“..ಇರಾನ್ ಭಾರತದ ಹಳೆಯ ಮಿತ್ರ ದೇಶ. ಅದೊಂದು ಮುಸ್ಲಿಂ ದೇಶ ಎಂಬ ಕಾರಣಕ್ಕೆ ಇಸ್ರೇಲ್ ದಾಳಿಯನ್ನು ಸಮರ್ಥಿಸುವುದು ಭಾರತದಲ್ಲಿ ಒಂದು ಸಮುದಾಯದ ವಿರುದ್ಧದ ದ್ವೇಷದ ಕಾರಣವೂ ಹೌದು..” ಯುವ ಚಿಂತಕ ಎಂ.ಕೆ ಸಾಹೇಬ್ ನಾಗೇಶನಹಳ್ಳಿ ಬರಹದಲ್ಲಿ
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಪಾನ್ ಗೆ ಭೇಟಿ ನೀಡಿದ್ದೆ. ಆಗ ಜಪಾನಿನ ಬೇರೆ ಬೇರೆ ವಯಸ್ಸಿನ ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ಹಿರಿಯ ಬುದ್ಧಿಜೀವಿಗಳನ್ನು, ಶಿಕ್ಷಕ ವರ್ಗದವರನ್ನು ಹೀಗೆ ಅನೇಕ ವರ್ಗಗಳ ಜನರ ಜೊತೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿತ್ತು. ಒಂದು ಸೆಮಿನಾರ್ ನಡೆದಿದ್ದ ಸಂದರ್ಭದಲ್ಲಿ ಟೋಕಿಯೋ ವಿಶ್ವವಿದ್ಯಾಲಯದ ಹೆಸರಾಂತ ಪ್ರೊಫೆಸರ್ ಗೆ ನಾನೊಂದು ನೇರವಾಗಿ ಪ್ರಶ್ನೆ ಕೇಳಿದೆ.
ನಿಮ್ಮ ಮೇಲೆ ಅಮೇರಿಕಾ ದೇಶ 2ನೇ ಮಹಾಯುದ್ದದ ಸಂದರ್ಭದಲ್ಲಿ ಹಿರೋಶಿಮಾ, ನಾಗಸಾಕಿ ಮೇಲೆ ಅಣು ಬಾಂಬ್ ಹಾಕಿ ಸರ್ವನಾಶ ಮಾಡಿದೆ. ಆದರೆ ನೀವೇಕೆ ಯು. ಎಸ್.ಎ ದೇಶದ ಜೊತೆಗೆ ಏನು ನಡೆದೇ ಇಲ್ಲ ಅನ್ನುವ ರೀತಿ ಚೆನ್ನಾಗಿ ಇದ್ದೀರಿ ಎನ್ನುವದು ನನ್ನ ಪ್ರಶ್ನೆ ಆಗಿತ್ತು.
ಪ್ರೊಫೆಸರ್ ಉತ್ತರಿಸುತ್ತಾ ಹೌದು ಅಮೇರಿಕಾ ಜೊತೆಗೆ ಒಳ್ಳೆಯ ಸಂಬಂಧಕ್ಕೆ ತನ್ನದೇ ಆದ ಬೇರೆ ರಾಜಕೀಯ ಇತಿಹಾಸವಿದೆ. ಆದರೆ ಅಮೆರಿಕದ ಮೇಲೆ ದ್ವೇಷ ಇಲ್ಲದಿರುವುದಕ್ಕೆ ಆ ಎರೆಡು ಬಾಂಬ್ ಗಳೇ ಕಾರಣ ಎಂದರು. ದಯವಿಟ್ಟು ವಿಸ್ತಾರವಾಗಿ ಹೇಳಿ ಸ್ಯಾನ್ (ಲಿಂಗ ಮತ್ತು ವಯಸ್ಸಿನ ಅಂತರವಿಲ್ಲದೆ ಎಲ್ಲರಿಗೂ ಹೆಸರಿನ ನಂತರ ಗೌರವ ಸೂಚಿಸಲು ಬಳಸುವ ಪದ) ಎಂದೇ.
