ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಗಣೇಶ ಉತ್ಸವ ಸಾಗುವ ಮಾರ್ಗದ ಉದ್ದಕ್ಕೂ ಸಂಘಪರಿವಾರದ ಸಂಘಟನೆಯವರು ಕೇಸರಿ ಬಣ್ಣದ ಬಟ್ಟೆಗಳಿಂದ ಅಲಂಕೃತಗೊಳಿಸಿದ್ದರು. ಅದರಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಬಾವುಟ ಹಾರಿಸಿದ ವಿಲಕ್ಷಣ ಬೆಳವಣಿಗೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಇದೊಂದು ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದ ಅಥವಾ ಲಾಂಛನವನ್ನು ದುರುಪಯೋಗ ಪಡಿಸಿಕೊಂಡ ಅಡಿಯಲ್ಲಿ ದೇಶದ್ರೋಹಿ ಕೃತ್ಯವಾಗಿದೆ. ಈ ಬಗ್ಗೆ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಶೋಕ ಸ್ಥಂಭದ ಮೇಲಿರುವ ಕೇಸರಿ ಧ್ವಜದ ಫೋಟೋ ಹಂಚಿಕೊಂಡು ಟೀಕಿಸಲು ಶುರು ಮಾಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅದನ್ನು ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಿ ತಕ್ಷಣವೇ ತೆರವುಗೊಳಿಸಿದೆ.
ಈ ಬಗ್ಗೆ ಸ್ಥಳೀಯ ಜಿಲ್ಲಾಡಳಿತವಾಗಲಿ, ಪೊಲೀಸರಾಗಲಿ ಇಲ್ಲಿಯವರೆಗೂ ಲಾಂಛನ ದುರುಪಯೋಗ ಪಡಿಸಿಕೊಂಡ ಕಿಡಿಗೇಡಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಸ್ಥಳೀಯವಾಗಿ ಮತ್ತು ಜಾಲತಾಣಗಳಲ್ಲಿ ಅಧಿಕಾರಿ ವರ್ಗದವರ ಬೇಜವಾಬ್ದಾರಿತನದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಇನ್ನೆಷ್ಟು ಕಾಲ ಬೇಕಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.