Home ಅಂಕಣ ಪೊಲೀಸರ ಮೇಲೆ ಕಲ್ಲು ತೂರಾಟ : ಹಿಂದೂ ಸಂಘಟನೆಗಳ ಕರಾಳ ಇತಿಹಾಸವೇನು?

ಪೊಲೀಸರ ಮೇಲೆ ಕಲ್ಲು ತೂರಾಟ : ಹಿಂದೂ ಸಂಘಟನೆಗಳ ಕರಾಳ ಇತಿಹಾಸವೇನು?

0

“..ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ, ಮುಸ್ಲೀಮರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ ಏನು ವ್ಯತ್ಯಾಸ?..” ನವೀನ್ ಸೂರಿಂಜೆಯವರ ಬರಹದಲ್ಲಿ

2011 ಫೆಬ್ರವರಿ ಯಲ್ಲಿ ಮಸೀದಿಯೊಂದಕ್ಕೆ ಕಲ್ಲು ತೂರಾಟ ನಡೆಸಲಾಗಿತ್ತು. ಯಾವ ಪ್ರಚೋದನೆಯೂ ಇಲ್ಲದೇ, ಕೇವಲ ಕೋಮುಗಲಭೆ ನಡೆಸುವ ಕಾರಣಕ್ಕಾಗಿ ಈ ಕಲ್ಲು ತೂರಾಟ ನಡೆಸಲಾಗಿತ್ತು. ಪ್ರಕರಣ ದಾಖಲಾದ ತಕ್ಷಣ ಪೊಲೀಸರು ಮಸೀದಿಗೆ ಕಲ್ಲು ತೂರಿದ್ದ ಕೆಲ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿತ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಕೆಲ ಬಿಜೆಪಿ ಕಾರ್ಯಕರ್ತರು ಪುತ್ತೂರು ಎಎಸ್ ಪಿ ಕಚೇರಿಗೆ ತೆರಳಿ ಪೊಲೀಸರಿಗೆ ಒತ್ತಡ ಹಾಕಲಾರಂಭಿಸಿದರು. ಆಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಹಾಗಾಗಿ ಕೆಲ ಬಿಜೆಪಿ ಕಾರ್ಯಕರ್ತರು ಠಾಣೆಗೆ ನುಗ್ಗಿ ಆರೋಪಿಗಳಾಗಿರುವ ಹಿಂದುತ್ವ ಕಾರ್ಯಕರ್ತರನ್ನು ಬಲವಂತದಿಂದ ಬಿಡಿಸಿಕೊಂಡು ಹೋಗಲು ಬಂದರು. ಅಷ್ಟರಲ್ಲಿ ಪುತ್ತೂರು ಎಎಸ್ ಪಿಯಾಗಿದ್ದ ಖಡಕ್ ಐಪಿಎಸ್ ಅಧಿಕಾರಿ ಬಂದು, ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಓಡಿಸಿ ಹಿಂದುತ್ವ ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇಷ್ಟಕ್ಕೆ ಪ್ರಕರಣ ಮುಗಿಯಲಿಲ್ಲ. ಬಿಜೆಪಿ ಸರ್ಕಾರವಿದ್ದರೂ ನಮ್ಮನ್ನು ಠಾಣೆಯೊಳಗೆ ನುಗ್ಗಿ ಆರೋಪಿಗಳನ್ನು ಬಿಡಿಸಿಕೊಂಡು ಹೋಗಲು ಅವಕಾಶ ನೀಡದ ಪುತ್ತೂರು ಎಎಸ್ಪಿ ವಿರುದ್ದ ಬಿಜೆಪಿ ತಿರುಗಿಬಿತ್ತು. ಬಿಜೆಪಿಯ ಶಾಸಕರು ಮತ್ತು ಸಂಸದರು ಪುತ್ತೂರು ಎಎಸ್ಪಿ ನಿವಾಸಕ್ಕೆ ರಾತ್ರಿ ಮುತ್ತಿಗೆ ಹಾಕಿದರು. ಠಾಣೆಗೆ ಮುತ್ತಿಗೆ ಹಾಕುವುದನ್ನು ನೋಡಿದ್ದೇವೆ, ಠಾಣೆಗೆ ಕಲ್ಲು ತೂರಾಟ ಆಗಿರುವ ನೂರಾರು ಘಟನೆಗಳು ದೇಶದಾದ್ಯಂತ ನಡೆದಿದೆ. ಆದರೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ನಿವಾಸದ ಮೇಲೆ ಬಿಜೆಪಿ ದಾಳಿ ನಡೆಸಿತ್ತು. ‘ಐಪಿಎಸ್ ಅಧಿಕಾರಿಗಳು ಮನೆಯಲ್ಲಿ ಇಲ್ಲ, ಅವರ ಪತ್ನಿ ಮಾತ್ರ ಮನೆಯಲ್ಲಿದ್ದಾರೆ. ದಯವಿಟ್ಟು ಇಲ್ಲಿಂದ ಹೋಗಿ’ ಎಂದು ಮನೆಯ ಭದ್ರತೆಗೆಂದು ನಿಯೋಜಿತರಾಗಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಹೇಳಿದರೂ ಬಿಜೆಪಿ ಶಾಸಕ-ಸಂಸದ- ಕಾರ್ಯಕರ್ತರು ಸುಮ್ಮನಾಗಲಿಲ್ಲ. ಬದಲಾಗಿ, ಐಪಿಎಸ್ ಅಧಿಕಾರಿ ಮನೆಯಲ್ಲಿ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಐಪಿಎಸ್ ಅಧಿಕಾರಿ ಮನೆ ಮೇಲೆ ಬಾಟಲಿಗಳು, ಕಲ್ಲುಗಳನ್ನು ಎಸೆಯಲಾರಂಬಿಸಿದರು. ಮನೆಯೊಳಗೆ ಐಪಿಎಸ್ ಅಧಿಕಾರಿಯವರ ಪತ್ನಿ ಒಬ್ಬಂಟಿಯಾಗಿದ್ದಾರೆ ಎಂದು ತಿಳಿದೂ ಕಲ್ಲು ಗಾಜುಗಳನ್ನು ತೂರಲಾಯಿತು. ಇದನ್ನು ವರದಿ ಮಾಡಲು ಹೋಗಿದ್ದ ನಾನು ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದೆ. ಇದು ಇಡೀ ದೇಶದ ಪೊಲೀಸ್ ವ್ಯವಸ್ಥೆಯನ್ನು ಕಂಗೆಡಿಸಬೇಕಿತ್ತು. ಆದರೆ ಈವರೆಗೂ ಶಾಸಕ- ಸಂಸದರ ಬಂಧನವಾಗಲೇ ಇಲ್ಲ.

