ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್ಗೆ ಕಂಪನಿಗಳೇ ಹೊಣೆ!
ಲಿಂಕ್ ನಕಲಿಸಲಾಗಿದೆ ✓
ನವೆಂಬರ್ 5ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಬಳಕೆದಾರರು ಪ್ರಕಟಿಸುವ ಕಂಟೆಂಟ್ಗೆ ಸಂಬಂಧಿಸಿದಂತೆ ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು X ಮುಂತಾದ ಸಾಮಾಜಿಕ ಮಾಧ್ಯಮಗಳಿಗೆ ಸಿಗುತ್ತಿರುವ ಕಾನೂನು ರಕ್ಷಣೆಯನ್ನು ಹಿಂಪಡೆಯುವ ಅಥವಾ ಸೀಮಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದ ಐಟಿ ಸಚಿವಾಲಯ ಚರ್ಚೆ ಆರಂಭಿಸಿದೆ.
ಬೆಂಗಳೂರು: ನೀವು ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕುತ್ತೀರಿ. ಇನ್ಸ್ಟಾಗ್ರಾಂನಲ್ಲಿ ಒಂದು ರೀಲ್ ಹಂಚಿಕೊಳ್ಳುತ್ತೀರಿ. ಯೂಟ್ಯೂಬ್ನಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡುತ್ತೀರಿ. ಆ ಕಂಟೆಂಟ್ನಿಂದ ವಿವಾದ ಸೃಷ್ಟಿಯಾದರೆ ಅದರ ಹೊಣೆ ಯಾರದ್ದು? ಅದನ್ನು ಪ್ರಕಟಿಸಿದ ಬಳಕೆದಾರರದ್ದೇ? ಅಥವಾ ಅದನ್ನು ಲಕ್ಷಾಂತರ ಜನರಿಗೆ ತಲುಪಿಸಿದ ಸಾಮಾಜಿಕ ಮಾಧ್ಯಮ ಕಂಪನಿಗಳದ್ದೂ ಆಗಬೇಕೇ?
ಭಾರತದಲ್ಲಿ ಈಗ ಈ ಪ್ರಶ್ನೆ ಹೊಸ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು Xನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಬಳಕೆದಾರರು ಪ್ರಕಟಿಸುವ ಕಂಟೆಂಟ್ಗೆ ಸಂಬಂಧಿಸಿದಂತೆ ಸಿಗುತ್ತಿರುವ ಕಾನೂನು ರಕ್ಷಣೆಯನ್ನು ಮರುಪರಿಶೀಲಿಸುತ್ತಿದೆ. ಅಂದರೆ, ಈ ಕಂಪನಿಗಳಿಗೆ ನೀಡಲಾಗಿರುವ Safe Harbour Protection ಅನ್ನು ಸೀಮಿತಗೊಳಿಸುವ ಅಥವಾ ಹಿಂಪಡೆಯುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ನವೆಂಬರ್ 5ರಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿರುವ ವರದಿಯ ಪ್ರಕಾರ, ಸರ್ಕಾರದ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಈ ಪ್ರಸ್ತಾಪ ಜಾರಿಯಾದರೆ ಭಾರತದಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳ ಕಾರ್ಯವೈಖರಿ ಮಾತ್ರವಲ್ಲ, ಕೋಟ್ಯಂತರ ಬಳಕೆದಾರರ ಡಿಜಿಟಲ್ ಬದುಕಿನ ಮೇಲೂ ಪರಿಣಾಮ ಬೀರಬಹುದು.
ನಾಟ್ ಜಸ್ಟ್ ಎ ಮೀಡಿಯಂ:
ಈ ಚರ್ಚೆಯ ಕೇಂದ್ರದಲ್ಲಿರುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 79.
ಸಾಮಾನ್ಯವಾಗಿ ಇದನ್ನು Safe Harbour ಅಥವಾ ಮಧ್ಯವರ್ತಿ ಸಂಸ್ಥೆಗಳಿಗೆ ನೀಡುವ ಕಾನೂನು ರಕ್ಷಣೆ ಎಂದು ಕರೆಯಲಾಗುತ್ತದೆ.
