ಒಂದು ಕಾಲದಲ್ಲಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಬುಡಕಟ್ಟು ಸಮುದಾಯದವರು ಈ ಪ್ರಕೃತಿಯ ಜೊತೆ ಜೊತೆಗೆ ನಡೆದವರು. ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ, ಜೀವ ಜಂತುಗಳಿಗೆ ಸಮಾನವಾಗಿ ನಡೆದವರು. ಈ ಕಾರಣಕ್ಕಾಗಿ ಅವರಲ್ಲಿದ್ದ ಜೀವ ಪರ ಮೌಲ್ಯಗಳು ಇತರ ಜನ ಸಮುದಾಯಕ್ಕೆ ಮಾದರಿಯಾಗಿದ್ದವು. ಈಗಲೂ ಬುಡಕಟ್ಟುಗಳ ನಡೆ-ನುಡಿಯಲ್ಲಿ ಅಡಗಿರುವ ಜೀವಪರ ಮೌಲ್ಯಗಳು ಇತರ ಜನ ಸಮುದಾಯಗಳಿಗೆ ಮಾದರಿಯಾಗುವ ಸಾಧ್ಯತೆಗಳಿರುವಂಥವು – ಡಾ.ಸಬಿತಾ, ಸಹಾಯಕ ಪ್ರಾಧ್ಯಾಪಕರು
ಸಮತಾವಾದ ಸಮಾಜದ ಮೂಲಭೂತ ತತ್ವ. ಈ ಪ್ರಕೃತಿ ಎಲ್ಲರಿಗೂ ಸೇರಿದ್ದು. ಸಮಾಜ ಎಂದರೆ ಜನರ ಗುಂಪು. ಆದರೆ ಈ ತತ್ವ ಕೇವಲ ಸಮಾಜದಲ್ಲಿರುವ ಜನರ ನಡುವಿನ ಸಂಬಂಧಗಳ ಸಮತೆ ಮಾತ್ರವಲ್ಲ ಜೊತೆಗೆ ಜನರು ಅವಿನಾಭಾವ ಸಂಬಂಧ ಹೊಂದಿರುವ ನೈಸರ್ಗಿಕ ಮತ್ತು ಅನೈಸರ್ಗಿಕ ಸಂಪನ್ಮೂಲಗಳನ್ನು ಒಳಗೊಂಡಿದೆ. ಭೂಮಿ, ಆಕಾಶ, ಕಾಡು, ಸೂರ್ಯ-ಚಂದ್ರ, ಅರಣ್ಯ, ಬೆಟ್ಟ, ಗುಡ್ಡ, ಬೆಳಕು, ಗಣಿ, ಶಿಖರಗಳು ಜೊತೆಗೆ ಅನೈಸರ್ಗಿಕ ಸಂಪನ್ಮೂಲಗಳಾದ ಹಣ, ಆಸ್ತಿ, ಅಂತಸ್ತು, ಅಧಿಕಾರ, ಸಂಪತ್ತುಗಳು ಕೂಡ ಸಂಪನ್ಮೂಲಗಳಾಗಿವೆ. ಈ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ಸಮಾನತೆ ಎಂದು ಪರಿಕಲ್ಪಿಸಿ ಭಾರತದ ಸಂವಿಧಾನವು ಈ ಹಕ್ಕನ್ನು ಜನರಿಗೆ ನೀಡಿದೆ. ಹಾಗಾಗಿ ಮಾನವ ಹಕ್ಕು ಎಂದರೆ ಲಿಂಗ ತಾರತಮ್ಯವಿಲ್ಲದ ಸ್ವಾತಂತ್ರ್ಯ, ನ್ಯಾಯ ಮತ್ತು ಘನತೆವೆತ್ತ ಬದುಕು ಎಂಬುದಾಗಿ ಅರಿಯಬಹುದು. ಹಾಗೆಯೇ ಜಗತ್ತಿನಲ್ಲಿರುವ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ಮುಕ್ತ ಅವಕಾಶ ಎಂದಾಗಿಯೂ ಪರಿಗಣಿಸಬಹುದು.