ಮಸೀದಿಗೆ ಕಲ್ಲೆಸೆದು, ಠಾಣೆಗೆ ನುಗ್ಗಿ ಆರೋಪಿಗಳನ್ನು ಕರೆದೊಯ್ಯಲು ಯತ್ನಿಸಿ, ಐಪಿಎಸ್ ಅಧಿಕಾರಿಯ ಮನೆಗೆ ಬಾಟಲಿ, ಕಲ್ಲು ತೂರಿ, ಐಪಿಎಸ್ ಅಧಿಕಾರಿಯ ಪತ್ನಿಯನ್ನು ಬೆದರಿಸಿ ದಕ್ಕಿಸಿಕೊಳ್ಳುವ ರಾಜಕೀಯವನ್ನು ಹಿಂದೂ ಸಂಘಟನೆಗಳು ಮಾತ್ರ ಮಾಡಲು ಸಾದ್ಯ ! ಇದರ ಒಂದಂಶದಷ್ಟು ಆಕ್ರೋಶದ ನಡೆಯನ್ನು ಮುಸ್ಲೀಮರು ತೋರಿದರೆ ‘ಉತ್ತರ ಪ್ರದೇಶ ಮಾದರಿ ಬುಲ್ಡೋಜರ್ ತಂದು ಮುಸ್ಲಿಮರ ಮನೆ ಡೆಮಾಲಿಶ್ ಮಾಡಿ’ ಎಂಬ ಆಗ್ರಹ ಕೇಳಿ ಬರುತ್ತದೆ. ಮುಸ್ಲೀಮರು ಠಾಣೆಗೆ ಕಲ್ಲು ತೂರಾಟ ನಡೆಸಿದರೆ ಗೃಹ ಸಚಿವರೇ ಖುದ್ದು ಭೇಟಿಯಾಗಿ ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಸೂಚಿಸಬೇಕಾದ ಗಂಭೀರ ಪ್ರಕರಣವಾಗಿ ಮಾರ್ಪಾಡಾಗುತ್ತದೆ.

2011ರ ಡಿಸೆಂಬರ್ 14ರಂದು ಜಾಲ್ಸೂರಿನ ಹಿಂದೂ ಕಾರ್ಯಕರ್ತರು ಹಿಂದೂ ಹುಡುಗಿ-ಮುಸ್ಲಿಂ ಯುವಕ ಜೋಡಿಯನ್ನು ಹಿಡಿದು ಸುಳ್ಯ ಪೊಲೀಸ ರಿಗೆ ಒಪ್ಪಿಸಿದ್ದರು. ಇದೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ. ಕಾನೂನಿನ ಪ್ರಕಾರ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಬೇಕಿತ್ತು. ಬಿಜೆಪಿ ಸರ್ಕಾರವಾದ್ದರಿಂದ ನಮಗ್ಯಾಕೆ ಉಸಾಬರಿ ಎಂದು ಹಿಂದೂ ಕಾರ್ಯಕರ್ತರ ಮೇಲೂ ಕೇಸ್ ಹಾಕದೇ, ಜೋಡಿಗಳ ಮೇಲೂ ಕೇಸ್ ಹಾಕದೇ ಪೊಲೀಸರು ಬಿಟ್ಟು ಬಿಟ್ಟಿದ್ದರು.