ಸರಳವಾಗಿ ಹೇಳುವುದಾದರೆ, ಬಳಕೆದಾರರು ಪ್ರಕಟಿಸುವ ಪ್ರತಿಯೊಂದು ಪೋಸ್ಟ್, ವಿಡಿಯೋ, ಕಾಮೆಂಟ್ ಅಥವಾ ಸಂದೇಶಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಆದರೆ ಈ ರಕ್ಷಣೆಗೆ ಷರತ್ತುಗಳಿವೆ. ಕಾನೂನಿನಡಿ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು. ಅಗತ್ಯವಿದ್ದಾಗ ಕಾನೂನುಬದ್ಧ ಸೂಚನೆಗಳಿಗೆ ಸ್ಪಂದಿಸಬೇಕು.
ಆದರೆ ಈಗ ಸರ್ಕಾರದ ಆಕ್ಷೇಪ ಬೇರೆಯೇ ಇದೆ. ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ಕೇವಲ ಬಳಕೆದಾರರ ಸಂದೇಶಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಯಾವ ಪೋಸ್ಟ್ ಹೆಚ್ಚು ಜನರಿಗೆ ಕಾಣಬೇಕು, ಯಾವ ವಿಡಿಯೋ ಶಿಫಾರಸು ಆಗಬೇಕು, ಯಾವ ಕಂಟೆಂಟ್ ವೈರಲ್ ಆಗಬೇಕು ಎಂಬುದನ್ನು ಅವುಗಳ ಆಲ್ಗಾರಿದಮ್ ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾದ ಹಿರಿಯ ಸರ್ಕಾರಿ ಅಧಿಕಾರಿಯ ಮಾತು ಗಮನಾರ್ಹ: “ಅವು ಇನ್ನು ಕೇವಲ ಮಾಹಿತಿಯನ್ನು ಸಾಗಿಸುವ ಸರಳ ಮಧ್ಯವರ್ತಿಗಳಲ್ಲ.” ಅದೇ ಅಧಿಕಾರಿಯ ವಿವರಣೆಯ ಪ್ರಕಾರ, ಬಳಕೆದಾರರ ಕಂಟೆಂಟ್ನ ಪ್ರಸಾರ ಮತ್ತು ಜನಪ್ರಿಯತೆಯನ್ನು ಆಲ್ಗಾರಿದಮ್ಗಳು ನಿರ್ಧರಿಸುತ್ತಿರುವುದರಿಂದ ಈ ವೇದಿಕೆಗಳ ಹೊಣೆಗಾರಿಕೆಯನ್ನು ಹೊಸದಾಗಿ ಪರಿಶೀಲಿಸುವ ಅಗತ್ಯವಿದೆ.
ಇಲ್ಲಿಯೇ ಸರ್ಕಾರದ ವಾದಕ್ಕೆ ಒಂದು ಬಲವಾದ ಅಂಶವಿದೆ. ಬಳಕೆದಾರರು ಒಂದು ವಿಡಿಯೋ ಅಪ್ಲೋಡ್ ಮಾಡಿರಬಹುದು. ಆದರೆ ಅದನ್ನು ಹತ್ತು ಜನರಿಗೆ ತೋರಿಸಬೇಕೇ, ಹತ್ತು ಲಕ್ಷ ಜನರಿಗೆ ತೋರಿಸಬೇಕೇ ಎಂಬ ನಿರ್ಧಾರದಲ್ಲಿ ವೇದಿಕೆಯ ತಂತ್ರಜ್ಞಾನಕ್ಕೂ ಪಾತ್ರವಿದೆ. ಹಾಗಾದರೆ ಆ ನಿರ್ಧಾರದಿಂದ ಉಂಟಾಗುವ ಪರಿಣಾಮಗಳಿಗೆ ಕಂಪನಿಗಳು ಸಂಪೂರ್ಣವಾಗಿ ಜವಾಬ್ದಾರಿಯಿಂದ ಹೊರಗುಳಿಯಬಹುದೇ?
ಸೆಕ್ಷನ್ 79 ಎಂದರೇನು? ಕಂಪನಿಗಳಿಗೆ ಸಿಗುವ ರಕ್ಷಣೆಯ ಹಿಂದಿನ ಕಾನೂನು
2000ರಲ್ಲಿ ಜಾರಿಗೆ ಬಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79, ಇಂಟರ್ನೆಟ್ ಮಧ್ಯವರ್ತಿ ಸಂಸ್ಥೆಗಳಿಗೆ ಬಳಕೆದಾರರು ಪ್ರಕಟಿಸುವ ಮೂರನೇ ವ್ಯಕ್ತಿಯ ಕಂಟೆಂಟ್ನಿಂದ ಉಂಟಾಗುವ ಕಾನೂನು ಹೊಣೆಗಾರಿಕೆಯಿಂದ ಕೆಲವು ಷರತ್ತುಗಳಡಿ ರಕ್ಷಣೆ ನೀಡುತ್ತದೆ.