ಹಿಂದಿನ ಕಾಲದಲ್ಲಿ ಈ ನೈಸರ್ಗಿಕ ಸಂಪತ್ತಿನ ಮೇಲೆ ಜನರಲ್ಲಿ ತಮ್ಮದೇ ಆದ ವ್ಯಾಖ್ಯಾನಗಳಿವೆ. ಉದಾಹರಣೆಗೆ ಈ ಭೂಮಿ ಒಂದು ವಿಶೇಷವಾದ ಶಕ್ತಿಯಿಂದ ಹುಟ್ಟಿದೆ ಎನ್ನುವುದು. ಅಂದರೆ ಶಕ್ತಿಯು ಮೊದಲು ಈ ಜಗತ್ತಿನಲ್ಲಿರುವ ಎಲ್ಲಾ ಕ್ರಿಮಿ ಕೀಟ, ಪ್ರಾಣಿ, ಪಕ್ಷಿ, ಗಿಡ, ಮರಗಳನ್ನು, ಗಾಳಿ ಬೆಳಕನ್ನು ಸೃಷ್ಟಿಸಿ ಕೊನೆಗೆ ಮಾನವ ಜೀವಿಯನ್ನು ಸೃಷ್ಟಿಸಿದೆ ಎಂಬ ನಂಬಿಕೆಯೊಂದಿಗೆ ಮಾನವ ತನ್ನ ಮತ್ತು ಭೂಮಿಯ ನಡುವಿನ ಸಂಬಂಧವನ್ನು ನಿರೂಪಿಸಿಕೊಳ್ಳುತ್ತಾನೆ. ಈ ಶಕ್ತಿ ಕೇಂದ್ರಿತವಾದ ಭೂಮಿಯ ರಚನೆಯಲ್ಲಿ ಮನುಷ್ಯ ತಾನೇ ಅತ್ಯಂತ ಬುದ್ಧಿಜೀವಿ ಎಂದು ತಿಳಿದು, ಈ ಪ್ರಕೃತಿಯ ಇತರ ಎಲ್ಲಾ ಸಂಪನ್ಮೂಲಗಳನ್ನು ಮುಕ್ತವಾಗಿ ಪಡೆಯುವುದು ತನ್ನ ಹಕ್ಕಾಗಿ ಮಾಡಿಕೊಂಡ. ಹಾಗಾಗಿ ಆದಿ ಮಾನವ ತನ್ನ ಹಸಿವೆಗಾಗಿ ಕಾಡು-ಮೇಡು ಅಲೆದು ಆಹಾರಗಳನ್ನು ತಿನ್ನುತ್ತ ತನ್ನ ಜೀವ ಮತ್ತು ಜೀವನವನ್ನು ಸುಮಾರು 100 ವರ್ಷ ಕಳೆಯಬಹುದು ಎನ್ನುವುದನ್ನು ಕಂಡುಕೊಂಡ.
ಅಲೆಮಾರಿಯಾಗಿ ಅಲೆದಾಡುತ್ತಿದ್ದ ಮಾನವ ಒಂದು ನೆಲೆಯಾಗಿ ನಿಲ್ಲುವ ಮತ್ತು ಈ ಪ್ರಕೃತಿಯ ಮೇಲೆ ತನ್ನ ಸ್ವಾಧೀನತೆಯನ್ನು ಕಂಡುಕೊಂಡ. ಉದಾಹರಣೆಗೆ ಪ್ರಾಣಿಗಳನ್ನು ಬೇಟೆಯಾಡುವುದು, ಒಂದು ಭೌಗೋಳಿಕ ಪ್ರದೇಶವನ್ನು ಗುರುತಿಸಿ ಕುಮರಿ ಬೇಸಾಯವನ್ನು ಮಾಡಲಾರಂಭಿಸಿದ ತದನಂತರದಲ್ಲಿ ಸ್ಥಿರ ಬೇಸಾಯವನ್ನು ಕಂಡುಕೊಂಡ. ಜೊತೆಗೆ ಅದಕ್ಕೆ ಬೇಕಾದ ಪಶು ಪ್ರಾಣಿಗಳನ್ನು ಪಳಗಿಸುವ ಪ್ರವೃತ್ತಿಯನ್ನು ಹೆಚ್ಚಿಸಿಕೊಂಡ. ಮೊದ ಮೊದಲು ತನ್ನ ಜೀವನಾಧಾರಕ್ಕಾಗಿ ಮಾತ್ರ ಕೃಷಿಯಲ್ಲಿ ತೊಡಗಿಕೊಂಡ ಮಾನವ ನಂತರದಲ್ಲಿ ಅದನ್ನು ವ್ಯಾಪಾರಕ್ಕಾಗಿ ಮತ್ತು ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆಯುವ ಉತ್ಪಾದಿಸುವ ಮತ್ತು ಲಾಭವನ್ನು ಗಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ. ಇದಕ್ಕಾಗಿ ಸಂಪನ್ಮೂಲ ಭರಿತ ಪ್ರದೇಶಗಳನ್ನು ಹುಡುಕಿಕೊಂಡು ಹೊರಟ ಆದಿ ಮಾನವ ನದಿ ಮೂಲಗಳಲ್ಲಿ ನೆಲೆನಿಂತು ತಮ್ಮ ಜೀವನಾವಕಾಶವನ್ನು ಕ್ರಮಪ್ರಕಾರ ಗೊಳಿಸುವಲ್ಲಿ ತಲ್ಲೀನನಾದ.
