮೂಲ್ ತನ್ನ ಆಧಿಪತ್ಯ ಸ್ಥಾಪಿಸಿದೆ. ಅಲ್ಲಿನ ಹಾಲಿನ ಉತ್ಪಾದಕರನ್ನು ಅಮೂಲ್ ಬ್ರಾಂಡಿಗೆ ಧಾರೆ ಎರೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಕೆ.ಎಂ.ಎಫ್. ಸದೃಢವಾಗಿ ಬೆಳೆದಿದೆ ಮತ್ತು ಉತ್ತಮ ಸಹಕಾರ ತತ್ತ್ವಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದರಲ್ಲಿ ಒಬ್ಬ ಹಳ್ಳಿಯ ಕುಟುಂಬದ ಹೆಣ್ಣುಮಗಳೂ ಸದಸ್ಯತ್ವ ಪಡೆದು ಹಾಲು ನೀಡಿ ಅದರಿಂದ ತನ್ನ ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ ಹಣ ಪಡೆಯುತ್ತಿದ್ದಾಳೆ. ಎಲ್ಲ ಸದಸ್ಯರೂ ಮತದಾನ ಮಾಡಿ ಕೆ.ಎಂ.ಎಫ್. ಅಧ್ಯಕ್ಷರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಕೆ.ಎಂ.ಎಫ್. ನ ಜಾಲ ಉತ್ಕೃಷ್ಟವಾಗಿ ಹಬ್ಬಿ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ನಮ್ಮದೇ ಜನರ ಆಡಳಿತದಲ್ಲಿದೆ. ಬೇಕಾದಾಗ ಹಕ್ಕೊತ್ತಾಯ ಮಾಡುವ ಮೂಲಕ ರೈತರು ತಮ್ಮ ಬೆಲೆಯನ್ನು ತಾವು ಪಡೆದುಕೊಳ್ಳುತ್ತಿದ್ದಾರೆ.

ನಂದಿನಿ ಈಗ ಹದಿನೈದು ಜಿಲ್ಲೆಗಳಲ್ಲಿ ಮಾತ್ರ ಸಂಸ್ಕರಣ ಘಟಕಗಳನ್ನು ಹೊಂದಿದೆ. ಮತ್ತಷ್ಟು ಘಟಕಗಳನ್ನು ಸ್ಥಾಪಿಸುವ ವಿಪುಲ ಅವಕಾಶವನ್ನು ಹೊಂದಿದೆ. ಇದರಲ್ಲಿ ತಳಹಂತದಿಂದ ಮೇಲಿನವರೆಗೆ ಕನ್ನಡಿಗರೇ ಕೆಲಸ ಪಡೆಯುತ್ತಿದ್ದಾರೆ. ಇದು ಸಹಕಾರ ತತ್ತ್ವದ ಅಡಿಯಲ್ಲಿ ಬೆಳೆದಿರುವ ಬೃಹತ್ ಉದ್ಯಮವಾಗಿದೆ. ಈಗ ಕೆ.ಎಂ.ಎಫ್. ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಮಾತ್ರ ಸೀಮಿತವಾದ ಉದ್ಯಮವಲ್ಲ. ಸಿಹಿತಿನಿಸುಗಳಾದ ಮೈಸೂರು ಪಾಕ್, ಪೇಡೆ, ಜಾಮೂನು, ಐಸ್ ಕ್ರೀಮ್, ರಸಗುಲ್ಲ, ಗೋಧಿ ಬ್ರೆಡ್, ಪನ್ನೀರು, ಚೀಸ್, ಫ್ಲೇವರ್ಡ್ ಮಿಲ್ಕ್, ಖಾರಾಬೂಂದಿ, ಕೋಡುಬಳೆ, ಮಿಕ್ಸರ್, ಕುಕ್ಕೀಸ್, ಚಾಕಲೇಟು, ಮಜ್ಜಿಗೆ, ಲಸ್ಸಿ, ಇತರೆ ಹಲವಾರು ತಿನಿಸುಗಳನ್ನು ತಯಾರಿಸುತ್ತದೆ. ರಕ್ಷಣಾ ಪಡೆಗಳು ಬಳಸಲು ಯೋಗ್ಯವಾಗುವ ಹಲವಾರು ರೀತಿಯ ಹಾಲು ಮತ್ತಿತರ ಉತ್ಪನ್ನಗಳನ್ನು ತಯಾರಿಸಿ ನೀಡುತ್ತಿದೆ.

ಇದನ್ನೂ ಓದಿ – ಸಬಲ ಹೈನುಗಾರಿಕೆಗೆ ವಿಲೀನ ಕಾರ್ಯಸಾಧುವಲ್ಲhttps://peepalmedia.com/merger-is-not-feasible-for-dairy/