ಇದರಿಂದಲೇ ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರತಿಯೊಂದು ಪೋಸ್ಟ್ನ್ನೂ ತಾವೇ ಪ್ರಕಟಿಸಿದಂತೆ ಪರಿಗಣಿಸುವುದಿಲ್ಲ. ಆದರೆ ಈ ರಕ್ಷಣೆ ಸಂಪೂರ್ಣ ವಿನಾಯಿತಿಯಲ್ಲ. ಕಂಪನಿಗಳು ಕಾನೂನಿನಡಿ ನಿಗದಿಪಡಿಸಿರುವ ಅಗತ್ಯ ಮುನ್ನೆಚ್ಚರಿಕೆ ಮತ್ತು ಕರ್ತವ್ಯಗಳನ್ನು ಪಾಲಿಸಬೇಕು. ಕಾನೂನುಬಾಹಿರ ಚಟುವಟಿಕೆಗೆ ನೆರವಾಗಬಾರದು. ಸಂಬಂಧಪಟ್ಟ ಸರ್ಕಾರಿ ಸಂಸ್ಥೆ ಅಥವಾ ಕಾನೂನುಬದ್ಧ ಸೂಚನೆ ಬಂದಾಗ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂದರೆ, ಈಗಾಗಲೇ ಕಂಪನಿಗಳಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದಲ್ಲ. ಪ್ರಶ್ನೆಯಿರುವುದು ಅವುಗಳ ಹೊಣೆಗಾರಿಕೆಯ ವ್ಯಾಪ್ತಿ ಮತ್ತು ಅದನ್ನು ಜಾರಿಗೊಳಿಸುವ ವಿಧಾನ.
ಸುಪ್ರೀಂ ಕೋರ್ಟ್ ಕೂಡ ಎಚ್ಚರಿಸಿದೆ: ‘ಕಾನೂನು ಹಲ್ಲಿಲ್ಲದ ಹುಲಿಯಾಗಬಾರದು’
ಈ ಚರ್ಚೆಗೆ ಮತ್ತೊಂದು ಮಹತ್ವದ ಹಿನ್ನೆಲೆಯಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಶ್ಲೀಲ ಕಂಟೆಂಟ್ (CSEAM) ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದನ್ನು ತಡೆಯುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
Just Rights for Children Alliance v. S. Harish ಪ್ರಕರಣದಲ್ಲಿ 2026ರ ಅಕ್ಟೋಬರ್ 15ರಂದು ನೀಡಿದ ಆದೇಶದಲ್ಲಿ, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ಪಾಲಿಸದಿರುವುದಕ್ಕೆ ಪರಿಣಾಮಕಾರಿ ದಂಡನೆ ವ್ಯವಸ್ಥೆ ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಗಮನ ಸೆಳೆದಿರುವ ಪ್ರಮುಖ ಸಮಸ್ಯೆ ಎಂದರೆ, ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಯೊಂದು ಬಾರಿ ನಿರ್ದಿಷ್ಟ ಅಪರಾಧ ಸಂಭವಿಸುವವರೆಗೆ ಕಾಯಬೇಕಾದ ಪರಿಸ್ಥಿತಿ.
ನ್ಯಾಯಾಲಯದ ಮಾತುಗಳು ಗಮನ ಸೆಳೆಯುತ್ತವೆ:
“The answer to the same must be an emphatic ‘no’.” ಇದು ಕಾನೂನು ಮತ್ತು ನಿಯಮಗಳು ಕೇವಲ ಹೆಸರಿಗಷ್ಟೇ ಉಳಿಯಬೇಕೇ ಎಂಬ ಪ್ರಶ್ನೆಗೆ ನ್ಯಾಯಾಲಯ ನೀಡಿದ ಉತ್ತರದ ಭಾಗ.