ಆ ಕಾಲ ಘಟ್ಟದಲ್ಲಿ ಮಾನವ ನಾಗರಿಕತೆಯ ಪ್ರಕ್ರಿಯೆಗೆ ಒಳಗಾದ ಅತ್ಯಂತ ಹಳೆಯದಾದ ೫ ನಾಗರಿಕತೆಗಳು ಪ್ರಾರಂಭವಾಗಿರುವುದು ಈ ಸಂಪನ್ಮೂಲಭರಿತವಾದ ನದಿ ದಂಡೆಗಳಲ್ಲಿಯೇ. ಮಾನವ ರಸ್ತೆಗಳನ್ನು ಕಟ್ಟಡಗಳನ್ನು, ಶೌಚಾಲಯಗಳನ್ನು, ಪಾತ್ರೆ, ಆಯುಧಗಳನ್ನು, ಆಭರಣಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದ. ನಾಗರಿಕತೆಯ ಈ ಹಂತದಲ್ಲಿ ಮಾನವ ಅಲೆಮಾರಿಯಾಗಿದ್ದು ಬೇಟೆಯಾಡಿ ಅಥವಾ ಕಾಡಿನಲ್ಲಿ ಸಂಗ್ರಹಿಸುತ್ತಿದ್ದ ಆಹಾರ ಪದಾರ್ಥಗಳನ್ನು ತಾತ್ಕಾಲಿಕವೆಂದು ಪರಿಗಣಿಸಿ ಭೂಮಿಯನ್ನು ಹದಗೊಳಿಸಿ ಆಹಾರ ಪದಾರ್ಥಗಳನ್ನು ಉತ್ಪಾದಿಸಿ ತನ್ನ ಬದುಕಿಗಾಗಿ ಕೂಡಿಡುವ ಸಂಸ್ಕೃತಿಗೆ ಒಳಗಾದ. ಆಗ ತನ್ನ ಆಹಾರ ಮತ್ತು ಅಲಂಕಾರಕ್ಕಾಗಿ ಪ್ರಕೃತಿಯನ್ನು ಅವಲಂಬಿಸುವ ಮತ್ತು ಅದನ್ನು ಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಕಲೆಯನ್ನು ಕಲಿಯುತ್ತಾನೆ. ಆದರೆ ಮಾನವನ ಬುದ್ಧಿವಂತಿಕೆಯು ʼಈ ಪ್ರಕೃತಿಯು ಎಲ್ಲರದ್ದು. ತಾನು ಈ ಪ್ರಕೃತಿಯ ಒಂದು ಭಾಗʼ ಎನ್ನುವ ಜ್ಞಾನವನ್ನು ಕಳೆದು ಕೊಳ್ಳುವಂತೆ ಮಾಡುತ್ತದೆ.
