Home ರಾಜ್ಯ ರಾಯಚೂರು ಒಳಮೀಸಲಾತಿಗಾಗಿ ರಾಯಚೂರು ಬಂದ್ ಯಶಸ್ವಿ: 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಕೋಟಾ ಜಾರಿಗೆ ಮಾದಿಗ ಸಮುದಾಯ...

ಒಳಮೀಸಲಾತಿಗಾಗಿ ರಾಯಚೂರು ಬಂದ್ ಯಶಸ್ವಿ: 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಕೋಟಾ ಜಾರಿಗೆ ಮಾದಿಗ ಸಮುದಾಯ ಆಗ್ರಹ

0

ಸರ್ಕಾರದ 56,432 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಒಳಮೀಸಲಾತಿ ಹೋರಾಟ ಸಮಿತಿಯು ನೀಡಿದ್ದ ‘ರಾಯಚೂರು ಬಂದ್’ ಕರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಾದಿಗ ಸಮುದಾಯದ ನೂರಾರು ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದಾಗ ಪೊಲೀಸರು ಹಸ್ತಕ್ಷೇಪ ಮಾಡಿ ತಡೆದರು.

ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು, ಬ್ಯಾಂಕುಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ನಗರ ಸಾರಿಗೆ ಸಂಚಾರವೂ ಸ್ಥಗಿತಗೊಂಡಿದ್ದರಿಂದ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.

ಪ್ರಸ್ತುತ ಇರುವ ಶೇ. 50ರ ಮೀಸಲಾತಿ ಮಿತಿಯಡಿಯಲ್ಲಿಯೇ 56,000 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿರುವುದನ್ನು ಮಾದಿಗ ಸಮುದಾಯವು ತೀವ್ರವಾಗಿ ವಿರೋಧಿಸುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಹೆಚ್ಚಿಸಲಾದ ಶೇ. 17ರ ಒಳಮೀಸಲಾತಿಯನ್ನು (ಮಾದಿಗ/ಎಡಗೈ- ಶೇ. 6, ಹೊಲೆಯ/ಬಲಗೈ- ಶೇ. 6, ಮತ್ತು ಇತರರು- ಶೇ. 5) ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.

ಹೋರಾಟದ ನೇತೃತ್ವ ವಹಿಸಿದ್ದ ವಿರೂಪಾಕ್ಷಿ ಮತ್ತು ನರಸಪ್ಪ ದಂಡೋರೆ ಅವರು ಜಿಲ್ಲಾಧಿಕಾರಿ ನಿತೀಶ್ ಮತ್ತು ಎಸ್ಪಿ ಅರುಣಾಂಶು ಗಿರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version