ಇನ್ನೊಂದು ಕಡೆ, ಸೆಕ್ಷನ್ 79ರ ಅಡಿಯಲ್ಲಿ ಸಿಗುವ ರಕ್ಷಣೆಯನ್ನು ಪ್ರತಿಯೊಂದು ಸಣ್ಣ ಲೋಪಕ್ಕೂ ಹಿಂಪಡೆಯುವುದು ಅತಿಯಾದ ಕ್ರಮವಾಗಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬದಲಿಗೆ ಉಲ್ಲಂಘನೆಯ ಸ್ವರೂಪ, ಗಂಭೀರತೆ ಮತ್ತು ಪುನರಾವರ್ತನೆಯ ಆಧಾರದ ಮೇಲೆ ಪ್ರಮಾಣಾನುಗುಣ ದಂಡ ವಿಧಿಸುವ ಪ್ರತ್ಯೇಕ ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.
ನ್ಯಾಯಾಲಯದ ಅಭಿಪ್ರಾಯದ ಪ್ರಕಾರ, ಗಂಭೀರ ಮತ್ತು ನಿರಂತರ ಉಲ್ಲಂಘನೆಗಳ ಸಂದರ್ಭದಲ್ಲಿ ಮಾತ್ರ ಸೆಕ್ಷನ್ 79ರ ರಕ್ಷಣೆಯನ್ನು ಹಿಂಪಡೆಯುವುದು ಕೊನೆಯ ಆಯ್ಕೆಯಾಗಿರಬೇಕು. ಇದು ಅತ್ಯಂತ ಮುಖ್ಯವಾದ ವ್ಯತ್ಯಾಸ. ಸರ್ಕಾರದ ಪ್ರಸ್ತಾಪದ ಚರ್ಚೆ ಮತ್ತು ಸುಪ್ರೀಂ ಕೋರ್ಟ್ನ ನಿರ್ದೇಶನ ಎರಡನ್ನೂ ಒಂದೇ ಎಂದು ಪರಿಗಣಿಸಲಾಗದು. ಸುಪ್ರೀಂ ಕೋರ್ಟ್ನ ಆದೇಶ ಮುಖ್ಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧಿತ ಕಂಟೆಂಟ್ ತಡೆಗಟ್ಟುವ ಕಾನೂನು ಕರ್ತವ್ಯಗಳ ಕುರಿತು ಇದೆ.
ಸಾಮಾಜಿಕ ಮಾಧ್ಯಮಗಳು ಇಂದು ಕೇವಲ ಮನರಂಜನೆಯ ವೇದಿಕೆಗಳಲ್ಲ. ಸರ್ಕಾರವನ್ನು ಪ್ರಶ್ನಿಸುವ ನಾಗರಿಕರು, ಪತ್ರಕರ್ತರು, ಹೋರಾಟಗಾರರು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ವಿರೋಧ ಪಕ್ಷಗಳಿಗೆ ಇವು ಪ್ರಮುಖ ಸಂವಹನ ಮಾಧ್ಯಮಗಳಾಗಿವೆ. ಸರ್ಕಾರದ ನೀತಿಯನ್ನು ಟೀಕಿಸುವ ಪೋಸ್ಟ್, ಪ್ರತಿಭಟನೆಯ ವಿಡಿಯೋ ಅಥವಾ ಭ್ರಷ್ಟಾಚಾರದ ಆರೋಪದ ಕುರಿತ ಮಾಹಿತಿ ಇವುಗಳ ಮೂಲಕವೇ ಲಕ್ಷಾಂತರ ಜನರನ್ನು ತಲುಪುತ್ತದೆ.
ಇಂತಹ ಸಂದರ್ಭದಲ್ಲಿ ಕಂಪನಿಗಳ ಮೇಲೆ ಹೊಣೆಗಾರಿಕೆ ಹೆಚ್ಚಿಸುವ ಕಾನೂನು ರೂಪಿಸಿದರೆ ಅದು ನಿಜವಾದ ಅಪರಾಧಗಳನ್ನು ತಡೆಯಲು ನೆರವಾಗಬೇಕು. ಆದರೆ ಸರ್ಕಾರದ ವಿರುದ್ಧದ ಅಭಿಪ್ರಾಯಗಳನ್ನು ತೆಗೆದುಹಾಕಲು ಪರೋಕ್ಷ ಒತ್ತಡದ ಸಾಧನವಾಗಬಾರದು. ಭಾರತೀಯ ಸಂವಿಧಾನದ 19(1)(a)ನೇ ವಿಧಿ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಅದೇ ಸಮಯದಲ್ಲಿ 19(2)ನೇ ವಿಧಿ ಸಾರ್ವಜನಿಕ ಸುವ್ಯವಸ್ಥೆ, ರಾಷ್ಟ್ರದ ಭದ್ರತೆ, ಮಾನಹಾನಿ, ನ್ಯಾಯಾಲಯ ನಿಂದನೆ ಸೇರಿದಂತೆ ನಿರ್ದಿಷ್ಟ ಕಾರಣಗಳಿಗಾಗಿ ಸಮಂಜಸ ನಿರ್ಬಂಧಗಳಿಗೆ ಅವಕಾಶ ನೀಡುತ್ತದೆ.