ಹಿರೋಷಿಮಾದ ಮೇಲೆ ಆಗಸ್ಟ್ 6, 1945ರಂದು ಲಿಟಲ್ ಮ್ಯಾನ್ ಎಂಬ ಅಣು ಬಾಂಬ್ ಹಾಕಿದ ತಕ್ಷಣಕ್ಕೆ 70ರಿಂದ 80 ಸಾವಿರ ಜನ ಸತ್ತರು. 1945ರ ಡಿಸೆಂಬರ್ ಕೊನೆಗೆ ಅಲ್ಲಿನ ಒಟ್ಟು ಜನಸಂಖ್ಯೆಯ 3,50,000 ಜನರಲ್ಲಿ 1,40,000 ಕೊನೆ ಉಸಿರು ತೊರೆದರು.
ಅದೇ ರೀತಿಯಾಗಿ ನಾಗಸಾಕಿಯ ಮೇಲೆ ಆಗಸ್ಟ್ 9, 1945 ರಂದು ಫ್ಯಾಟ್ ಮ್ಯಾನ್ ಎಂಬ ಅಣು ಬಾಂಬ್ ಹಾಕಿದ್ದಕ್ಕೆ ತಕ್ಷಣಕ್ಕೆ 40-50 ಸಾವಿರ ಜನರ ಮಾರಣಹೋಮ ಆಯಿತು.1945ರ ಕೊನೆಗೆ ಒಟ್ಟು 2,40,000 ಜನಸಂಖ್ಯೆಯಲ್ಲಿ ನರಳಿ-ನರಳಿ ಸರಿಸುಮಾರು 70 ಸಾವಿರ ಜನರು ಬಾಂಬ್ ಗೆ ಬಲಿಯಾದರು.
ಆ ಕ್ಷಣಕ್ಕೆ ಸುಮಾರು 4,000*C ನಷ್ಟು ಬಿಸಿ ತಾಪಮಾನ ಏರಿಕೆ ಆಯಿತು. ಎರೆಡು ಪ್ರದೇಶದಿಂದ ಒಟ್ಟು 2ಲಕ್ಷ 10 ಸಾವಿರ ಜನ ಸತ್ತರು. ಅಲ್ಲಿ ಕಂಡಿದ್ದ ನೋವು,ಸಾವು,ನರಕ ಯಾತನೆ,ದೇಹದ ಭಾಗಗಳು ಸುಟ್ಟು ಕರಕಲಾಗಿ ನಾರುತ್ತಿದ್ದ ರಕ್ತದ ಮಡುವನ್ನು ನೋಡಿದವರು ದ್ವೇಷವನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ ಎಂದು ಮರು ಪ್ರಶ್ನೆ ಮಾಡಿದರು.
ಆ ಪೀಡಿತ ಪ್ರದೇಶಗಳಲ್ಲಿ ಪ್ರಾಣ ಉಳಿದಿದ್ದ ಜೀವಗಳು, ಆ ಕಾಲ ಘಟ್ಟದಲ್ಲಿ ಬದುಕಿದ್ದ ಜನರು, ಮಾನವ ವಿಕೃತ ವಿನಾಶದ ಕುರಿತು, ದ್ವೇಷ ಮತ್ತು ಬಾಂಬ್ ಗಳ ವಿರುದ್ಧ ಶಾಂತಿಯ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಮನೆಯಿಂದ ಮನೆಗೆ ಬಾಯಿಯಿಂದ-ಬಾಯಿಗೆ ಸುಸ್ಥಿರ ಬದುಕಿಗೆ ಶಾಂತಿಯ ಅವಶ್ಯಕತೆಯ ಕಥೆಗಳನ್ನು ವಿದ್ಯಾರ್ಥಿಗಳಿಗೆ, ಯುವಜನರಿಗೆ ಹಿರಿಯರು ಕಲಿಸಿಕೊಡುತ್ತಾ ಸಾಗುತ್ತಿದ್ದಾರೆ. ಹಾಗಾಗಿ ಮತ್ತೆ ನಾವು ಅಮೇರಿಕಾದಂತಹ ನೀಚ ಅಮಾನವೀಯ ವಿಕೃತಿ ಮೆರೆಯಬೇಕು ಎಂದು ಅನಿಸಲಿಲ್ಲ ಎಂದರು. ಅದಕ್ಕಾಗಿ ಅಂತರರಾಷ್ಟ್ರೀಯ ಶಾಂತಿಯ ವಿಶ್ವವಿದ್ಯಾಲಯ ಜಪಾನ್ ನಲ್ಲಿದೆ. ಜಪಾನಿನ ಪಠ್ಯಕ್ರಮದಲ್ಲಿ ಶಾಂತಿ ಮತ್ತು ನೈತಿಕತೆಯ ಪಾಠವನ್ನು ಪ್ರಾಥಮಿಕ ಹಂತದಲ್ಲೇ ಕಲಿಸಿಕೊಡಲಾಗುವುದು. ತಮ್ಮಿಂದ ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ನೈತಿಕ ಮೌಲ್ಯವು ಜಪಾನಿನ ನಾಡಿ ಮಿಡಿತವಾಗಿದೆ.