Home ಅಂಕಣ ರಾಘವ್‌ ಚೆಡ್ಡಾ ಎಂಬ ಚಪ್ಪಾಳೆಗಳ ನಾಯಕ

ರಾಘವ್‌ ಚೆಡ್ಡಾ ಎಂಬ ಚಪ್ಪಾಳೆಗಳ ನಾಯಕ

0

“ಜನರ ಚಪ್ಪಾಳೆಗಳ ನಡುವೆ ಹುಟ್ಟುವ ನಾಯಕ ಜನರ ಚಪ್ಪಾಳೆಗಳ ನಡುವೆಯೇ ನಶಿಸಿ ಹೋಗುತ್ತಾನೆ” ಪಿ.ಲಂಕೇಶ್ ಅವರು ಹೇಳಿದ ಮಾತು, ಬಹುಶಃ ರಾಘವ್ ಚೆಡ್ಡಾ ಎಂಬ ಯುವ ನಾಯಕನ ಸುತ್ತಲಿನ ವಿದ್ಯಮಾನಕ್ಕೆ ಸೂಕ್ತವಾಗಿ ಹೋಲುವ ಮಾತಾಗಿದೆ..” ತಪ್ಪದೇ ಓದಿ ಮಾಚಯ್ಯ ಹಿಪ್ಪರಿಗಿ ಅವರ ಬರಹದಲ್ಲಿ

ಪಿ.ಲಂಕೇಶ್‌ ಅವರು ಹೇಳಿದ ಈ ಮಾತು, ಬಹುಶಃ ಆಮ್‌ ಆದ್ಮಿ ಪಾರ್ಟಿಯಲ್ಲಿ ರಾಘವ್‌ ಚೆಡ್ಡಾ ಎಂಬ ಯುವನಾಯಕನ ಸುತ್ತ ಉದ್ಭವಿಸಿರುವ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೂಕ್ತ ಅಳತೆಗೋಲು ಎನಿಸುತ್ತದೆ.

ನಮ್ಮ ಜನ ಬುದ್ಧನಿಗೆ ಚಪ್ಪಾಳೆ ತಟ್ಟಲಿಲ್ಲ ಆತ ದೇಶಾಂತರ ಹೋಗಬೇಕಾಯ್ತು; ಬಸವಣ್ಣನಿಗೆ ಚಪ್ಪಾಳೆ ತಟ್ಟಲಿಲ್ಲ, ಸಮಸ್ತ ಶರಣರ ಹತ್ಯಾಕಾಂಡ ನಡೆದುಹೋಯಿತು; ಏಸುವಿಗೂ ಚಪ್ಪಾಳೆ ತಟ್ಟಲಿಲ್ಲ, ಆತ ಶಿಲುಬೇ ಏರಬೇಕಾಯ್ತು; ಗೆಲಿಲಿಯೋಗೆ ಚಪ್ಪಾಳೆ ತಟ್ಟಲಿಲ್ಲ, ಹುಚ್ಚನೆಂಬ ಅಪವಾದ ಹೊತ್ತು ಜೈಲು ಶಿಕ್ಷೆ ಅನುಭವಿಸಬೇಕಾಯ್ತು; ಗಾಂಧಿಯನ್ನು ಕೂಡಾ ಜನರ ಚಪ್ಪಾಳೆಗಳು ಕೊನೆಕೊನೆಗೆ ಅನಾಥವಾಗಿಸಿದವು, ಹಂತಕನ ಗುಂಡಿಗೆ ಬಲಿಯಾಗಬೇಕಾಯ್ತು….

