ಕಾಳಿಂಗ ಸರ್ಪ ಸೆರೆಹಿಡಿದ ಆರೋಪ: ಉರಗ ರಕ್ಷಕ ಡಾ. ಗೌರಿಶಂಕರ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಕಾಳಿಂಗ ಸರ್ಪವನ್ನು ಸೆರೆಹಿಡಿದು ಬಂಧನದಲ್ಲಿಟ್ಟು ಫೋಟೋ ತೆಗೆಸಿದ್ದಾರೆ ಎಂಬ ಆರೋಪದಡಿ ಖ್ಯಾತ ಉರಗ ರಕ್ಷಕ ಡಾ. ಪಿ. ಗೌರಿಶಂಕರ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠವು ನವೆಂಬರ್ 2ರಂದು ಪ್ರಕರಣದ ವಿಚಾರಣೆ ನಡೆಸಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ, ಬಂಧನದಲ್ಲಿಟ್ಟಿದ್ದಾರೆ, ಕೊಂದಿದ್ದಾರೆ ಅಥವಾ ಗಾಯಗೊಳಿಸಿದ್ದಾರೆ ಎಂಬ ಆರೋಪಗಳನ್ನು ದೃಢಪಡಿಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಜಾಲತಾಣದ ವಿಡಿಯೋ ಆಧರಿಸಿ ದೂರು
ಕಾಳಿಂಗ ಸರ್ಪವನ್ನು ಸೆರೆಹಿಡಿದು ಅದರ ಫೋಟೋಗಳನ್ನು ತೆಗೆಸುವುದರ ಜತೆಗೆ, ಇತರರಿಗೂ ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಗೌರಿಶಂಕರ್ ವಿರುದ್ಧ ಕೇಳಿಬಂದಿತ್ತು. ಮೂರನೇ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ವಿಡಿಯೋದಲ್ಲಿ ಗೌರಿಶಂಕರ್ ಕಾಣಿಸಿಕೊಂಡಿದ್ದನ್ನು ಆಧರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಗೌರಿಶಂಕರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರಣ್ಯ ಪ್ರದೇಶದಲ್ಲಿದ್ದ ಹಾವು: ಅರ್ಜಿದಾರರ ವಾದಕ್ಕೆ ಬಲ
ವಿಚಾರಣೆ ವೇಳೆ ಗೌರಿಶಂಕರ್ ಪರ ವಕೀಲರು, ಚಾರ್ಜ್ಶೀಟ್ನಲ್ಲಿರುವ ಅಂಶಗಳು ತಮ್ಮ ಕಕ್ಷಿದಾರರು ಕಾಳಿಂಗ ಸರ್ಪವನ್ನು ಬೇಟೆಯಾಡಿದ್ದಾರೆ ಅಥವಾ ಸೆರೆಹಿಡಿದಿದ್ದಾರೆ ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ವಾದಿಸಿದರು. ಸರ್ಕಾರ ಸಲ್ಲಿಸಿದ್ದ ಛಾಯಾಚಿತ್ರಗಳಲ್ಲಿಯೂ ಹಾವು ಮುಕ್ತ ಅರಣ್ಯ ಪ್ರದೇಶದಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಯಾಗಿ, ಗೌರಿಶಂಕರ್ ಅವರು ಇತರರಿಗೆ ಹಾವಿನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ಅವಕಾಶ ಮಾಡಿಕೊಟ್ಟಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ಕಾರಣರಾಗಿದ್ದಾರೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಸಾಕ್ಷ್ಯಗಳ ಕೊರತೆ ಉಲ್ಲೇಖಿಸಿ ಪ್ರಕರಣ ರದ್ದು
ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿದ ಹೈಕೋರ್ಟ್, ಚಾರ್ಜ್ಶೀಟ್ನಲ್ಲಿರುವ ಛಾಯಾಚಿತ್ರಗಳಲ್ಲಿ ಕಾಳಿಂಗ ಸರ್ಪವು ಅರಣ್ಯದ ಬಯಲು ಪ್ರದೇಶದಲ್ಲಿರುವುದು ಕಂಡುಬರುತ್ತದೆ. ಅದನ್ನು ಬಂಧನದಲ್ಲಿಡಲಾಗಿತ್ತು ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಫೋಟೋಗಳನ್ನು ಗೌರಿಶಂಕರ್ ಅವರಿಂದ ವಶಪಡಿಸಿಕೊಳ್ಳಲಾಗಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿದೆ. ಅವರು ರಕ್ಷಿಸಿದ ಕಾಳಿಂಗ ಸರ್ಪಗಳ ಕುರಿತು ಅರಣ್ಯಾಧಿಕಾರಿಗಳಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದ ವಿಚಾರವೂ ವಿಚಾರಣೆಯಲ್ಲಿ ಮಹತ್ವ ಪಡೆದಿದೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರು ಆರೋಪಿತ ಅಪರಾಧಗಳನ್ನು ಎಸಗಿದ್ದಾರೆ ಎಂದು ನಿರ್ಧರಿಸಲು ಸೂಕ್ತ ಆಧಾರಗಳಿಲ್ಲ ಎಂದು ಹೇಳಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಹಾಗೂ ಸಂಬಂಧಿತ ನ್ಯಾಯಾಂಗ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.
Peepal Media Desk
Peepal Media · ಕಾನೂನು ವಿಭಾಗ