ಟಿಪ್ಪುವನ್ನು ಒಕ್ಕಲಿಗ ಸಮುದಾಯದ ವಿರುದ್ಧ ಎತ್ತಿಕಟ್ಟುವ ಕಾಲದಲ್ಲಿ ಟಿಪ್ಪು ಬಗೆಗಿನ ಪುಸ್ತಕ ಅಭಿಯಾನದ ಆಶಯ ವ್ಯಕ್ತಪಡಿಸಿದ ಡಾ ಸಂಜಯ್ ಗೌಡ ಯಾರು?
‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಅಭಿಯಾನ” ಪತ್ರಕರ್ತ ನವೀನ್ ಸೂರಿಂಜೆ ಅವರ ಬರಹದಲ್ಲಿ
ಮಾರ್ಚ್ 29 ರಂದು ನಡೆದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಡಾ ಸಂಜಯ್ ಗೌಡರು ‘ನಾನು 100 ಪುಸ್ತಕವನ್ನು ತಕ್ಷಣ ಖರೀದಿಸಿ ಶಾಲಾ ಮಕ್ಕಳಿಗೆ ಹಂಚುತ್ತೇನೆ. ಇದೊಂದು ಅಭಿಯಾನವಾಗಲಿ’ ಎಂದು ಘೋಷಿಸಿದ್ದರು. ಟಿಪ್ಪುವನ್ನು ಒಕ್ಕಲಿಗ ಸಮುದಾಯದ ವಿರುದ್ಧ ಎತ್ತಿಕಟ್ಟುವ ಕಾಲದಲ್ಲಿ ಟಿಪ್ಪು ಬಗೆಗಿನ ಪುಸ್ತಕ ಅಭಿಯಾನದ ಆಶಯ ವ್ಯಕ್ತಪಡಿಸಿದ ಡಾ ಸಂಜಯ್ ಗೌಡ ಯಾರು ? ಎಂದು ಹಲವು ಸಾಹಿತಿ ಚಿಂತಕರು ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು.
ಡಾ ಸಂಜಯ್ ಗೌಡ ಯಾರು ಎಂಬುದನ್ನು ಮತ್ತೆ ನೋಡೋಣಾ. ಅದಕ್ಕೂ ಮೊದಲು ಟಿಪ್ಪುವಿಗೂ ಒಕ್ಕಲಿಗರಿಗೂ ಇದ್ದ ಸಂಬಂಧದ ಬಗ್ಗೆ ಚರ್ಚಿಸೋಣಾ.
ಒಕ್ಕಲಿಗರು ಟಿಪ್ಪು ಸುಲ್ತಾನ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಕರಾವಳಿಗೆ ಸೀಮಿತಗೊಳಿಸಿ ಹೇಳುವುದಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿದ್ದ ಒಕ್ಕಲಿಗರು ಕೂಡಾ ಟಿಪ್ಪುವಿನ ಜೊತೆ ಉತ್ತಮ ಬಾಂಧವ್ಯ, ನಿಷ್ಠೆ ಹೊಂದಿದ್ದರು. ಒಕ್ಕಲಿಗರನ್ನು ಗುರಿಯಾಗಿಸಿ ಟಿಪ್ಪು ಹಿಂಸೆ, ದೌರ್ಜನ್ಯ ಮಾಡಿದ ಯಾವುದೇ ದಾಖಲೆಗಳು ಸಿಗಲ್ಲ. ಹಾಗೆ ನೋಡಿದರೆ ಒಕ್ಕಲಿಗರು ಅಥವಾ ಬಂಟರು ಶಿಫಾರಸ್ಸು ಮಾಡಿದರೆ ಟಿಪ್ಪು ಯಾರ ಮೇಲಿನ ದಾಳಿಯನ್ನಾದರೂ ನಿಲ್ಲಿಸಿಬಿಡುತ್ತಿದ್ದರು.