ಚರಿತ್ರೆಯ ಸಾಲುಸಾಲು ಉದಾಹರಣೆಗಳನ್ನು ನೋಡುತ್ತಾ ಬಂದಾಗ, ನಮ್ಮ ಜನ ಯಾವುದಕ್ಕೆ ಚಪ್ಪಾಳೆ ತಟ್ಟುತ್ತಾ ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಯಾವುದು ಒಳಿತೋ ಅದಕ್ಕೆ ಚಪ್ಪಾಳೆ ತಟ್ಟಲಾರರು, ಯಾಕೆಂದರೆ ಅದು ಅರಗಿಸಿಕೊಳ್ಳಲು ಕಹಿಯಾಗಿರುತ್ತದೆ. ಯಾವುದು ಮಾರಕವೋ, ಅಥವಾ ಒಳಿತಲ್ಲವೋ ಅದಕ್ಕೆ ಚಪ್ಪಾಳೆ ತಟ್ಟುತ್ತಾ ಬಂದಿದ್ದಾರೆ, ಯಾಕೆಂದರೆ ಅದು ಉನ್ಮಾದಕಾರಿಯಾಗಿರುತ್ತದೆ; ಅಸತ್ಯವಾದರೂ ಹಿತವಾಗಿರುತ್ತದೆ. ಹಾಗಾಗಿ ಜನರ ಚಪ್ಪಾಳೆಗಳನ್ನು ಒಬ್ಬ ನಾಯಕನ ಅರ್ಹತೆಯಾಗಿ ಯಾವತ್ತೂ ನಾವು ಮಾಪನ ಮಾಡಬಾರದು.

ಇದನ್ನೇ ಲಂಕೇಶ್‌ ಹೇಳಿದ್ದು. ಹಿತವಾದ ಅಸತ್ಯ, ಅಥವಾ ಉನ್ಮಾದಗಳ ಮೂಲಕ ಜನರ ಮೂಗಿಗೆ ತುಪ್ಪ ಸವರಿ ಚಪ್ಪಾಳೆಗಳನ್ನು ಉತ್ಪಾದಿಸಿಕೊಳ್ಳುವ ಮೂಲಕ ನಾಯಕ ಎಂದು ಬಿಂಬಿಸಿಕೊಂಡವನು, ನಾಳೆ ಆ ಚಪ್ಪಾಳೆಯ ಸದ್ದುಗಳ ನಡುವೆಯೇ ನಶಿಸಿಹೋಗುತ್ತಾನೆ. ಯಾಕೆಂದರೆ, ಇವನಿಗಿಂತ ಚೆನ್ನಾಗಿ ಜನರಿಂದ ಚಪ್ಪಾಳೆಗಳನ್ನು ಉತ್ಪಾದಿಸಿಕೊಳ್ಳಬಲ್ಲ ಮತ್ತ್ಯಾರೋ ನಾಯಕ ಇವನಿಗಿಂತಲು ವೇಗದಲ್ಲಿ ಅವತರಿಸುತ್ತಾನೆ, ಅವನ ಮುಂದೆ ಮೊದಲಿನವ ಮಂಕಾಗುತ್ತಾನೆ. ಚಪ್ಪಾಳೆಗಳನ್ನು ದಾಟಿ ಜನರಲ್ಲಿ ನೆಲೆಸುವ ಯಾವ ಸತ್ವವೂ ಇಂತವರಲ್ಲಿ ಇರುವುದಿಲ್ಲ.