ಅಂದರೆ ಈ ನಾಗರಿಕತೆ ಹುಟ್ಟಿದಂತೆ ಮಾನವ ತನ್ನ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ತಲ್ಲೀನನಾಗುತ್ತಾನೆ. ಇದರೊಂದಿಗೆ ಹೊಸ ಹೊಸ ಭೌಗೋಳಿಕ ಪ್ರದೇಶಗಳನ್ನು ತನ್ನ ಸ್ವಾಧೀನ ಪಡಿಸಿ ಕೊಳ್ಳುತ್ತಾನೆ. ಹೀಗೆ ಮಧ್ಯಕಾಲೀನ ಯುಗದಲ್ಲಿ ತಾನು ಈ ಭೂಮಿಯ ದೊರೆಯೆಂದು ಸ್ಥಾಪಿಸಿಕೊಳ್ಳುತ್ತಾನೆ. ತನಗೆ ಬೇಕಾದಂತೆ ಭೂಮಿಯನ್ನು ಮಾರ್ಪಾಡು ಮಾಡುತ್ತಾನೆ. ದೊಡ್ಡ ದೊಡ್ಡ ಅರಮನೆಗಳನ್ನು, ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಾನೆ. ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸುವುದನ್ನು ಕಲಿಯುತ್ತಾನೆ. ಅಷ್ಟೇ ಅಲ್ಲದೇ ಇನ್ನೊಂದು ಪ್ರದೇಶಗಳಿಗೆ ಹೋಗಿ ತನ್ನ ವಸಾಹತುಗಳನ್ನು ಸ್ಥಾಪಿಸಿ ಕೊಳ್ಳುತ್ತಾನೆ. ಕ್ರಮೇಣ ಜನ ಸಂತತಿಯು ವಿಕಾಸ ಹೊಂದಿ, ಸಮಾಜದೊಳಗೆ ಒಂದು ಏಣಿ ಶ್ರೇಣಿ ಹುಟ್ಟಿ ಕೊಳ್ಳುತ್ತದೆ. ಯಾರು ಹೆಚ್ಚು ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದಾರೋ ಅವರು ಹೆಚ್ಚು ಪ್ರಬಲರು ಹಾಗೂ ಯಾರು ಅಧೀನರಾಗುತ್ತಾರೋ ಅವರು ದುರ್ಬಲರು ಎಂಬ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಇದರಿಂದ ಘರ್ಷಣೆ, ಯುದ್ಧಗಳು ನಡೆದು ಪ್ರಬಲ ಮಾನವರು ಇನ್ನೊಂದು ಸಮುದಾಯದ ಜನರ ಮೇಲೆ ತಮ್ಮ ಪ್ರಾಬಲ್ಯವನ್ನು ಹೇರುವುದರೊಂದಿಗೆ ತಾವು ಸ್ವಾಧೀನ ಪಡಿಸಿಕೊಂಡ ಭೌಗೋಳಿಕ ಪ್ರದೇಶದ ಮೇಲೆ ಏಕ ಸ್ವಾಮ್ಯವನ್ನು ಹೊಂದುತ್ತಾರೆ.
ಈ ಪ್ರಕ್ರಿಯೆಯ ವಿಶ್ವದಾದ್ಯಂತ ನಡೆದು ದುರ್ಬಲ ದೊರೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ತಮ್ಮ ತಮ್ಮ ವಸಾಹತುಗಳೊಂದಿಗೆ ಆಡಳಿತ ನಡೆಸಿ, ತನ್ನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಇದು ಮಾನವ ಸಮಾಜದೊಳಗೆ ಮೇಲು-ಕೀಳು, ಲಿಂಗ ಬೇಧ, ನರಬೇಧ, ವರ್ಣಬೇಧಗಳಾಗಿ ಮತ್ತು ಪ್ರಬಲರು-ದುರ್ಬಲರು ಎನ್ನುವ ಸ್ತರ ವಿನ್ಯಾಸವನ್ನು ಹುಟ್ಟು ಹಾಕುತ್ತದೆ. ಅಷ್ಟೇ ಅಲ್ಲದೆ ಈ ಜಗತ್ತಿನ ನೈಸರ್ಗಿಕ ಸಂಪನ್ಮೂಲವು ಅಸಮಾನವಾಗಿ ಹಂಚಿಕೆಯಾಗುತ್ತದೆ. ದೊಡ್ಡ ಮಟ್ಟದ ಬಂಡವಾಳ ಮತ್ತು ನೈಸರ್ಗಿಕ ಸಂಪನ್ಮೂಲವು ಕೆಲವೇ ಮಾನವನ ಸೊತ್ತಾಗುತ್ತದೆ. ಇದರಿಂದ ಕೆಲವು ಮಾನವರು ಅತ್ಯಂತ ವಿಸ್ತಾರವಾದ ಭೌಗೋಳಿಕ ಸಂಪತ್ತನ್ನು ಹೊಂದಿದ್ದರೆ ಇನ್ನು ಕೆಲವರು ಸಣ್ಣ ಭೌಗೋಳಿಕ ಪ್ರದೇಶವನ್ನು ಹೊಂದುತ್ತಾರೆ. ಈ ತರಹದ ಅಸಮಾನವಾದ ಭೌಗೋಳಿಕ ಹಂಚಿಕೆ ಮಾನವನನ್ನು ಹಲವಾರು ಬಿಕ್ಕಟ್ಟಿನ ಕೂಪಕ್ಕೆ ತಳ್ಳುತ್ತದೆ. ಉದಾಹರಣೆಗೆ- ಬಡತನ, ಹಸಿವು, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ ಹೆಚ್ಚಾಗುತ್ತದೆ ಹಾಗಾಗಿ ಭೂ ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಜಾಗತಿಕ ಸಮಸ್ಯೆಗಳಿಗೆ ಅವಿನಾಭಾವ ಸಂಬಂಧವಿದೆ.