ಟಿಪ್ಪು ಕಾಲದಲ್ಲಿ ಒಕ್ಕಲಿಗರು ಪ್ರತಿಷ್ಠೆಯ ಜೀವನ ನಡೆಸಿದರು. ಬ್ರಾಹ್ಮಣರ ಶಾನುಭೋಗ ವ್ಯವಸ್ಥೆಯನ್ನು ರದ್ದು ಮಾಡಿ “ಊರ ಗೌಡ” ಪದ್ದತಿಯನ್ನು ಜಾರಿಗೆ ತಂದಿದ್ದನು. ಬ್ರಾಹ್ಮಣರು ಶಾನುಭೋಗರಾಗಿದ್ದರೆ ಒಕ್ಕಲಿಗರು ಮತ್ತಿತರ ಜಾತಿಗಳು ಬ್ರಾಹ್ಮಣರ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ತೆರಿಗೆ ಲೆಕ್ಕ ಬರೆದುಕೊಳ್ಳುವ ಶ್ಯಾನುಬೋಗ ಬ್ರಾಹ್ಮಣರಿಗೆ ಕೃಷಿಕ ಒಕ್ಕಲಿಗರು ಉಚಿತವಾಗಿ ಕೃಷಿ ಉತ್ಪನ್ನಗಳನ್ನು ಕೊಡಬೇಕಿತ್ತು. ಇದು ಕೃಷಿ ಮೇಲೆ ಪರಿಣಾಮ ಬಿದ್ದು ಆರ್ಥಿಕ ವ್ಯವಸ್ಥೆ ಹಾಳಾಗುತ್ತಿತ್ತು. ಹಾಗಾಗಿ ಕೃಷಿಕರೇ ಊರ ಗೌಡನಾಗಿರಬೇಕು ಎಂದು ಆದೇಶ ಹೊರಡಿಸಿದ. ಕಂದಾಯ ಲೆಕ್ಕಪತ್ರ ನೋಡಲು ಅಕ್ಷರಾಭ್ಯಾಸ ಇದ್ದ ಬ್ರಾಹ್ಮಣರ ಅವಶ್ಯಕತೆ ಇದ್ದಿದ್ದರಿಂದ ಬ್ರಾಹ್ಮಣರನ್ನು ಸಂಬಳಕ್ಕೆ ಕುಲಕರ್ಣಿಗಳನ್ನಾಗಿ ನೇಮಿಸಿದರು. ಕುಲಕರ್ಣಿಗಳಿಗೆ ಸಂಬಳವನ್ನು ಊರ ಗೌಡರೇ ಕೊಡಬೇಕಿದ್ದರಿಂದ ಗೌಡರು ಸಾಮಾಜಿಕ ಪ್ರತಿಷ್ಟೆಯನ್ನು ಉಳಿಸಿಕೊಂಡಿದ್ದರು.
ಟಿಪ್ಪುವಿನ ಸೈನ್ಯದಲ್ಲಿ ಮೈಸೂರು, ಮಂಡ್ಯ ಭಾಗದ ಒಕ್ಕಲಿಗ ಮತ್ತು ಕುರುಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಕಾರಣಕ್ಕಾಗಿ ಸೈನಿಕರಿಗೆ ಭೂಮಿ ನೀಡುವ ಯೋಜನೆ ಜಾರಿಗೆ ತಂದ. ಇದರ ದೊಡ್ಡ ಫಲಾನುಭವಿಗಳು ಒಕ್ಕಲಿಗರು. ಪಾಳೇಗಾರ ವ್ಯವಸ್ಥೆಯನ್ನು ನಾಶ ಮಾಡಿ ಸಾಮಾನ್ಯ ಒಕ್ಕಲಿಗರಿಗೆ ಭೂಮಿಯನ್ನು ಹಂಚಿದ. ಹಾಗಾಗಿಯೇ ಭೂ ರಹಿತ ಒಕ್ಕಲಿಗರೇ ಇಲ್ಲವೇನೋ ಎನ್ನುವಂತೆ ಒಕ್ಕಲಿಗರು ಕೃಷಿಯಲ್ಲಿ ಅಭಿವೃದ್ದಿಯನ್ನು ಕಂಡರು. ಕೃಷಿಕರು ಅಂದರೆ ಒಕ್ಕಲಿಗರು ಎಂಬಷ್ಟು ಕೃಷಿ ಉತ್ಪಾದನೆಯಲ್ಲಿ ಹಿಡಿತ ಸಾಧಿಸಿದರು.