ಪ್ರಿಯವಾದ ಸುಳ್ಳುಗಳ ಮೂಲಕ ಚಪ್ಪಾಳೆಗಳನ್ನು ಉತ್ಪಾದಿಸಿಕೊಳ್ಳಲಾಗದ, ಕಹಿಯಾದ ಸತ್ಯಗಳಿಗೇ ತಮ್ಮನ್ನು ತೆತ್ತುಕೊಂಡ ನಿಜನಾಯಕರ ಬೆಲೆಯನ್ನು ಜನ ಭವಿಷ್ಯದಲ್ಲಿ ಅರಿಯುತ್ತಾರೆ. ಚಪ್ಪಾಳೆಗಳ ಕಾಲ ಮೀರಿ ಹೋಗಿರುತ್ತದೆ. ಭಾರತದ ಅತ್ಯಂತ ಸುಶಿಕ್ಷಿತ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ತಮ್ಮ ಅಧಿಕಾರಾವಧಿಯ ಕೊನೇ ಕ್ಷಣದ ಪತ್ರಿಕಾಗೋಷ್ಠಿಯೊಂದರಲ್ಲಿ, “ವರ್ತಮಾನವು ನನ್ನ ಬಗ್ಗೆ ಕಹಿಯಾಗಿರಬಹುದು, ಆದರೆ ಇತಿಹಾಸ ನನ್ನ ಬಗ್ಗೆ ಮೃದುವಾಗಿರುತ್ತದೆಂಬ ವಿಶ್ವಾಸ ನನಗಿದೆ” ಎಂದು ಹೇಳಿದ್ದರು. ನಮಗೀಗ ಅದು ಅರ್ಥವಾಗುತ್ತಿದೆ. ಅವತ್ತು ಯಾರಿಗೆ ನಾವು ಚಪ್ಪಾಳೆ ತಟ್ಟಿ, ಮನಮೋಹನರನ್ನು ಗೇಲಿ ಮಾಡಿದ್ದೆವೋ, ಅವರು ಇವತ್ತು ದುಬಾರಿ ಅನುಭವವಾಗುತ್ತಿದ್ದಾರೆ. ಇದನ್ನೇ ಲಂಕೇಶ್‌ ಅವರ ಮಾತು ಧ್ವನಿಸುತ್ತಿರೋದು. ಜನರ ಚಪ್ಪಾಳೆಗಳು ನಾಯಕನನ್ನು ಗುರುತಿಸುವ ಮಾನದಂಡಗಳಲ್ಲ!

ರಾಘವ್‌ ಛೆಡ್ಡಾ `ಯೂಥ್‌ ಐಕಾನ್‌’ ಆಗಿ ಬೆಳೆದು ನಿಂತಿದ್ದಾರೆ. ಇವತ್ತಿನ ಸೋಷಿಯಲ್‌ ಮೀಡಿಯಾ ಜಮಾನದಲ್ಲಿ ಚಪ್ಪಾಳೆಗಳು  ಫಾಲೋವರ್‍ಸ್‌, ಲೈಕ್ಸ್‌, ವ್ಯೂಸ್‌ಗಳಾಗಿ ರೂಪಾಂತರಗೊಂಡಿವೆ. ಹಣವನ್ನು ಸುರಿದರೆ ಇವುಗಳನ್ನು ಉತ್ಪಾದಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ಒಂದು ಅನುಭವಿ, ನಿಪುಣ ಸೋಷಿಯಲ್‌ ಮೀಡಿಯಾ ಟೀಮ್‌ ಗುತ್ತಿಗೆ ಪಡೆದರೆ ಇದನ್ನು ನಿಭಾಯಿಸಬಲ್ಲದು. ಅಲ್ಲಿ ಕಂಟೆಂಟ್‌ ಜೊತೆಗೆ ನಿಮ್ಮ ಇಮೇಜ್‌ ಕೂಡಾ ವೃದ್ಧಿಸಲಾಗುತ್ತದೆ. ಇದು ರಾಜಕಾರಣಿಗಳಿಗೆ ಮಾತ್ರ ಸೀಮಿತವಲ್ಲ; ಬ್ಯುಸಿನೆಸ್‌ಮನ್‌ಗಳು, ಕ್ರೀಡಾಪಟುಗಳು, ಸಿನಿಮಾ ನಟ-ನಟಿಯರು ಇವುಗಳಿಂದಲೇ larger than life ಆಗಿ ಬೆಳೆದು ನಿಂತಿದ್ದಾರೆ.