ಹೀಗೆ, ನಂದಿನಿ ಅದರ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಗುಣಮಟ್ಟದ ಆಹಾರ ತಯಾರಿಕಾ ಘಟಕವಾಗಿ ಉಚ್ಛ್ರಾಯ ಸ್ಥಿತಿಯಲ್ಲಿರುವ ಹೊತ್ತು ಅದನ್ನು ಮತ್ತೊಂದು ಬ್ರಾಂಡಿಗೆ ಸಂಯೋಜನೆ ಮಾಡುವ ಚಿಂತನೆ ಕರ್ನಾಟಕದ ಹೆಮ್ಮೆಯನ್ನೇ ನಾಶಮಾಡುವುದಾಗಿದೆ. ದಕ್ಷಿಣಭಾರತದ ಸ್ವಂತಿಕೆ, ಗುರುತು, ಭಾಷೆ, ಸಂಸ್ಕೃತಿಗಳ ಮೇಲೆ ಉತ್ತರಭಾರತದ ಛಾಪು ಮೂಡಿಸುವ ತಂತ್ರ ಇದಾಗಿದೆ. ನಿಧಾನವಾಗಿ ‘ಮೊಸರು’ ಕವರಿನ ಮೇಲೆ ‘ದಹಿ’ ಎಂಬ ಶಬ್ದವನ್ನು ಛಾಪಿಸಿತ್ತು. ಜನರ ಗಲಾಟೆ ಅನಂತರ ಇದನ್ನು ಹಿಂಪಡೆಯಲಾಗಿದೆ. ಈಗ ನಮ್ಮ ಅರಿವಿಗೆ ಬರಬೇಕಾಗಿರುವುದು ಕೇಂದ್ರದ ಸಹಕಾರ ಸಚಿವರ ಮಾತು, ಸಲಹೆ ಮಾತ್ರವಲ್ಲ ಅದರ ಹಿಂದೆ ದೊಡ್ಡ ಸಂಚು ಇದೆ. ರಾಜ್ಯಗಳ ಸ್ವಾಯತ್ತತೆಯನ್ನು ನಾಶ ಮಾಡುವ ಹುನ್ನಾರವೂ ಇದೆ. ಭಾರತ ಗಣರಾಜ್ಯ ವ್ಯವಸ್ಥೆಯಾಗಿದ್ದು ಒಂದು ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸುವುದಾಗಿದೆ. ಭಾರತ ದೇಶ ಹಲವು ರಾಜ್ಯಗಳು ಹಾಗೂ ಅವುಗಳ ಕಾರ್ಯವೈಖರಿ, ಸಂಸ್ಕೃತಿಗೆ ಅನುಗುಣವಾಗಿ ರೂಪಿತವಾಗಿರುವ ದೇಶ. ಇದರಿಂದಾಗಿ ನಮ್ಮತನ ನಮ್ಮ ನಂದಿನಿಯಲ್ಲಿದೆ. ನಮ್ಮತನ ನಮ್ಮ ಮೈಸೂರು ಪಾಕಿನಲ್ಲಿದೆ. ಇದನ್ನು ನಾವು ನಮ್ಮತನದ ಗುರುತಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಮೂಲ್ ನಂತೆ ಎಲ್ಲ ರಾಜ್ಯಗಳಿಗೂ ವಿಸ್ತರಿಸಿಕೊಳ್ಳುವಂತೆ ಮಾಡಲು ನಾವು ನಮ್ಮ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕಾಗಿದೆ.

ಒಂದು ವ್ಯಾಪಾರ, ಒಂದು ಭಾಷೆ, ಒಂದು ರೀತಿ ಎಂಬುದು ಬಹುತ್ವವನ್ನು ದಮನ ಮಾಡಿ ಏಕತ್ವದ ಕಡೆ ಚಲಿಸುವ ಮಾದರಿ. ಈ ಮಾದರಿಯನ್ನು ಹೇರಿಕೊಳ್ಳದೆ ನಮ್ಮತನಕ್ಕಾಗಿ ನಾವು ನಂದಿನಿಯನ್ನೇ ಬಳಸೋಣ ಮತ್ತು ಬೆಳೆಸಿ ನಮ್ಮ ರೈತರ ಚೈತನ್ಯವನ್ನು ಉಳಿಸೋಣ. ಸೋದರ, ಸೋದರಿಯರೆ ಇದಕ್ಕಾಗಿ ಬಸವನ ಗುರುತಲ್ಲಿ ಅಡಗಿರುವ ಸಮತತ್ತ್ವ, ಸಹಬಾಳ್ವೆ, ಸೌಹಾರ್ದ ಮತ್ತು ಸಂಯುಕ್ತದ ಪರಿಕಲ್ಪನೆಯನ್ನು ಪೋಷಿಸೋಣ, ಅಮೂಲ್ ಬ್ರಾಂಡ್ ಬಳಸದೆ ಅದು ಕರ್ನಾಟಕದಿಂದ ಕಾಲು ತೆಗೆಯುವಂತೆ ಪಣ ತೊಡೋಣ. ಬೀದಿಗಿಳಿದು ಹೋರಾಟ ನಡೆಸುವವರ ಆಶಯವನ್ನು ಉಳಿಸಿ ನಮ್ಮ ಮೌಲ್ಯವನ್ನು ನಾವು ರಕ್ಷಿಸಿಕೊಳ್ಳೋಣ.

ಪ್ರೊ.ಆರ್.ಸುನಂದಮ್ಮ

ನಿವೃತ್ತ ಪ್ರಾಧ್ಯಾಪಕರು

ಇದನ್ನೂ ಓದಿ- ನಂದಿನಿಗೆ ಅಮುಲ್‌ ಜತೆ ಕೈಜೋಡಿಸುವ ಅವಶ್ಯಕತೆಯಿಲ್ಲ https://peepalmedia.com/nandi-does-not-need-to-join-hands-with-amul/

Related Articles

ಇತ್ತೀಚಿನ ಸುದ್ದಿಗಳು