ಅದರ ಪ್ರತಿ ಫಲವೇ ಜಗತ್ತಿನಲ್ಲಿಯೇ ಹೆಚ್ಚು ಸಿವಿಕ್ ಸೆನ್ಸ್ (ನಾಗರಿಕ ಪ್ರಜ್ಞೆ) ಹೊಂದಿರುವ ನಾಗರಿಕರು ಆ ದೇಶದಲ್ಲಿ ಸಿಗುವುದು.
ಅಮೇರಿಕಾ ಪ್ರಜಾಪ್ರಭುತ್ವದ ಹೆಸರಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹಾಕದೆ ಇರುವ ಬಾಂಬ್ ಗಳೇ ಇಲ್ಲ. ಮೊನ್ನೆ ಇರಾನ್ ಮೇಲೆ ಹಾಕಿದ ಬಾಂಬ್ ಗಳ ಹೊತ್ತೊಯ್ಯದ B -2 ಸ್ಟೀಲ್ತ್ ವಿಮಾನದ ಬಗ್ಗೆ ಪಾಶ್ಚಿಮಾತ್ಯ ದೇಶದ ಮತ್ತು ಭಾರತದ ಕೆಲವು ಮಿಡಿಯಾಗಳ ಅದರ ವಿಕೃತಿಯ ಶ್ರೇಷ್ಟತೆಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದವು. ಜನರ ಮತ್ತು ಪ್ರಕೃತಿಯ ಜೀವವನ್ನು ಕ್ಷಣಾರ್ಧದಲ್ಲೇ ತಗೆಯುವ ಬಾಂಬ್ ಗಳ ಬಗ್ಗೆ, ಯುದ್ಧ ವಿಮಾನಗಳ ಬಗ್ಗೆ ಹೇಳುವ ರೀತಿ ನೋಡಿದರೆ ಭಯವಾಗುತ್ತಿತ್ತು. ಹೀಗೆ ಹುಟ್ಟಿಸುವ ಭಯವೇ ಯುದ್ಧ ಪರಿಕಾರಗಳ ವಹಿವಾಟಿಗೆ ಪ್ರಚಾರವೂ ಹೌದು. ಮಿಡಿಯಾಗಳ ಇಷ್ಟೊಂದು ಹೀನ ಮಾನಸಿಕ ಸ್ಥಿತಿ ಪ್ರಪಂಚವನ್ನು ಕ್ರೌರ್ಯದ ಕಡೆಗೆ ತೆಗೆದುಕೊಂಡು ಹೋಗುತ್ತದೆ.
ಇರಾನ್ ಭಾರತದ ಹಳೆಯ ಮಿತ್ರ ದೇಶ. ಆ ದೇಶದ ಸಾರ್ವಭೌಮತ್ವದ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ಮಾಡಿದ ದಾಳಿಯನ್ನು ಭಾರತದ ಸೋ ಕಾಲ್ಡ್ ದೇಶಭಕ್ತರು ಅದೊಂದು ಮುಸ್ಲಿಂ ಸಮುದಾಯದ ದೇಶ ಅನ್ನುವ ಕಾರಣಕ್ಕೆ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಭಾರತದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷವೂ ಸಾಮಾನ್ಯೀಕರಣವಾಗುತ್ತಿರುವುದನ್ನು ಎತ್ತಿ ತೋರಿಸುತ್ತದೆ.