ರಾಘವ್‌ ಛಡ್ಡಾ ಇತ್ತೀಚಿನ ಒಂದು ವರ್ಷದ ಅವಧಿಯಲ್ಲಿ, ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಕಳೆದ ಐದಾರು ತಿಂಗಳ ಅವಧಿಯಲ್ಲಿ, ಹೀಗೆ ದಿಢೀರ್‍‌ ಮುನ್ನೆಲೆಗೆ ಬಂದವರು. ರಾಜ್ಯಸಭಾ ಸದಸ್ಯನಾಗಿ ಅವರು ಸಂಸತ್ತಿನಲ್ಲಿ ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಕೈಗೆತ್ತಿಕೊಂಡ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವು ಜನರನ್ನು ಸುಲಭವಾಗಿ ಮತ್ತು ವ್ಯಾಪಕವಾಗಿ ತಲುಪಬಹುದಾದಂತಹ ಎಕಾನಮಿಕಲ್‌ ಇಶ್ಯೂಗಳು. ಇನ್ನೂ ವಿವರಿಸಿ ಹೇಳಬೇಕೆಂದರೆ, ಸೋಷಿಯಲ್‌ ಮೀಡಿಯಾದ ಮೇಲೆ ವಿಪರೀತ ಅವಲಂಭಿಸಿರುವ urban centric middle class ಜನರನ್ನು ಇಂಪ್ರೆಸ್‌ ಮಾಡುವಂತಹ ವಿಚಾರಗಳು. ಅಂದರೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕಂಟೆಂಟ್‌ ಆಗಬಹುದಾದಂತಹ ಸಂಗತಿಗಳು. ಮೊಬೈಲ್‌ ರೀಚಾರ್ಜ್ ಪ್ಯಾಕೇಜ್‌, ಜ್ಯೂಸ್‌ ಬಾಟಲಿಯ ಬೆಲೆ, ಏರ್‍‌ಪೋರ್ಟ್‌ನ ರೆಸ್ಟೋರೆಂಟ್‌ ವಿಚಾರ, ಟ್ರಾಫಿಕ್‌ ಜಾಮ್‌ ಸಮಸ್ಯೆ, ಝೀರೊ ಬ್ಯಾಲೆನ್ಸ್‌ ಮೇಲಿನ ಬ್ಯಾಂಕ್‌ ದಂಡ ಹೀಗೆ ಒಬ್ಬ socially concerned youtuber ಅಥವಾ influencer ಗಳು ಎತ್ತಬಹುದಾದಂತಹ ವಿಚಾರಗಳನ್ನು ಅವರು address ಮಾಡುತ್ತಾ ಬಂದರು. ಸೋಷಿಯಲ್‌ ಮೀಡಿಯಾದಲ್ಲಿ scroll addictionಗೆ ತುತ್ತಾದ ಜನರನ್ನು ಇಂಪ್ರೆಸ್‌ ಮಾಡುವಂತಹ ಸಂಗತಿಗಳು ಇವು. ಅಂದರೆ ಜನ ಮಾರುಹೋಗಿ ಲೈಕ್‌ ಒತ್ತುವ, ಶೇರ್‍‌ ಮಾಡುವ, ವ್ಹಾವ್‌ ಎಂದು ಉದ್ಘಾರ ತೆಗೆಯುವಂತೆ ಮಾಡುವ superficial issues!

