ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಪ್ರತಾಪ್ ಸಿಂಹ ಅವರು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನವನ್ನು ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಅದನ್ನು ಹಿಂಪಡೆಯುವಂತೆ ಸೂಚಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಕಾನೂನು ಹೋರಾಟ ನಡೆಸಿದ್ದ ಪ್ರತಾಪ್ ಸಿಂಹ: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗಿನಿಂದಲೇ ಪ್ರತಾಪ್ ಸಿಂಹ ಅವರು ಈ ನಿರ್ಧಾರವನ್ನು ವಿರೋಧಿಸಿಕೊಂಡು ಬರುತ್ತಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಯಾವುದೇ ಸಾರ್ವಜನಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಅರ್ಜಿಯನ್ನು ವಜಾ ಮಾಡಿದೆ. ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಅರ್ಜಿದಾರರಿಗೆ ದಂಡ ವಿಧಿಸುವಂತೆ ಕೋರಿದರು, ಆದರೆ ವಿಭಾಗೀಯ ಪೀಠವು ಅದನ್ನು ನಿರಾಕರಿಸಿತು.