“..ಸಿದ್ದರಾಮಯ್ಯರ ಕ್ಯಾಬಿನೆಟ್ ನಲ್ಲಿ ಸಚಿವರಾಗಿರುವ ಮಾಂಕಾಳು ವೈದ್ಯ ಎಂಬ ಕೋಮುವಾದಿಯು “ಗೋ ಹತ್ಯೆ ನಡೆಸಿದವರನ್ನು ಸರ್ಕಲ್ ನಲ್ಲಿ ಗುಂಡಿಟ್ಟು ಸಾಯಿಸಲಾಗುವುದು” ಎಂದು ಹೇಳಿದ್ದಾರೆ. ಸರ್ಕಾರದ ಸಚಿವನೊಬ್ಬನ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ತಾನು ಅಧಿಕಾರ ಸ್ವೀಕರಿಸುವಾಗ ಪಡೆದುಕೊಂಡ ಪ್ರಮಾಣ ವಚನಕ್ಕೆ ವ್ಯತಿರಿಕ್ತವಾಗಿ ಮಾಂಕಾಳು ವೈದ್ಯ ನಡೆದುಕೊಂಡಿದ್ದಾರೆ..” ನವೀನ್ ಸೂರಿಂಜೆಯವರ ಬರಹದಲ್ಲಿ
2020 ರಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ‘ಕೊರೋನಾವನ್ನು ಹರಡುವ ಒಂದು ಸಮುದಾಯವನ್ನು ಗುಂಡಿಕ್ಕಿ ಕೊಲ್ಲಿ’ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಮತ್ತು ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಈ ಬಗ್ಗೆ 08 ಎಪ್ರಿಲ್ 2020 ರಂದು ತುರ್ತು ಪತ್ರಿಕಾಗೋಷ್ಠಿ ಕರೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಹೊನ್ನಾಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸನ ರಚಿಸುವ ಶಾಸನ ಸಭೆಗೆ ಬಂದಿದ್ದಾರೆ. ಈ ಇಬ್ಬರೂ ಶಾಸಕರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.. ರೇಣುಕಾಚಾರ್ಯ ಅವರಂತೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ. ಅವರನ್ನು ಈ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು. ಇವರಿಬ್ಬರೂ ಶಾಸಕರಾಗಿ ಇರಲು ಅರ್ಹರಲ್ಲ. ಗುಂಡಿಕ್ಕಿ ಹತ್ಯೆ ಮಾಡಲು ತಿಳಿಸಿರುವಂತದ್ದು, ಪ್ರಚೋದನಾಕಾರಿ ಹೇಳಿಕೆಯಾಗುತ್ತದೆ. ಕಾನೂನಿನಡಿ ಕ್ರಿಮಿನಲ್ ಅಪರಾಧವಾಗುತ್ತದೆ. ಕೂಡಲೇ ಇಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು’ ಎಂದು ಒತ್ತಾಯಿಸಿದ್ದರು.
ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ‘ಸಂವಿಧಾನ್ ರಕ್ಷಣ್ ಅಭಿಯಾನ್’ ನಡೆಸುತ್ತಿದೆ. ಆದರೆ ಸಿದ್ದರಾಮಯ್ಯರ ಕ್ಯಾಬಿನೆಟ್ ನಲ್ಲಿ ಸಚಿವರಾಗಿರುವ ಮಾಂಕಾಳು ವೈದ್ಯ ಎಂಬ ಕೋಮುವಾದಿಯು “ಗೋ ಹತ್ಯೆ ನಡೆಸಿದವರನ್ನು ಸರ್ಕಲ್ ನಲ್ಲಿ ಗುಂಡಿಟ್ಟು ಸಾಯಿಸಲಾಗುವುದು” ಎಂದು ಹೇಳಿದ್ದಾರೆ. ಸರ್ಕಾರದ ಸಚಿವನೊಬ್ಬನ ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ತಾನು ಅಧಿಕಾರ ಸ್ವೀಕರಿಸುವಾಗ ಪಡೆದುಕೊಂಡ ಪ್ರಮಾಣ ವಚನಕ್ಕೆ ವ್ಯತಿರಿಕ್ತವಾಗಿ ಮಾಂಕಾಳು ವೈದ್ಯ ನಡೆದುಕೊಂಡಿದ್ದಾರೆ. ಯಾರನ್ನೂ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವ ಅಧಿಕಾರವನ್ನು ಮಾಂಕಾಳು ವೈದ್ಯಗೆ ಸಂವಿದಾನ ನೀಡಿದೆಯೇ ? ಈ ದೇಶದ ಯಾವುದೇ ಹಂತದ ನ್ಯಾಯಾಲಯಗಳಿಗೂ ಅಪರಾಧಿಗಳಿಗೆ “ಗುಂಡಿಕ್ಕಿ ಕೊಲ್ಲುವ ಶಿಕ್ಷೆ” ನೀಡುವ ಅಧಿಕಾರವಿಲ್ಲ. ಹಾಗಿರುವಾಗ ಮಾಂಕಾಳು ವೈದ್ಯ ಎನ್ನುವ ಸಂವಿಧಾನ ವಿರೋಧಿ ಸಚಿವ ಯಾವ ಆಧಾರದಲ್ಲಿ ಶಿಕ್ಷೆ ಘೋಷಣೆ ಮಾಡಿದ್ದಾರೆ ?
2025 ಫೆಬ್ರವರಿ 01 ರಂದು ವೈದ್ಯ ಉಸ್ತುವಾರಿ ಸಚಿವರಾಗಿರುವ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಇಬ್ಬರು ಗೋ ಸಾಗಾಟ ಆರೋಪಿಗಳ ಪತ್ತೆಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಆ ಜಾಹೀರಾತು ಪ್ರಕಟಣೆಯ ಪ್ರಕಾರ ‘ಇಬ್ಬರು ಆರೋಪಿಗಳು ಗೋ ಸಾಗಾಟ ಮತ್ತು ಗೋ ಹತ್ಯೆ ನಡೆಸಿದ್ದು ಅವರ ವಿರುದ್ದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಾಗಿದೆ. ಅವರನ್ನು ಪತ್ತೆ ಮಾಡಿದವರಿಗೆ 50 ಸಾವಿರ ರೂಗಳ ಬಹುಮಾನ ನೀಡಲಾಗುವುದು’ ಎಂಬುದು ಜಾಹೀರಾತಿನ ಸಾರಾಂಶವಾಗಿದೆ. ಜಾಹೀರಾತಿನಲ್ಲಿ ಹೊನ್ನಾವರ ಠಾಣೆಯ ಪ್ರಕರಣ ಸಂಖ್ಯೆ ಮತ್ತು ಇಬ್ಬರು ಆರೋಪಿಗಳ ಫೋಟೋವನ್ನು ಹಾಕಲಾಗಿದೆ.
ಒರ್ವ ವ್ಯಕ್ತಿಯ ಮೇಲೆ ಒಂದು ಎಫ್ಐಆರ್ ದಾಖಲಾದ ತಕ್ಷಣ ಆತನ ಬಗ್ಗೆ ಪೊಲೀಸ್ ಪ್ರಕಟಣೆ ನೀಡುವ ಅಧಿಕಾರ ಪೊಲೀಸರಿಗೆ ಇದೆಯೇ ? ನೈತಿಕ ಪೊಲೀಸ್ ಗಿರಿ, ಕೋಮುಗಲಭೆ, ಮನುಷ್ಯರ ಅಮಾನುಷ ಕೊಲೆ ನಡೆಸಿ ಪರಾರಿಯಾದ ಎಷ್ಟು ಸಂಘಪರಿವಾರದ ಸಂಘಟನೆಗಳ ಸದಸ್ಯರ ಫೋಟೋ ಹಾಕಿ ಈವರೆಗೆ ಈ ರೀತಿ ಪ್ರಕಟಣೆ ಹೊರಡಿಸಲಾಗಿದೆ ? ಅಥವಾ ಈ ಪ್ರಕಟಣೆಯ ಕಾನೂನು ಕೇವಲ ಗೋ ಸಾಗಾಟಗಾರರಿಗೆ ಮಾತ್ರ ಅನ್ವಯ ಆಗುತ್ತದೆಯೇ?