ಅವರು ಎತ್ತಿದ ಪ್ರತಿಯೊಂದು ಇಶ್ಯೂಗಳನ್ನು ಸುಳ್ಳು ಅಥವಾ ಫೇಕ್‌ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಇಂತಹ ವಂಚನೆಗಳನ್ನು ಪ್ರಶ್ನಿಸಲೇಬೇಕು. ಆದರೆ ಅವು ಒಂದು ನಿರ್ದಿಷ್ಟ ಕಾರ್ಯತಂತ್ರದ calculated reactions ಆಗಿದ್ದಾಗ ನಾವು ಎಚ್ಚರ ವಹಿಸಬೇಕಾಗುತ್ತದೆ. ಯಾಕೆಂದರೆ, ರಾಜಕಾರಣ ಎನ್ನುವುದು ಕೇವಲ administrative correctionsಗೆ ಮಾತ್ರ ಸೀಮಿತವಾದುದಲ್ಲ; social structural reformಗೋಸ್ಕರ ತನ್ನನ್ನು ಸಮರ್ಪಿಸಿಕೊಳ್ಳಬೇಕಿರುತ್ತದೆ. ಅದಾದರೆ, ಇಂತಹ ಮೇಲ್ಮೈ ಸುಧಾರಣೆಗಳು ಸುಲಭವಾಗಿ ಸಾಧ್ಯಗೊಳ್ಳುತ್ತವೆ. ಹಾಗೆ ಸಂರಚನಾತ್ಮಕ ಬದಲಾವಣೆಗಳ ಬಗ್ಗೆ ಯೋಚಿಸಬೇಕೆಂದರೆ, ಒಬ್ಬ ರಾಜಕಾರಣಿಗೆ ಜನಸ್ನೇಹಿಯಾದ political ideology ಮತ್ತು social understandingಗಳು ತುಂಬಾ ಮುಖ್ಯ. ಇಲ್ಲಿನ ವ್ಯವಸ್ಥೆ ಹೇಗೆ ರೂಪುಗೊಂಡಿದೆ? ಆರ್ಥಿಕ ಅಸಮಾನತೆಗೆ ಮೂಲ ಯಾವುದು? ಚಲಹೀನ ಯಥಾಸ್ಥಿತಿವಾದವನ್ನು ಪೊರೆಯುತ್ತಿರುವ ಮೂಲ ಬೇರು ಯಾವುದು? ಅದರ ನಿಯಂತ್ರಣಕ್ಕೆ ಪರಿಹಾರ ಸಾಧ್ಯತೆಗಳೇನು? ಇಂತಹ ಪ್ರಶ್ನೆಗಳನ್ನು ಮುಖಾಮುಖಿಯಾಗಬೇಕಾಗುತ್ತದೆ. ಸಾಮಾಜಿಕ ಬದಲಾವಣೆಗಳನ್ನು ತರುವ ಯೋಜನೆಗಳು ನಿಮ್ಮಲ್ಲಿ ಇಲ್ಲದೇ ಹೋದಾಗ, ನೀವಾಡುವ superficial economical/ administrative corrections ಮಾತುಗಳು ನಿಮಗೆ ಜನಪ್ರಿಯತೆ ತಂದುಕೊಡಬಲ್ಲವೇ ಹೊರತು, ನಿಜವಾದ ನಾಯಕತ್ವಗಳನ್ನು ನಿಮ್ಮಲ್ಲಿ ಬೆಳೆಸಲಾರವು. ಆರ್ಥಿಕ ಅಸಮಾನತೆ/ಶೋಷಣೆಗಳ ವಿರುದ್ಧ ಹೋರಾಡುವ ಒಂದು ಅತ್ಯುತ್ಕೃಷ್ಟ ಸಿದ್ದಾಂತವೆಂದರೆ, ಅದು ಕಮ್ಯುನಿಸಂ. ಸದೃಢ, ಜನಸ್ನೇಹಿ ideology, ಮತ್ತು ತನ್ನ ಕಾರ್ಯಾನುಷ್ಠಾನದ ಬಗ್ಗೆ ಅಪಾರ commitment ಹೊಂದಿರುವ ಅಂತಹ ಕಮ್ಯುನಿಷ್ಟರು ಕೂಡಾ ಭಾರತದ ಜಾತೀ ಕೇಂದ್ರಿತ social structure ಅನ್ನು ಆರಂಭದಲ್ಲಿ ನಿರ್ಲಕ್ಷಿಸಿದ ಸಲುವಾಗಿ ಇಲ್ಲಿ ಗಟ್ಟಿಯಾಗಿ ನೆಲೆಯೂರಲು ಇಷ್ಟುದಿನ ಸಾಧ್ಯವಾಗಲಿಲ್ಲ. ಅಂತದ್ದರಲ್ಲಿ, ಈ ಬಗೆಯ ಯಾವುದೇ ideology ಅಥವಾ social reforming committmentಗಳಿಲ್ಲದೆ ಕೇವಲ ಜನಪ್ರಿಯತೆಯನ್ನೆ ಮಾನದಂಡವಾಗಿಸಿಕೊಂಡ calculated reaction ಗಳನ್ನು ನಾವು ಜನನಾಯಕನ ಮಾನದಂಡಗಳಾಗಿ ಬಳಸಬಹುದೇ?