ಈ ಸಮಸ್ಯೆ ಕೇವಲ ಮಾನವನಿಗೆ ಮಾತ್ರ ಸಂಬಂಧಿಸಿಲ್ಲದೆ ಇತರ ಜೀವಿ, ಜಲಚರಗಳ ಮೇಲೂ ಇದು ಪರಿಣಾಮ ಬೀರುತ್ತದೆ, ನಾವು ಈಗಾಗಲೇ ಚರ್ಚಿಸಿದಂತೆ ಸಮತಾವಾದ ತತ್ವದಂತೆ ಈ ಭೂಮಿ ಎಲ್ಲರಿಗೂ ಸೇರಿದ್ದು ಎನ್ನುವಾಗ ಈ ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ, ಪ್ರಾಣಿ ಪಕ್ಷಿಗಳಿಗೂ ಸಮಾನವಾದ ಬದುಕುವ ಹಕ್ಕಿದೆ. ಅದು ತಾನು ಘನತೆಯಿಂದ ಮತ್ತು ಸ್ವಾತಂತ್ರ್ಯದಿಂದ ಯಾವುದೇ ತಾರತಮ್ಯವಿಲ್ಲದೆ ನ್ಯಾಯಯುತವಾಗಿ ಬದುಕಬೇಕಾಗಿದೆ. ಆದರೆ ಈ ಮಾನವ ದುರಾಸೆಯಿಂದ ಭೂ ಕಬಳಿಕೆ, ವಸಾಹತೀಕರಣ ಇತ್ಯಾದಿಗಳಿಂದ ಪ್ರಕೃತಿಯ ಇತರ ಜೀವಿಗಳಿಗೆ ತಮ್ಮ ಬದುಕುವ ಹಕ್ಕನ್ನೇ ವಂಚಿಸಿದೆ.
ಮಾನವನು ಈ ಪ್ರಕೃತಿಯನ್ನು ತನ್ನ ಜೀವನಾಧಾರಕ್ಕಾಗಿ ಮಾತ್ರ ಬಳಸದೆ ಸುಖ ಸಂಪತ್ತಿನ ದುರಾಸೆಗಳಿಗೆ ಭೂಗರ್ಭವನ್ನು ಕೊರೆಯುವ, ಅಭಿವೃಧ್ಧಿಯ ನೆಪದಲ್ಲಿ ಕಾಡು ಕಡಿದು ಬೇಕಾದ ಸುಖ ಸಲಕರಣೆಗಳನ್ನು ಮಾಡಿ ಕೊಳ್ಳುತ್ತಾನೆ. ಜೊತೆಗೆ ತನ್ನ ಅವಶ್ಯಕತೆಗಳನ್ನು ಮೀರಿ ಕೊಳ್ಳುಬಾಕ ಸಂಸ್ಕೃತಿಗೆ ಮಾರು ಹೋಗಿ, ಅತಿಯಾದ ಪ್ಲಾಸ್ಟಿಕ್ ಉತ್ಪಾದನೆಯನ್ನು ಮತ್ತು ಪ್ಲಾಸ್ಟಿಕ್ ಕಸ ಉತ್ಪಾದನೆಯಲ್ಲಿ ತೊಡಗಿಕೊಂಡು ತ್ಯಾಜ್ಯಗಳ ಗುಡ್ಡೆಯನ್ನು ಸೃಷ್ಟಿಸುವಲ್ಲಿ ಯಶಸ್ವಿ ಯಾಗಿದ್ದಾನೆ. ಶುದ್ಧ ಕುಡಿಯುವ ನೀರಿಗಾಗಿ ಹಾಹಾಕಾರ ಇರುವ ಪರಿಸ್ಥಿತಿಯನ್ನು ಒಡ್ಡಿದ್ದಾನೆ. ಇಂತಹ ಅತಿಯಾದ ಕೊಳ್ಳುಬಾಕ ಸಂಸ್ಕೃತಿಯಲ್ಲಿ ತಾನು ನಾಶವಾಗುವುದಲ್ಲದೇ ಪಶು, ಪಕ್ಷಿ, ಪ್ರಾಣಿ, ಪ್ರಕೃತಿಗಳನ್ನು ನಾಶವಾಗುವಂತೆ ಮಾಡಿದ.