ದಕ್ಷಿಣ ಕನ್ನಡದ ಸುಳ್ಯ ಪರಿಸರದಲ್ಲಿದ್ದ ಹಲವು ಪ್ರತಿಷ್ಠಿತ ಗೌಡ ಮನೆತನಗಳು ಟಿಪ್ಪು ಜೊತೆ ಸದಭಿಪ್ರಾಯ ಹೊಂದಿದ್ದವು. ಮಾತ್ರವಲ್ಲದ ಟಿಪ್ಪುವಿನಿಂದ ಪ್ರೇರಿತಗೊಂಡ ಅಮರಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲೂ ಈ ಮನೆತನಗಳು ಸಕ್ರಿಯವಾಗಿ ಭಾಗಿಯಾಗಿದ್ದವು.
ಉಳುವಾರು ಗೌಡ ಮನೆತನ ಸುಮಾರು 400 ವರ್ಷಗಳಿಗಿಂತ ಮೇಲ್ಪಟ್ಟ ಹಳೆಯ ಇತಿಹಾಸವನ್ನು ಹೊಂದಿವೆ. ಐಗೂರು
ಸೀಮೆಯಿ೦ದ ಈ ಗೌಡ ಕುಟುಂಬ ವಲಸೆ ಬಂದಿತ್ತು. ಐಗೂರು ನಾಯಕರು ಟಿಪ್ಪುವಿನ ಹಿತೈಷಿಗಳಾಗಿದ್ದರಿಂದ ಉಳುವಾರಿನ ಗೌಡ ಕುಟುಂಬವೂ ಟಿಪ್ಪುವಿನ ಜೊತೆ ನಿಷ್ಟೆ ಹೊಂದಿತ್ತು. ಉಳುವಾರ್ ತಾರವಾಡ್ ಮನೆಯ ಆವರಣದಲ್ಲಿ ಧರ್ಮದೈವ ಉದ್ರಾ೦ಡಿ, ವಿಷ್ಣುಮೂರ್ತಿ, ಪೊಟ್ಟಭೂತ, ಉಳ್ಳಾಕುಲು, ದೈವಗಳ ಮಾಡಗಳು ಇದೆ. ತೊಡಿಕಾನದ ಜಾತ್ರೆ ಸ೦ದರ್ಭದಲ್ಲಿ ಆರಾಧನೆಗೊಳ್ಳುವ ಉಳ್ಳಾಕುಲು ದೈವಗಳ ಭ೦ಡಾರ ಉಳುವಾರು ಮನೆಯಿಂದ ಹೋಗಬೇಕು. ದೈವಸ್ಥಾನದ ಈ ಮನೆ ಟಿಪ್ಪುವಿನ ಕಾಲದಲ್ಲಿ ಎಷ್ಟೊಂದು ಐಶ್ವರ್ಯವಂತವಾಗಿತ್ತು ಎಂದರೆ, ಈ ದೈವದ ಮನೆಯ ಮೇಲೆ ಟಿಪ್ಪುವಿನ ಹೆಸರಿನಲ್ಲಿ ದರೋಡೆ ನಡೆದಿತ್ತು. “ಹಿ೦ದೆ ಬ್ರಿಟಿಷರ ಕುಮ್ಮಕ್ಕಿನಿಂದ ಕೊಡಗಿನ ದೊಡ್ಡ ವೀರರಾಜ ಅನೇಕ ಬಾರಿ ದರೋಡೆ ಮಾಡಿಸಿರುವುದಕ್ಕೆ ಸಾಕ್ಷ್ಯಾಧಾರಗಳಿವೆ. ತನ್ನ ದರೋಡೆ ತಂಡಕ್ಕೆ ಆತ ತುರ್ಕರ ದಂಡು ಎಂಬ ಹೆಸರಿಟ್ಟು ಟಿಪ್ಪುವಿನ ಹೆಸರಿಗೆ ಕಳ೦ಕ ತರುವ ಮೂಲಕ ಬ್ರಿಟಿಷರಿಂದ ಪ್ರಯೋಜನ ಪಡೆಯುವ ಹುನ್ನಾರ ಹೂಡಿದ್ದ” ಎಂದು ಪುಸ್ತಕಗಳು/ ದಾಖಲೆಗಳು ಹೇಳುತ್ತವೆ. ಬೇರೆ ಯಾರೇ ಆಗಿದ್ದರೂ ಇದು ಟಿಪ್ಪುವಿನ ದಾಳಿ ಎಂದು ನಂಬಿ ಬಿಡುತ್ತಿದ್ದರು. ಆದರೆ ಸುಳ್ಯದ ಒಕ್ಕಲಿಗರು ಇದರ ಹಿಂದಿನ ಬ್ರಿಟಿಷ್-ಕೊಡವರ ಷಡ್ಯಂತ್ರವನ್ನು ಅರಿತಿದ್ದರು. ಹಾಗಾಗಿ ಸುಳ್ಯದ ಉಳುವಾರು ಒಕ್ಕಲಿಗರು