ಜನಪ್ರಿಯತೆಯ ಹರಿವು ಎಷ್ಟು ಅಪಾಯಕಾರಿಯೆಂದರೆ, ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ಕಿಂಚಿತ್ತು ಎಡವಿದರೂ, ಯಾವ ಸುಧಾರಣೆಗಳ ಬಗ್ಗೆ, ಯಾವ ಪ್ರಾಮಾಣಿಕತೆಯ ಬಗ್ಗೆ, ಯಾವ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೀರೋ, ಅದೇ ಮಾತುಗಳಿಗೆ ತದ್ವಿರುದ್ಧವಾಗಿ ನಿಮ್ಮನ್ನು ಸೆಳೆದೊಯ್ದುಬಿಡುತ್ತದೆ. ರಾಘವ್‌ ಛಡ್ಡಾ ತರಹದ ಜನಪ್ರಿಯ ಐಕಾನ್‌ಗಳನ್ನು ನುಂಗಿಹಾಕುವುದು ಬಂಡವಾಳಶಾಹಿ ಮತ್ತು ಕೋಮುವಾದಿ ರಾಜಕಾರಣಕ್ಕೆ ಕಷ್ಟವೇನೂ ಅಲ್ಲ.

ರಾಘವ್‌ ಚೆಡ್ಡಾ ಈಗ ಎತ್ತಿರುವ ವಿಚಾರಗಳು ಜನಪ್ರಿಯ ಸರಕುಗಳೇ ಹೊರತು, ಜನನಾಯಕನ ಸರಕುಗಳಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಅವರಿಗೆ ವ್ಯಕ್ತವಾಗುತ್ತಿರುವ ಬೆಂಬಲ ಕೂಡಾ ಅವರ ಆ ಜನಪ್ರಿಯ ಸರಕುಗಳ ಕಾರಣಕ್ಕೆ ನಮ್ಮ ಜನ ತಟ್ಟುತ್ತಿರುವ ಚಪ್ಪಾಳೆಗಳು. ಅವುಗಳು ಜನನಾಯಕನ್ನು ಅಳೆಯುವ ಮಾನದಂಡಗಳಲ್ಲ ಅನ್ನೋದನ್ನು ನಾವು ಮರೆಯಬಾರದು. ಒಬ್ಬ ನಾಯಕ ತನ್ನ ಚಿಂತನೆ, ಸಾಮಾಜಿಕ ಅರಿವು, ಸಂರಚನಾತ್ಮಕ ಬದಲಾವಣೆಗಳ ಬದ್ಧತೆಯಿಂದ ಅವತರಿಸುತ್ತಾನೆ. ಹಾಗೆ ಅವತರಿಸಲು ಅವನಿಗೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಏಳುಬೀಳುಗಳನ್ನು ಕಾಣಬೇಕಾಗುತ್ತದೆ. ದಿಢೀರ್‍‌ ಹುಟ್ಟಿಕೊಳ್ಳುವ ಯಾವುದೂ, ಸುದೀರ್ಘವಾದುದಲ್ಲ! ನಮಗೆ ಇಷ್ಟಾದರೂ ಅರ್ಥವಾಗಬೇಕು.