ಒಂದು ಕಾಲದಲ್ಲಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಬುಡಕಟ್ಟು ಸಮುದಾಯದವರು ಈ ಪ್ರಕೃತಿಯ ಜೊತೆ ಜೊತೆಗೆ ನಡೆದವರು. ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ, ಜೀವ ಜಂತುಗಳಿಗೆ ಸಮಾನವಾಗಿ ನಡೆದವರು. ಈ ಕಾರಣಕ್ಕಾಗಿ ಅವರಲ್ಲಿದ್ದ ಜೀವ ಪರ ಮೌಲ್ಯಗಳು ಇತರ ಜನ ಸಮುದಾಯಕ್ಕೆ ಮಾದರಿಯಾಗಿತ್ತು. ಈಗಲೂ ಬುಡಕಟ್ಟುಗಳ ನಡೆ-ನುಡಿಯಲ್ಲಿ ಅಡಗಿರುವ ಜೀವಪರ ಮೌಲ್ಯಗಳು ಇತರ ಜನ ಸಮುದಾಯಗಳಿಗೆ ಮಾದರಿಯಾಗುವ ಸಾಧ್ಯತೆಗಳಿರುವಂಥವು.
ಶತ-ಶತಮಾನಗಳಿಂದ ಪ್ರಕೃತಿಯನ್ನು ವಂಚಿಸಿದ ಮಾನವ ತನ್ನ ಬುದ್ಧಿವಂತಿಕೆಯನ್ನು ಒರೆಗೆ ಹಚ್ಚಿ ಕೊಳ್ಳಬೇಕಾಗಿದೆ. ಪ್ರಕೃತಿ-ಪರಿಸರವನ್ನು ಉಳಿಸಿ ತನ್ನ ಮುಂದಿನ ಪೀಳಿಗೆಗೂ ಈ ಪ್ರಕೃತಿ ಸಂಪತ್ತನ್ನು, ಸಂಪನ್ಮೂಲವನ್ನು ಉಳಿಸ ಬೇಕಾಗಿದೆ. ಅದಕ್ಕಾಗಿ ಪರಿಸರ ನೀತಿಯನ್ನು ಕೈಗೊಂಡು ಅನಾದಿ ಕಾಲದಿಂದ ವಂಚಿಸಿದ ಪರಿಸರವನ್ನು ಉಳಿಸುವಲ್ಲಿ ತನ್ನ ಬುದ್ಧಿವಂತಿಕೆಯನ್ನು ಬಳಸ ಬೇಕಾಗಿದೆ. ತನ್ನ ಸುತ್ತ-ಮುತ್ತ ಸಮಾಜವನ್ನು ಅರ್ಥೈಸಿ ಪರಿಸರ ಪೂರಕವಾದ ಚಟುವಟಿಕೆಯಲ್ಲಿ ತನ್ನ ಕೈ ಜೋಡಿಸಬೇಕಾಗಿದೆ. ತನ್ನ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರ ಬಂದು, ತನ್ನ ಆಸೆಗಳಿಗೆ ಕಡಿವಾಣ ಹಾಕ ಬೇಕಾಗಿದೆ. ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಮತ್ತು ಬಳಕೆಯನ್ನು ಕಡಿಮೆಗೊಳಿಸಿ ಪರಿಸರ ಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕಾಗಿದೆ.
ಡಾ.ಸಬಿತಾ
ಕೊರಗ ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್ ಪದವೀಧರೆಯಾಗಿರುವ ಇವರು ಮಂಗಳೂರು ವಿ ವಿ ಯ ಸಮಾಜ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ( ಮೊ : 9481179633)
ಇದನ್ನೂ ಓದಿ- ಕೊರಗರ ಶೈಕ್ಷಣಿಕ ಸ್ಥಿತಿಗತಿಗಳು | ಅಧ್ಯಯನದ ಅವಶ್ಯಕತೆ