ಟಿಪ್ಪುವನ್ನು ಒಂದಿನಿಂತೂ ಸಂಶಯಿಸದೇ ನಿಜವಾದ ದರೋಡೆ ರಾಜಕೀಯವನ್ನು ಅರಿತರು. ಇಂತಹ ಕಾರಣಗಳಿಗಾಗಿಯೇ ಉರುವಾಳು ಒಕ್ಕಲಿಗ ಮನೆತನವನ್ನು ‘ಬುದ್ದಿವಂತ ಮನೆತನ’ ಎಂದು ಕರೆಯುತ್ತಾರೆ. ಇದು ಕೇವಲ ಮಾತಲ್ಲ. ದೈವದ ಪಾಡ್ದನದಲ್ಲಿಯೇ ಉರುವಾಳು ಒಕ್ಕಲಿಗ ಮನೆತನದ ಬುದ್ಧಿವಂತಿಕೆಯ ಬಗ್ಗೆ ಉಲ್ಲೇಖವಿದೆ. “ಎರಡು ಗುತ್ತು ನೂದಾಳ್ ಸೀಮೆಡ್ ಉಳುವಾಡ್ದಕುಳು ಬುದ್ದಿವಂತೆರ್” (ಎರಡು ಗುತ್ತು, ನೂರು ಆಳುಗಳಿರುವ ಸೀಮೆಯಲ್ಲಿ ಉರುವಾಳಿನವರು ಬುದ್ದಿವಂತರು) ಎಂದು ಎನ್ನುವ ಉಳ್ಳಾಕುಲೆ ಮದಿಪು (ಮದಿಪು ಎಂದರೆ ದೈವದ ಪ್ರಾರ್ಥನೆ) ಹೇಳುತ್ತದೆ.
ಸುಳ್ಯದ ಇನ್ನೊಂದು ಗೌಡ ಮನೆತನವಾಗಿರುವ ದೇರಾಜೆ ಮನೆತನ ಅರ೦ತೋಡಿನಿ೦ದ ಸುಮಾರು ನಾಲ್ಕು ಕಿ. ಮೀ. ದೂರದಲ್ಲಿದೆ. ಟಿಪ್ಪು ಕಾಲದಲ್ಲಿ ಈ ಮನೆತನಕ್ಕೆ ಗ್ರಾಮ ಪಟೇಲ ಸ್ಥಾನವಿತ್ತು. ಆ ಕಾರಣಕ್ಕಾಗಿಯೇ ಸೀಮೆ ದೈವಸ್ಥಾನ ತೊಡಿಕಾನದಲ್ಲಿ ಈ ಮನೆತನಕ್ಕೆ ವಿಶೇಷ ಮನ್ನಣೆ ಇದೆ. ಟಿಪ್ಪು ಹುತಾತ್ಮನಾದ ಬಳಿಕ ಟಿಪ್ಪುವಿನಿಂದ ಪ್ರೇರಿತಗೊಂಡ ಒಕ್ಕಲಿಗರು ಮತ್ತು ಸ್ಥಾನಿಕರು ನಡೆಸಿದ ಅಮರ ಸುಳ್ಯ ದಂಗೆಯಲ್ಲಿ ಈ ಮನೆತನವು ಸಕ್ರಿಯವಾಗಿ ಭಾಗಿಯಾಗಿತ್ತು. ಸುಳ್ಯದಲ್ಲಿ ನಡೆದ 1835ರ ಐತಿಹಾಸಿಕ ಬಂಡಾಯದಲ್ಲಿ ಈ ಮನೆತನದ ಬಚ್ಚಗೌಡ ಭಾಗಿಯಾಗಿದ್ದಾರೆ. ಇದರಿಂದಾಗಿ ಬ್ರಿಟಿಷರ ವಿರುದ್ದ ಪ್ರತಿಭಟಿಸಿದ ವೀರರ ಮನೆತನವೆಂಬ ಹೆಗ್ಗಳಿಕೆ ಈ ಮನೆತನಕ್ಕೂ ಸಲ್ಲುತ್ತದೆ. ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟದಲ್ಲಿ ಸುಳ್ಯ ಪರಿಸರದ ನಾಲ್ಕಂಕಣದ ಐನ್ ಮನೆತನಗಳ ಗೌಡ ಯೋಧರು ಮತ್ತು ಎಲ್ಲಾ ಜಾತಿ ಜನಾ೦ಗದವರು ಸಕ್ರಿಯವಾಗಿ ಭಾಗವಹಿಸಿದ್ದರು. ಸುಳ್ಯದ ಒಕ್ಕಲಿಗರು ಟಿಪ್ಪುವಿನ ಕಾಲದಲ್ಲೂ, ಬ್ರಿಟಿಷರ ಕಾಲದಲ್ಲೂ ಬ್ರಿಟಿಷರಿಗೆ ನಿಷ್ಟರಾಗಿದ್ದೇ ಇಲ್ಲ.