ಇಷ್ಟಕ್ಕೂ ಪತ್ರಿಕೆಗಳಲ್ಲಿ ಪೊಲೀಸ್ ಪ್ರಕಟಣೆ ನೀಡಲು ಕಾನೂನು ಕಾಯ್ದೆಗಳು ಇಲ್ಲವೇ ? ಒಬ್ಬರು ಗೋ ಸಾಗಾಟಗಾರ ಆರೋಪಿಗಳ ಫೋಟೋ ಹಾಕಿದ ಜಾಹೀರಾತಿನಲ್ಲೇ ಯಾವ ಆಧಾರದಲ್ಲಿ ಈ ಜಾಹೀರಾತು ಪ್ರಕಟಿಸಲಾಗಿದೆ ಎಂಬುದನ್ನು ಪೊಲೀಸರು ಹೇಳಬೇಕಲ್ಲವೇ ? ನ್ಯಾಯಾಲಯದ ಆದೇಶದಂತೆ ಜಾಹೀರಾತು ನೀಡಲಾಗಿದೆಯೇ ? ಕರ್ನಾಟಕ ಪೊಲೀಸ್ ಮ್ಯಾನುವಲ್ ನಂತೆ ನೀಡಲಾಗಿದೆಯೇ ? ಅಥವಾ ಆರೋಪಿಗಳ ಧರ್ಮದ ಆಧಾರದ ಮೇಲೆ ನೀಡಲಾಗಿದೆಯೇ ಎಂಬುದನ್ನು ಜಾಹೀರಾತಿನಲ್ಲೇ ಪೊಲೀಸರು ಪ್ರಕಟಿಸಬೇಕಿತ್ತು.
ಪೊಲೀಸರು CrPC ಸೆಕ್ಷನ್ 82 ಮತ್ತು 83 ಪ್ರಕಾರ ಮಾತ್ರ ಈ ಪ್ರಕಟನೆ ಹೊರಡಿಸಬಹುದು. CrPC 82 ಮತ್ತು 83 ಪ್ರಕಾರ ಪ್ರಕಟನೆ ಹೊರಡಿಸಬೇಕಾದರೆ, ಪೊಲೀಸರು ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು. ನ್ಯಾಯಾಲಯವು ಸಮನ್ಸ್, ವಾರೆಂಟ್ ಹೊರಡಿಸಿದ ಬಳಿಕವೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ನ್ಯಾಯಾಲಯವು ಆರೋಪಿಗಳ ವಿರುದ್ದ ಪ್ರೊಕ್ಲಮೇಶನ್ (Proclamation) ಹೊರಡಿಸಬೇಕು. ನ್ಯಾಯಾಲಯ ಹೊರಡಿಸಿದ ಪ್ರೊಕ್ಲಮೇಶನ್ ಆದೇಶವನ್ನು ಪೊಲೀಸರು ಆರೋಪಿಯ ಮನೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಅಂಟಿಸಬಹುದು. ಅಥವಾ ನ್ಯಾಯಾಲಯದ ಆದೇಶದ ಯಥಾವತ್ತನ್ನು ಜಾಹೀರಾತು ನೀಡಬಹುದು
ಕೇವಲ ಎಫ್ಐಆರ್ ದಾಖಲಾದ ತಕ್ಷಣ ಆರೋಪಿಯೊಬ್ಬನನ್ನು ‘ಅಪರಾಧಿ’ ಎಂಬಂತೆ ರಾಜ್ಯದ ಪ್ರಮುಖ ಪತ್ರಿಕೆಗಳ ರಾಜ್ಯ ಪುಟಗಳಲ್ಲಿ ಘೋಷಿಸಲು ಉತ್ತರ ಕನ್ನಡ ಪೊಲೀಸರಿಗೆ ಅಧಿಕಾರ ನೀಡಿದವರು ಯಾರು ? ದೇಶ/ ರಾಜ್ಯದಲ್ಲಿ ಮಾನವ ಹಕ್ಕು ಜಾರಿಯಲ್ಲಿ ಇಲ್ಲವೇ ? ಮಾನವ ಹಕ್ಕು ಜಾರಿಯಲ್ಲಿ ಇದೆ ಎಂದಾದರೆ, ಆರೋಪಿಗಳನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸದೇ ಇರುವಾಗ (innocent until proven guilty) ಹೇಗೆ ಗೋ ಸಾಗಾಟಗಾರರ ಫೋಟೋವನ್ನು ಪತ್ರಿಕೆಯಲ್ಲಿ ಜಾಹೀರಾತು ನೀಡಲಾಯಿತು ?