ಹಿಟ್ಲರ್ ನ ಕಾಲದಲ್ಲಿ ಸ್ವತಃ ಜನೋಸೈಡಿಗೆ ಗುರಿಯಾಗಿದ್ದ ದೇಶವೇ ಇಂದು ಗಾಜಾದಲ್ಲಿ ಜನೋಸೈಡ್ ಮಾಡುತ್ತಿರುವ ಇಸ್ರೇಲ್ ತನ್ನ ಇತಿಹಾಸವನ್ನು ಮೆಲಕು ಹಾಕಬೇಕಿದೆ. ಮತ್ತು ಅಹಂಕಾರದಲ್ಲಿ ಮೆರೆಯುತ್ತಿರುವ,ಸೋ ಕಾಲ್ಡ್ ಪ್ರಜಾಪ್ರಭುತ್ವವನ್ನು ಕಾಪಾಡುವ ಹೆಸರಲ್ಲಿಯೇ, ವ್ಯಾಪಾರೀಕರಣದ ಲಾಭಕ್ಕಾಗಿ ಪ್ರಪಂಚದ ಬೇರೆ ಬೇರೆ ದೇಶಗಳ ಮೇಲೆ ಬಾಂಬುಗಳ ಮೂಲಕ ಸರ್ವನಾಶ ಮಾಡುತ್ತಾ ಯುದ್ಧಗಳನ್ನು ಜೀವಂತವಿಡುವ ಅಮೇರಿಕಾ, ಜಪಾನಿನ ಮೇಲೆ ಮಾಡಿದ ಕ್ರೌರ್ಯವನ್ನು,ಆ ಬರ್ಬರತೆಯನ್ನು,ಅಮಾಯಕರ ಪ್ರಾಣ ತೆಗೆದ ಆ ಇತಿಹಾಸವನ್ನು, 2025ಕ್ಕೆ 80 ವರ್ಷ ಆದರೂ ಅಣು ಬಾಂಬಿನ ಪರಿಣಾಮವನ್ನು ಚಿತ್ರಹಿಂಸೆಯಿಂದ, ದೈಹಿಕವಾಗಿ ಮತ್ತು ಮಾನಸಿಕವಾಗಿ ಇಂದಿಗೂ ಎದುರಿಸುತ್ತಿರುವ ಪೀಳಿಗೆಯನ್ನು,ಹಸಿವು ನೀಗಿಸುತ್ತಿದ ಭೂಮಿ ಬಂಜರು ಆಗಿ ಬಿಕೋ ಅನ್ನುತ್ತಿರುವುದನ್ನು, ಗಮನಿಸಿ, ಆತ್ಮ ಅವಲೋಕಿಸಿ,ತಪ್ಪನ್ನು ತಿದ್ದಿಕೊಂಡು, ನೈಜವಾಗಿ ಶಾಂತಿಯ ಬಗ್ಗೆ ಅಮೇರಿಕಾ ಮತ್ತು ಇನ್ನಿತರ ಎಲ್ಲಾ ದೇಶಗಳು ಪ್ರಾಮಾಣಿಕವಾಗಿ ಕಾರ್ಯನಿರತರಾಗಬೇಕಿದೆ. ಇಲ್ಲದೆ ಹೋದಲ್ಲಿ, ಇಂದಲ್ಲ ಮುಂದೆ ಮೂರನೇ ಮಹಾಯುದ್ಧ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಮಹಾ ಯುದ್ಧ ಅಂದರೆ ಬೇರೇನಿಲ್ಲ,ನಾವು ಆತ್ಮಹತ್ಯೆ ಮಾಡಿಕೊಂಡು,ಭವಿಷ್ಯದ ಪೀಳಿಗೆಯ ಕುಡಿಯನ್ನು ಹುಟ್ಟುವ ಮುಂಚೆಯೇ ಕೊಂದು, ಪ್ರಕೃತಿಯನ್ನು ಸರ್ವನಾಶ ಮಾಡುವುದು.