ಉತ್ಪಾದನಾ ಸಾಮರ್ಥ್ಯ ಹೊಂದಿರುವ (ಕೃಷಿ ಭೂಮಿ ಹೊಂದಿದ್ದ) ಒಕ್ಕಲಿಗರನ್ನು ಕಂಡರೆ ಟಿಪ್ಪುವಿಗೆ ಅತೀವ ಪ್ರೀತಿಯಿತ್ತು. ತಮಿಳುನಾಡಿಗೆ ವಲಸೆ ಹೋಗಿ ಕೃಷಿ ಮಾಡಿಕೊಂಡಿದ್ದ ಕರಾವಳಿ-ಮಂಡ್ಯ-ಬೆಂಗಳೂರು ಭಾಗದ ಕೃಷಿಕರನ್ನು ತಮಿಳುನಾಡಿನಲ್ಲಿ ಟಿಪ್ಪು ಗುರುತಿಸಿದ್ದರು. ತಮಿಳುನಾಡಿನಲ್ಲಿದ್ದ ಕನ್ನಡಿಗ ಒಕ್ಕಲಿಗರಿಗೆ ಟಿಪ್ಪು ಸುಲ್ತಾನ್ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರು. ತಮಿಳುನಾಡಿನಲ್ಲಿದ್ದ ಕನ್ನಡಿಗ ಒಕ್ಕಲಿಗರು ತೆರಿಗೆಯನ್ನೇ ಕಟ್ಟುವಂತಿರಲಿಲ್ಲ. ತಮಿಳುನಾಡಿನ ಕನ್ನಡ ಒಕ್ಕಲಿಗರು ಕೃಷಿ ರಕ್ಷಣೆ ಮತ್ತು ಬೇಟೆಗಾಗಿ ‘ಕೊಂಬೈ ನಾಯಿ’ಗಳನ್ನು ಸಾಕುತ್ತಿದ್ದರು. ಬೇಟೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದ ಕೊಂಬೈ ನಾಯಿಗಳ ಒಂದು ಪಡೆಯನ್ನೇ ಸಿದ್ದಗೊಳಿಸಿದ್ದ ಕನ್ನಡ ಒಕ್ಕಲಿಗರು ಅದನ್ನು ಟಿಪ್ಪುವಿನ ಸೈನ್ಯಕ್ಕೆ ಕೊಡುಗೆಯಾಗಿ ನೀಡಿದ್ದರು. ಅಷ್ಟರಮಟ್ಟಿಗೆ ತಮಿಳುನಾಡಿನ ಒಕ್ಕಲಿಗರು ಟಿಪ್ಪುವಿನ ಉದ್ದಾತ್ತ ಪ್ರೀತಿಗೆ ಮನಸೋತಿದ್ದರು. ಒಕ್ಕಲಿಗರು ನೀಡಿದ ಕೊಂಬೈ ನಾಯಿಗಳನ್ನು ಟಿಪ್ಪು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬಳಸಿದ್ದರು.