ಹೀಗಾಗಿ ಆನ್ಲೈನ್ನಲ್ಲಿ ಎಲ್ಲವನ್ನೂ ಹೇಳಬಹುದು ಎಂದೂ ಇಲ್ಲ; ಸರ್ಕಾರಕ್ಕೆ ಇಷ್ಟವಿಲ್ಲದ ಎಲ್ಲವನ್ನೂ ತೆಗೆದುಹಾಕಬಹುದು ಎಂದೂ ಇಲ್ಲ. ಇವೆರಡರ ನಡುವಿನ ಗಡಿ ಸಂವಿಧಾನ ಮತ್ತು ಕಾನೂನಿನಿಂದ ನಿರ್ಧಾರವಾಗಬೇಕು. ಒಂದು ಕಾಲದಲ್ಲಿ ಪತ್ರಿಕೆ, ರೇಡಿಯೋ ಮತ್ತು ದೂರದರ್ಶನ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರಮುಖ ಮಾಧ್ಯಮಗಳಾಗಿದ್ದವು. ಇಂದು ಆ ಸ್ಥಾನವನ್ನು ಬಹುಮಟ್ಟಿಗೆ ಸಾಮಾಜಿಕ ಮಾಧ್ಯಮಗಳು ಪಡೆದುಕೊಂಡಿವೆ. ಆದರೆ ಈ ವೇದಿಕೆಗಳನ್ನು ನಿಯಂತ್ರಿಸುವ ಅಲ್ಗಾರಿದಮ್ಗಳ ಬಗ್ಗೆ ಸಾಮಾನ್ಯ ನಾಗರಿಕರಿಗೆ ತಿಳಿದಿರುವುದು ಬಹಳ ಕಡಿಮೆ. ಯಾವ ಪೋಸ್ಟ್ ಹೆಚ್ಚು ಜನರಿಗೆ ತಲುಪುತ್ತದೆ, ಯಾವ ಸುದ್ದಿಗೆ ಕಡಿಮೆ ಪ್ರಾಮುಖ್ಯತೆ ಸಿಗುತ್ತದೆ, ಯಾವ ವಿಡಿಯೋ ಶಿಫಾರಸು ಆಗುತ್ತದೆ ಎಂಬುದರ ಮೇಲೆ ಬಳಕೆದಾರರಿಗೆ ನಿಯಂತ್ರಣವಿಲ್ಲ. ಇಂತಹ ಸಂದರ್ಭದಲ್ಲಿ ಕಂಪನಿಗಳಿಗೆ ಹೊಣೆಗಾರಿಕೆ ಕೇಳುವುದು ನ್ಯಾಯಸಮ್ಮತ. ಆದರೆ ಅದೇ ಹೊಣೆಗಾರಿಕೆಯ ಹೆಸರಿನಲ್ಲಿ ಸರ್ಕಾರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಅನಿಯಂತ್ರಿತ ಅಧಿಕಾರ ನೀಡುವುದು ಸರಿಯಲ್ಲ.
ಸಾಮಾಜಿಕ ಮಾಧ್ಯಮ ಕಂಪನಿಗಳು ಕಾನೂನಿಗಿಂತ ಮೇಲಲ್ಲ. ಸರ್ಕಾರವೂ ಸಂವಿಧಾನಕ್ಕಿಂತ ಮೇಲಲ್ಲ. ಡಿಜಿಟಲ್ ಜಗತ್ತಿನಲ್ಲಿ ಈ ಎರಡೂ ಸತ್ಯಗಳನ್ನು ಒಟ್ಟಿಗೆ ಉಳಿಸುವುದೇ ನಿಜವಾದ ಪ್ರಜಾಪ್ರಭುತ್ವದ ಪರೀಕ್ಷೆ.
Murali Maluru
Peepal Media · ದೇಶ ವಿಭಾಗ
Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.