ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಿಂದ ಬಹುಕೋಟಿ ಉದ್ಯಮಿ ಎಲಾನ್ ಮಸ್ಕ್ ಹೊರ ನಡೆದ ನಂತರ ಟ್ರಂಪ್ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ತಮ್ಮದೇ ಒಡೆತನದ X ಖಾತೆಯಲ್ಲಿ ಟ್ರಂಪ್ ವಿರುದ್ಧ ಎಲಾನ್ ಮಸ್ಕ್ ತಿರುಗಿ ಬಿದ್ದಿದ್ದಾರೆ. ಜಗಳದಲ್ಲಿ ತಾನೇನು ಕಮ್ಮಿ ಎಂಬಂತೆ ಟ್ರಂಪ್ ಕೂಡ ಮಸ್ಕ್ ವಿರುದ್ಧ ಅಧಿಕಾರದ ದರ್ಪ ಮೆರೆದಿದ್ದಾರೆ.
ಸಧ್ಯ ಇವರಿಬ್ಬರ ಪರಸ್ಪರ ವಾಗ್ದಾಳಿಯ ಪರಿಣಾಮ ಅಧ್ಯಕ್ಷ ಟ್ರಂಪ್ ‘ಮಸ್ಕ್ ಸಂಸ್ಥೆಗೆ ಅಮೇರಿಕಾ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಸರ್ಕಾರಿ ಒಪ್ಪಂದಗಳನ್ನು ರದ್ದುಪಡಿಸಿದರೆ ಸರ್ಕಾರದ ಬೊಕ್ಕಸಕ್ಕೆ ಬಾರೀ ಉಳಿತಾಯ ಆಗಲಿದೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಇದು ಮಸ್ಕ್ ಗೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಅಧ್ಯಕ್ಷ ಜೋ ಬೈಡೆನ್ ಯಾಕೆ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಇತ್ತ ಟ್ರಂಪ್ ಹೇಳಿಕೆಗೆ ತಿರುಗಿ ಬಿದ್ದಿರುವ ಎಲಾನ್ ಮಸ್ಕ್ “ಟ್ರಂಪ್ ವಿರುದ್ಧ ಮಹಾಭಿಯೋಗ ನಡೆಸಬೇಕು. ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ರನ್ನು ತರಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಗಗನಯಾನಿಗಳನ್ನು ಕಳುಹಿಸಲು ಮತ್ತು ವಾಪಸ್ ಕರೆತರಲು ನಾಸಾವು ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪೆನಿಯ ಡ್ರ್ಯಾಗನ್ ಗಗನನೌಕೆಯನ್ನು ಬಳಸುತ್ತಿದೆ. ಇವರಿಬ್ಬರ ನಡುವಿನ ಜಗಳದ ಪರಿಣಾಮ ನಾಸಾ ಜತೆಗಿನ ಡ್ರ್ಯಾಗನ್ ಗಗನನೌಕೆ ಸೇವೆ ಒಪ್ಪಂದವನ್ನು ರದ್ದು ಮಾಡುವುದಾಗಿಯೂ ಘೋಷಿಸಿದ್ದರು. ಆ ನಂತರ ಉಲ್ಟಾ ಹೊಡೆದ ಎಲಾನ್ ಮಸ್ಕ್ ಡ್ರ್ಯಾಗನ್ ಒಪ್ಪಂದ ರದ್ದು ಮಾಡುವುದಿಲ್ಲ. ಟೀಂ ಅಮೆರಿಕ ಜತೆಗೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಇವರಿಬ್ಬರ ಕಾದಾಟದ ಪರಿಣಾಮವೋ ಎಂಬಂತೆ ಮಸ್ಕ್ ಅವರ ಟೆಸ್ಲಾ ಕಂಪೆನಿ ಷೇರುಗಳು ಭಾರೀ ಪತನ ಕಂಡಿವೆ. ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಷೇರು ಮೌಲ್ಯ ಶೇ.14.26ರಷ್ಟು ಕುಸಿತ ದಾಖಲಿಸಿ, ಪ್ರತೀ ಷೇರಿನ ದರ 24,427ರೂ.ಗೆ ತಲುಪಿದೆ.