ಇಂತಹ ಟಿಪ್ಪುವಿನ ಬಗ್ಗೆ ಒಕ್ಕಲಿಗ ಸಮುದಾಯದ ಮಧ್ಯೆ ಅಸಹನೆ ಸೃಷ್ಟಿಸಲು ‘ಉರಿಗೌಡ ನಂಜೇಗೌಡ’ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಲಾಯಿತು. ಈಗಲೂ ಟಿಪ್ಪುವನ್ನು ಒಕ್ಕಲಿಗರಮಧ್ಯೆ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕವನ್ನು ಶಾಲಾ ಮಕ್ಕಳೆಡೆಗೆ ಕೊಂಡೊಯ್ಯಲು ಒಕ್ಕಲಿಗ ಸಮುದಾಯದ ರಾಜಕಾರಣಿ ಡಾ ಸಂಜಯ್ ಗೌಡ ನಿಂತಿದ್ದಾರೆ.
ಐದಾರು ವರ್ಷಗಳ ಹಿಂದೆ ಪರಿಚಿತರಾಗಿದ್ದ ಡಾ ಸಂಜಯ್ ಗೌಡ ನನಗೆ ಆತ್ಮೀಯರಾಗಿದ್ದು ಕೊರೋನಾ ಕಾಲದಲ್ಲಿ ! ನಾನು ಮತ್ತು ಕಾವ್ಯಾ ಅಚ್ಯುತ್ ನಮ್ಮದೇ ಸಂಬಳದ ಹಣದ ಮಿತಿಯೊಳಗೆ ಅಗತ್ಯವಿರುವವರಿಗೆ ಆಹಾರದ ಕಿಟ್ ನೀಡುತ್ತಿದ್ದೆವು. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಬ್ಬರು ಕರೆ ಮಾಡಿ, ಗಾಳಿ ಅಂಜನೇಯ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಹಲವು ಲೈಂಗಿಕ ಅಲ್ಪಸಂಖ್ಯಾತರು ಊಟವಿಲ್ಲದೆ ಪರದಾಡುತ್ತಿದ್ದಾರೆ ಎಂದು ಮಾಹಿತಿ ನೀಡಿ ಸಹಾಯ ಕೋರಿದ್ದರು. ನಾನೂ ಕಾವ್ಯ ಸುಮಾರು 10 ಫುಡ್ ಕಿಟ್ ಗಳನ್ನು ರೆಡಿ ಮಾಡಿ ತೆಗೆದುಕೊಂಡು ಹೋದೆವು. ಆದರೆ ಅಲ್ಲಿ ಹತ್ತಾರು ‘ಕುಟುಂಬ’ಗಳು ಊಟದ ನಿರೀಕ್ಷೆಯಲ್ಲಿದ್ದವು. ಆಗ ನನಗೆ ನೆನಪಿಗೆ ಬಂದಿದ್ದು ಡಾ ಸಂಜಯ್ ಗೌಡ ! ಅವರಿಗೆ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಅಲ್ಲಿದ್ದ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರ ಮನೆಗಳಿಗೆ ಫುಡ್ ಕಿಟ್ ದೊರೆಯಿತು.
ಡಾ ಸಂಜಯ್ ಗೌಡ ಅವರು ಕರ್ನಾಟಕದ ಪ್ರಮುಖ ಚಲನಚಿತ್ರ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಮತ್ತು ಸಮಾಜ ಸೇವಕರಾಗಿದ್ದಾರೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿರುವ ಇವರು, ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಥೆಗಳಿಗೆ ಒತ್ತು ನೀಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಸಂಜಯ್ ಗೌಡರು ಜಾತ್ಯಾತೀತ ನಿಲುವಿನ ಯುವ ನಾಯಕ. ಟಿಪ್ಪು ನಿಜ ಚರಿತ್ರೆಯನ್ನು ಶಾಲಾ ಮಕ್ಕಳಿಗೆ ತಲುಪಿಸಬೇಕು ಎಂಬ ಕಾರಣಕ್ಕಾಗಿ ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಅಭಿಯಾನ ನಡೆಸುವ ಬಗ್ಗೆ ಘೋಷಿಸಿ ಮೊದಲ ಹಂತದಲ್ಲಿ ನೂರು ಪುಸ್ತಕ ಖರೀದಿಸಿದ್ದಾರೆ.