ನಾವು ಹಿಡಿದುಕೊಟ್ಟ  ಜೋಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅವರನ್ನು ಬಿಟ್ಟು ಬಿಟ್ಟಿದ್ದಕ್ಕೆ  ಆಕ್ರೋಶಗೊಂಡ ಹಿಂದುತ್ವ ಕಾರ್ಯಕರ್ತರು  ರಾತ್ರಿ ಸುಮಾರು 9 ಗಂಟೆಗೆ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಕಲ್ಲು ತೂರಾಟ ಮಾಡಿತ್ತು. ಕಲ್ಲು ತೂರಾಟದಲ್ಲಿ ಮಹಿಳಾ ಎಎಸ್ ಐ, ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್, ಪೊಲೀಸ್ ಕಾನ್ಸ್ ಸ್ಟೇಬಲ್ ಗಳ ತಲೆ ಒಡೆದಿತ್ತು. ಇಡೀ ಠಾಣೆ ರಕ್ತಮಯವಾಗಿತ್ತು. ಇದಕ್ಕೂ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಕೊನೆಗೆ ಪೊಲೀಸರು ಅನಿವಾರ್ಯಾವಾಗಿ ಲಾಠಿ ಚಾರ್ಜ್ ಮಾಡಿದರು. ಆ ಬಳಿಕ ಪೊಲೀಸರು ಕಲ್ಲು ತೂರಾಟ ನಡೆಸಿದ್ದ ಹಿಂದುತ್ವ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರ ವಿರುದ್ದ ಎಫ್ಐಆರ್ ದಾಖಲಿಸಿದರು.

ಆದರೆ ಹಲ್ಲೆಗೆ ಒಳಗಾದ ಪೊಲೀಸರು ಬಿಜೆಪಿ ನಾಯಕರು ಮತ್ತು ಹಿಂದುತ್ವ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಿದ್ದು ತಪ್ಪು ಎಂಬ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಬಂದಿತ್ತು. ಪೊಲೀಸ್ ವರಿಷ್ಠಾಧಿಕಾರಿ ( ಎಸ್ಪಿ) ಸೇರಿದಂತೆ ಸುಳ್ಯ ಠಾಣೆಯ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಹಿಂದುತ್ವ ಕಾರ್ಯಕರ್ತರಿಂದ ತಲೆ ಒಡೆಸಿಕೊಂಡಿದ್ದಲ್ಲದೇ, ಬ್ಯಾಂಡೇಜ್ ಹಾಕಿದ ಸ್ಥಿತಿಯಲ್ಲೇ ಪೊಲೀಸರು ವರ್ಗಾವಣೆಗೆ ಒಳಗಾಗಬೇಕಾಯಿತು.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಅಮಾಯಕ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ದುರುದ್ದೇಶದಿಂದ ಅಮಾನತು ಮಾಡಿದ ಬಗ್ಗೆ ಆಕ್ರೋಶಗೊಂಡ ಸುಳ್ಯ ಮತ್ತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಪೊಲೀಸರ ಪತ್ನಿಯರು ಮೊದಲ ಬಾರಿಗೆ ಪ್ರತಿಭಟನೆ ನಡೆಸಿದರು. ಡ್ಯೂಟಿ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದುತ್ವ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದಲ್ಲದೇ, ಅಮಾನತುಗೊಂಡು ಅನ್ಯಾಯಕ್ಕೊಳಗಾಗಿರುವ ಪೊಲೀಸರಿಗೆ ವಾರದೊಳಗೆ ನ್ಯಾಯ ಒದಗಿಸಬೇಕು. ಇಲ್ಲದೇ ಇದ್ದರೆ ನಾವು ಮತ್ತು ನಮ್ಮ ಮಕ್ಕಳ ಸಾಮೂಹಿಕವಾಗಿ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಪೊಲೀಸರ ಪತ್ನಿಯರು ಪುತ್ತೂರು ಎಎಸ್ಪಿಗೆ ಮನವಿ ಸಲ್ಲಿಸಿದರು‌. ಆದರೆ ಮೊದಲ ಬಾರಿ ಪ್ರತಿಭಟನೆ ನಡೆಸಿದ ಪೊಲೀಸರ ಪತ್ನಿಯ ಮನವಿಗೆ ಸರ್ಕಾರ ಕ್ಯಾರೇ ಅನ್ನಲಿಲ್ಲ. ವಿಪರ್ಯಾಸ ಎಂದರೆ ನಂತರದ ಬೆಳವಣಿಗೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಬ್ಯಾನರ್ ನಡಿಯಲ್ಲಿ ಸುಳ್ಯ ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಮುಖಂಡರು ಪೊಲೀಸ್‌ ಇಲಾಖೆಯ ಸಿಬಂದಿಯ ತಾಯಿ, ಪತ್ನಿ, ಅಕ್ಕ, ತಂಗಿಯರ ಬಗ್ಗೆ ಅವಹೇಳನಾಕಾರಿ ಮಾತುಗಳನ್ನಾಡಿದರು.