ಪೊಲೀಸರು ಈ ರೀತಿ ಮಾನವ ಹಕ್ಕುಗಳು, ಸಂವಿಧಾನದ ಕರ್ತವ್ಯಗಳು, ನ್ಯಾಯಾಲಯಗಳ ವ್ಯಾಪ್ತಿಯನ್ನು ಉಲ್ಲಂಘಿಸುತ್ತಾರೆ ಎಂದರೆ ಅಲ್ಲಿ ‘ಪೊಲೀಸ್ ರಾಜ್ಯ’ ಇದೆ ಎಂದರ್ಥ! ಪೊಲೀಸರ ಈ ಕ್ರಮಗಳ ಹಿಂದೆ ಉತ್ತರ ಕನ್ನಡದ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಇದ್ದಾರೆ ಎನ್ನುವುದು ಸುಲಭವಾಗಿ ಅರ್ಥ ಆಗುತ್ತದೆ. ಇದರ ಮುಂದುವರೆದ ಭಾಗವಾಗಿ ಸಚಿವ ಮಾಂಕಾಳು ವೈದ್ಯ ಅವರು “ಗೋ ಕಳ್ಳತನ ಮಾಡಿದ್ರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ” ಎಂದು ಹೇಳಿದ್ದಾರೆ. ಈ ರೀತಿ ಗೋ ಕಳ್ಳರನ್ನು ಪತ್ತೆ ಹಚ್ಚಿ ಅಪರಾಧವನ್ನು ಖಾತ್ರಿಪಡಿಸಿಕೊಂಡು ತೀರ್ಪು ನೀಡುವ ಜವಾಬ್ದಾರಿಯನ್ನು ಗನ್ ಹಿಡಿದುಕೊಂಡ ವ್ಯಕ್ತಿಗಳಿಗೆ ನೀಡಲಾಗಿದೆಯೇ ? ಸಚಿವ ಮಾಂಕಾಳು ವೈದ್ಯ ಅವರು ಸಂವಿದಾನೇತರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದಾರೆಯೇ ? ಅವರು ಯಾವ ಕಾನೂನಿನ ಪ್ರಕಾರ ಆರೋಪಿ/ಅಪರಾಧಿಗಳಿಗೆ ಗುಂಡು ಹೊಡೆಯುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ.
ಹಾಗಾಗಿ, ಈ ದೇಶದ ಸಂವಿಧಾನವನ್ನು ಒಪ್ಪದ, ಬೀದಿ ನ್ಯಾಯ ವ್ಯವಸ್ಥೆಯನ್ನು ಪ್ರತಿಪಾದಿಸುವ, ಮಾನವ ಹಕ್ಕು ವಿರೋಧಿ, ಕೋಮುವಾದಿ ಸಚಿವ ಮಾಂಕಾಳು ವೈದ್ಯರನ್ನು ತಕ್ಷಣ ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಮತ್ತು ಬಂಧಿಸಬೇಕು. ಮಾಂಕಾಳು ವೈದ್ಯರಂತಹ ನೂರಾರು ನಾಯಕರು ಕಾಂಗ್ರೆಸ್ ನಲ್ಲಿದ್ದಾರೆ. ಅಂತವರಿಗೆ ಯಾವುದೇ ಸ್ಥಾನಮಾನ ನೀಡದೇ, ಸಂವಿಧಾನವು ಈ ದೇಶದ ಜನರಿಗೆ ನೀಡಿದ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಪ್ರಾಥಮಿಕ ತರಬೇತಿ ನೀಡುವ ಅಗತ್ಯ ಇದೆ.