(ಗಾಂಧಿಜಯಂತಿ ವಿಶೇಷ)
ನದಿಯ ಬದಿ ಎರಡು ಹಕ್ಕಿಗಳು
ದನಿಗೂಡಿಸುವ ಸಾಹಸದಲಿ
ರೆಕ್ಕೆ ಹರಿದ ಹಕ್ಕಿಗೆ ಹಾರುವ ತವಕ
ಕೊಕ್ಕು ಮುರಿದ ಜೀವ ಹಾಡುವ ತುಡಿತ
ಬೇಟೆಗಾರನ ಬಾಣದ ಬಿರುಸಿಗೆ
ಚದುರಿ ಚೆಲ್ಲಾಡಿದ ಗರಿಕೆಗಳು ;
ನೀರಿನ ಕಲರವದ ನಡುವೆ
ಓಂಕಾರದ ಸುನಾದ
ಜಲದುಂದುಭಿಗೆ ಅಲೆಗಳೆಲ್ಲವು ಸ್ತಬ್ಧ ;
ಬೊಗಸೆ ನೀರಿಗೆ ಸೆರಗೊಡ್ಡಿದ ಗಂಗೆ
ಅರ್ಘ್ಯ ಅರ್ಪಿಸಿದ ಕೈಗಳಲಿ ಕಂಡದ್ದು
ತನ್ನೊಡಲಿನ ನಾಗರಿಕತೆಯ ನೆತ್ತರು ;
ಮುಸುಕು ಯುದ್ಧದ ಕ್ರೌರ್ಯದಲಿ
ಮಗುಚಿ ಮುಳುಗಿದ ದೋಣಿ
ಹುಟ್ಟಡಗಿಸುವ ಅಂಬಿಗನ ವಾಂಛೆಗೆ
ದಡದ ಮತ್ಸ್ಯಗಳ ವಿಲವಿಲ
ಆಚೀಚೆಯ ಮರಳು ದಿಬ್ಬಗಳ ಮೇಲೆ
ಸಾಮ್ರಾಟನ ಸೆಂಗೋಲು ;
ಜೀವಗಂಬನಿಯ ಹನಿಹನಿ ಧಾರೆ
ಎತ್ತರಕೆ ನೆಗೆದು ಥಟ್ಟನೆ ವಿರಮಿಸಿದಾಗ
ಎತ್ತಲಿನದೋ ಹದ್ದಿಗೆ ರಸದೂಟ
ನಾ-ನೀ-ಅವ-ಇವ ಓಕುಳಿಯ ಬಣ್ಣ
ದಡದಾಚೆಯ ಮಸಣದಲಿ ರಾಶಿರಾಶಿ
ದೂರ ಸಮಾಧಿಯ ಇಕ್ಕೆಲಗಳಲಿ
ಮತ್ತದೇ ಮೆಲುದನಿ – ಹೇ ರಾಂ ;
ಬಾಪೂ ಕಣ್ತೆರೆದಿರಬೇಕು,,,,,
ಒಳಗಣ್ಣ ತುಸು ತೆರೆದಿರಲೇಬೇಕು !!!
ನಾ ದಿವಾಕರ
ಕವಿ, ಲೇಖಕ