ಈಗ ಹೇಳಿ. ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ, ಮುಸ್ಲೀಮರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ ಏನು ವ್ಯತ್ಯಾಸ ? ಹಿಂದೂ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ ಹಲ್ಲೆಗೆ ಒಳಗಾದ ಪೊಲೀಸರೇ ಏಕಕಾಲದಲ್ಲಿ ಸಂತ್ರಸ್ತರೂ ಆರೋಪಿಗಳೂ ಆಗಿ, ಬ್ಯಾಂಡೇಜ್ ತೆಗೆಯುವ ಮೊದಲೇ ವರ್ಗಾವಣೆಯಾಗುತ್ತಾರೆ.‌ ಸಾಲದ್ದಕ್ಕೆ ಪೊಲೀಸರ ಪತ್ನಿ, ತಾಯಿ, ಅಕ್ಕ ತಂಗಿಯರೂ ಅವಹೇಳನಕ್ಕೆ ಒಳಗಾಗಬೇಕಾಗುತ್ತದೆ. ಮುಸ್ಲೀಮರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ ಮುಸ್ಲೀಮರೇ ಏಕಕಾಲದಲ್ಲಿ ಆರೋಪಿಗಳೂ, ಸಂತ್ರಸ್ತರೂ ಆಗುತ್ತಾರೆ. ಮುಸ್ಲೀಮರ ವಿರುದ್ದ ಹತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿ, ರಾತ್ರೋರಾತ್ರಿ ಮನೆಗೆ ನುಗ್ಗಿ ಅಮಾಯಕ ಮುಸ್ಲೀಮರನ್ನೂ ಬಂಧಿಸಲಾಗುತ್ತದೆ. ಇದು ಹಿಂದೂ ಸಂಘಟನೆಯ ಕಲ್ಲು ತೂರಾಟಕ್ಕೂ, ಮುಸ್ಲಿಮ್ ಆಕ್ರೋಶಿತರ ಕಲ್ಲು ತೂರಾಟಕ್ಕೂ ಇರುವ ವ್ಯತ್ಯಾಸ !

ಮೈಸೂರಿನ ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಮುಸ್ಲೀಮ್ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ. ಭಾವನಾತ್ಮಕ ಕಾರಣಗಳಿಗೆ ನಡೆದ ಪ್ರತಿಭಟನೆ ಅತಿರೇಕಕ್ಕೆ ಹೋದಾಗ ಅವರ ರಕ್ಷಣೆಗೆ ಯಾರೂ ಬರಲಿಲ್ಲ.‌ ಸರ್ಕಾರ, ಮುಸ್ಲಿಂ ಸಂಘಟನೆಗಳು ಕಲ್ಲು ತೂರಾಟದ ಆರೋಪಿಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಹಿಂದುತ್ವವಾದಿ/ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ, ಠಾಣೆಯ ಮೇಲೆ, ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿಯೂ ದಕ್ಕಿಸಿಕೊಳ್ಳಬಹುದು. ‘ಮೈಸೂರಿನಲ್ಲಿ ಮುಸ್ಲೀಮರು ನಡೆಸಿದ ಕಲ್ಲು ತೂರಾಟದ ಬಗ್ಗೆ ಯಾಕೆ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸುವವರು ಮತ್ತು ‘ನಾವು ಹಿಂದು – ಮುಸ್ಲಿಂ ಗಲಭೆಕೋರರನ್ನು ಸಮಾನಾಗಿ ನೋಡುತ್ತೇವೆ’ ಎನ್ನುವವರು ಈ ಇತಿಹಾಸ ಮತ್ತು ವರ್ತಮಾನದ ನ್ಯಾಯಪ್ರಕ್ರಿಯೆಯನ್ನು ಗಮನಿಸಬೇಕು.

You cannot copy content of this page

Exit mobile version