ಹಾಗಂತ ರಾಘವ್‌ ಚೆಡ್ಡಾ ಅವರ ಪ್ರಯತ್ನಗಳನ್ನು ಅಥವಾ ಪ್ರಶ್ನೆಗಳನ್ನು ನಗಣ್ಯ ಎಂದು ತಿರಸ್ಕರಿಸಲಾಗದು. ಆತ ಜನಪ್ರಿಯತೆಯನ್ನೂ ಮೀರಿದ ನಿಜನಾಯಕ ಎಂಬ ನಿರ್ಧಾರಕ್ಕೆ ಈಗಲೇ ಬರುವ ಮುನ್ನ, ನಾವು ಇನ್ನಷ್ಟು ಕಾದುನೋಡಬೇಕಿದೆ. ಅಂದಹಾಗೆ, ರಾಘವ್‌ ಛೆಡ್ಡಾ ಅವರನ್ನು ಪ್ರಶ್ನೆಯ ಮೂಲೆಯಲ್ಲಿಟ್ಟಾಕ್ಷಣ, ಅವರನ್ನು ಕಟ್ಟಿಹಾಕಲು ಅವರದೇ ಆಮ್‌ ಆದ್ಮಿ ಪಾರ್ಟಿ ನಡೆಸುತ್ತಿರುವ ಯತ್ನಗಳು ಸರಿ ಇವೆ ಎಂದು ಹೇಳಲಾಗದು. ಯಾಕೆಂದರೆ ಆ ಪಕ್ಷ ಕೂಡಾ ಯಾವುದೇ ಸೈದ್ದಾಂತಿಕ ಸ್ಪಷ್ಟತೆ ಇಲ್ಲದ, ಸಂರಚನಾತ್ಮಕ ಸಾಮಾಜಿಕ ಪರಿವರ್ತನೆಯ ಯೋಜನೆಗಳಿಲ್ಲದ, ಕೇವಲ ಜನಪ್ರಿಯತೆಯ ಲಯವನ್ನು ಆಧರಿಸಿದ ಪಕ್ಷ. ಪರಮೋಚ್ಛ ನಾಯಕ ಅರವಿಂದ್‌ ಕೇಜ್ರಿವಾಲ್‌ ಸ್ವತಃ ಹೀಗೆ ಜನಪ್ರಿಯ ನಾಯಕನಾಗುವ ಹಂಬಲ ಹೊತ್ತವರು. ಆ ಹಂಬಲವನ್ನು ರಾಘವ್‌ ಚೆಡ್ಡಾ ಓವರ್‍‌ಟೇಕ್‌ ಮಾಡುತ್ತಿದ್ದಾರೆ ಎಂಬ ಕಾರಣಕ್ಕೂ ಇಂತಹ ಪ್ರಯತ್ನಕ್ಕೆ ಮುಂದಾಗಿರಬಹುದು. ಅಥವಾ ಕೋಮುವಾದಿ ರಾಜಕಾರಣದ ಹುನ್ನಾರವೂ ಅಡಗಿರಬಹುದು. ಯಾವುದಕ್ಕೂ ಕಾಲವೇ ಉತ್ತರ ಕೊಡಲಿದೆ.

ಆದರೆ ಒಂದಂತೂ ಸತ್ಯ… ಕೇವಲ ಚಪ್ಪಾಳೆಗಳಿಂದ ಜನನಾಯಕನನ್ನು ಹುಟ್ಟಿಸಿಕೊಳ್ಳುವ ತಪ್ಪಿನಿಂದ ನಾವು ಈಗಲಾದರೂ ಪಾಠ ಕಲಿಯಬೇಕಿದೆ. ಈ ವಿಚಾರದಲ್ಲಿ 2014ರ ನಮ್ಮದೇ ಚಪ್ಪಾಳೆಗಳು ನಮಗೆ ತಕ್ಕ ಪಾಠ.

You cannot copy content of this page

Exit mobile version