ಬಸ್‌ಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ಬ್ರೇಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಿಂದ ವಜಾ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಹೊರಡಿಸಿದ್ದ ತೆರವು ಆದೇಶಗಳಲ್ಲಿ ಮಧ್ಯಪ್ರವೇಶಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಎರಡೂ ನಿಗಮಗಳ ಸುತ್ತೋಲೆಗಳನ್ನು ಪ್ರಶ್ನಿಸಿ ಜಾಹೀರಾತು ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಸಾರಿಗೆ ನಿಗಮಗಳ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತು ಸ್ಟಿಕ್ಕರ್‌ಗಳು ಮತ್ತು ಗ್ಲೋ ಸೈನ್‌ಗಳನ್ನು ತೆರವುಗೊಳಿಸುವಂತೆ ಕೆಎಸ್‌ಆರ್‌ಟಿಸಿ ಜನವರಿ 31ರಂದು, ಬಿಎಂಟಿಸಿ ಫೆಬ್ರವರಿ 2ರಂದು ಸುತ್ತೋಲೆ ಹೊರಡಿಸಿದ್ದವು.
ಈ ನಿರ್ಧಾರದಿಂದ ಜಾಹೀರಾತು ವಹಿವಾಟಿಗೆ ಅಡ್ಡಿಯಾಗಿರುವುದಾಗಿ ಆರೋಪಿಸಿದ್ದ ಮೆಸರ್ಸ್ ಸಾಯಿ ಅಡ್ವರ್ಟೈಸರ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಕಳೆದ ವರ್ಷದ ಟೆಂಡರ್‌ನಲ್ಲಿ ಅವಕಾಶ ಪಡೆದು ಎರಡೂ ನಿಗಮಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆ, ವಿಮಲ್ ಎಲಾಚಿ ಸೇರಿದಂತೆ ಹಲವು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುತ್ತಿತ್ತು.
ಒಪ್ಪಂದದ ಅವಧಿ ಮುಕ್ತಾಯಗೊಳ್ಳುವ ಮುನ್ನವೇ ಜಾಹೀರಾತು ತೆರವುಗೊಳಿಸುವ ಸೂಚನೆ ನೀಡಿರುವುದು ತನ್ನ ವ್ಯಾಪಾರಕ್ಕೆ ನಷ್ಟ ಉಂಟುಮಾಡಲಿದೆ ಎಂಬುದು ಸಂಸ್ಥೆಯ ಪ್ರಮುಖ ಆಕ್ಷೇಪವಾಗಿತ್ತು. ಅಲ್ಲದೆ, ಜಾಹೀರಾತು ಮಾಡುತ್ತಿರುವ ಉತ್ಪನ್ನಗಳು ತಂಬಾಕು ಉತ್ಪನ್ನಗಳಲ್ಲ, ನೈಸರ್ಗಿಕ ಉತ್ಪನ್ನಗಳಾಗಿವೆ. ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಯಾವುದೇ ಸಕ್ಷಮ ಪ್ರಾಧಿಕಾರ ಗುರುತಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿವಾದವು ಸಾರಿಗೆ ನಿಗಮಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಷರತ್ತುಗಳು ಮತ್ತು ಅವುಗಳ ಅನುಷ್ಠಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿತು. ಈ ರೀತಿಯ ಒಪ್ಪಂದದ ವಿವಾದಕ್ಕೆ ಪ್ರಸ್ತುತ ಅರ್ಜಿಯ ಮೂಲಕ ಪರಿಹಾರ ಒದಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಸುತ್ತೋಲೆಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶವಿದೆ. ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾರಿಗೆ ನಿಗಮಗಳಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ತಿಳಿಸಿತು.
ಅಂತಿಮವಾಗಿ, ಒಪ್ಪಂದದ ನಿಯಮಗಳ ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಅವಕಾಶವನ್ನು ಅರ್ಜಿದಾರರಿಗೆ ಮುಕ್ತವಾಗಿರಿಸಿ ಅರ್ಜಿಯನ್ನು ವಜಾಗೊಳಿಸಿತು.
Peepal Media Desk
Peepal Media · ಕಾನೂನು ವಿಭಾಗ